* ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಿಎಂ ಸೂಚನೆ
* ಮೋದಿ ಉದ್ಘಾಟಿಸಿದ್ದ ಅಂಬೇಡ್ಕರ್ ಸ್ಕೂಲ್ ರಸ್ತೆಯಲ್ಲಿ ಗುಂಡಿ ಸೃಷ್ಟಿ
* ಕಳಪೆ ಕಾಮಗಾರಿಗೆ ಜನರ ಆಕ್ರೋಶ
ಬೆಂಗಳೂರು(ಜೂ.24): ಪ್ರಧಾನಿ ನರೇಂದ್ರ ಮೋದಿ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಅಭಿವೃದ್ಧಿ ಪಡಿಸಿದ ರಸ್ತೆಯಲ್ಲಿ ಭಾರೀ ಗಾತ್ರದ ಗುಂಡಿ ಸೃಷ್ಟಿಯಾಗಿದ್ದು, ಕಾಮಗಾರಿ ಸಂಪೂರ್ಣವಾಗಿ ಕಳಪೆಯಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಪ್ರಧಾನಿಗಳು ಬೆಂಗಳೂರಿಗೆ ಆಗಮಿಸುವ ಮುನ್ನ ಬಳ್ಳಾರಿ ರಸ್ತೆ, ತುಮಕೂರು ರಸ್ತೆ, ಕೊಮ್ಮಘಟ್ಟರಸ್ತೆ ಹಾಗೂ ಬೆಂಗಳೂರು ವಿಶ್ವ ವಿದ್ಯಾಲಯ ವ್ಯಾಪ್ತಿಯ ಒಟ್ಟು 14 ಕಿ.ಮೀ. ಉದ್ದದ ರಸ್ತೆಯನ್ನು .23.5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿತ್ತು. ಆದರೆ ಕಾಮಗಾರಿ ಮುಗಿದು ಕೆಲವೇ ದಿನದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಅಂಬೇಡ್ಕರ್ ಕಾಲೇಜಿನ ಮುಂಭಾಗದ ರಸ್ತೆಯಲ್ಲಿ ಭಾರೀ ಪ್ರಮಾಣ ಗುಂಡಿ ಸೃಷ್ಟಿಯಾಗಿದೆ. ಕಾಮಗಾರಿ ಕಳಪೆ ಗುಣಮಟ್ಟದ್ದಾಗಿದ್ದು, ಬಿಬಿಎಂಪಿಯ ಕಾರ್ಯವೈಖರಿಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
‘ಮೋದಿ ಸಂಚರಿಸಿದ ಹಾದಿ’ಗೆ ಟಾರು ಹಾಕಲು 23 ಕೋಟಿ ರು. ವ್ಯಯಿಸಿದ ಬಿಬಿಎಂಪಿ
ಈ ಕುರಿತು ಪ್ರತಿಕ್ರಿಯೆ ನೀಡಿದ ವಿಶೇಷ ಆಯುಕ್ತ ರಾಮಪ್ರಸಾದ್ ಮನೋಹರ್, ಡಾಂಬರೀಕರಣ ಮಾಡಿದ ನಂತರ ಬಿಸಿಲು ಬೀಳದಿರುವ ಕಾರಣ ಡಾಂಬರ್ ಕಿತ್ತುಕೊಂಡಿದೆ. ಮರು ಭರ್ತಿಯನ್ನು ಸಂಬಂಧಪಟ್ಟಗುತ್ತಿಗೆದಾರರಿಂದ ಮಾಡಿಸಲಾಗುವುದು ಎಂದು ಹೇಳಿದರು.
ಗುಂಡಿ ಸೃಷ್ಟಿ ಬಗ್ಗೆ ಮಾಹಿತಿ ಕೇಳಿದ ಪ್ರಧಾನಿ ಕಚೇರಿ
ಬೆಂಗಳೂರು ವಿಶ್ವವಿದ್ಯಾಲಯ ಆವರಣದ ಡಾ. ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ಸ್‌ಗೆ ಸಮೀಪದ ರಸ್ತೆ ಕುಸಿದಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ ಸಂಬಂಧಪಟ್ಟಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಬಿಎಂಪಿ ಆಯುಕ್ತರಿಗೆ ಸೂಚಿಸಿದ್ದಾರೆ.
ಮೋದಿ ಸ್ವಾಗತಕ್ಕೆ ಬೆಂಗಳೂರಲ್ಲೂ ಭರ್ಜರಿ ತಯಾರಿ: ಹಳೇ ರೋಡು.. ಹೊಸ ಟಾರು.., ರಸ್ತೆಗಳು ಗುಂಡಿಮುಕ್ತ
ಸೋಮವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಡಾ. ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಉದ್ಘಾಟನೆ ಮಾಡಿದ್ದರು. ಆ ಸಂಸ್ಥೆಯ ಸಮೀಪದಲ್ಲೇ ರಸ್ತೆ ಕುಸಿದಿದೆ. ಗುರುವಾರ ಸಂಜೆ ಬೆಂಗಳೂರಿನಿಂದ ದೆಹಲಿಗೆ ತಲುಪಿದ ಬಳಿಕ ಸುದ್ದಿಗಾರರು ರಸ್ತೆ ಕುಸಿದಿರುವ ಕುರಿತು ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಪ್ರಶ್ನಿಸಿದಾಗ, ಅದರ ವಿವರಗಳನ್ನು ನೀಡಿದರೆ ತನಿಖೆ ಮಾಡಿಸಲಾಗುವುದು ಎಂದಿದ್ದರು. ಬಳಿಕ ರಸ್ತೆ ಕುಸಿದಿರುವ ವಿಷಯ ಮಾಧ್ಯಮಗಳ ಮೂಲಕ ಪ್ರಧಾನಿ ಕಚೇರಿಗೂ ತಲುಪಿ ಈ ಬಗ್ಗೆ ಮುಖ್ಯಮಂತ್ರಿಗಳ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ಕೇಳಿತ್ತು.
ಅದಾದ ಬಳಿಕ ಎಚ್ಚೆತ್ತ ಮುಖ್ಯಮಂತ್ರಿಗಳು ಬಿಬಿಎಂಪಿ ಆಯುಕ್ತರೊಂದಿಗೆ ದೆಹಲಿಯಿಂದಲೇ ದೂರವಾಣಿ ಮೂಲಕ ಮಾತನಾಡಿ, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಸಂಬಂಧಪಟ್ಟಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು ಎನ್ನಲಾಗಿದೆ. ಪ್ರಾಥಮಿಕ ತನಿಖೆಯಿಂದ ಈ ಪ್ರದೇಶದಲ್ಲಿರುವ ನೀರಿನ ಪೈಪ್ ಸೋರಿಕೆಯಿಂದ ರಸ್ತೆ ಕುಸಿದಿರುವುದು ಕಂಡು ಬಂದಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.