ಆರ್‌ಆರ್ ನಗರದಲ್ಲಿ ಮಳೆಗೆ ಕುಸಿದ ಗುಡ್ಡ ಉರುಳಿಬಿದ್ದ 20 ಟನ್ ತೂಕದ ಬಂಡೆ, ಮತ್ತಷ್ಟುಗುಡ್ಡ ಕುಸಿಯುವ ಭೀತಿ ಸೃಷ್ಟಿ. ಟ್ರಂಜ್, ಬದು ನಿರ್ಮಿಸಿ ಬಂಡೆ ಉರುಳದಂತೆ ಪಾಲಿಕೆ ವ್ಯವಸ್ಥೆ.
ಬೆಂಗಳೂರು (ಸೆ.11): ರಾಜರಾಜೇಶ್ವರಿ ನಗರದ ಗಿರಿಧಾಮ ಬಡಾವಣೆಯಲ್ಲಿ ಸುಮಾರು 20 ಟನ್ ತೂಕದ ಬಂಡೆ ಉರುಳಿ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ನಗರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಆರ್‌ಆರ್ ನಗರದ ಗಿರಿಧಾಮ ಬಡಾವಣೆಯಲ್ಲಿ ಗುರುವಾರ ಗುಡ್ಡ ಕುಸಿದು ಭಾರೀ ಗಾತ್ರದ ಬಂಡೆಯೊಂದು ಉರುಳಿದೆ. ಇದರಿಂದ ಸ್ಥಳೀಯ ನಿವಾಸಿಗಳು ಆತಂಕಗೊಂಡಿದ್ದಾರೆ. ಈ ಕುರಿತು ನಿವಾಸಿಗಳು ಬಿಬಿಎಂಪಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಬಿಬಿಎಂಪಿಯ ಆರ್‌ಆರ್ ನಗರ ವಲಯದ ಮುಖ್ಯ ಎಂಜಿನಿಯರ್ ವಿಜಯ್ ಕುಮಾರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಬಸವರಾಜ್ ಪರಿಶೀಲನೆ ನಡೆಸಿದ್ದಾರೆ. ಗುಡ್ಡದಿಂದ ಸುಮಾರು 30 ರಿಂದ 40 ಮೀಟರ್ ದೂರದಲ್ಲಿ ಒಂದು ಮನೆ ಇದ್ದು, ಮತ್ತೆ ಗುಡ್ಡ ಕುಸಿದರೂ ನಿವಾಸಿಗಳಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ. ಸುಮಾರು ಎರಡು ಮೀಟರ್ ಆಳದ ದೊಡ್ಡ ಕಾಲುವೆ (ಟ್ರಂಚ್) ನಿರ್ಮಿಸಲಾಗಿದೆ. ಜತೆಗೆ ಎರಡು ಮೀಟರ್ ಎತ್ತರದ ಬಂಡು (ಬದು) ನಿರ್ಮಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಯಾವುದೇ ಆತಂಕ ಬೇಡ ಎಂದಿದ್ದಾರೆ.
ಬಂಡೆ ಉರುಳದಂತೆ ಪರಿಹಾರಕ್ಕೆ ಒತ್ತಾಯ: ಸುಮಾರು 20 ವರ್ಷದ ಹಿಂದೆಯೇ ಸರ್ಕಾರವು ಈ ಗುಡ್ಡವನ್ನು ಹರಾಜು ಮಾಡಿದೆ. ಇದೀಗ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಗುಡ್ಡ ಕುಸಿಯುವುದಕ್ಕೆ ಆರಂಭಗೊಂಡಿದ್ದು, ಬಂಡೆಗಳು ಉರುಳುವುದಕ್ಕೆ ಶುರು ಮಾಡಿವೆ. ಗುಡ್ಡದ ಮೇಲ್ಭಾಗದಲ್ಲಿ ಬಹಳಷ್ಟು ಬಂಡೆಗಳಿದ್ದು, ಮುಂದಿನ ದಿನದಲ್ಲಿ ಉರುಳುವ ಸಾಧ್ಯತೆ ಇದೆ. ಹಾಗಾಗಿ, ಸರ್ಕಾರ ಮತ್ತು ಬಿಬಿಎಂಪಿ ಈ ಬಗ್ಗೆ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನಿವಾಸಿ ಕಿಶೋರ್ ಹೊಂಬೇಗೌಡ ಒತ್ತಾಯಿಸಿದ್ದಾರೆ.
ಬೊಮ್ಮನಹಳ್ಳಿ ವ್ಯಾಪ್ತಿ ಕಾಲುವೆ ಕಾಮಗಾರಿಗೆ .140 ಕೋಟಿ
ಬೊಮ್ಮನಹಳ್ಳಿ: ರಾಜಕಾಲುವೆಗಳ ರಸ್ತೆ ಬದಿ ನೀರುಗಾಲುವೆ ಕಾಮಗಾರಿಗಾಗಿ ಮುಖ್ಯಮಂತ್ರಿಗಳು .140 ಕೋಟಿ ಬಿಡುಗಡೆಗೊಳಿಸಿದ್ದಾರೆ ಎಂದು ಬೊಮ್ಮನಹಳ್ಳಿ ವಲಯ ಆಯುಕ್ತ ಹರೀಶ್ ಕುಮಾರ್ ತಿಳಿಸಿದ್ದಾರೆ.
ಎಚ್.ಎಸ್.ಆರ್. ವಾಣಿಜ್ಯ ಸಂಕೀರ್ಣದಲ್ಲಿರುವ ಬಿಬಿಎಂಪಿ ಕಚೇರಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಬೊಮ್ಮನಹಳ್ಳಿ ಕ್ಷೇತ್ರದ ನೆರೆ ಪ್ರದೇಶಕ್ಕೆ ಶಾಸಕ ಎಂ.ಸತೀಶ್ ರೆಡ್ಡಿ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹಾಗೂ ಇತರೇ ಹಿರಿಯ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ತಾತ್ಕಾಲಿಕ ಹಾಗೂ ಶಾಶ್ವತ ಕ್ರಮ ಜರುಗಿಸಲು ಕ್ರಮವಹಿಸಲಾಗಿದೆ ಎಂದರು.
Karnataka Rains: ಕಲ್ಯಾಣ ಕರ್ನಾಟಕದಲ್ಲಿ ಮಳೆ: ಸಿಡಿಲಿಗೆ 2 ಬಲಿ
ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಮಳೆಯಿಂದ ನಷ್ಟಉಂಟಾಗದಂತೆ ನೂತನ ತಾಂತ್ರಿಕ ಪದ್ಧತಿಯನ್ನು ನುರಿತ ಎಂಜಿನಿಯರುಗಳೊಂದಿಗೆ ಚರ್ಚಿಸಿ ಪರಾರಯಯ ರಾಜಕಾಲುವೆಗಳ ನಿರ್ಮಾಣ ಕೈಗೆತ್ತಿಕೊಳ್ಳಲಾಗುವುದು. ಶಾಶ್ವತ ಪರಿಹಾರಕ್ಕೆ ಮಳೆ ಅಡ್ಡಿಯಾಗಿದೆ ಎಂದು ಮಾಹಿತಿ ನೀಡಿದರು.
Bengaluru Flood: ಬೆಂಗಳೂರಿನಲ್ಲೀಗ ಗುಂಡಿ ಬಿದ್ದ ರಸ್ತೆಗಳಿಂದಲೇ ಸಮಸ್ಯೆ..!
ಬೊಮ್ಮನಹಳ್ಳಿ ವಲಯದಲ್ಲಿ ಮಳೆ ಬಂದಾಗ ಯಾವ ಭಾಗಗಳಲ್ಲಿ ತೊಂದರೆಯಾಗುತ್ತಿದೆ ಎಂಬುದು ತಿಳಿದು ಬಂದಿದ್ದು, ಮುಂದಿನ ವರ್ಷದಲ್ಲಿ ಜನರ ನಿರೀಕ್ಷೆಯಂತೆ ಯಾವುದೇ ತೊಂದರೆಯಾಗದಂತೆ ಶಾಶ್ವತ ಪರಿಹಾರ ಕೈಗೊಳ್ಳಲು ಕಾರ್ಯ ಯೋಜನೆ ಸಿದ್ಧಗೊಳಿಸಿದ್ದೇವೆ. ತುರ್ತಾಗಿ ಎಚ್.ಎಸ್.ಆರ್. ಬಡಾವಣೆ, ಅನುಗ್ರಹ ಲೇಔಟ್, ಹೊಂಗಸಂದ್ರದಲ್ಲಿ ಕಾಮಗಾರಿಗಳು ಆರಂಭವಾಗಿದ್ದು, ಪೂರ್ಣಗೊಳಿಸುತ್ತೇವೆ ಎಂದರು.