
ಶಿವಮೊಗ್ಗ: ಚೆನ್ನೈ ಮತ್ತು ಹೈದರಾಬಾದ್‌ನಿಂದ ಶಿವಮೊಗ್ಗಕ್ಕೆ ವಿಮಾನಯಾನ ಸೇವೆ ಒದಗಿಸುತ್ತಿದ್ದ ಸ್ಪೈಸ್ ಜೆಟ್ ವಿಮಾನಯಾನ ಸೇವೆ ರದ್ದಾಗಿದ್ದು, ಸಂಸ್ಥೆಯು ಟಿಕೆಟ್ ಬುಕಿಂಗ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದೆ.
ಬೆಂಗಳೂರು - ಶಿವಮೊಗ್ಗ ಮಧ್ಯೆ ಸೇವೆ ಒದಗಿಸುತ್ತಿದ್ದ ಇಂಡಿಗೋ ಸಂಸ್ಥೆಯು 2026ರ ಮೇ 1ರಿಂದ ತನ್ನ ಸೇವೆ ಸ್ಥಗಿತಗೊಳಿಸಿತ್ತು. ಇದರ ಬೆನ್ನಲ್ಲೇ ಸ್ಪೈಸ್ ಜೆಟ್ ವಿಮಾನಯಾನ ಸೇವೆ ರದ್ದುಗೊಳಿಸಿದೆ. ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ.
ಸ್ಪೈಸ್ ಜೆಟ್ ಸಂಸ್ಥೆಯು ಚೆನ್ನೈ ಮತ್ತು ಹೈದರಾಬಾದ್‌ನಿಂದ ಶಿವಮೊಗ್ಗಕ್ಕೆ ವಿಮಾನಯಾನ ಸೇವೆ ಒದಗಿಸುತ್ತಿತ್ತು. ಜೂನ್ 1ರಿಂದ ಚೈನ್ನೈ ಮಾರ್ಗದ ವಿಮಾನ ಹಾಗೂ ಜೂನ್ 2 ರಿಂದ ಹೈದರಾಬಾದ್ ಮಾರ್ಗದ ವಿಮಾನಯಾನ ಸೇವೆ ನಿಂತಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.
ಸೇವೆ ರದ್ದಾದ ಬೆನ್ನಲ್ಲೇ ಆನ್‌ಲೈನ್ ಹಾಗೂ ವಿವಿಧ ಏಜೆನ್ಸಿಗಳ ಮೂಲಕ ನಡೆಯುತ್ತಿದ್ದ ಟಿಕೆಟ್ ಬುಕಿಂಗ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಹೀಗಾಗಿ ಪ್ರಯಾಣಿಕರಿಗೆ ಸೀಟುಗಳನ್ನು ಕಾಯ್ದಿರಿಸಲು ಯಾವುದೇ ಅವಕಾಶ ಇಲ್ಲದಂತಾಗಿದೆ.
ಶಿವಮೊಗ್ಗ ವಿಮಾನ ನಿಲ್ದಾಣದಿಂದ 2024ರ ಅಕ್ಟೋಬರ್ 10 ರಿಂದ ಸೇವೆ ಆರಂಭಿಸಿದ್ದ ಸ್ಪೈಸ್ ಜೆಟ್‌ನ ಹೈದರಾಬಾದ್ ಮಾರ್ಗಕ್ಕೆ ಉತ್ತಮ ಬೇಡಿಕೆ ಇತ್ತು. ಆದಾಗ್ಯೂ ಸಂಸ್ಥೆ ದಿಢೀರನೆ ಸೇವೆ ನಿಲ್ಲಿಸಿದೆ. ಈ ಅನಿಶ್ಚಿತತೆ ಎಷ್ಟು ದಿನ ಮುಂದುವರಿಯಲಿದೆ ಎಂಬ ಬಗ್ಗೆ ಸ್ಪೈಸ್ ಜೆಟ್ ಅಧಿಕೃತವಾಗಿ ಸ್ಪಷ್ಟನೆ ನೀಡಿಲ್ಲ.
ಸದ್ಯ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಸ್ಟಾರ್ ಏರ್‌ಲೈನ್ಸ್ ಸಂಸ್ಥೆ ಮಾತ್ರ ಸೇವೆ ಒದಗಿಸುತ್ತಿದೆ. ಈ ಸಂಸ್ಥೆಯು ಶಿವಮೊಗ್ಗದಿಂದ ಹೈದರಾಬಾದ್, ತಿರುಪತಿ ಹಾಗೂ ಗೋವಾಕ್ಕೆ ಸಂಪರ್ಕ ಕಲ್ಪಿಸುತ್ತಿದ್ದು, ನಿತ್ಯ ಆರು ಟ್ರಿಪ್‌ಗಳ ಹಾರಾಟ ನಡೆಸುತ್ತಿದೆ
ಬೆಳಗ್ಗೆ 10.50ಕ್ಕೆ ಹೈದರಾಬಾದ್‌ನಿಂದ ಶಿವಮೊಗ್ಗಕ್ಕೆ ಆಗಮಿಸಲಿದೆ. ಬೆಳಗ್ಗೆ 11.20ಕ್ಕೆ ಶಿವಮೊಗ್ಗದಿಂದ ತಿರುಪತಿಗೆ ನಿರ್ಗಮಿಸಲಿದೆ. ಮಧ್ಯಾಹ್ನ 2ಕ್ಕೆ ತಿರುಪತಿಯಿಂದ ಶಿವಮೊಗ್ಗಕ್ಕೆ ಆಗಮಿಸಲಿದೆ. ಮಧ್ಯಾಹ್ನ 2.30ಕ್ಕೆ ಶಿವಮೊಗ್ಗದಿಂದ ಗೋವಾಗೆ ತೆರಳಲಿದೆ. ಸಂಜೆ 4.40ಕ್ಕೆ ಗೋವಾದಿಂದ ಶಿವಮೊಗ್ಗದಲ್ಲಿ ಲ್ಯಾಂಡ್ ಆಗಲಿದೆ. ಸಂಜೆ 5.10ಕ್ಕೆ ಶಿವಮೊಗ್ಗದಿಂದ ಹೈದರಾಬಾದ್‌ಗೆ ನಿರ್ಗಮಿಸಲಿದೆ.
ಆದರೆ, ಕೇವಲ ಎರಡು ತಿಂಗಳ ಅಂತರದಲ್ಲಿ ಎರಡು ಪ್ರಮುಖ ವಿಮಾನ ಸಂಸ್ಥೆಗಳು ಸೇವೆ ಸ್ಥಗಿತಗೊಳಿಸಿರುವುದು ವಿಮಾನ ನಿಲ್ದಾಣದ ಭವಿಷ್ಯದ ಕುರಿತು ಸಾರ್ವಜನಿಕರಲ್ಲಿ ಪ್ರಶ್ನೆಗಳನ್ನು ಮೂಡಿಸಿದೆ.
ಶಿವಮೊಗ್ಗ: ಶಿವಮೊಗ್ಗದ ಇಂಡಿಗೋ ಹಾಗೂ ಸ್ಪೈಸ್‌ಜೆಟ್ ಸಂಸ್ಥೆಗಳ ವಿಮಾನ ಹಾರಾಟ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ವಿಮಾನ ನಿಲ್ದಾಣವನ್ನು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಉಡಾನ್ ಯೋಜನೆಯ ವ್ಯಾಪ್ತಿಗೆ ತಂದು ವಿಮಾನ ಹಾರಾಟವನ್ನು ಮರು ಚಾಲನೆಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ವಿಮಾನಯಾನ ಸಂಸ್ಥೆಗಳಿಗೆ ಉತ್ತೇಜನ ನೀಡಲು ವಿಜಿಎಫ್ (ವಯಬಿಲಿಟಿ ಗ್ಯಾಪ್ ಫಂಡ್) ಸಬ್ಸಿಡಿ ನೀಡಲಾಗುತ್ತಿತ್ತು. ಆದರೆ, ಈಗಿನ ರಾಜ್ಯ ಸರ್ಕಾರವು ಈ ಸಬ್ಸಿಡಿಯನ್ನು ನಿಲ್ಲಿಸಿದೆ. ವಿಮಾನ ಸೇವೆಗೆ ನೀಡುತ್ತಿದ್ದ ಆರ್ಥಿಕ ಬೆಂಬಲವನ್ನು ಕಡಿತಗೊಳಿಸಿ, ರಾಜ್ಯ ಸರ್ಕಾರವು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ಕೇಂದ್ರದ ಕಡೆಗೆ ಬೆರಳು ತೋರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಲ್ಯಾಣ ಕರ್ನಾಟಕ ಭಾಗದ ಬೀದರ್ ಹಾಗೂ ಕಲಬುರಗಿ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಕೈಗೊಂಡ ಮಾದರಿಯಲ್ಲೇ ಶಿವಮೊಗ್ಗಕ್ಕೂ ವಿಶೇಷ ಪ್ಯಾಕೇಜ್ ಘೋಷಿಸುವಂತೆ ರಾಜ್ಯ ಸರ್ಕಾರವನ್ನು ಕೋರಲಾಗಿತ್ತು. ಆದರೆ, ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಆಮೆಗತಿಯಲ್ಲಿ ಸಾಗುತ್ತಿದ್ದು, ಸೂಕ್ತ ಆರ್ಥಿಕ ನೆರವು ಹಾಗೂ ಅಗತ್ಯ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರದ ಪ್ರಾದೇಶಿಕ ಸಂಪರ್ಕ ಯೋಜನೆಗೆ ಸೇರ್ಪಡೆಗೊಳಿಸಲು ಈಗಾಗಲೇ ಅರ್ಜಿ ಸಲ್ಲಿಕೆಯಾಗಿದ್ದು, ವಿಮಾನ ಸೇವೆಗಳ ಪುನಶ್ಚೇತನಕ್ಕೆ ನಿರಂತರವಾಗಿ ಪ್ರಯತ್ನ ಮಾಡಲಾಗುವುದು ಎಂದರು.