ಕಾದು ನೋಡಿ ಮುಂದೇನಾಗುತ್ತೆ ಎಂದ ಸಚಿವ ಶೆಟ್ಟರ್

By Kannadaprabha NewsFirst Published Sep 10, 2019, 11:55 AM IST
Highlights

ಅನರ್ಹರಾದ ಶಾಸಕರ ಬಗ್ಗೆ ಕೋರ್ಟ್ ತೀರ್ಪಿನ ಬಳಿಕ ಅವರಿಗೆ ಸ್ಥಾನ ಮಾನ ನೀಡುವ ಬಗ್ಗೆ ತೀರ್ಮಾನ ಮಾಡಲಾಗುತ್ತದೆ. ಕಾದು ನೋಡು ಮುಂದೇನಾಗುತ್ತದೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. 

ಹುಬ್ಬಳ್ಳಿ [ಸೆ.10]: ಅನರ್ಹ ಶಾಸಕರ ವಿಚಾರಣೆ ಸುರ್ಪೀಂಕೋರ್ಟ್ ನಲ್ಲಿ ಬಾಕಿ ಇದೆ. ಕೋರ್ಟ್‌ನ ತೀರ್ಪಿನ ನಂತರ ಅವರಿಗೆ ಸ್ಥಾನಮಾನ ಕೊಡುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋರ್ಟ್ ನಲ್ಲಿರುವ ಇರುವ ಕಾರಣ ಅನರ್ಹ ಶಾಸಕರಿಗೆ ಯಾವ ಸ್ಥಾನಮಾನ ನೀಡಬೇಕು ಎಂಬುದು ನಿರ್ಧಾರ ಮಾಡಿಲ್ಲ. ಈಗಲೇ ಏನು ಹೇಳಲಿಕ್ಕೆ ಆಗೋದಿಲ್ಲ. ಅನರ್ಹರು ಆಪತ್ ಕಾಲದಲ್ಲಿ ಸಹಾಯ ಮಾಡಿದ್ದು ನಿಜ. ಈ ಬಗ್ಗೆ ಹೆಚ್ಚಿಗೆ ಏನು ಹೇಳುವುದಿಲ್ಲ. ಕಾದು ನೋಡೋಣ ಎಂದರು. 

ಅನರ್ಹ ಶಾಸಕರ ತ್ಯಾಗ, ಬಲಿದಾನದಿಂದ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ ಎಂಬ ರೇಣುಕಾಚಾರ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅದು ಅವರ ವೈಯಕ್ತಿಕ ಅಭಿಪ್ರಾಯವಷ್ಟೇ ಎಂದರು. ಕಾಂಗ್ರೆಸ್- ಜೆಡಿಎಸ್‌ನ 15 ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಅನರ್ಹ ಶಾಸಕ ರಮೇಶ ಜಾರಕಿಹೊಳಿ ನೀಡಿರುವ ಹೇಳಿಕೆಗೆ, ಆ ಬಗ್ಗೆ ನನಗೇನೂ ಗೊತ್ತಿಲ್ಲ. ಆದರೆ, ಈಗ ಯಾವೊಬ್ಬ ಶಾಸಕರನ್ನು ತಮ್ಮನ್ನು ಸಂಪರ್ಕಿಸಿಲ್ಲ ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಾಜ್ಯ ವಿಧಾನಸಭೆಯ ಉಪ ಚುನಾವಣೆ ತಯಾರಿ ಕುರಿತು  ಪ್ರತಿಕ್ರಿಯೆ ನೀಡಿದ ಅವರು, ಇನ್ನೂ ಚುನಾವಣಾ ಆಯೋಗ ಚುನಾವಣೆಯ ದಿನಾಂಕ ಪ್ರಕಟ ಮಾಡಿಲ್ಲ. ಚುನಾವಣೆ ವೇಳಾಪಟ್ಟಿ ಬಿಡುಗಡೆ ಮಾಡಿದ ಮೇಲೆ ನೋಡೋಣ ಎಂದರು.ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಯಾವುದೇ ಭವಿಷ್ಯವಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಒಬ್ಬರಿಗೆ ಒಬ್ಬರ ಮುಖ ನೋಡಿಕೊಳ್ಳಲು ಆಗುತ್ತಿಲ್ಲ. ಅವರು ಯಾವ ರೀತಿ ತಯಾರಿ ಮಾಡಿಕೊಳ್ಳುತ್ತಾರೆ, ಆ ಪಕ್ಷಗಳ ತಯಾರಿ ಬರೀ ಮಾಧ್ಯಮಗಳಲ್ಲಿ ಮಾತ್ರ ಎಂದು ವ್ಯಂಗ್ಯ ಮಾಡಿದರು.

click me!