
ಹೊಸಪೇಟೆ(ಫೆ. 05) ಗೋಹತ್ಯೆ (Cattle slaughter) ನಿಷೇಧದ ಪರಿಣಾಮ ಕುರಿ, ಮೇಕೆ ಮಾಂಸಕ್ಕೆ ಬೇಡಿಕೆ ದ್ವಿಗುಣವಾಗಿದ್ದು, ಇವುಗಳ ಉತ್ಪಾದನೆಯೂ ಹೆಚ್ಚಾಗಿದೆ ಎಂದು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಶರಣು ತಳ್ಳಿಕೆರೆ ಹೇಳಿದರು.
ಹೊಸಪೇಟೆಯ (Hospet) ಪಶು ಆಸ್ಪತ್ರೆಯಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಬಳ್ಳಾರಿ, ವಿಜಯನಗರ (Vijayanagar) ಜಿಲ್ಲಾ ಕುರಿ ಸಹಕಾರ ಸಂಘಗಳ ಪ್ರತಿನಿಧಿಗಳಿಗೆ ಆಯೋಜಿಸಿದ್ದ ವೈಜ್ಞಾನಿಕ ಕುರಿ ಸಾಕಾಣಿಕೆ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಕುರಿಗಳು ಸದೃಢವಾಗಿ ಮತ್ತು ಆರೋಗ್ಯಪೂರ್ಣವಾಗಿ ಬೆಳೆಯಲು ಮಧ್ಯ ಕರ್ನಾಟಕದಲ್ಲಿ ಬೃಹತ್ ಆಹಾರ ಉತ್ಪಾದನಾ ಕೇಂದ್ರವನ್ನು ಆರಂಭಿಸುವ ಚಿಂತನೆ ನಿಗಮಕ್ಕಿದೆ ಎಂದರು. ಕುರಿಗಾರರಿಗೆ ತಮ್ಮ ಕುರಿಗಳಿಗೆ ನ್ಯಾಯಸಮ್ಮತ ಬೆಲೆ ಸಿಗಲು ದಲ್ಲಾಳಿಗಳಿಲ್ಲದೆ, ನೇರವಾಗಿ ಕುರಿ ಮಾರಾಟ ಮಾಡಲು ಅನುಕೂಲವಾಗುವಂತೆ ವಿಶೇಷ ಮಾರ್ಕೆಟಿಂಗ್ ಆ್ಯಪ್ ಸಿದ್ಧಪಡಿಸಲಾಗುತ್ತದೆ ಎಂದು ತಿಳಿಸಿದರು.
ಕೊಟ್ಟೂರು, ಉಚ್ಚಂಗಿದುರ್ಗ, ಕುರೆಕುಪ್ಪ, ಉತ್ತಂಗಿ ಮೊದಲಾದ ಕುರಿ ಸಹಕಾರ ಸಂಘದ ಅಧ್ಯಕ್ಷರು, ಕುರಿ ಸಹಕಾರ ಸಂಘಕ್ಕೆ ಮೊದಲಿನಂತೆ ಔಷಧಿ ಸರಬರಾಜು, ಅನುಗ್ರಹ ಯೋಜನೆಯಲ್ಲಿ ಪರಿಹಾರ ವಿತರಣೆ, ಸಂಘದ ಮೂಲಕ ಸಾಲ ಮಂಜೂರು, ಸಂಘಗಳ ಕಟ್ಟಡ ನಿರ್ಮಾಣಕ್ಕೆ ಸ್ಥಳ ಮಂಜೂರು, ವೈದ್ಯರ ಕೊರತೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಅಧ್ಯಕ್ಷರ ಗಮನಕ್ಕೆ ತಂದರು.
ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ; ಕರ್ನಾಟಕದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ!
ಈಗಾಗಲೆ ಪಶುವೈದ್ಯರ ನೇಮಕವಾಗುತ್ತಿದೆ. ನಿಗಮಕ್ಕೆ ಬಂದ ಅನುಗ್ರಹ ಯೋಜನೆಯ ಎಲ್ಲಾ ಅರ್ಜಿಗಳಿಗೆ ಹಣ ಮಂಜೂರು ಮಾಡಲಾಗಿದೆ ಎಂದ ಅಧ್ಯಕ್ಷರು, ಮುಖ್ಯವಾಗಿ ಕುರಿ ಸಂಘಗಳಿಗೆ ಔಷಧಿ ಸರಬರಾಜು ಸೇರಿದಂತೆ ಕುರಿಗಾರರ ಎಲ್ಲಾ ಬೇಡಿಕೆ ಈಡೇರಿಕೆಗಾಗಿ ಪಶು ಸಂಗೋಪನೆ ಸಚಿವ ಹಾಗೂ ಮುಖ್ಯಮಂತ್ರಿ ಜತೆ ಮಾತನಾಡುವ ಭರವಸೆ ನೀಡಿದರು.
ವೈಜ್ಞಾನಿಕ ಕುರಿ ಸಾಕಾಣಿಕೆ ಕುರಿತು ಉಪನ್ಯಾಸ ನೀಡಿದ ಡಾ. ಅಶ್ವತ್ಥಕುಮಾರ್, ಸಾಂಪ್ರದಾಯಿಕ ಕುರಿ ಸಾಕಾಣಿಕೆ ಲಾಭದಾಯಕ. ಆದರೆ ಮೊದಲಿನಂತೆ ಕಾಡಿಲ್ಲ, ಮೇಯಿಸಲು ಭೂಮಿ ಕೊರತೆ ಇರುವುದರಿಂದ ವೈಜ್ಞಾನಿಕ ಕುರಿ ಸಾಕಾಣಿಕೆ ಕಡೆ ಕುರಿಗಾರರು ಹೆಚ್ಚು ಗಮನಹರಿಸಬೇಕೆಂದರು.
ವಿದ್ಯಾವಂತ ಯುವಕರು ಆಧುನಿಕವಾಗಿ ಕುರಿ ಶೆಡ್ ನಿರ್ಮಿಸಿ ಲಾಭಪಡೆಯುತ್ತಿದ್ದಾರೆ ಎಂದ ಅವರು ತೊಣಚಿ ಕೆರೆಯಲ್ಲಿ ಎಂಜಿನಿಯರಿಂಗ್ ಕೆಲಸ ಬಿಟ್ಟು ವೈಜ್ಞಾನಿಕವಾಗಿ ಕುರಿ ಸಾಕಾಣಿಕೆ ಮಾಡಿ ಯಶಸ್ವಿಯಾದ ವ್ಯಕ್ತಿ ಕುರಿತು ಹೇಳಿದರು.
ಅಧ್ಯಕ್ಷ ಶರಣು ತಳ್ಳಿಕೆರೆ ಅವರಿಗೆ ಪಶು ಸಂಗೋಪನಾ ಇಲಾಖೆ ಹಾಗೂ ವಿವಿಧ ಕುರಿ ಸಂಘದ ಅಧ್ಯಕ್ಷರು ಹಾರಹಾಕಿ ಸನ್ಮಾನಿಸಿದರು. ತರಬೇತಿ ಶಿಬಿರಕ್ಕೆ ವಿಜಯನಗರ, ಬಳ್ಳಾರಿ ಜಿಲ್ಲೆಯಿಂದ 26ಕ್ಕೂ ಹೆಚ್ಚು ಕುರಿಗಾರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದರು. ತರಬೇತಿ ಕಾರ್ಯಾಗಾರದ ಅಧ್ಯಕ್ಷತೆಯನ್ನು ಡಾ. ಬಸಯ್ಯ ಸಾಲಿ ವಹಿಸಿದ್ದರು. ಡಾ. ಅಖ್ತರ್, ಡಾ.ಬೆಣ್ಣಿ ಬಸವರಾಜ್ ನಿರ್ವಹಿಸಿದರು.