ದಾವಣಗೆರೆ ತಾಲ್ಲೂಕ್ ಅಣಜಿ ಗ್ರಾಮದ ಕೆರೆ ಏರಿ ಮೇಲೆ ಇಂದು ಹಬ್ಬದ ಸಂಭ್ರಮ. 43 ವರ್ಷಗಳ ನಂತರ ಅಣಜಿ ಬೃಹತ್ ಕೆರೆ ಭರ್ತಿಯಾಗಿ ಕೋಡಿಬಿದ್ದಿದ್ದು, ಕೆರೆ ಸುತ್ತಮುತ್ತಲಿನ 13 ಹಳ್ಳಿಗಳು ಇಂದು ಕೆರೆ ಹೊನ್ನಮ್ಮ ಜಾತ್ರೆ ಆಚರಿಸಿದ್ದಾರೆ.
ವರದಿ : ವರದರಾಜ್ ಏಷ್ಯಾನೆಟ್ ಸುವರ್ಣನ್ಯೂಸ್
ದಾವಣಗೆರೆ (ನ.12): ದಾವಣಗೆರೆ ತಾಲ್ಲೂಕ್ ಅಣಜಿ ಗ್ರಾಮದ ಕೆರೆ ಏರಿ ಮೇಲೆ ಇಂದು ಹಬ್ಬದ ಸಂಭ್ರಮ. 43 ವರ್ಷಗಳ ನಂತರ ಅಣಜಿ ಬೃಹತ್ ಕೆರೆ ಭರ್ತಿಯಾಗಿ ಕೋಡಿಬಿದ್ದಿದ್ದು, ಕೆರೆ ಸುತ್ತಮುತ್ತಲಿನ 13 ಹಳ್ಳಿಗಳು ಇಂದು ಕೆರೆ ಹೊನ್ನಮ್ಮ ಜಾತ್ರೆ ಆಚರಿಸಿದ್ದಾರೆ. ಕೆರೆ ಹೊನ್ನಮ್ಮ ಜಾತ್ರೆ ಕಾರ್ಯಕ್ರಮಕ್ಕೆ ಹತ್ತಾರು ಗ್ರಾಮ ದೇವತೆಗಳು ಸಹಸ್ರಾರು ಜನ ಸಾಕ್ಷಿಯಾಗಿದ್ದಾರೆ. ದಾವಣಗೆರೆ ತಾಲ್ಲೂಕ್ ಅಣಜಿ ಗ್ರಾಮದ ಕೆರೆ ಏರಿ ಮೇಲೆ ಇಂದು ಅಕ್ಷರಶಃ ಹಬ್ಬದ ಸಂಭ್ರಮ. ಅಣಜಿ ಕೆರೆಯಾಗಳಹಳ್ಳಿ ಸೇರಿದಂತೆ 13 ಗ್ರಾಮಗಳ ಜನತೆ ಅಣಜಿ ಕೆರೆ ಬಾಗಿನ ಅರ್ಪಿಸಿದ್ದಾರೆ. ಪ್ರತಿವರ್ಷದಂತೆ ಕೆರೆ ದಂಡೆಯಲ್ಲಿ ಕೆರೆ ಹೊನ್ನಮ್ಮ ಜಾತ್ರೆ ಆಚರಿಸುವುದು ಸಂಪ್ರದಾಯ. ಇಂದು ಬೆಳಿಗ್ಗೆಯಿಂದಲೇ ಸುತ್ತಮುತ್ತಲ ಗ್ರಾಮಗಳ ನೂರಾರು ಮಹಿಳೆಯರು ಈ ಭಾಗದ ಜನಪ್ರತಿನಿಧಿಗಳು ಗ್ರಾಮ ದೇವತೆಗಳ ಸಮ್ಮುಖದಲ್ಲಿ ಕೆರೆಗೆ ಹಾಲು ತುಪ್ಪ ಬಿಟ್ಟು ಬಾಗಿನ ಅರ್ಪಿಸಿ ಗಂಗಾಮಾತೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕೆರೆಯಾಗಳ ಹಳ್ಳಿಯಿಂದ ಕೊಡದಲ್ಲಿ ಹಾಲು ತುಪ್ಪ ತಂದು ಅಣಜಿ ಗ್ರಾಮದ ಕೆರೆಗೆ ಅರ್ಪಿಸುವುದಕ್ಕೆ ಪುರಾಣ ಕಲ್ಪನೆ ಇದೆ.ಕೆರೆಯಾಗಳ ಹಳ್ಳಿ ಹಾಗು ಅಣಜಿ ಗ್ರಾಮಕ್ಕೆ ಗಂಡು ಹೆಣ್ಣಿನ ನಂಟು. ಮದುವೆ ಸಂದರ್ಭದ ಎಲ್ಲಾ ಸಂಪ್ರದಾಯಗಳನ್ನು ಅಣಜಿ ಗ್ರಾಮಸ್ಥರು ಆಚರಣೆ ಮಾಡುತ್ತಾರೆ.
ಅಣಜಿ ಗ್ರಾಮ ಸೇರಿದಂತೆ ಹತ್ತಾರು ಹಳ್ಳಿಗಳಲ್ಲಿ ಅಣಜಿ ಕೆರೆ ಜೀವನಾಡಿ.ಅಣಜಿ ಕೆರೆಯಲ್ಲಿ ನೀರು ಇತ್ತಂದರೆ ಈ ಭಾಗದಲ್ಲಿ ಸಮೃದ್ಧಿ ಇರುತ್ತದೆ ಹಾಗಾಗಿ ಕೆರೆ ತುಂಬಿದ ಸಂದರ್ಭದಲ್ಲಿ ಬಾಗಿನ ಅರ್ಪಿಸಿ ಬಂದಂತಹ ಸಾವಿರಾರು ಜನರಿಗೆ ಊಟ ಹಾಕಿಸುವುದು ಸಂಪ್ರದಾಯ. ಅಷ್ಟೇ ಅಲ್ಲದೆ ಹತ್ತಾರು ಗ್ರಾಮ ದೇವತೆಗಳನ್ನು ಕರೆಸಿ ಗಂಗಾ ಪೂಜೆ ಮಾಡಿ ಉತ್ಸವ ಮಾಡಿ ಪೂಜೆ ಪುನಸ್ಕಾರಗಳನ್ನು ಸಲ್ಲಿಸುವುದು ವಾಡಿಕೆಯಾಗಿದೆ.
ಜೋಂಡು ಸೂಪ್ಪಿನ ತೋಟವಾದ ಕೋಲಾರಮ್ಮನ ಕೆರೆ!
ಹೇಳಿ ಕೇಳಿ ಎಲೆಕ್ಷನ್ ಸಂದರ್ಭವಾಗಿರುವುದರಿಂದ ಇದೇ ಬಾಗಿನ ಕಾರ್ಯಕ್ರಮದ ಲಾಭ ಪಡೆಯಲು ರಾಜಕಾರಣಿಗಳ ದಂಡೆ ಅಣಜಿ ಗ್ರಾಮಕ್ಕೆ ಆಗಮಿಸಿದೆ.ಮಾಯಕೊಂಡ ವಿಧಾನ ಸಭಾ ಕ್ಷೇತ್ರದ ಆಕಾಂಕ್ಷಿಗಳು ನಾ ಮುಂದು ತಾ ಮುಂದು ಎಂದು ಬಾಗಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಲು ಹವಣಿಸಿದ್ದಾರೆ. ಕಾಂಗ್ರೆಸ್ ಮುಖಂಡ ಬಸವಂತಪ್ಪ , ಬಿಜೆಪಿ ಮುಖಂಡರುಗಳಾದ ಮಾಜಿ ಶಾಸಕ ಬಸವರಾಜ್ ನಾಯ್ಕ್ , ಇನ್ನೊಬ್ಬ ಬಿಜೆಪಿ ಟಿಕೇಟ್ ಆಕಾಂಕ್ಷಿ ಶ್ಯಾಮ್, ವಾಗೇಶ್ ಸ್ವಾಮಿ ಸೇರಿದಂತೆ ಹಲವರು ಬಾಗಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
Chamarajanagar: ಕೆರೆಗೆ ನೀರು ತುಂಬಿಸುವ ಯೋಜನೆಗೆ ಸಚಿವ ಸೋಮಣ್ಣ ಸೂಚನೆ
ಇನ್ನು ಕೆರೆ ದಂಡೆಯಲ್ಲಿ ವಿವಿಧ ಸಾಂಸ್ಕೃತಿಕ ಕಲಾಪ್ರಕಾರಗಳು ಬಾಗಿನ ಕಾರ್ಯಕ್ರಮಕ್ಕೆ ಹಬ್ಬದ ರಂಗು ನೀಡಿವೆ. ಮಹಿಳೆಯರು ಮಕ್ಕಳು ಹೊಸ ಬಟ್ಟೆ ತೊಟ್ಟು ಕೆರೆ ದಂಡೆಯ ಉತ್ಸವದಲ್ಲಿ ಪಾಲ್ಗೊಂಡು ಇಡೀ ದಿನ ಸಂಭ್ರಮ ಪಟ್ಟಿದ್ದಾರೆ. 43 ವರ್ಷಗಳ ನಂತರ ಅತಿವಿಸ್ತಾರದ ಕೆರೆ ತುಂಬಿದ್ದಕ್ಕೆ ಸುತ್ತಮುತ್ತಲಿನ ಗ್ರಾಮಗಳ ಮುಖದಲ್ಲಿ ನೆಮ್ಮದಿ ಸಂತೋಷ ಮೂಡಿ ಕೆರೆ ಹೊನ್ನಮ್ಮ ನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.