ಜೈಲು ಕ್ಯಾಂಟೀನ್‌ಗಾಗಿ ಕೈದಿಗಳಿಂದ ಹಣ ವಸೂಲಿ!

By Kannadaprabha NewsFirst Published May 2, 2020, 8:20 AM IST
Highlights

ವಿಚಾರಣಾಧೀನ ಕೈದಿಗಳು ಹಾಗೂ ಶಿಕ್ಷೆಗೊಳಗಾದವರಿಗೆ ಸರ್ಕಾರದಿಂದ ಜೈಲಿನಲ್ಲೇ ಊಟ, ಉಪಾಹಾರ ನೀಡಲಾಗುತ್ತದೆ| ವಿಚಾರಣಾಧೀನ ಕೈದಿಗಳು ನ್ಯಾಯಾಲಯದ ಜಾಮೀನಿನ ಮೇಲೆ ಬಿಡುಗಡೆಯಾಗುವಾಗ ಅವರಿಂದ ಕ್ಯಾಂಟೀನ್‌ ಶುಲ್ಕ ಎಂದು ಹಣ ಪಡೆಯಲಾಗುತ್ತಿದೆ|

ಹಾವೇರಿ(ಮೇ.02): ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಿಂದ ಕ್ಯಾಂಟೀನ್‌ ಊಟ, ಉಪಾಹಾರದ ಖರ್ಚು ಎಂದು ಹಣ ಪಡೆಯಲಾಗುತ್ತಿದೆ ಎಂದು ಆರೋಪಿಸಿರುವ ನ್ಯಾಯವಾದಿ ಎಸ್‌.ಆರ್‌. ಹೆಗಡೆ, ಈ ಕುರಿತು ಗೃಹ ಸಚಿವರು, ಬಂಧಿಖಾನೆ ಎಡಿಜಿಪಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಚಾರಣಾಧೀನ ಕೈದಿಗಳು ಹಾಗೂ ಶಿಕ್ಷೆಗೊಳಗಾದವರಿಗೆ ಸರ್ಕಾರದಿಂದ ಜೈಲಿನಲ್ಲೇ ಊಟ, ಉಪಾಹಾರ ನೀಡಲಾಗುತ್ತದೆ. ಆದರೆ, ವಿಚಾರಣಾಧೀನ ಕೈದಿಗಳು ನ್ಯಾಯಾಲಯದ ಜಾಮೀನಿನ ಮೇಲೆ ಬಿಡುಗಡೆಯಾಗುವಾಗ ಅವರಿಂದ ಕ್ಯಾಂಟೀನ್‌ ಶುಲ್ಕ ಎಂದು ಹಣ ಪಡೆಯಲಾಗುತ್ತಿದೆ ಎಂದು ದೂರಿದರು.

ನಕಲಿ ಬೀಜ ಮಾರಾಟ ಹಗರಣ: ತಪ್ಪಿತಸ್ಥರ ಮೇಲೆ ಮುಲಾಜಿಲ್ಲದೆ ಕ್ರಮ, ಸಚಿವ ಪಾಟೀಲ

ಕಳೆದ ಮಾ. 22ರಂದು ನ್ಯಾಯಾಧೀಶರ ಆದೇಶದಂತೆ ಇಬ್ಬರು ಆರೋಪಿಗಳ ಬಿಡುಗಡೆ ಇಂಟಿಮೇಶನ್‌ ತೆರೆದುಕೊಂಡು ಹೋದಾಗ, 3500 ಕ್ಯಾಂಟೀನ್‌ ಬಿಲ್‌ ಕೊಡುವಂತೆ ತಿಳಿಸಿದರು. ಹಣ ನೀಡಿದರೆ ಮಾತ್ರ ಬಿಡುಗಡೆ ಮಾಡುವುದಾಗಿ ಹೇಳಿದರು. ಆಗ ಜೈಲರ್‌ ಅವರನ್ನು ಈ ವಿಷಯವಾಗಿ ಕೇಳಿದಾಗ, ಸರ್ಕಾರದಿಂದ ಕ್ಯಾಂಟೀನ್‌ ನಡೆಸಲು ನಮಗೆ ಆದೇಶವಿದೆ ಎಂದು ತಿಳಿಸಿದರು. ನಾವು ಕೊಟ್ಟ ಹಣಕ್ಕೆ ರಸೀದಿ ಕೊಡುವಂತೆ ಕೇಳಿದ್ದಕ್ಕೆ ಅವಾಚ್ಯವಾಗಿ ಮಾತನಾಡಿದ್ದಾರೆ ಎಂದು ಘಟನೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.

ಮತ್ತೊಂದು ಪ್ರಕರಣದಲ್ಲಿ ಮಾ. 30ರಂದು ನ್ಯಾಯಾಲಯವು ಆರೋಪಿತನಿಗೆ ಜಾಮೀನು ನೀಡಿ ಜೈಲು ಅಧಿಕಾರಿಗಳಿಗೆ ಬಿಡುಗಡೆ ಮಾಡಲು ನಿರ್ದೇಶನ ನೀಡಿದೆ. ಕೋರ್ಟ್‌ ಪ್ರತಿಯನ್ನು ಜೈಲರ್‌ಗೆ ತಲುಪಿಸಲು ನನ್ನ ಪಕ್ಷಗಾರರ ಸ್ನೇಹಿತರು ಹೋದಾಗ ವಕೀಲರೇ ಬರಬೇಕು ಎಂದು ಜೈಲರ್‌ ಹೇಳಿದ್ದಾರೆ. ಆಗ ನಾನು ಹೋದಾಗ . 300 ಕ್ಯಾಂಟೀನ್‌ ಶುಲ್ಕ ಪಾವತಿಸುವಂತೆ ಹೇಳಿದರು. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಒಂದು ಗಂಟೆ ಕಾಯಿಸಿ ಧಮ್ಕಿ ಹಾಕಿದರು. ಕೊರೋನಾದಿಂದ ಜನ ಸಂಕಷ್ಟದಲ್ಲಿದ್ದು, ಈ ಸಂದರ್ಭದಲ್ಲಿ 7 ವರ್ಷದೊಳಗೆ ಶಿಕ್ಷೆಗೊಳಗಾಗಿರುವ ವಿಚಾರಣಾಧೀನ ಕೈದಿಗಳನ್ನು ಬಿಡುವಂತೆ ನ್ಯಾಯಾಲಯವೇ ನಿರ್ದೇಶನ ನೀಡಿದೆ. ಆದರೂ ಇಲ್ಲಿ ಸುಲಿಗೆ ಮಾಡಲಾಗುತ್ತಿದೆ. ಈ ಬಗ್ಗೆ ಸರ್ಕಾರ ತನಿಖೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಕೀಲ ಎಸ್‌.ಆರ್‌. ಹೆಗಡೆ ಆಗ್ರಹಿಸಿದರು.

ವಕೀಲರಾದ ಭರತೇಶ ಜಗ್ಗಣ್ಣವರ, ಪ್ರಶಾಂತ ಗಾಣಿಗೇರ, ಪ್ರಭು ಹಿಟ್ನಳ್ಳಿ, ಸಂತೋಶ ಆಲದಕಟ್ಟಿ ಇದ್ದರು.

ಲೌಕ್‌ಡೌನ್‌ ಉಲ್ಲಂಘಿಸಿ ಕಾರಾಗೃಹದ ಆವರಣಕ್ಕೆ ಬಂದಿರುವುದೇ ತಪ್ಪು. ಈ ಬಗ್ಗೆ ನಾವು ಕೇಳಿದ್ದಕ್ಕೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಸರ್ಕಾರದ ಅನುಮತಿ ಮೇರೆಗೆ ಕ್ಯಾಂಟೀನ್‌ ನಡೆಸಲಾಗುತ್ತಿದೆ. ಆದರೆ, ಹಣ ವಸೂಲಿ ಯಾರೂ ಮಾಡಿಲ್ಲ. ಮಾಡಿದ್ದರೆ ದಾಖಲೆ ಸಹಿತವಾಗಿ ನೀಡಿದರೆ ಕ್ರಮ ಕೈಗೊಳ್ಳುತ್ತೇನೆ. ಈ ರೀತಿ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದು ಕಾರಾಗೃಹ ಅಧೀಕ್ಷಕ ಟಿ.ಬಿ. ಭಜಂತ್ರಿ ಅವರು ಹೇಳಿದ್ದಾರೆ. 
 

click me!