
ಬೆಳಗಾವಿ: ಬೆಳಗಾವಿಯ ಆದಿತ್ಯರಾಜ್ ಕ್ಯಾಪಿಟಲ್ ವಂಚನೆ ಆರೋಪದ ಪ್ರಕರಣ ಇಂದು ಸಿಐಡಿಗೆ ಹಸ್ತಾಂತರವಾಗುವ ಸಾಧ್ಯತೆಗಳಿವೆ. ಬೆಂಗಳೂರಿನಿಂದ ಡಿವೈಎಸ್ಪಿ ನೇತೃತ್ವದ ತಂಡ ಬೆಳಗಾವಿ ಆಗಮಿಸಿದ್ದು, ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡಿದೆ. ಶಿವ್ಂ ಅಸೋಸಿಯೇಟ್ ಬೆನ್ನಲ್ಲೇ ಆದಿತ್ಯರಾಜ್ ಕ್ಯಾಪಿಟಲ್ ಪ್ರಕರಣದ ತನಿಖೆ ಸಿಐಡಿಗೆ ಹಸ್ತಾಂತರವಾಗುತ್ತಿದೆ.
ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಸರ್ಕಾರಕ್ಕೆ ಬಹುಕೋಟಿ ವಂಚನೆ ಬಗ್ಗೆ ವರದಿ ಸಲ್ಲಿಕೆ ಮಾಡಿದ್ದಾರೆ. ಅದರಂತೆ ಸಿಐಡಿ ಡಿಐಜಿ ಡಾ.ಭೀಮಾಶಂಕರ ಗುಳೇದ್ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ. ಕಳೆದ ನಾಲ್ಕು ದಿನಗಳಿಂದ ಆರೋಪಿ ಬಾಲರಾಜ್ ಮಾನೆ ತಲೆ ಮರೆಸಿಕೊಂಡಿದ್ದು, ಬಂಧನಕ್ಕೆ ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಆರೋಪಿ ಮಾನೆ ಮಹಾರಾಷ್ಟ್ರದಿಂದ ಗುಜರಾತ್‌ಗೆ ಪರಾರಿಯಾಗಿರುವ ಮಾಹಿತಿ ಲಭ್ಯವಾಗಿದೆ.
ಬೆಳಗಾವಿಯ ಚರ್ಚೆಯಲ್ಲಿರುವ ಆದಿತ್ಯರಾಜ್ ಕ್ಯಾಪಿಟಲ್ ಸಂಸ್ಥೆ ಮೇಲೆ ಶನಿವಾರ ಸಂಜೆ ಸಂಬಂಧಪಟ್ಟ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ಸಂಸ್ಥೆಯ ಮಾಲೀಕ ಬಾಲರಾಜ್ ಮಾನೆ ಅವರು ಎಲ್ಲೋ ಕುಳಿತು ಸ್ವತಃ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ವಿಡಿಯೋದಲ್ಲಿ ಮಾತನಾಡಿದ ಬಾಲರಾಜ್ ಮಾನೆ, ನಾವು ಕಾನೂನು ಪ್ರಕಾರವೇ ಇದ್ದೇವೆ. ಯಾವುದೇ ನಿಯಮಗಳನ್ನು ಗಾಳಿಗೆ ತೂರಿ ಸಂಸ್ಥೆ ನಡೆಸುತ್ತಿಲ್ಲ. ಠೇವಣಿದಾರರು ಯಾರೂ ಧೈರ್ಯ ಗುಂದಬಾರದು. ನಿಮ್ಮ ಬೆವರಿನ ಹಣ ನಮ್ಮ ಬಳಿ ಸುರಕ್ಷಿತವಾಗಿದೆ. ಟಿಡಿಎಸ್ ಕಟ್ ಮಾಡಿದ ನಂತರವೇ ಎಲ್ಲರಿಗೂ ಶೇರಿಂಗ್ ಅಮೌಂಟ್ ಹಾಕಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ನಾಳೆ ಪ್ರಕರಣ ಕೋರ್ಟ್‌ಗೆ ಬಂದಾಗ ನಾವು ಖಂಡಿತವಾಗಿ ವಿಜಯ ಸಾಧಿಸುತ್ತೇವೆ. ಠೇವಣಿದಾರರ ಬೆವರಿನ ದುಡ್ಡಿಗೆ ನಾನು ಮೋಸ ಮಾಡುವುದಿಲ್ಲ. ಈ ಕಾನೂನು ಸಂಘರ್ಷದಲ್ಲಿ ಗೆದ್ದು ಮತ್ತೆ ಆದಿತ್ಯರಾಜ್ ಕಂಪನಿ ಪುಟಿದೇಳಲಿದೆ. ನಾನು ಬರುತ್ತಿದ್ದೇನೆ, ಎಲ್ಲರೂ ಮತ್ತೆ ಸಿಗೋಣ ಎಂದು ಬಾಲರಾಜ್ ಮಾನೆ ಹೇಳಿದ್ದಾರೆ.