
ರಾಮನಗರ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಎಸ್‌ಐಆರ್ ವೇಳೆ ಮತ ಹಕ್ಕು ಕಳೆದುಕೊಂಡವರಿಗೆ ಗ್ಯಾರಂಟಿ ಸ್ಕೀಂಗಳು ಸಿಗುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ನಮ್ಮ ಮತ ಇದೆ ಎಂದು ಭಾವಿಸಿ ಸುಮ್ಮನಾದರೆ ಮತ ಹೋಗುತ್ತದೆ. ಹಾಗಾದಾಗ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸದಿದ್ದರೆ ಮತವೂ ಇಲ್ಲ ಜೊತೆಗೆ ಯಾವುದೇ ಸರ್ಕಾರಿ ಯೋಜನೆಗಳ ಲಾಭವೂ ಸಿಗುವುದಿಲ್ಲ. ಗೃಹಲಕ್ಷ್ಮೀ, ಗೃಹಜ್ಯೋತಿ ಯಾವುದೂ ಸಿಗುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಭಾನುವಾರ ಅವರು ಸ್ವಕ್ಷೇತ್ರ ಕನಕಪುರಕ್ಕೆ ಭೇಟಿ ನೀಡಿ, ಸಿಎಂ ಆಗುವ ತಮ್ಮ ಕನಸನ್ನು ನನಸಾಗಿಸಲು ಹರಸಿದ ತವರೂರಿನ ಜನತೆಗೆ ಕೃತಜ್ಞತೆ ಅರ್ಪಿಸಿದರು. ಹಾರೋಹಳ್ಳಿ ಮತ್ತು ಕನಕಪುರ ತಾಲೂಕಿನ 21 ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ನಡೆದ ಕೃತಜ್ಞತಾ ಸಮರ್ಪಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಾರ್ವಜನಿಕರಿಗೆ ತೊಂದರೆ ಆಗಬಹುದಾದ ‘ಜೀರೋ ಟ್ರಾಫಿಕ್’ ಕಾರು ಪ್ರಯಾಣ ತಪ್ಪಿಸಲು ಸಿಎಂ ಅವರು ಬೆಳಗ್ಗೆ ವಿಧಾನಸೌಧದ ಎದುರಿನ ಮೆಟ್ರೋ ಸ್ಟೇಷನ್‌ನಿಂದ ಕನಕಪುರ ರಸ್ತೆಯ ಕೊನೇ ಮೆಟ್ರೋ ಸ್ಟೇಷನ್‌ರೆಗೆ ಮೆಟ್ರೋ ರೈಲಿನಲ್ಲಿ ಪ್ರಯಾಣ ಬೆಳೆಸಿ, ಅಲ್ಲಿಂದ ರಸ್ತೆ ಮಾರ್ಗವಾಗಿ ಪ್ರಯಾಣ ಮುಂದುವರಿಸಿದರು. ಸಿಎಂ ಅವರಿಗೆ ಹಾರೋಹಳ್ಳಿ, ಕನಕಪುರದ ಪ್ರವೇಶದ್ವಾರ ತುಂಗಣಿ ಸೇರಿ ಹಲವೆಡೆ ಅದ್ಧೂರಿ ಸ್ವಾಗತ ಕೋರಲಾಯಿತು. ಕ್ರೇನ್ ಬಳಸಿ ಬೃಹತ್ ಸೇಬಿನ ಹಾರ ಹಾಕಿ, ಜೈಕಾರ ಕೂಗಿ ಕಾರ್ಯಕರ್ತರು ಅವರನ್ನು ಸ್ವಾಗತಿಸಿದರು.
ತವರಿನ ಜನತೆಯ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿಎಂ, ಎಸ್‌ಐಆರ್ ಬಗ್ಗೆ ಪ್ರಸ್ತಾಪಿಸಿದರು. ಯಾರೂ ತಮ್ಮ ಮತವನ್ನು ಬೇರೆ ಕಡೆಗೆ ವರ್ಗಾಯಿಸಬೇಡಿ. ನಿಮ್ಮ ಊರಿನಲ್ಲೇ ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳಿ. ಎಲ್ಲಾ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಿ ಎಂದು ಸಲಹೆ ನೀಡಿದರು.
ಎಸ್‌ಐಆರ್‌ಗೆ ಅರ್ಜಿ ಸಲ್ಲಿಸದಿದ್ದರೆ ಮತವೂ ಇಲ್ಲ, ಜೊತೆಗೆ ಯಾವುದೇ ಸರ್ಕಾರಿ ಯೋಜನೆಗಳ ಲಾಭವೂ ಸಿಗುವುದಿಲ್ಲ. ಗೃಹಲಕ್ಷ್ಮೀ, ಗೃಹಜ್ಯೋತಿ ಯಾವುದೂ ಸಿಗುವುದಿಲ್ಲ. ನಿಮ್ಮ ಮತವನ್ನು ಕನಕಪುರ ಕ್ಷೇತ್ರದಲ್ಲಿಯೇ ಉಳಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.