ವಿಜಯಪುರ: ಕೊನೆಗೂ ತೀವ್ರ ಬರಪೀಡಿತ ತಾಲೂಕು ಪಟ್ಟಿಗೆ ತಿಕೋಟ ಸೇರ್ಪಡೆ..!

By Girish Goudar  |  First Published Nov 4, 2023, 9:45 PM IST

ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್‌ರ ನಿರಂತರ ಒತ್ತಾಯಕ್ಕೆ ಮಣಿದ ಸರ್ಕಾರ, ತೀವ್ರ ಚರ್ಚೆ, ರಾಜಕೀಯಕ್ಕೂ ಕಾರಣವಾಗಿದ್ದ ತಿಕೋಟ ಬರಘೋಷಣೆ ವಿಚಾರ, ಕೊನೆಗೂ ತಿಕೋಟ ಭಾಗದ ರೈತರಲ್ಲಿ ಸಮಾಧಾನ. 
 


- ಷಡಕ್ಷರಿ ಕಂಪೂನವರ್‌ ಏಷ್ಯಾನೆಟ್‌ ಸುವರ್ಣ ನ್ಯೂಸ್

ವಿಜಯಪುರ(ನ.04):  ಕೊನೆಗೂ ಜಿಲ್ಲೆಯ ತಿಕೋಟ ತಾಲೂಕು ಬರಪೀಡಿತ ತಾಲೂಕು ಅಂತ ಘೋಷಣೆಯಾಗಿದೆ. ಸರ್ಕಾರವೇ ಇಂದು ಅಧಿಕೃತವಾಗಿ ತಿಕೋಟ ತಾಲೂಕನ್ನ ತೀವ್ರ ಬರಪೀಡಿತ ಪಟ್ಟಿಗೆ ಸೇರ್ಪಡೆ ಮಾಡಿದೆ. ಜಿಲ್ಲೆಯ 13 ತಾಲೂಕುಗಳ ಪೈಕಿ ತಿಕೋಟ ಬಿಟ್ಟು ಉಳಿದ ಎಲ್ಲ 12 ತಾಲೂಕುಗಳು ಬರ ಪೀಡಿತ ಪಟ್ಟಿಗೆ ಸೇರ್ಪಡೆಯಾಗಿದ್ವು. ಈಗ ಹೆಚ್ಚುವರಿ ಪಟ್ಟಿಯಲ್ಲಿ ತಿಕೋಟ ತಾಲೂಕನ್ನು ಸರ್ಕಾರ ಘೋಷಣೆ ಮಾಡಿದೆ.

Tap to resize

Latest Videos

ಕೊನೆಗೂ ತಿಕೋಟ ಬರಪೀಡಿತ ತಾಲೂಕು..!

ಹೌದು, ಕೊನೆಗೂ ತಿಕೋಟ ತಾಲೂಕನ್ನ ಸರ್ಕಾರ ತೀವ್ರ ಬರಪೀಡಿತ ತಾಲೂಕು ಅಂತಾ ಘೋಷಣೆ ಮಾಡಿದೆ. ಹೆಚ್ಚುವರಿ ಪಟ್ಟಿಯಲ್ಲಿ ಆಯ್ಕೆಯಾದ 7 ತಾಲೂಕುಗಳ ಪಟ್ಟಿಯಲ್ಲಿ ತಿಕೋಟ ತಾಲೂಕನ್ನೂ ಘೋಷಣೆ ಮಾಡಲಾಗಿದೆ. ಕಳೆದ ತಿಂಗಳು ಬರ ಪೀಡಿತ ತಾಲೂಕುಗಳ ಘೋಷಣೆಯಾದಾಗ ವಿಜಯಪುರ ಜಿಲ್ಲೆಯ 13 ತಾಲೂಕುಗಳ ಪೈಕಿ 12 ತಾಲೂಕುಗಳು ಬರಪೀಡಿತ ಅಂತ ಘೋಷಣೆ ಮಾಡಲಾಗಿತ್ತು.  ಆದ್ರೆ ತಿಕೋಟ ತಾಲೂಕು ಮಾತ್ರ ಘೋಷಣೆ ಆಗಿದ್ದಿಲ್ಲ. ಈಗ ಕೊನೆಗು ಸರ್ಕಾರ ಘೋಷಣೆ ಮಾಡಿದೆ.. ಇದು ತಿಕೋಟ ಭಾಗದ ರೈತರು, ಜನರಲ್ಲಿ ಸಮಾಧಾನ ಮೂಡಿಸಿದೆ.

ಕಾಂಗ್ರೆಸ್‌ನವರು ಪಾಪಿಷ್ಟರು ಇದ್ದಾರೆ, ಅವರ ಆಡಳಿತದಲ್ಲಿ ಬರಗಾಲ ಬೀಳ್ತದೆ: ಸಂಸದ ಜಿಗಜಿಣಗಿ

ರಾಜಕೀಯ-ಆಕ್ರೋಶಕ್ಕೆ ಕಾರಣವಾಗಿದ್ದ ವಿಚಾರ..!

ಇನ್ನು ತಿಂಗಳ ಹಿಂದಷ್ಟೇ ಜಿಲ್ಲೆಯ ತಿಕೋಟ ಒಂದನ್ನ ಬಿಟ್ಟು ಉಳಿದ ಎಲ್ಲ ತಾಲೂಕುಗಳು ಬರ ಪೀಡಿತ ಅಂತ ಘೊಷಣೆಯಾದಾಗ ಇದು ತಿಕೋಟ ಭಾಗದ ರೈತರಲ್ಲಿ ಅಸಮಧಾನಕ್ಕೆ ಕಾರಣವಾಗಿತ್ತು. ಆಕ್ರೋಶದ ನಡುವೆ ರಾಜಕೀಯ ಬೆರೆತಿತ್ತು. ತಿಕೋಟ ಯಾಕೆ ಬರ ಪೀಡಿತ ತಾಲೂಕಾಗಿ ಘೋಷಣೆಯಾಗಿಲ್ಲ ಅನ್ನೋದಕ್ಕೆ ಸ್ವತಃ ಉಸ್ತುವಾರಿ ಸಚಿವರು ಮನವರಿಕೆ ಮಾಡಿದಾಗ್ಯೂ ಸಹ ರಾಜಕೀಯ ನಡೆದಿತ್ತು. ಈ ನಡುವೆ ತಿಕೋಟ ಪಟ್ಟಣ ಬಂದ್‌ ಮಾಡಿ ಸಹ ಬರ ಘೋಷಣೆಗೆ ಆಗ್ರಹಿಸಲಾಗಿತ್ತು..

ಕೇಂದ್ರ ಸರ್ಕಾರದ ನಿಮಯವಳಿಯೇ ಅಡ್ಡಿ..!

ಇನ್ನು ಜಿಲ್ಲೆಯ ಉಳಿದೆಲ್ಲ 12 ತಾಲೂಕುಗಳು ಬರಪೀಡಿತ ಅಂತ ಘೋಷಣೆಯಾಗಿ ತಿಕೋಟ ಉಳಿದುಕೊಳ್ಳಲು ಕೇಂದ್ರದ ಕೆಲ ನಿಯಮಾವಳಿ ಅಡ್ಡಿಯಾಗಿದ್ದವು ಅನ್ನೋ ಬಗ್ಗೆ ಸಚಿವರು ದಾಖಲೆ ಸಹಿತವಾಗಿ ಕೆಡಿಪಿ ಸಭೆಯಲ್ಲಿ ಹೇಳಿದ್ರು. ಮಳೆಯಾಗದೆ ಇಷ್ಟು ವಾರಗಳು ಕಳೆದ ಬಳಿಕವು ಮಳೆಯಾಗದೇ ಹೋದರೆ ಆ ಪ್ರದೇಶವನ್ನ ಬರಪೀಡಿತ ಅಂತ ಘೋಷಣೆ ಮಾಡಲಾಗುತ್ತೆ. ಜಿಲ್ಲೆಯಾದ್ಯಂತ ಮಳೆಯಾಗದೆ ಇದ್ದಾಗ ಜೂನ್-ಜುಲೈ ತಿಂಗಳಲ್ಲಿ ಪ್ರಮಾಣಕ್ಕಿಂತ ಕೊಂಚ ಜಾಸ್ತಿಯೇ ತಿಕೋಟ ತಾಲೂಕಿನಲ್ಲಿ ಮಳೆಯಾಗಿತ್ತು. ಹೀಗಾಗಿ ಬರ ಪೀಡಿತ ಅಂತ ಘೋಷಣೆ ಮಾಡಲು ನಿಯಮಾವಳಿ ಅಡ್ಡಿಯಾಗಿದ್ವು. ತಿಕೋಟದಲ್ಲಿ ಮಳೆಯ ಅಭಾವ ಮುಂದುವರೆದಾಗ ಸಹಜವಾಗಿಯೇ ಕೇಂದ್ರದ ನಿಯಮಾವಳಿಯಂತೆ ಬರ ಪೀಡಿತ ಅಂತ ಘೋಷಣೆಯಾಗುತ್ತೆ ಎನ್ನುವುದನ್ನ ಸಚಿವ ಎಂ ಬಿ ಪಾಟೀಲ್‌ ಹೇಳಿದ್ದರು. ಅದೇ ರೀತಿ ಈಗ ಬರಪೀಡಿತ ಅಂತ ಘೋಷಣೆಯಾಗಿದೆ..

ವಿಜಯಪುರ: ಖಾಸಗಿ ಗೋಶಾಲೆಗಳಿಗೂ ಬರದ ಹೊಡೆತ, ಸಮರ್ಪಕ ಮೇವು ಸಿಗದೆ ಗೋವುಗಳ ಗೋಳಾಟ..!

ಸಿಎಂ ಹಾಗೂ ಕಂದಾಯ ಸಚಿವರಿಗೆ ನಿರಂತರ ಒತ್ತಾಯ..!

ತಿಕೋಟ ಬರ ಪೀಡಿತ ತಾಲೂಕು ಅಂತ ಘೋಷಣೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್‌ ಸಿಎಂ ಹಾಗೂ ಕಂದಾಯ ಸಚಿವರಿಗೆ ಒತ್ತಾಯ ಮಾಡುತ್ತ ಬಂದಿದ್ದರು. ತಿಕೋಟ ಬರ ಘೋಷಣೆಯಾಗದೆ ಇರೋದನ್ನ ಇಟ್ಟುಕೊಂಡು ರಾಜಕೀಯ ಮಾಡಲಾಗ್ತಿತ್ತು. ಹೀಗಾಗಿ ಸಚಿವ ಎಂ ಬಿ ಪಾಟೀಲ್‌ ಸಿಎಂ ಹಾಗೂ ಕಂದಾಯ ಸಚಿವರ ಗಮನ ಸೆಳೆಯುವ ಕೆಲಸ ಮಾಡಿದ್ದರು. ಈಗ ತಿಕೋಟ ತೀವ್ರ ಬರಪೀಡಿತ ತಾಲೂಕು ಪಟ್ಟಿಗೆ ಸೇರ್ಪಡೆಯಾಗಿದೆ..

ತಿಕೋಟ ಭಾಗದ ರೈತರಲ್ಲಿ ಸಮಾಧಾನ..!

ಕೊನೆಗೂ ತಿಕೋಟ ಬರಪೀಡಿತ ತಾಲೂಕು ಅಂತ ಘೋಷಣೆ ಈ ಭಾಗದ ರೈತರಲ್ಲಿ ಸಧ್ಯಕ್ಕೆ ಸಮಾಧಾನ ಮೂಡಿಸಿದೆ. ಜೂನ್-ಜುಲೈ ತಿಂಗಳಲ್ಲಿ ಮಳೆಯಾಗಿದ್ದು ಬಿಟ್ಟರೆ ಇಲ್ಲಿಯೂ ಮಳೆಯ ಕೊರತೆ ಇತ್ತು. ಬೆಳೆಗಳು ಒಣಗುತ್ತಿದ್ದವು, ತಿಕೋಟದಲ್ಲಿ ಬರ ಘೋಷಣೆಯಾಗದೇ ಹೋದ್ರೆ ಹೇಗೆ ಅಂತಾ ರೈತರು ಚಿಂತೆಗೆ ಬಿದ್ದಿದ್ದರು. ಕೊನೆಗು ಬರ ಪೀಡಿತ ತಾಲೂಕು ಅಂತಾ ಘೋಷಣೆಯಾಗಿರೋದು ರೈತರಲ್ಲಿ ನೆಮ್ಮದಿ ಮೂಡಿಸಿದೆ. ಈ ಭಾಗದ ಜನರು ಸಹ ಉಸ್ತುವಾರಿ ಸಚಿವರಿಗೆ ಧನ್ಯವಾದ ಹೇಳಿದ್ದಾರೆ.

click me!