ಕನ್ನಡ ನಾಡು, ನುಡಿ, ಸಂಸ್ಕೃತಿ, ಸಂಸ್ಕಾರವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಸುಗಮ ಸಂಗೀತವನ್ನು ಪಠ್ಯಕ್ರಮವಾಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರಿನ ಆದರ್ಶ ಸಂಗೀತ ಅಕಾಡೆಮಿ ಅಧ್ಯಕ್ಷ, ಹಿರಿಯ ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಒತ್ತಾಯಿಸಿದರು.
ದಾವಣಗೆರೆ (ಜು.30): ಕನ್ನಡ ನಾಡು, ನುಡಿ, ಸಂಸ್ಕೃತಿ, ಸಂಸ್ಕಾರವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಸುಗಮ ಸಂಗೀತವನ್ನು ಪಠ್ಯಕ್ರಮವಾಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರಿನ ಆದರ್ಶ ಸಂಗೀತ ಅಕಾಡೆಮಿ ಅಧ್ಯಕ್ಷ, ಹಿರಿಯ ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಒತ್ತಾಯಿಸಿದರು.
ನಗರದ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಶನಿವಾರ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ 120 ಅಂಕ ಪಡೆದ ಮಕ್ಕಳಿಗೆ ಕನ್ನಡ ಕುವರ-ಕುವರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ ಕವಿ, ಪ್ರಕೃತಿ, ಸಂಗೀತ, ಸಾಹಿತ್ಯ, ಭಾಷೆ, ಸಂಸ್ಕೃತಿ, ಸಂಸ್ಕಾರಗಳ ಸಮ್ಮಿಲನವಾದ ಸುಗಮ ಸಂಗೀತವನ್ನು ಪಠ್ಯಕ್ರಮವಾಗಿಸಲು ಸರ್ಕಾರ ಗಮನ ಹರಿಸಬೇಕು ಎಂದರು. ಸುಗಮ ಸಂಗೀತವು ಎಲ್ಲವನ್ನೂ ಪರಿಚಯಿಸುವ ಅದ್ಭುತ ಲೋಕ. ರಾಜ್ಯ ಸರ್ಕಾರವು ಸುಗಮ ಸಂಗೀತವನ್ನು ಪಠ್ಯಕ್ರಮವಾಗಿ ಅಳವಡಿಸಿದರೆ, ನಾಡಿನಲ್ಲಿ ನಮ್ಮ ಸಂಸ್ಕೃತಿ, ಸಂಸ್ಕಾರವೂ ಬೆಳೆಯಲು ಪೂರಕ ಕ್ರಮ ಕೈಗೊಂಡಂತಾಗುತ್ತದೆ. ಭಾಷೆ, ನುಡಿ, ಸಂಸ್ಕೃತಿ ಇದ್ದರೆ ನಾವು. ನಾವು ಇದ್ದರೆ ರಾಜ್ಯ ಎಂಬುದನ್ನು ನಾವ್ಯಾರೂ ಮರೆಯಬಾರದು ಎಂದು ತಿಳಿಸಿದರು.
ಹಣ ಹಾಗೂ ಹೆಣದ ಮೇಲೆ ಕಾಂಗ್ರೆಸ್ ರಾಜಕಾರಣ: ಎನ್.ರವಿಕುಮಾರ್
ಗೌರವ ತರುವ ಸಾಧಕರಾಗಿ: ಉತ್ತಮವಾಗಿ ಓದಿ, ಇಲ್ಲಿ ಪ್ರಶಸ್ತಿಗೆ ಪಾತ್ರರಾದ ಮಕ್ಕಳು ಭವಿಷ್ಯದಲ್ಲಿ ಉನ್ನತ ಸ್ಥಾನಮಾನ, ಅಲಂಕರಿಸಬೇಕು. ನೀವು ಏನೇ ಹೆಸರು, ಸಾಧನೆ ಮಾಡಿದರೂ ಅದರ ಹಿಂದೆ ನಿಮ್ಮ ಹೆತ್ತವರ ಪರಿಶ್ರಮವೇ ಇರುತ್ತದೆಂಬುದನ್ನ ಮರೆಯಬಾರದು. ಹೆತ್ತ ತಂದೆ, ತಾಯಿಗಳಿಗೆ ಗೌರವ ತರುವಂತಹ ಸಾಧಕರಾಗಿ ನೀವು ಹೊರ ಹೊಮ್ಮಬೇಕು. ಕೇವಲ ಪಾಠ ಮಾಡಿದರಷ್ಟೇ ಗುರುವಲ್ಲ, ಜೀವನಕ್ಕೆ ಸನ್ಮಾರ್ಗ ತೋರುವವರು, ಸರಿಯಾದ ಮಾರ್ಗದರ್ಶನ ನೀಡುವವರೂ ಗುರುಗಳಾಗಿರುತ್ತಾರೆ. ಕನ್ನಡ ಕುವರ-ಕುವರಿ ಪ್ರಶಸ್ತಿಗೆ ಪಾತ್ರರಾದ ಮಕ್ಕಳು ಕನ್ನಡದಲ್ಲಿ ಹೆಚ್ಚು ಅಂಕ ಪಡೆದಿದ್ದು ಹೆಮ್ಮೆಯ ಸಂಗತಿ ಎಂದು ಡಾ.ಕಿಕ್ಕೇರಿ ಕೃಷ್ಣಮೂರ್ತಿ ಶ್ಲಾಘಿಸಿದರು.
ಸಮಾರಂಭ ಉದ್ಘಾಟಿಸಿದ ಕರ್ನಾಟಕ ಸುಗಮ ಸಂಗೀತ ಪರಿಷತ್ ಅಧ್ಯಕ್ಷ ವೈ.ಕೆ.ಮುದ್ದುಕೃಷ್ಣ ಮಾತನಾಡಿ, ಪ್ರತಿಯೊಬ್ಬರಲ್ಲೂ ಒಬ್ಬ ಸಾಧಕ ಅಡಗಿರುತ್ತಾನೆ. ಅಂತಹ ಸಾಧಕನನ್ನು ಗುರುತಿಸಿ, ಭವಿಷ್ಯ ರೂಪಿಸಲು ವೇದಿಕೆ ಕಲ್ಪಿಸಿರುವ ಕಲಾಕುಂಚ ಸಂಸ್ಥೆಯ ಕಾರ್ಯ ಇತರರಿಗೂ ಪ್ರೇರಣೆ ಎಂದು ಮೆಚ್ಚುಗೆ ಸೂಚಿಸಿದರು.
ಕಲಾಕುಂಚ ಅಧ್ಯಕ್ಷ ಕೆ.ಎಚ್.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಸಂಗೀತ ನಿರ್ದೇಶಕ ನಗರ ಶ್ರೀನಿವಾಸ ಉಡುಪ, ಶ್ರೀಮತಿ ಗೌರಮ್ಮ ಮೋತಿ ರಾಮರಾವ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಆರ್.ಪರಮೇಶ್ವರರಾವ್, ಕಲಾಕುಂಚ ಸಂಸ್ಥಾಪಕ ಸಾಲಿಗ್ರಾಮ ಗಣೇಶಶೆಣೈ, ಮಹಿಳಾ ಅಧ್ಯಕ್ಷೆ ಹೇಮಾ ಶಾಂತಪ್ಪ ಪೂಜಾರಿ ಇತರರು ಇದ್ದರು. ಇದೇ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಕನ್ನಡ ಭಾಷಾ ಪರೀಕ್ಷೆಯಲ್ಲಿ 125ಕ್ಕೆ 120ರಿಂದ 124 ಅಂಕ ಪಡೆದ ಮಕ್ಕಳಿಗೆ ಕನ್ನಡ ಕುವರ-ಕುವರಿ ಜಿಲ್ಲಾ ಪ್ರಶಸ್ತಿ ನೀಡಿ, ಗೌರವಿಸಲಾಯಿತು.
ಭರವಸೆಗಳ ಈಡೇರಿಕೆಗೆ ಕಾಂಗ್ರೆಸ್ ಆದ್ಯತೆ: ಸಚಿವ ಶಿವಾನಂದ ಪಾಟೀಲ
ಕುವರ-ಕುವರಿ ಪ್ರಶಸ್ತಿ ಪಡೆದ ಮಕ್ಕಳು ಭವಿಷ್ಯತ್ತಿನಲ್ಲಿ ಉನ್ನತ ಸ್ಥಾನ ಅಲಂಕರಿಸಿ, ನಾಡು, ನುಡಿಗಾಗಿ ಸೇವೆ ಮಾಡಿ, ರಾಜ್ಯ, ದೇಶಕ್ಕೆ ಕೀರ್ತಿ ತರಬೇಕು. ಕಲಾಕುಂಚ ಸಂಸ್ಥೆ ಯಾವುದೇ ರಾಜಕೀಯ ಹಸ್ತಕ್ಷೇಪ ಇಲ್ಲದೇ, ಸರ್ಕಾರದ ಅನುದಾನ ಇಲ್ಲದೇ ಮಕ್ಕಳಲ್ಲಿ ಮನೋಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡುತ್ತಿದೆ.
-ವೈ.ಕೆ.ಮುದ್ದುಕೃಷ್ಣ, ಕರ್ನಾಟಕ ಸುಗಮ ಸಂಗೀತ ಪರಿಷತ್ ಅಧ್ಯಕ್ಷ