ಉಡುಪಿ: ನಟ ರಮೇಶ್ ಅರವಿಂದ್‌ಗೆ ಕಾರಂತ ಹುಟ್ಟೂರ ಪ್ರಶಸ್ತಿ

By Girish Goudar  |  First Published Oct 11, 2022, 2:08 PM IST

ಕಾರಂತರು ಸಾಹಿತ್ಯವನ್ನು ತನ್ನ ಮನಸ್ಸಿನ ತೃಪ್ತಿಗಾಗಿ ಬರೆದರೆ ಹೊರತು ಯಾವುದೇ ವ್ಯವಹಾರಿಕ ದೃಷ್ಟಿಯಿಂದಲ್ಲ ಎಂದು ತಿಳಿಸಿದ ನಟ ರಮೇಶ್ ಅರವಿಂದ್‌ 


ಉಡುಪಿ(ಅ.11):  ಬಹುಭಾಷಾ ನಟ ರಮೇಶ್ ಅರವಿಂದ್‌ಗೆ ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕೋಟುತಟ್ಟು ಗ್ರಾಮ ಪಂಚಾಯತ್ ಶಿವರಾಮ ಕಾರಂತರ ಹೆಸರಲ್ಲಿ ಈ ಅಪರೂಪದ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಗಣ್ಯರಿಗೆ ಪ್ರತಿ ವರ್ಷ ನೀಡುತ್ತಾ ಬಂದಿದೆ. ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ನಟ ರಮೇಶ್, ಮನುಷ್ಯನ ಜೀವಕ್ಕಿಂತ ಅಮೂಲ್ಯವಾದದ್ದು ಬೇರೆ ಏನೂ ಇಲ್ಲ. ಆದುದರಿಂದ ನಾವು ಯಾವುದೇ ಕಾರಣಕ್ಕೂ ಮನುಷ್ಯನ ರಕ್ತ ಚೆಲ್ಲಲು ಬಿಡಬಾರದು. ಹಿಂಸೆಯನ್ನು ಯಾರು ಕೂಡ ಯಾವುದೇ ರೀತಿಯಲ್ಲಿ ಪ್ರೋತ್ಸಾಹ ನೀಡಬಾರದು. ಜಗತ್ತಿನಲ್ಲಿರುವ ಪ್ರತಿಯೊಂದು ಮನುಷ್ಯ ಜೀವವನ್ನು ಕಾಪಾಡಲು ನಾವೆಲ್ಲರು ಪ್ರಯತ್ನ ಪಡಬೇಕು ಎಂದರು. 

ಡಾ.ಶಿವರಾಮ ಕಾರಂತರು ಎಲ್ಲಾ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿದ್ದು, ಅವರ ಬುದ್ದಿಶಕ್ತಿ ಅದ್ಭುತ. ತಮ್ಮ ಸುತ್ತಮುತ್ತಲು ಇರುವ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಅವರ ವೈಜ್ಞಾನಿಕ ಯೋಚನೆ ಹಾಗೂ ತರ್ಕಬದ್ಧ ಚಿಂತನೆ ಸ್ಪೂರ್ತಿದಾಯಕವಾಗಿದೆ. ಕಾರಂತರು ಸಾಹಿತ್ಯವನ್ನು ತನ್ನ ಮನಸ್ಸಿನ ತೃಪ್ತಿಗಾಗಿ ಬರೆದರೆ ಹೊರತು ಯಾವುದೇ ವ್ಯವಹಾರಿಕ ದೃಷ್ಟಿಯಿಂದಲ್ಲ ಎಂದು ಅವರು ತಿಳಿಸಿದರು.

Tap to resize

Latest Videos

ಗೌರವ ಡಾಕ್ಟರೇಟ್ ಸ್ವೀಕರಿಸಿ ಭಾವುಕಾರದ ನಟ ರಮೇಶ್ ಅರವಿಂದ್

ದೇಶದ ಗಡಿ, ಭಾಷೆಯ ಗೋಡೆ ಇಲ್ಲದೆ ಎಲ್ಲ ರೀತಿಯ ಕವನ, ಕಾವ್ಯ, ಸಾಹಿತ್ಯವನ್ನು ಗ್ರಹಿಸಿಕೊಂಡು ತಮ್ಮ ಜೀವನಕ್ಕೆ ಸಹಕಾರಿಯಾಗುವ ರೀತಿಯಲ್ಲಿ ಅದನ್ನು ಅಳವಡಿಸಿಕೊಳ್ಳಬೇಕು. ನಮ್ಮಲ್ಲಿರುವ ಜ್ಞಾನ ಸಂಪನ್ಮೂಲವನ್ನು ಅರ್ಥ ಪೂರ್ಣವಾಗಿ ಬಳಸಿಕೊಂಡರೆ ಜೀವನ ಯಶಸ್ವಿಯಾಗಲು ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಕಾನೂನು ಸಚಿವ ಮಾಧುಸ್ವಾಮಿ ಮಾತನಾಡಿ ಶಿವರಾಮ ಕಾರಂತರು ಒಬ್ಬ ವ್ಯಕ್ತಿಯಾಗಿರದೇ ನಡೆದಾಡುವ ವಿಶ್ವಕೋಶ ಹಾಗೂ ವಿಶ್ವ ವಿದ್ಯಾಲಯ ಆಗಿದ್ದರು.  ಸಾಹಿತಿಯಾಗಿ ಎಲ್ಲಾ ಕ್ಷೇತ್ರಗಳನ್ನು ಅರಿತು ತನ್ನನ್ನು ತಾನು ತೊಡಗಿಸಿಕೊಂಡರು. ಕಾರಂತರು ಅಂದರೆ ನಿಖರ ಹಾಗೂ ಸ್ಪಷ್ಟ. ಭಾಷೆ ಬೆಳೆದರೆ ಸಂಸ್ಕೃತಿ ಬೆಳೆಯುತ್ತದೆ. ಕಾರಂತರು ಭಾಷೆಯನ್ನು ಬೆಳೆಸುವ ಮೂಲಕ ಮಾರ್ಗದರ್ಶಕರಾಗಿದ್ದರು, ಅವರ ಸಾಹಿತ್ಯ ರಾಜ್ಯದ ಇತಿಹಾಸಕ್ಕೆ ಭಾಷೆ, ಕಲೆ, ಸಂಸ್ಕೃತಿ ದೊಡ್ಡ ಕಾಣಿಕೆ ನೀಡಿದೆ ಎಂದರು. 

ಕನ್ನಡ ಭಾಷೆ ಶ್ರೀಮಂತ ಹಾಗೂ ಸಂಪದ್ಭರಿತಗೊಳ್ಳಲು ಕಡಲ ತೀರದ ಜನರ ಕೊಡುಗೆ ಅಪಾರವಾಗಿದ್ದು, ಸೇಡಿಯಾಪು ಕೃಷ್ಣಭಟ್ಟ ರಿಂದ ಶಿವರಾಮ ಕಾರಂತ ರೂ ಸೇರಿದಂತೆ ಹಲವರ ಕೊಡುಗೆ ಅಪಾರವಾದುದು ಎಂದರು.ಕಲಾವಿದರು ತಮ್ಮ ಅಭಿನಯ ಕಲೆಯ ಮೂಲಕ ಜನರ ಮನಸ್ಸಿನ ದುಗುಡವನ್ನು ಕಡಿಮೆಗೊಳಿಸುತ್ತಾರೆ, ನಟ ರಮೇಶ್ ಅರವಿಂದ್ ಅವರಿಗೆ ಕಾರಂತ ಹುಟ್ಟೂರ ಪ್ರಶಸ್ತಿ ನೀಡಿರುವುದು ಉತ್ತಮ ಆಯ್ಕೆ ಎಂದರು.

ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್ ವಹಿಸಿದ್ದರು. ಇದೇ ಸಂದರ್ಭದಲ್ಲಿ ನರೇಂದ್ರ ಕುಮಾರ್ ಕೋಟ ಅವರ 'ಸೋಲು ಅಂತಿಮವಲ್ಲ' ಕೃತಿ ಬಿಡುಗಡೆಗೊಳಿಸಲಾಯಿತು.  ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

‘ಪ್ರೀತಿಯಿಂದ ರಮೇಶ್‌’ ಬಿಡುಗಡೆ: ಕಾಲೇಜು ವಿದ್ಯಾರ್ಥಿಗಳು ಓದಲೇಬೇಕಾದ ಪುಸ್ತಕ!

ಮುಖ್ಯ ಅತಿಥಿಗಳಾಗಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ತಾಪಂ ಕಾರ್ಯನಿರ್ವಣಾಧಿಕಾರಿ ಎಚ್.ವಿ.ಇಬ್ರಾಹಿಂಪುರ್, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕೋಟ ಇಬ್ರಾಹಿಂ ಸಾಹೇಬ್, ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರಮೂರ್ತಿ, ಕೋಟ ಗ್ರಾಪಂ ಅಧ್ಯಕ್ಷ ಅಜಿತ್ ದೇವಾಡಿಗ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷ ಸುಲತಾ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.

ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್.ಸಿ. ಕುಂದರ್ ಸ್ವಾಗತಿಸಿದರು. ಪ್ರಶಸ್ತಿ ಆಯ್ಕೆ ಕುರಿತು ಪ್ರಶಸ್ತಿ ಆಯ್ಕೆ ಸಮಿತಿಯ ಸಂಚಾಲಕ ಯು.ಎಸ್. ಶೆಣೈ ಮಾತನಾಡಿದರು. ಶ್ರೀಧರ ಹಂದೆ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯರಾಂ ಶೆಟ್ಟಿ ವಂದಿಸಿದರು. ನರೇಂದ್ರ ಕುಮಾರ್ ಕೋಟ ನಿರೂಪಿಸಿದರು. ಸತೀಶ್ ವಡ್ಡರ್ಸೆ ಕಾರ್ಯಕ್ರಮ ನಿರ್ವಹಿಸಿದರು.

ಇದಕ್ಕೂ ಮುನ್ನ ಕೋಟತಟ್ಟು ಪಂಚಾಯತ್ ನಿಂದ ಹೊರಟ ಶೋಭಾಯಾತ್ರೆಯು ಕಾರಂತ ಥೀಂ ಪಾರ್ಕ್ ನಲ್ಲಿ ಕಾರಂತರ ಪುತ್ಥಳಿಗೆ ನಮನ ಸಲ್ಲಿಸಿ ಕಾರ್ಯಕ್ರಮದ ವೇದಿಕೆಗೆ ಆಗಮಿಸಿತು. ಕಾರ್ಯಕ್ರಮದ ನಂತರ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ಆಳ್ವಾಸ್ ವಿರಾಸತ್ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
 

click me!