ಮಂಗಳೂರಲ್ಲಿ ಕೋರ್ಟ್‌ ಕಟ್ಟಡದಿಂದ ಜಿಗಿದು ಆರೋಪಿ ಆತ್ಮಹತ್ಯೆ

By Kannadaprabha NewsFirst Published Sep 1, 2021, 7:23 AM IST
Highlights
  • ಮಂಗಳೂರು ನ್ಯಾಯಾಲಯದಲ್ಲಿ ಪೋಕ್ಸೋ ಪ್ರಕರಣದ ಆರೋಪಿ ಪರಾರಿಯಾಗಲು ಯತ್ನಿಸಿ ಆತ್ಮಹತ್ಯೆ
  • ಪೊಕ್ಸೊ ಪ್ರಕರಣದ ಆರೋಪಿಯು ನ್ಯಾಯಾಲಯದ ಆರನೇ ಮಹಡಿಯಿಂದ ತಪ್ಪಿಸಿಕೊಳ್ಳಲು ಮುಂದಾಗಿ ಮೇಲಿನಿಂದಲೇ ಕೆಳಕ್ಕೆ ಹಾರಿದ್ದಾನೆ. 

 ಮಂಗಳೂರು (ಸೆ.01):  ಮಂಗಳೂರು ನ್ಯಾಯಾಲಯದಲ್ಲಿ ಪೋಕ್ಸೋ ಪ್ರಕರಣದ ಆರೋಪಿ ಪರಾರಿಯಾಗಲು ಯತ್ನಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರು ಕೋರ್ಟ್‌ ಆವರಣದಲ್ಲಿ ಮಂಗಳವಾರ ಸಂಜೆ ನಡೆದಿದೆ.

ಆರೋಪಿ, ಗಾಯಾಳುವನ್ನು ಸುಳ್ಯದ ಮೂಲದ ವ್ಯಕ್ತಿ ಎಂದು ತಿಳಿದುಬಂದಿದೆ.

Latest Videos

ಪೊಕ್ಸೊ ಪ್ರಕರಣದ ಆರೋಪಿಯು ನ್ಯಾಯಾಲಯದ ಆರನೇ ಮಹಡಿಯಿಂದ ತಪ್ಪಿಸಿಕೊಳ್ಳಲು ಮುಂದಾಗಿ ಮೇಲಿನಿಂದಲೇ ಕೆಳಕ್ಕೆ ಹಾರಿದ್ದಾನೆ. ಕ್ಷಣಹೊತ್ತಲ್ಲೇ ನೆಲಕ್ಕೆ ಅಪ್ಪಳಿಸಿದ ಆರೋಪಿಯ ತಲೆಗೆ ಭಾರಿ ಪೆಟ್ಟು ಬಿದ್ದಿದ್ದು, ತಲೆಯಿಂದ ಅಧಿಕ ಪ್ರಮಾಣದ ರಕ್ತ ಸೋರಿಕೆಯಾಗಿದ್ದು ಸಾವಿಗೀಡಾಗಿದ್ದಾನೆ ಎಂದು ತಿಳಿದುಬಂದಿದೆ.

ದಾವಣಗೆರೆ; 'ಕುಡಿಯಲು ಹಣ ಕೊಡಲ್ಲ, ಬುದ್ಧಿ ಹೇಳ್ತಿಯಾ' ಪಾಪಿಯಿಂದ ಪತ್ನಿ ಹತ್ಯೆ!

ತಲಪಾಡಿ ಬಳಿಯ ನಿವಾಸಿಯಾದ ಆರೋಪಿಯನ್ನು ಸೋಮವಾರ ತೊಕ್ಕೊಟ್ಟು ಬಳಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದರು. ಬಳಿಕ ಆರೋಪಿಯನ್ನು ಮಂಗಳವಾರ ಉಳ್ಳಾಲ ಪೊಲೀಸರು ಮಂಗಳೂರು ಕೋರ್ಟ್‌ಗೆ ಹಾಜರುಪಡಿಸಿದ್ದರು. ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೊರಗೆ ಕುಳಿತುಕೊಳ್ಳುವಂತೆ ಪೊಲೀಸರು ಆರೋಪಿಗೆ ಸೂಚಿಸಿದ್ದರು. ಅದೇ ವೇಳೆ ಆರೋಪಿ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಆರನೇ ಮಹಡಿಯಿಂದ ಕೆಳಕ್ಕೆ ಹಾರಿದ್ದಾನೆ. ಕೋರ್ಟ್‌ ಒಳಗಡೆಯೇ ಲಿಫ್ಟ್‌ ಇರುವ ಜಾಗದಲ್ಲಿ ಮೇಲಿನಿಂದ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾನೆ.

ಪ್ರಕರಣದಲ್ಲಿ ಆರೋಪಿ ಪಾನಮತ್ತನಾಗಿದ್ದು, ಅಮಲಿನಲ್ಲಿ ಬಾಲಕಿಯನ್ನು ಮುಟ್ಟಲು ಹೋಗಿದ್ದು, ಇದನ್ನು ಕಂಡ ಸ್ಥಳೀಯರು ಸೇರಿ ಥಳಿಸಿ ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದರು. ಪೊಲೀಸರು ಪೋಕ್ಸೋ ಕಾಯ್ದೆಯಡಿ ಕೇಸು ದಾಖಲಿಸಿದ್ದರು.

ಸ್ಥಳಕ್ಕೆ ಮಂಗಳೂರು ಪೊಲೀಸ್‌ ಆಯುಕ್ತ ಶಶಿಕುಮಾರ್‌ ತೆರಳಿ, ಪರಿಶೀಲನೆ ನಡೆಸಿದ್ದಾರೆ. ಆರೋಪಿಯು ಪೋಕ್ಸೋ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಿದ್ದ ಎಂದು ಮೂಲಗಳು ತಿಳಿಸಿವೆ.

click me!