ಸೋಂಕಿತ ಆರೋಪಿ ಚಿಕಿತ್ಸಾ ವಾರ್ಡ್‌ನಿಂದ ಪರಾರಿ..! ಹೆಚ್ಚಿದ ಆತಂಕ

By Kannadaprabha NewsFirst Published Jun 30, 2020, 11:08 AM IST
Highlights

ಕಾರವಾರ ವೈದ್ಯಕೀಯ ಕಾಲೇಜಿನ ಕೋವಿಡ್‌ -19 ವಾರ್ಡ್‌ಗೆ ಚಿಕಿತ್ಸೆಗೆ ದಾಖಲಾಗಿದ್ದ ಆರೋಪಿ ಸೋಮವಾರ ನಸುಕಿನಲ್ಲಿ ಪರಾರಿಯಾಗಿದ್ದಾನೆ.

ಕಾರವಾರ(ಜೂ.30): ಇಲ್ಲಿನ ವೈದ್ಯಕೀಯ ಕಾಲೇಜಿನ ಕೋವಿಡ್‌ -19 ವಾರ್ಡ್‌ಗೆ ಚಿಕಿತ್ಸೆಗೆ ದಾಖಲಾಗಿದ್ದ ಆರೋಪಿ ಸೋಮವಾರ ನಸುಕಿನಲ್ಲಿ ಪರಾರಿಯಾಗಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸರು ಕೆಲವೇ ಹೊತ್ತಿನಲ್ಲಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಿರಸಿಯ ಪೊಲೀಸರು ವಿವಿಧ ಕಳ್ಳತನಗಳ ಪ್ರಕರಣದಲ್ಲಿ ಭಾಗಿಯಾಗಿದ್ದ ಈತನನ್ನು ಜೂ. 25ರಂದು ಧಾರವಾಡದಲ್ಲಿ ಬಂಧಿಸಿ ಕರೆತಂದಿದ್ದರು. ಈ ವೇಳೆ ಆತನಿಗೆ ಕೋವಿಡ್‌-19 ಸೋಂಕಿನ ಲಕ್ಷಣ ಇರುವುದರಿಂದ ಗಂಟಲುದ್ರವ ಪರೀಕ್ಷೆಗೆ ಕಳಿಸಲಾಗಿದ್ದು, ಭಾನುವಾರ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ಭಾನುವಾರ ರಾತ್ರಿಯೇ ಚಿಕಿತ್ಸೆಗೆ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು.

ರೋಗ ಲಕ್ಷಣ ಇಲ್ಲದಿದ್ದರೂ ಕೊರೋನಾ ಪಾಸಿಟಿವ್‌, ಗ್ರಾಮೀಣ ಭಾಗದಲ್ಲಿ ವ್ಯಾಪಿಸುತ್ತಿದೆ ಮಹಾಮಾರಿ

ಸೋಮವಾರ ನಸುಕಿನಲ್ಲಿ ವಾರ್ಡ್‌ನ ಗಾಜಿನ ಕಿಟಕಿ ತೆಗೆದು ಪರಾರಿಯಾಗಿದ್ದಾನೆ. ಈ ಬಗ್ಗೆ ತಿಳಿದ ಕೂಡಲೇ ಪೊಲೀಸರು ಕಾರ್ಯಾಚರಣೆ ನಡೆಸಿ ತಾಲೂಕಿನ ಕದ್ರಾ ಬಳಿ ಸೋಂಕಿತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈತ ನಗರದಿಂದ 10ರಿಂದ 12 ಕಿಮೀ ದೂರ ನಡೆದುಕೊಂಡು ಹೋಗಿ ಬಳಿಕ ಕದ್ರಾ, ಮಲ್ಲಾಪುರ ಭಾಗಕ್ಕೆ ತೆರಳುವ ಬಸ್‌ ಏರಿದ್ದಾನೆ. ಆದರೆ ಇಲ್ಲಿನ ಪೊಲೀಸರು ಕದ್ರಾ ಚೆಕ್‌ಪೋಸ್ಟ್‌ಗೆ ಮಾಹಿತಿ ನೀಡಿದ್ದರಿಂದ ಅಲ್ಲಿದ್ದ ಸಿಬ್ಬಂದಿ ಬಸ್‌ ತಡೆದು ಹುಡುಕಿದಾಗ ಸೋಂಕಿತ ಇರುವುದು ಕಂಡಿದ್ದು, ವಶಕ್ಕೆ ಪಡೆದಿದ್ದಾರೆ. ಬಸ್‌ ಚಾಲಕ, ನಿರ್ವಾಹಕರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಬಸ್‌ನಲ್ಲಿದ್ದ 6-8 ಪ್ರಯಾಣಿಕರ ಮಾಹಿತಿ ಪಡೆದುಕೊಳ್ಳಲಾಗಿದೆ.

click me!