ವೈದ್ಯಕೀಯ ಉದ್ಯೋಗವಲ್ಲ, ಸೇವೆ ಎಂದು ಸ್ವೀಕರಿಸಿ

By Kannadaprabha NewsFirst Published Sep 3, 2023, 8:24 AM IST
Highlights

ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವಾಗ ಉದ್ಯೋಗ ಎಂದು ಭಾವಿಸದೆ, ಸೇವಾ ಕ್ಷೇತ್ರವಾಗಿ ಸ್ವೀಕರಿಸಬೇಕು ಎಂದು ಆಯುಷ್‌ ಇಲಾಖೆ ಆಯುಕ್ತೆ ಕೆ. ಲೀಲಾವತಿ ತಿಳಿಸಿದರು.

  ಮೈಸೂರು :  ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವಾಗ ಉದ್ಯೋಗ ಎಂದು ಭಾವಿಸದೆ, ಸೇವಾ ಕ್ಷೇತ್ರವಾಗಿ ಸ್ವೀಕರಿಸಬೇಕು ಎಂದು ಆಯುಷ್‌ ಇಲಾಖೆ ಆಯುಕ್ತೆ ಕೆ. ಲೀಲಾವತಿ ತಿಳಿಸಿದರು.

ನಗರದ ಕಲಾಮಂದಿರದಲ್ಲಿ ಶುಕ್ರವಾರ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಆಯೋಜಿಸಿದ್ದ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸದೃಢ ರೂಪುಗೊಳ್ಳಲು ವೈದ್ಯಕೀಯ ಕ್ಷೇತ್ರದ ಕೊಡುಗೆ ಮುಖ್ಯ. ವೈದ್ಯ ಸೇವೆಗೆ ಇರುವ ಬೆಲೆಯನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕು. ಹಣ ಸಂಪಾದನೆಯೇ ನನ್ನ ಗುರಿ ಎಂಬ ಭಾವನೆ ಉಳ್ಳವರು ವೈದ್ಯಕೀಯ ಕ್ಷೇತ್ರದ ಬದಲಿಗೆ ಬೇರೆ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು. ಸಂಪಾದನೆಗೆ ಆರೋಗ್ಯ ಕ್ಷೇತ್ರಕ್ಕೆ ಬರಬಾರದು. ಇಲ್ಲಿ ಕಾರ್ಯ ನಿರ್ವಹಿಸುವ ವೈದ್ಯರು ರೋಗಿಗಳಿಗೆ ದೇವರ ಸಮಾನರು ಎಂದರು.

ವೈದ್ಯಕೀಯ ಶಿಕ್ಷಣದಲ್ಲಿ ತಾವು ಪಡೆದ ಅಂಕ ಅಥವಾ ಪದವಿ ಉದ್ಯೋಗದ ವೇಳೆ ಲೆಕ್ಕಕ್ಕೆ ಬರುವುದಿಲ್ಲ. ನಿಮ್ಮ ಮನೋಭಾವ ಹಾಗೂ ರೋಗಿಗೆ ನೀವು ತೋರುವ ಸ್ಪಂದನೆ ನಿಮ್ಮ ಬೆಳವಣಿಗೆಯ ಹಾದಿಯನ್ನು ನಿರ್ಧರಿಸುತ್ತದೆ ಎಂದು ಅವರು ಹೇಳಿದರು.

ವೈದ್ಯಕೀಯ ಕ್ಷೇತ್ರ ಸುಗಮವಾಗಿದ್ದರೆ ಸವಾಜದ ಕಾರ್ಯಗಳು ಸುಲಲಿತವಾಗಿ ಸಾಗಲು ಸಾಧ್ಯವಾಗುತ್ತದೆ. ದೇಶವೊಂದರ ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರ ಹಳಿ ತಪ್ಪಿದರೆ ಇಡೀ ದೇಶವೇ ನಾಶವಾಗುತ್ತದೆ. ಅದಕ್ಕೆ ಯುದ್ಧದ ಅಗತ್ಯವಿಲ್ಲ. ಆದ್ದರಿಂದ ಆರೋಗ್ಯ ಕ್ಷೇತ್ರದ ರಕ್ಷಣೆ ಮಾಡುವ ಜವಾಬ್ದಾರಿ ತಮ್ಮ ಮೇಲಿದೆ. ಸವಾಜದ ಉನ್ನತಿಯ ಬಗ್ಗೆ ಸದಾ ಚಿಂತಿಸುವ ಮನಸ್ಸುಗಳು ಈ ಕ್ಷೇತ್ರದಲ್ಲಿ ಇರಬೇಕು ಎಂದು ಅವರು ತಿಳಿಸಿದರು.

ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ವೈದ್ಯ ಪ್ರಸನ್ನ ನರಸಿಂಹ ಮಾತನಾಡಿ, ವೈದ್ಯಕೀಯ ಜೀವನದಲ್ಲಿ ನಡೆಯುವ ಅನಿರೀಕ್ಷಿತ ಘಟನೆಗಳು ನಮ್ಮ ಸೋಲಿಗೂ ಕಾರಣವಾಗುತ್ತದೆ. ಆದ್ದರಿಂದ ಧೃತಿಗೆಡದೆ ಗುರಿ ಸಾಧಿಸುವ ಛಲದೊಂದಿಗೆ ಮುಂದುವರೆಯಬೇಕು. ಹೊಸ ವಿಚಾರ ಕಲಿಯುವ ಆಸಕ್ತಿಯೊಂದಿಗೆ ಮುಂದುವರೆಯಬೇಕು ಎಂದರು.

ಪದವಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಗೋವಾದ ಜಿಎಎಂ ಮತ್ತು ಆರ್‌ಸಿ ಕಾಲೇಜಿನ ಡಾ. ಕೋಡೆರ್‌ ನೀಲೇಶ್‌ ಪ್ರಮೋದ್‌, ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಎಸ್‌. ರಾಧಾಕೃಷ್ಣ ರಾಮರಾವ್‌ ಇದ್ದರು.

click me!