ಮೈಸೂರು ಮಹಾನಗರ ಪಾಲಿಕೆ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ ನಡೆದಿದ್ದು, ಈ ವೇಲೆ ಅವರ ಮನೆಯಲ್ಲಿ ಕೆಜಿಗಟ್ಟಲೇ ಚಿನ್ನ ಪತ್ತೆಯಾಗಿದೆ.
ಮೈಸೂರು (ಆ.27): ಮೈಸೂರು ಮಹಾನಗರ ಪಾಲಿಕೆ ಅಭಿವೃದ್ಧಿ ಅಧಿಕಾರಿ, ಉಪ ಆಯುಕ್ತ ನಾಗರಾಜು ಅವರ ಮನೆ ಮೇಲಿನ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ದಾಳಿ ವೇಳೆ ಸುಮಾರು 1.30 ಕೆ.ಜಿ.ಚಿನ್ನ ಪತ್ತೆಯಾಗಿದೆ.
ನಾಗರಾಜು ಅವರು ದಟ್ಟಗಳ್ಳಿಯಲ್ಲಿ ಒಂದು ಕಾಂಪ್ಲೆಕ್ಸ್, ಕುವೆಂಪುನಗರದಲ್ಲಿ ಮನೆ ಹೊಂದಿರುವುದು ಪತ್ತೆಯಾಗಿದ್ದು, ಅವರ ಮನೆಯಿಂದ 1.30 ಕೆ.ಜಿ. ಚಿನ್ನದ ಜತೆಗೆ .9 ಲಕ್ಷ ಹಣವನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಎಸಿಬಿ ಮೂಲಗಳಿಂದ ತಿಳಿದು ಬಂದಿದೆ. ನಾಗರಾಜು ಮೂಲತಃ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನವರಾಗಿದ್ದು, ತಮ್ಮ ಆದಾಯಕ್ಕಿಂತಲೂ ಹೆಚ್ಚು ಆಸ್ತಿ ಮಾಡಿದ್ದಾರೆ ಎಂದು ಅಲ್ಲಿನ ಸ್ಥಳೀಯರೊಬ್ಬರು ಎಸಿಬಿ ಪೊಲೀಸರಿಗೆ ದೂರು ನೀಡಿದ್ದರು.
ಭ್ರಷ್ಟಾಚಾರ: ಇಬ್ಬರು ಅಧಿಕಾರಿಗಳು ಎಸಿಬಿ ಬಲೆಗೆ
ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಇಬ್ಬರು ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ಆರು ಸ್ಥಳಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿ ಚಿನ್ನಾಭರಣ, ನಗದು ಮತ್ತು ಆಸ್ತಿಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಟಿಡಿಆರ್ ಅವ್ಯವಹಾರ: ನಾಲ್ವರ ನಿವಾಸದ ಮೇಲೆ ಎಸಿಬಿ ದಾಳಿ...
ಕೊಳಚೆ ನಿರ್ಮೂಲನಾ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಎಂ.ಎಸ್.ನಿರಂಜನ್ ಅಲಿಯಾಸ್ ಎಂ.ಎಸ್.ಎನ್.ಬಾಬು ಮತ್ತು ಮೈಸೂರು ಮಹಾನಗರ ಪಾಲಿಕೆ ಅಭಿವೃದ್ಧಿ ಅಧಿಕಾರಿ ಎಚ್.ನಾಗರಾಜು ಅವರಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ. ಬೆಂಗಳೂರು, ತುಮಕೂರು ಮತ್ತು ಮೈಸೂರಿನಲ್ಲಿ ಎಸಿಬಿ ಅಧಿಕಾರಿಗಳ ಶೋಧ ಕಾರ್ಯ ನಡೆಸಿದ್ದಾರೆ.
ನಿರಂಜನ್ ಬಾಬು ಅವರ ತುಮಕೂರಿನ ಶೆಟ್ಟಿಹಳ್ಳಿ, ಮಾರುತಿನಗರದಲ್ಲಿನ ವಾಸದ ಮನೆ, ಬೆಂಗಳೂರು ನಗರದ ಯಶವಂತಪುರ ಗೋಲ್ಡನ್ ಗ್ರಾಂಡ್ ಅಪಾರ್ಟ್‌ಮೆಂಟ್‌ನಲ್ಲಿನ ಸ್ನೇಹಿತನ ಫ್ಲಾಟ್ ಮತ್ತು ನಾಗರಾಜುಗೆ ಸೇರಿದ ಮೈಸೂರು ನಗರದಲ್ಲಿನ ವಾಸದ ಮನೆ ಮತ್ತು ಇವರ ಸಹೋದರ ವಾಸವಾಗಿರುವ ಮಾಗಡಿ ಪಟ್ಟಣದಲ್ಲಿನ ವಾಸದ ಮನೆ, ಇವರ ಬಾಮೈದ ವಾಸವಾಗಿರುವ ಮೈಸೂರು ನಗರದಲ್ಲಿನ ವಾಸದ ಮನೆ ಮತ್ತು ಕರ್ತವ್ಯ ನಿರ್ವಹಿಸುತ್ತಿರುವ ಮೈಸೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಶೋಧ ಕಾರ್ಯದ ವೇಳೆ ದಾಖಲೆಗಳು ಲಭ್ಯವಾಗಿದ್ದು, ಅವುಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ದಾಖಲೆಗಳನ್ನು ಪರಿಶೀಲನೆ ನಡೆಸಿದ ಬಳಿಕ ಅಕ್ರಮ ಆಸ್ತಿಯ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಲಿದೆ ಎಂದು ಎಸಿಬಿ ಅಧಿಕಾರಿಗಳು ಹೇಳಿದ್ದಾರೆ.