ಕೊರೋನಾ ಸೋಂಕಿತರ ಶವ ನೋಡಲು 20 ಸಾವಿರ ರು.!

By Kannadaprabha NewsFirst Published Aug 26, 2020, 4:05 PM IST
Highlights

ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮರೀಚಿಕೆಯಾಗಿದೆ. ಕೋವಿಡ್ ನಿಂದ ಮೃತರಾದವರ ಮುಖ ನೋಡಲು ದುಡ್ಡು ತೆರಬೇಕಾದ ಪರಿಸ್ಥಿತಿ ಇದೆ ಎಂದು ಆರೋಪ ಕೇಳಿ ಬಂದಿದೆ.

ದಾವಣಗೆರೆ(ಆ.26): ಕೋವಿಡ್‌ ಸೇರಿ ಯಾವುದೇ ಕಾಯಿಲೆಯಿಂದ ಬಳಲುತ್ತಿರುವವರಿಗೆ ಜಿಲ್ಲಾಸ್ಪತ್ರೆ, ಖಾಸಗಿ ಆಸ್ಪತ್ರೆಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಕೊರೋನಾಗೆ ಬಲಿಯಾದವರ ಮುಖ ನೋಡಲು ಜಿಲ್ಲಾ ಆಸ್ಪತ್ರೆಯಲ್ಲಿ ಕುಟುಂಬ ಸದಸ್ಯರು 15-20 ಸಾವಿರ ರು. ಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜಿಲ್ಲಾ ಪಂಚಾಯಿತಿ ವಿಪಕ್ಷ ಸದಸ್ಯ ಕೆ.ಎಸ್‌. ಬಸವಂತಪ್ಪ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಜಿ.ಪಂ. ಸಭಾಂಗಣದಲ್ಲಿ ಮಂಗಳವಾರ ಅಧ್ಯಕ್ಷೆ ದೀಪಾ ಜಗದೀಶ ಅಧ್ಯಕ್ಷತೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಹಣ ಕೊಟ್ಟರಷ್ಟೇ ಹೆಣದ ಮುಖ ನೋಡಲು ಬಿಡುತ್ತಾರೆ. ಮೃತನ ಕುಟುಂಬ ಎಷ್ಟೇ ಗೋಗರೆದರೂ ಅದಕ್ಕೆ ಜಿಲ್ಲಾಸ್ಪತ್ರೆಯಲ್ಲಿ ಯಾರೂ ಸ್ಪಂದಿಸುವುದಿಲ್ಲ. ಸೋಂಕಿಗೆ ಯಾರಾದರೂ ಸತ್ತರೆ ಕುಟುಂಬದವರ ಬಳಿ ಏಜೆಂಟ್‌ ಬಂದು, 20 ಸಾವಿರ ರು. ಕೊಟ್ಟರೆ ನೀವು ಹೇಳಿದ ಜಾಗಕ್ಕೆ ತಂದು, ಮಣ್ಣು ಮಾಡುತ್ತೇವೆ ಎಂದು ವ್ಯವಹಾರ ಕುದುರಿಸುತ್ತಾನೆ. ವಿಧಿಯಿಲ್ಲದೇ ನೊಂದ ಕುಟುಂಬ ಹಣ ಕೊಡುತ್ತದೆ ಎಂದು ತಿಳಿಸಿದರು.

ಉಚಿತ ಸೇವೆ ನೀಡುವುದಾಗಿ ಹೇಳಿ ಉಲ್ಟಾ ಹೊಡೆದ ವೈದ್ಯರು: ಖಾಸಗಿ ಡಾಕ್ಟರ್ಸ್‌ಗೆ ನೋಟಿಸ್‌..

ಆಡಳಿತ ಪಕ್ಷದ ಸದಸ್ಯೆ, ಮಾಜಿ ಅಧ್ಯಕ್ಷೆ ಮಂಜುಳಾ ಟಿ.ವಿ. ರಾಜು ಮಾತನಾಡಿ, ಮೊದಲೇ ಸೋಂಕಿಗೆ ಬಲಿಯಾಗುವುದು ನೋವಿನ, ಆಘಾತಕಾರಿ ಸಂಗತಿ. ಅಂಥದ್ದರಲ್ಲಿ ಮೃತ ದೇಹವನ್ನು ನೋಡಲು, ಅಂತ್ಯಕ್ರಿಯೆ ಹೇಳಿದ ಜಾಗದಲ್ಲಿ ಮಾಡಲು 20 ಸಾವಿರ ರು. ಕೇಳುವುದು ಅಮಾನವೀಯ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜಿಪಂ ಅಧ್ಯಕ್ಷೆ ದೀಪಾ ಜಗದೀಶ ಮಾತನಾಡಿ, ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಸ್ಥರಿಂದ ಹಣ ಪಡೆಯುವವರು ಯಾರೇ ಆಗಿದ್ದರೂ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಈವರೆಗೆ ಯಾರಿಂದಲಾದರೂ ಹಣ ಪಡೆದಿದ್ದರೆ ಸಮಗ್ರ ತನಿಖೆ ನಡೆಸಿ, ಕ್ರಮ ಜರುಗಿಸಬೇಕು ಎಂದು ಆದೇಶಿಸಿದರು.

ಸದಸ್ಯ ಕೆ.ಎಸ್‌.ಬಸಂತಪ್ಪ ಮಾತನಾಡಿ, ಅನೇಕರಿಗೆ ಉಸಿರಾಟದ ತೊಂದರೆ ಸೇರಿದಂತೆ ಅನೇಕ ಸಮಸ್ಯೆಗಳಿಗೆ ವೆಂಟಿಲೇಟರ್‌ಗಳ ಅವಶ್ಯಕತೆ ಇದೆ. ಜಿಲ್ಲಾ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ಗಳ ಸಂಖ್ಯೆ ಕಡಿಮೆ ಇದೆ. ಬೇರೆ ರೋಗಿಗಳಿಗೆ ಬೆಡ್‌ ಇಲ್ಲ ಎಂದು ಹೇಳಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ ಹೆಸರಿನಲ್ಲಿ ದುಬಾರಿ ಬಿಲ್‌ ಮಾಡಿ, ಸುಲಿಗೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಎಸಿ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದಾಗಲೇ ಕೊರೋನಾ ಬಂತು: ಶಾಸಕರ ಅನುಭವದ ಮಾತಿದು..!.

ಗ್ರಾಮೀಣ ರೋಗಿಗಳ ಗೋಳು ಕೇಳುವವರಿಲ್ಲ. ಎಬಿ-ಎಆರ್‌ಕೆ ಯೋಜನೆ ಸರಿಯಾಗಿ ಜಾರಿಯಾಗಿಲ್ಲ. ಕಳೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಸಚಿವರು ಡಿಎಚ್‌ಓಗೆ ಪ್ರತಿ ಖಾಸಗಿ ಆಸ್ಪತ್ರೆಯಲ್ಲಿ ಜಿಲ್ಲಾ ಎಸ್‌ಪಿ ಉಸ್ತುವಾರಿಯ ಅಗ್ನಿಶಾಮಕ, ಪೊಲೀಸ್‌ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ತಂಡ ಮಾಡಿದ್ದಾಗಿ ಹೇಳಿದ್ದರು. ಆ ತಂಡ ಎಲ್ಲಿಗೆ, ಜನರಿಗೆ ಅದರಿಂದ ಏನು ಉಪಯೋಗವಾಗಿದೆ ಎಂದು ಪ್ರಶ್ನಿಸಿದರು.

ಸದಸ್ಯ ಹದಡಿ ಜಿ.ಸಿ.ನಿಂಗಪ್ಪ ಮಾತನಾಡಿ, ಖಾಸಗಿ ಆಸ್ಪತ್ರೆಗಳಿಗೆ ನೇಮಿಸಿದ ನೋಡಲ್‌ ಅಧಿಕಾರಿಗಳ ಪಟ್ಟಿಕೊಡಿ ಎಂದು ಪಟ್ಟುಹಿಡಿದರು. ಸದಸ್ಯ ಸುರೇಂದ್ರ ನಾಯ್ಕ ಹಳೆ ಆಸ್ಪತ್ರೆಯಲ್ಲಿ ಇತರೇ ಸಾಮಾನ್ಯ ರೋಗಿಗಳಿಗೆ ಆಕ್ಸಿಜನ್‌ ಸಮೇತ ಚಿಕಿತ್ಸೆ ವ್ಯವಸ್ಥೆ ಮಾಡಿ ಎಂದು ಆಗ್ರಹಿಸಿದರು. ಸದಸ್ಯೆ ಮಂಜುಳಾ ರಾಜು, ಕೋವಿಡ್‌-19 ಹಿನ್ನೆಲೆ ಇತರೇ ಚಿಕಿತ್ಸೆ ನಿರಾಕರಿಸುತ್ತಿರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ ಎಂದು ಡಿಎಚ್‌ಓಗೆ ತರಾಟೆಗೆ ತೆಗೆದುಕೊಂಡರು.

ಜಿಪಂ ಸಿಇಓ ಪದ್ಮಾ ಬಸವಂತಪ್ಪ ಮಾತನಾಡಿ, ಸಚಿವರ ಸೂಚನೆಯಂತೆ ಉಪವಿಭಾಗಾಧಿಕಾರಿ ಅಧ್ಯಕ್ಷತೆಯ ನೋಡಲ್‌ ಅಧಿಕಾರಿಗಳ ಪಟ್ಟಿತಯಾರಿಸಿ, ಕೆಲಸ ನಿರ್ವಹಿಸಲಾಗುತ್ತಿದೆ. ಹೊಸ ವೆಂಟಿಲೇಟರ್‌ ನಿರ್ವಹಣೆಗೆ ಖಾಸಗಿ ಆಸ್ಪತ್ರೆ ವೈದ್ಯರನ್ನು ನೇಮಿಸಲು ಅಥವಾ ಹೊಸ ವೈದ್ಯರ ನೇಮಕಕ್ಕೆ ಚಿಂತನೆ ನಡೆಸಿದೆ. ವೈದ್ಯರು, ತಂತ್ರಜ್ಞರನ್ನು ಭರ್ತಿ ಮಾಡಿಕೊಳ್ಳುವ ಎಲ್ಲ ಪ್ರಯತ್ನ ನಡೆಸಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಜಿಪಂ ಉಪಾಧ್ಯಕ್ಷೆ ಸಾಕಮ್ಮ ಗಂಗಾಧರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಪಕೀರಪ್ಪ, ಮಾಯಕೊಂಡ ಶಾಸಕ ಎಸ್‌.ರಾಮಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಲೋಕೇಶ್ವರ, ಜಿಪಂ ಸಿಇಓ ಪದ್ಮಾ ಬಸವಂತಪ್ಪ, ಉಪ ಕಾರ್ಯದರ್ಶಿ ಬಿ.ಆನಂದ್‌, ಸದಸ್ಯರಾದ ಬಸವರಾಜಪ್ಪ, ಕೆ.ಎಚ್‌.ಓಬಳಪ್ಪ, ಡಿ.ಜಿ.ವಿಶ್ವನಾಥ, ಸುರೇಂದ್ರ ನಾಯ್ಕ, ಎಸ್‌.ಕೆ. ಮಂಜುನಾಥ, ಸದಸ್ಯರು, ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.

click me!