* ಸಿಪಿಐ ಸೇರಿದಂತೆ ಇತರೆ ನಾಲ್ವರು ಸಿಬ್ಬಂದಿ ಪರಾರಿ
* ಹಣ ಸ್ವೀಕರಿಸುವಾಗ ದಾಳಿ ನಡೆಸಿದ ಎಸಿಬಿ
* ಹಣ ಕೇಳುವ-ಆಡಿಯೋ ಸಂಭಾಷಣೆ ವೈರಲ್
ಕೊಟ್ಟೂರು(ಡಿ.12): ಅಕ್ರಮ ಮರಳು ಸಾಗಣೆ(Illegal Sand Transport) ಪ್ರಕರಣವೊಂದನ್ನು ಖುಲಾಸೆಗೊಳಿಸಲು . 10 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದ ಕೊಟ್ಟೂರು(Kotturu) ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ಎಎಸ್‌ಐ ಅವರನ್ನು ಬಳ್ಳಾರಿಯ ಭ್ರಷ್ಟಾಚಾರ ನಿಗ್ರಹದಳದ (ACB) ಅಧಿಕಾರಿಗಳು ಶನಿವಾರ ದಾಳಿ ನಡೆಸಿ, ಬಂಧಿಸಿದ್ದಾರೆ. ಸಬ್ ಇನಸ್ಪೆಕ್ಟರ್ ಹೆಚ್. ನಾಗಪ್ಪ ಹಾಗೂ ಸಹಾಯಕ ಸಬ್ ಇನಸ್ಪೆಕ್ಟರ್ ಸೈಫುಲ್ಲಾ ಬಂಧಿತರು(Arrest). ಪ್ರಕರಣದ ಇತರೆ ಆರೋಪಿಗಳಾದ ಸಿಪಿಐ ಟಿ.ಎಸ್. ಮುರುಗೇಶ್, ಪೊಲೀಸ್ ಪೇದೆಗಳಾದ ತಿಪ್ಪೇಸ್ವಾಮಿ, ನಾಗರಾಜ, ಕೊಂಡಿ ಬಸವರಾಜ್ ಪರಾರಿಯಾಗಿದ್ದಾರೆ.
ಲಂಚದ(Bribe) ಹಣವನ್ನು ಸ್ವೀಕರಿಸುವ ವೇಳೆ ಬಳ್ಳಾರಿಯ ಎಸಿಬಿ ಡಿವೈಎಸ್‌ಪಿ ಸೂರ್ಯನಾರಾಯಣ ರಾವ್ ನೇತೃತ್ವದ ತಂಡ ಇಲ್ಲಿನ ಸಿಪಿಐ ಕಚೇರಿ ಮೇಲೆ ಶನಿವಾರ ಮಧ್ಯಾಹ್ನ ದಾಳಿ(Raid) ನಡೆಸಿ, ಪಿಎಸ್‌ಐ, ಎಎಸ್‌ಐ ಅವರನ್ನು ಬಂಧಿಸಿತು.
undefined
ACB Raid: ಅಕ್ರಮವಾಗಿ 28 ಮನೆ, 16 ಸೈಟ್ ಗಳಿಸಿದ್ದ ಭ್ರಷ್ಟ ಅಧಿಕಾರಿ ಬಂಧನ
ಪ್ರಕರಣದ ವಿವರ
ಅಕ್ರಮ ಮರಳು ಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡ್ಲಿಗಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ವೆಂಕಟೇಶ ನಾಯ್ಕ ವಿರುದ್ಧ ನ. 28ರಂದು ಪ್ರಕರಣ(Case) ದಾಖಲಾಗಿತ್ತು. ಈ ಪ್ರಕರಣದಲ್ಲಿ ವೆಂಕಟೇಶ್ ನಾಯ್ಕರನ್ನು ಕೈಬಿಡುವ ಸಂಬಂಧವಾಗಿ ಕೊಟ್ಟೂರು ಪೊಲೀಸ್ ಠಾಣೆಯ ಎಎಸ್‌ಐ ಸೈಪುಲ್ಲಾ ಅವರು ವೆಂಕಟೇಶನಾಯ್ಕರಿಗೆ 10 ಲಕ್ಷ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು.
ಶನಿವಾರ ವೆಂಕಟೇಶ ನಾಯ್ಕ ಕೊಟ್ಟೂರು ಸಿಪಿಐ ವೃತ್ತ ಕಚೇರಿಯಲ್ಲಿ ಹಣ ನೀಡುವ ವೇಳೆ ಬಳ್ಳಾರಿ ಎಸಿಬಿ ಅಧಿಕಾರಿಗಳು ದಿಢೀರನೆ ದಾಳಿ ನಡೆಸಿ, ಹಣ ಸಮೇತ ಎಎಸ್‌ಐ ಸೈಪುಲ್ಲಾ ಅವರನ್ನು ವಶಕ್ಕೆ ಪಡೆದರು. ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂಬುದು ಗೊತ್ತಾಗುತ್ತಿದ್ದಂತೆಯೇ ಅಲ್ಲಿಂದ ಓಡಿ ಹೋಗಲು ಯತ್ನಿಸಿದ ಸಬ್‌ಇನ್ಸ್‌ಸ್ಪೆಕ್ಟರ್ ಹೆಚ್.ನಾಗಪ್ಪ ಅವರನ್ನು ಎಸಿಬಿ ಅಧಿಕಾರಿಗಳು ವಾಹನದಲ್ಲಿ ತೆರಳಿ ಹಿಡಿದು ತಂದಿದ್ದಾರೆ.
ದಾಳಿ ನಡೆಸಲು ಬಳ್ಳಾರಿ ಎಸಿಬಿ ಅಧಿಕಾರಿಗಳು ರಾಯಚೂರು ಎಸಿಬಿ ತಂಡದ ಸಹಕಾರ ಪಡೆದಿದ್ದರು. ರಾಯಚೂರು ಎಸಿಬಿ ಡಿವೈಎಸ್‌ಪಿ ವಿಜಯಕುಮಾರ್ ಸಹ ದಾಳಿಯಲ್ಲಿದ್ದರು. ಕೊಟ್ಟೂರು ಸಿಪಿಐ ಕಚೇರಿ ಮೇಲೆ ಎ.ಸಿ.ಬಿ. ದಾಳಿ ನಡೆದ ವಿಷಯ ಗೊತ್ತಾಗುತ್ತಿದ್ದಂತೆ ಕೂಡ್ಲಿಗಿ ಪೊಲೀಸ್ ಉಪವಿಭಾಗದ ಡಿವೈಎಸ್‌ಪಿ ಹರೀಶ ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದರು.
ಹಣ ಕೇಳುವ-ಆಡಿಯೋ ಸಂಭಾಷಣೆ ವೈರಲ್
ಅಕ್ರಮ ಮರಳು ಸಾಗಣೆ ಪ್ರಕರಣದಲ್ಲಿ ತಮ್ಮನ್ನು ಕೈ ಬಿಡುವಂತೆ ವೆಂಕಟೇಶ್ ನಾಯ್ಕ ಅವರು ಪೊಲೀಸ್(Police) ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳುವುದು, ಇದಕ್ಕೆ ಹಣ ವ್ಯವಹಾರ ಕುರಿತು ಚರ್ಚಿಸುವ ಆಡಿಯೋ ವೈರಲ್(Audio Viral) ಆಗಿದೆ. ಕೊಟ್ಟೂರು ಠಾಣೆಯಲ್ಲಿ ಭ್ರಷ್ಟಾಚಾರ(Corruption) ಮಿತಿ ಮೀರುತ್ತಿದೆ ಎಂಬ ಮಾಹಿತಿ ಎಸಿಬಿ ಅಧಿಕಾರಿಗಳಿಗೆ ಇತ್ತು. ಸಮಯಕ್ಕಾಗಿ ಕಾಯುತ್ತಿದ್ದರು ಎಂದು ಹೇಳಲಾಗುತ್ತಿದೆ. ವೆಂಕಟೇಶ್ ನಾಯ್ಕ ಅವರು ದೂರು ನೀಡುತ್ತಿದ್ದಂತೆಯೇ ಬಲೆಗೆ ಕೆಡವಲು ಎಸಿಬಿ ಅಣಿಯಾಗಿದೆ. ಸಿಪಿಐ ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿರುವುದು ಹಾಗೂ ಪಿಎಸ್‌ಐ, ಎಎಸ್‌ಐ ಬಂಧನವಾಗಿರುವ ಸುದ್ದಿ ಕೊಟ್ಟೂರು ತುಂಬೆಲ್ಲಾ ಸದ್ಯ ಬಿಸಿಬಿಸಿ ಸುದ್ದಿಯಾಗಿದೆ. ಇಂತಹ ಭ್ರಷ್ಟ ಅಧಿಕಾರಿಗಳಿಗೆ ತಕ್ಕ ಶಾಸ್ತಿಯಾಗಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ACB Raid: ಬೆಂಗ್ಳೂರಿನ ಭ್ರಷ್ಟ ಅಧಿಕಾರಿ ಬಳಿ ಕೋಟಿ ಕೋಟಿ ಆಸ್ತಿ..!
ಎಫ್‌ಡಿಎ ಎಸಿಬಿ ಬಲೆಗೆ
ಬೆಂಗಳೂರು: ಬೆಂಗಳೂರು- ಚೆನ್ನೈ ಎಕ್ಸ್‌ಪ್ರೆಸ್ ರಸ್ತೆ(Bengaluru-Chennai Express Road) ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡ ಜಮೀನಲ್ಲಿ ಮನೆ, ಕೊಳವೆ ಬಾವಿ ಮತ್ತು ಮರಗಳಿಗೆ ಪರಿಹಾರ(Compensation) ಬಿಡುಗಡೆ ಮಾಡಲು ರೈತರೊಬ್ಬರಿಂದ 25 ಸಾವಿರ ಲಂಚ ಸ್ವೀಕರಿಸುವಾಗ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿಯ ಪ್ರಥಮ ದರ್ಜೆ ಸಹಾಯಕ (FDA) ಶುಕ್ರವಾರ ಎಸಿಬಿ ಬಲೆಗೆ ಬಿದ್ದಿದ್ದಾನೆ.
ಹೆಬ್ಬಾಳದ ಕೆಂಪಣ್ಣ ಬಡಾವಣೆಯಲ್ಲಿರುವ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿ ಮತ್ತು ಸಕ್ಷಮ ಪ್ರಾಧಿಕಾರದ ಎಫ್‌ಡಿಸಿ ರಮೇಶ್ ಬಂಧಿತನಾಗಿದ್ದು, ಆರೋಪಿಯಿಂದ ಹಣ ಜಪ್ತಿ ಮಾಡಲಾಗಿದೆ. ಕೋಲಾರ ಜಿಲ್ಲೆ ಕ್ಯಾಸಂಬಳ್ಳಿ ಹೋಬಳಿಯ ನಿವಾಸಿಯೊಬ್ಬರಿಗೆ ಸೇರಿದ ಜಮೀನನ್ನು ಭೂಸ್ವಾಧೀನಾಧಿಕಾರಿಗಳು ಸ್ವಾಧೀನಪಡಿಸಿಕೊಂಡಿದ್ದರು. ಆ ಜಮೀನಲ್ಲಿರುವ ಮನೆ, ಕೊಳವೆ ಬಾವಿ ಮತ್ತು ಮರಗಳಿಗೆ ಪರಿಹಾರದ ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಪರಿಹಾರ ಬಿಡುಗಡೆಗೆ 25 ಸಾವಿರ ಲಂಚ ನೀಡುವಂತೆ ರೈತನ ಬಳಿ ಎಫ್‌ಡಿಎ ರಮೇಶ್ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ರೈತ ಎಸಿಬಿಗೆ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ಕೈಗೊಂಡ ಅಧಿಕಾರಿಗಳು, ಶುಕ್ರವಾರ ಲಂಚದ ಹಣ ಸ್ವೀಕರಿಸುವಾಗ ಎಫ್‌ಡಿಎನನ್ನು ಬಂಧಿಸಿದ್ದಾರೆ.