ಕೊರೋನಾ ಸೋಂಕಿತೆಗೆ ಗರ್ಭಪಾತ: ಕಾರಣ?

By Kannadaprabha NewsFirst Published May 9, 2020, 7:23 AM IST
Highlights

ಬಾದಾಮಿಯ ಕೊರೋನಾ ಸೋಂಕಿತೆಗೆ ಸುರಕ್ಷಿತ ಗರ್ಭಪಾತ| ಮಹಿಳೆ ಜೀವ ಉಳಿಸಿಕೊಳ್ಳುವುದಕ್ಕಾಗಿ ಅನಿವಾರ್ಯವಾಗಿ ಗರ್ಭಪಾತ| ಮೊದಲೇ ಹಿಮೋಗ್ಲೋಬಿನ್‌ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆ| ಕೊರೋನಾ ಪಾಸಿಟಿವ್‌ ಎಂದು ಗೊತ್ತಾದ ಬಳಿಕ ಮಾನಸಿಕವಾಗಿ ನೋವು|

ಹುಬ್ಬಳ್ಳಿ(ಮೇ.09):  ಕೊರೋನಾ ಸೋಂಕಿನಿಂದ ಇಲ್ಲಿನ ಕಿಮ್ಸ್‌ಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಬಾಗಲಕೋಟೆಯ ಗರ್ಭಿಣಿ(ಪಿ-607)ಯನ್ನು ಉಳಿಸಿಕೊಳ್ಳುವ ಸಲುವಾಗಿ ಶುಕ್ರವಾರ ವೈದ್ಯರು ಆಕೆಗೆ ಗರ್ಭಪಾತ ಮಾಡಿದ್ದಾರೆ. 

ಸದ್ಯ ಮಹಿಳೆ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಇದಕ್ಕೂ ಮೊದಲೇ ಆಕೆಯ ದೇಹದಲ್ಲಿ ಸೋಡಿಯಂ ಪ್ರಮಾಣ ತೀವ್ರ ಕುಸಿತವಾಗಿ ಸುಸ್ತು ಆವರಿಸಿತ್ತು(ಸೋಡಿಯಂ ಕಡಿಮೆ ಇದ್ದರೆ ಅಂಗಾಗ ವೈಫಲ್ಯ ಆಗೋ ಅಪಾಯ ಇರುತ್ತದೆ). ಅಲ್ಸರ್‌ ಆಗಿದ್ದರಿಂದ ಊಟ ಮಾಡಲೂ ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ, ಮಹಿಳೆಯ ದೇಹದಲ್ಲಿ ಮೊದಲೇ ಹಿಮೋಗ್ಲೋಬಿನ್‌ ಅಂಶ ಐದರಷ್ಟಿತ್ತು.

ಹೀಗಾಗಿ ರಕ್ತವನ್ನೂ ಕೊಡಲಾಗಿತ್ತು. ಸರಿಯಾಗಿ ಮೂತ್ರ ಹೋಗದ ಕಾರಣ ಡಯಾಲಿಸಿಸ್‌ ಮಾಡುವ ಬಗ್ಗೆಯೂ ವೈದ್ಯರು ಚಿಂತನೆ ನಡೆಸಿದ್ದರು. ಆದರೆ ಸ್ವಲ್ಪ ಚೇತರಿಕೆ ಕಂಡುಬಂದ ಕಾರಣ ಡಯಾಲಿಸಿಸ್‌ ಕೈಬಿಟ್ಟಿದ್ದರು.
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಡಾಣಕಶಿರೂರು ಮೂಲದ 23 ವರ್ಷದ ಗರ್ಭಿಣಿಗೆ ಕೊರೋನಾ ಸೋಂಕು ತಗುಲಿದ್ದನ್ನು ಮೇ 3ರಂದು ಜಿಲ್ಲಾಡಳಿತ ದೃಢಪಡಿಸಿತ್ತು. ಕೊರೋನಾ ಸೋಂಕಿಂದ ತೀವ್ರ ಮನನೊಂದಿದ್ದರು. ಇದರಿಂದ ಗರ್ಭಾವಸ್ಥೆ ಮೇಲೆಯೂ ವ್ಯತಿರಿಕ್ತ ಪರಿಣಾಮವಾಗಿತ್ತು.

ಕೋವಿಡ್‌ ವಿರುದ್ಧ ಹೋರಾಟ: ಕೊರೊನಾ ಸೋಂಕಿತ ಗರ್ಭಿಣಿ ಆರೋಗ್ಯದಲ್ಲಿ ಏರುಪೇರು..!

ಗರ್ಭಿಣಿಯ ಪತಿ ಸೇರಿದಂತೆ ಕುಟುಂಬದವರೆಲ್ಲ ಕ್ವಾರಂಟೈನ್‌ ಆಗಿರುವ ಕಾರಣ ಅವರಾರ‍ಯರೂ ಮಹಿಳೆಯ ಸಹಾಯಕ್ಕೆ ನಿಲ್ಲುವ ಪರಿಸ್ಥಿತಿ ಇರಲಿಲ್ಲ. ಹೀಗಾಗಿ ಕಿಮ್ಸ್‌ ವೈದ್ಯರು ವಿಶೇಷ ತಂಡ ರಚನೆ ಮಾಡಿ ಗರ್ಭಿಣಿಯ ಆರೈಕೆಗೆ ವ್ಯವಸ್ಥೆ ಮಾಡಿದ್ದರು. ಹಣ್ಣಿನ ಜ್ಯೂಸ್‌ ನೀಡುತ್ತಿದ್ದ ಕಾರಣದಿಂದಲೇ ರಕ್ತದೊತ್ತಡ ನಿಯಂತ್ರಣಕ್ಕೆ ಬಂದಿತ್ತು. ಈ ಪರಿಸ್ಥಿತಿಯಲ್ಲಿ ಮಗು ಇಟ್ಟುಕೊಳ್ಳುವುದು ಕಷ್ಟವಾದ ಕಾರಣ ಗರ್ಭಪಾತ ಅನಿವಾರ್ಯವಾಗಿತ್ತು. ಇಲ್ಲದಿದ್ದರೆ ಮಹಿಳೆಗೂ ಜೀವಾಪಾಯವಿತ್ತು. ಹೀಗಾಗಿ ವೈದ್ಯರು ಪತಿ ಹಾಗೂ ಮನೆಯವರಿಗೆ ಮನವರಿಕೆ ಮಾಡಿಕೊಟ್ಟು ಒಪ್ಪಿಗೆ ಪಡೆದಿದ್ದೇವೆ. ಶುಕ್ರವಾರ ಬೆಳಗ್ಗೆ 11.30ಕ್ಕೆ ಮಾತ್ರೆಗಳನ್ನು ನೀಡುವ ಮೂಲಕ ಗರ್ಭಪಾತ ಮಾಡಲಾಗಿದೆ ಎಂದು ಕಿಮ್ಸ್‌ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ತಿಳಿಸಿದ್ದಾರೆ

13ಕ್ಕೂ ಹೆಚ್ಚು ಮಂದಿಗೆ ಸೋಂಕು: 

ಯಾವುದೇ ಟ್ರಾವೆಲ್‌ ಹಿಸ್ಟರಿ ಇಲ್ಲದೆ ಈ ಗರ್ಭಿಣಿಗೆ ಕೊರೋನಾ ಸೋಂಕು ಹೇಗೆ ಅಂಟಿಕೊಂಡಿತು ಎಂಬುದನ್ನು ಪತ್ತೆ ಹಚ್ಚುವುದೇ ಆರೋಗ್ಯ ಇಲಾಖೆಗೆ ಈಗ ಸವಾಲಾಗಿದೆ. ಅಲ್ಲದೆ, ಈಕೆಯಿಂದ 13ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿ, ಆತಂಕ ಸೃಷ್ಟಿಸಿದೆ.
 

click me!