ವ್ಯಾಪಾರ ಕ್ಷೇತ್ರದಲ್ಲಿ ಹಿಂದೂ ಸಮಾಜ ಸಾಕಷ್ಟು ಜಾಗೃತಿಯಾಗಬೇಕು. ನಮ್ಮ ಸಂಸ್ಕೃತಿ, ಸಂಪ್ರದಾಯ ಉಳಿಸುವ ನಿಟ್ಟಿನಲ್ಲಿ ಮುಸ್ಲಿಂರೊಂದಿಗೆ ವ್ಯಾಪಾರ, ವ್ಯವಹಾರ ಸಂಪೂರ್ಣ ರದ್ದುಗೊಳಿಸಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ಹುಬ್ಬಳ್ಳಿ (ಅ.16): ವ್ಯಾಪಾರ ಕ್ಷೇತ್ರದಲ್ಲಿ ಹಿಂದೂ ಸಮಾಜ ಸಾಕಷ್ಟು ಜಾಗೃತಿಯಾಗಬೇಕು. ನಮ್ಮ ಸಂಸ್ಕೃತಿ, ಸಂಪ್ರದಾಯ ಉಳಿಸುವ ನಿಟ್ಟಿನಲ್ಲಿ ಮುಸ್ಲಿಂರೊಂದಿಗೆ ವ್ಯಾಪಾರ, ವ್ಯವಹಾರ ಸಂಪೂರ್ಣ ರದ್ದುಗೊಳಿಸಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು. ಇಲ್ಲಿನ ಆರ್.ಎನ್. ಶೆಟ್ಟಿಕಲ್ಯಾಣ ಮಂಟಪದ ಸಭಾಭವನದಲ್ಲಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಶನಿವಾರ ಸಂಜೆ ನಡೆದ ‘ಹಲಾಲ್ ಜಿಹಾದ್?’ ಗ್ರಂಥದ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಪರಂಪರೆ ಮುಂದುವರಿಸುತ್ತಿರುವ ಕಲಾಲ ಸಮುದಾಯ ತನ್ನ ಹಿಂದಿನ ಇತಿಹಾಸವನ್ನು ಅರಿತು ವ್ಯಾಪಾರ ಧರ್ಮ ಅಳವಡಿಸಿಕೊಳ್ಳಬೇಕು. ಹಲಾಲ್ ಎಂಬುದು ದೊಡ್ಡ ಗಂಡಾಂತರವಾಗಿದೆ. ಸರ್ಕಾರದ ಹಣ ಅಭಿವೃದ್ಧಿಗೆ ಹೋಗುತ್ತಿದ್ದರೆ, ಹಲಾಲ್‌ನ ಹಣ ಅಪಾಯಕಾರಿಯಾಗಿರುವ ದೇಶದ್ರೋಹಿ ಕೃತ್ಯ, ಮುಸ್ಲಿಂ ಗೂಂಡಾಗಳಿಗೆ ಉಪಯೋಗವಾಗುತ್ತಿದೆ ಎಂದು ದೂರಿದರು. ಹಿಂದೂಗಳ ಹೋರಾಟದ ಲಾಭವನ್ನು ಒಂದು ಪಕ್ಷ ಪಡೆಯುತ್ತಿದೆ. ದೇಶದಲ್ಲಿ ಶೇ. 20ರಷ್ಟುಇರುವ ಮುಸ್ಲಿಮರು ಹಲಾಲ್ ಪರವಾಗಿದ್ದಾರೆ. ಉಳಿದಂತೆ ಹಿಂದೂಗಳು ಯಾಕೆ ಹಲಾಲ್‌ನ್ನು ವಿರೋಧಿಸುತ್ತಿಲ್ಲ. ನಮ್ಮಲ್ಲಿ ಏಕೆ ಸ್ವಾಭಿಮಾನದ ಜ್ವಾಲೆ ಕಾಣುತ್ತಿಲ್ಲ ಎಂದು ಪ್ರಶ್ನಿಸಿದರು.
ಕರಾವಳಿಯಿಂದ ಚುನಾವಣಾ ಕಣಕ್ಕೆ ಇಳಿಯುತ್ತಾರಾ ಪ್ರಮೋದ್ ಮುತಾಲಿಕ್?
ಹಿಂದೂ ಜನಜಾಗೃತಿ ಸಮಿತಿ ರಾಷ್ಟ್ರೀಯ ವಕ್ತಾರ ರಮೇಶ ಶಿಂಧೆ ಮಾತನಾಡಿ, ಹಲಾಲ್ ಇಸ್ಲಾಂ ಕಲ್ಪನೆಯಾಗಿದೆ. ಅದನ್ನು ಎಲ್ಲದರ ಮೇಲೂ ಹೇರಲಾಗುತ್ತಿದೆ. ಇಂದು ಹಲಾಲ್ ಬಹುದೊಡ್ಡ ಆರ್ಥಿಕತೆಯಾಗಿ ಬೆಳೆದಿದೆ. ಯುರೋಪ್‌ನ 7 ರಾಷ್ಟ್ರಗಳಲ್ಲಿ ಹಲಾಲ್ ಬ್ಯಾನ್ ಮಾಡಲಾಗಿದೆ. ಆದರೆ ನಮ್ಮಲ್ಲಿ ಮಾತ್ರ ಇದು ಏಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದ ಅವರು, ಎಲ್ಲ ವ್ಯಾಪಾರ, ಶೇರು ಮಾರುಕಟ್ಟೆ, ಆಸ್ಪತ್ರೆ, ಪ್ರವಾಸೋದ್ಯಮ ಹಾಗೂ ಹಲವು ಕ್ಷೇತ್ರಗಳಲ್ಲಿ ಹಲಾಲ್ ಕಾಲಿಟ್ಟಿದೆ. ಹಲಾಲ್ ಮುಕ್ತ ಭಾರತ ನಿರ್ಮಾಣದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಸರ್ಕಾರದ ಅನುಮತಿ ಇಲ್ಲದೆ ಖಾಸಗಿಯಾಗಿ ನಡೆಯುತ್ತಿರುವ ಹಲಾಲ್ ಪೌಲ್ಟಿ್ರ ಉದ್ಯಮವನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ದೇಶದಲ್ಲಿ 4 ಸಂಸ್ಥೆಗಳು ಹಲಾಲ್ ಸರ್ಟಿಫಿಕೇಟ್ ನೀಡುತ್ತಿದ್ದು, ಸರ್ಕಾರಕ್ಕಿಂತಲೂ ಆರ್ಥಿಕವಾಗಿ ಬೆಳೆದಿವೆ. ಹಲಾಲ್ ವಿರುದ್ಧ ಅಭಿಯಾನ ನಡೆಸಿದ್ದರಿಂದಲೇ ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ ನೆಟ್ಟಾರು ಹತ್ಯೆಯಾಗಿದೆ ಎಂದು ಹೇಳಿದರು.
ಪ್ರವೀಣ್ ನೆಟ್ಟಾರು ಪತ್ನಿಗೆ ಖಾಯಂ ಸರ್ಕಾರಿ ಉದ್ಯೋಗ ನೀಡಿ: ಮುತಾಲಿಕ್ ಆಗ್ರಹ
ಹೈಕೋರ್ಟ್ ವಕೀಲ ನಾರಾಯಣ ಯಾಜಿ ಮಾತನಾಡಿ, ಹಲಾಲ್ ಹಾಗೂ ಸೆಕ್ಯುಲರಿಸಂ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಹಲಾಲ್ ಪರ ಮಾತನಾಡಿದರೆ ಬುದ್ಧಿಜೀವಿ, ವಿಚಾರವಾದಿ, ವಿರೋಧವಾಗಿ ಮಾತನಾಡಿದರೆ ಕೋಮುವಾದಿ ಎನ್ನಲಾಗುತ್ತಿದೆ. ಅದರ ಅನಾಹುತ ಅರಿತು ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು. ಹಲಾಲ್ ಹಲವು ಕ್ಷೇತ್ರಗಳಲ್ಲಿ ವ್ಯಾಪಿಸಿರುವ ಕುರಿತು ಸಾಕ್ಷ್ಯಚಿತ್ರ ಪ್ರದರ್ಶನ ಮಾಡಲಾಯಿತು. ಸಮಿತಿ ಸಮನ್ವಯಕ ಗುರುಪ್ರಸಾದ ಗೌಡ, ಕಲಾಲ ಸಮಾಜದ ಮುಖಂಡ ರಮೇಶ ಮಂಡಳಕರ, ಎಪಿಎಂಸಿ ಮಾಜಿ ಸದಸ್ಯ ಚೆನ್ನು ಹೊಸಮನಿ ಮತ್ತಿತರರಿದ್ದರು.