ಕಾರವಾರದಲ್ಲಿ ಮತ್ತೆ ಭಾಷಾ ವಿವಾದಕ್ಕೆ ಕಿಡಿ ಇಟ್ಟ ಮಾಜಿ ಸಚಿವ ಆನಂದ ಆಸ್ನೋಟೆಕರ್

By Govindaraj S  |  First Published Oct 16, 2022, 10:31 PM IST

ಗಡಿ ಜಿಲ್ಲೆಯಾದ ಉತ್ತರಕನ್ನಡದ  ಕಾರವಾರದಲ್ಲಿ ಈ ಹಿಂದೆ ಕಾಣಿಸಿಕೊಂಡಿದ್ದ ಭಾಷಾ ವಿವಾದದ ಕಿಚ್ಚು ಕ್ರಮೇಣ ತಣ್ಣಗಾಗಿತ್ತು. ಆದರೆ, ಅದಕ್ಕೆ ಮತ್ತೆ ಕಿಡಿ ಹಚ್ಚುವ ಕೆಲಸವನ್ನು ಮಾಜಿ ಸಚಿವ ಆನಂದ ಅಸ್ನೋಟೆಕರ್ ಮಾಡಿದ್ದಾರೆ. 


ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರ ಕನ್ನಡ (ಅ.16): ಗಡಿ ಜಿಲ್ಲೆಯಾದ ಉತ್ತರಕನ್ನಡದ  ಕಾರವಾರದಲ್ಲಿ ಈ ಹಿಂದೆ ಕಾಣಿಸಿಕೊಂಡಿದ್ದ ಭಾಷಾ ವಿವಾದದ ಕಿಚ್ಚು ಕ್ರಮೇಣ ತಣ್ಣಗಾಗಿತ್ತು. ಆದರೆ, ಅದಕ್ಕೆ ಮತ್ತೆ ಕಿಡಿ ಹಚ್ಚುವ ಕೆಲಸವನ್ನು ಮಾಜಿ ಸಚಿವ ಆನಂದ ಅಸ್ನೋಟೆಕರ್ ಮಾಡಿದ್ದಾರೆ. ಕೊಂಕಣಿ ಭಾಷೆ ಪರವಾಗಿ ಬ್ಯಾಟ್ ಬೀಸಿರುವ ಅಸ್ನೋಟೆಕರ್, ಕಾರವಾರ ಭಾಗದಲ್ಲಿ ಕೊಂಕಣಿ ಭಾಷೆಯಲ್ಲಿ ಫಲಕಗಳನ್ನು ಹಾಕೋದ್ರಲ್ಲಿ ಯಾವುದೇ ತಪ್ಪಿಲ್ಲ. ನಮ್ಮ ಬೆಂಬಲ ಯಾವತ್ತೂ ಕೊಂಕಣಿಗೆ ಎಂದು ಮತ್ತೆ ಭಾಷಾ ವಿವಾದಕ್ಕೆ ಕಿಡಿ ಹಚ್ಚಿದ್ದಾರೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕನ್ನಡಪರ ಸಂಘಟನೆಯ ಮುಖಂಡರು ಕರ್ನಾಟಕದಲ್ಲಿ ಕನ್ನಡ ಭಾಷೆನೇ ಮುಖ್ಯ ಎಂದು ಆಸ್ನೋಟೆಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ. 

Latest Videos

undefined

ಹೌದು! ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಕಳೆದ ನಾಲ್ಕು ತಿಂಗಳ ಹಿಂದೆ ಕಾರವಾರ ನಗರ ಸಭೆ ಮಾಡಿದ ಎಡವಟ್ಟಿನಿಂದ ಭಾಷಾ ವಿವಾದದ ಕಿಚ್ಚು ಹಬ್ಬಿತ್ತು. ನಗರ ಸಭೆಯು ನಗರದ ಪ್ರಮುಖ ಫಲಕಗಳಿಗೆ ದೇವನಾಗರಿ ಲಿಪಿಯಲ್ಲಿ ಕೊಂಕಣಿ ಭಾಷೆಯನ್ನು ಬಳಸಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿತ್ತು. ಆ ಸಂದರ್ಭದಲ್ಲಿ ಕನ್ನಡ ಪರ ಹೋರಾಟಗಾರರು ದೇವನಾಗರಿ ಲಿಪಿಯುಳ್ಳ ಕೊಂಕಣಿ ಭಾಷೆ ಬೋರ್ಡ್‌ಗಳಿಗೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಕನ್ನಡಿಗರ ಒತ್ತಡಕ್ಕೆ ಮಣಿದ ಜಿಲ್ಲಾಡಳಿತ ಮತ್ತು ನಗರ ಸಭೆ ಕೊಂಕಣಿ ಭಾಷೆ ಬೋರ್ಡ್‌ಗಳಿಗೆ ಬಣ್ಣ ಬಳೆಯುವ ಮೂಲಕ ವಿವಾದಕ್ಕೆ ತೆರೆ ಎಳೆದಿತ್ತು.  

ಕಾರವಾರದಲ್ಲಿ ಕೊಂಕಣಿ ಬರೆಯುವುದು ತಪ್ಪಲ್ಲ: ಭಾಷಾ ವಿವಾದದ ಬೆಂಕಿಗೆ ತುಪ್ಪ ಸುರಿದ ಆಸ್ನೋಟಿಕರ್

ಆದರೆ, ಆಗ ಸುಮ್ಮನಿದ್ದ ಮಾಜಿ ಸಚಿವ ಆನಂದ ಅಸ್ನೋಟೆಕರ್ ಚುನಾವಣೆ ಹತ್ತಿರವಾಗುತ್ತಿದ್ದಂತೇ ಮತ್ತೆ ಭಾಷಾ ವಿವಾದದ ಕಿಡಿ ಹಚ್ಚಿದ್ದಾರೆ. ಗಡಿ ಜಿಲ್ಲೆ ಕಾರವಾರದಲ್ಲಿ ಕೊಂಕಣಿ ಭಾಷೆಯಲ್ಲಿ ಬೋರ್ಡ್ ಬಳಕೆ ಮಾಡಿದ್ರೆ ಏನೂ ತಪ್ಪಿಲ್ಲ. ನಾವು ಕೊಂಕಣಿ ಭಾಷಿಗರು, ಸಂವಿಧಾನದಲ್ಲಿ ಇದಕ್ಕೆ ಅವಕಾಶವಿದೆ. ಉತ್ತರಕನ್ನಡ ಜಿಲ್ಲೆಗೆ ಸರ್ಕಾರದಿಂದ ನಿರಂತರವಾಗಿ ಅನ್ಯಾಯವಾಗುತ್ತಿದೆ. ಸರ್ಕಾರ ನಮ್ಮ ಮೇಲೆ ಯಾವಾಗ ಕಣ್ಣು ತೆರೆಯುತ್ತದೆ ಎಂದು ನೋಡಿತ್ತಿದ್ದೇವೆ. ನಮ್ಮ ಬೆಂಬಲ ಯಾವತ್ತಿಗೂ ಕೊಂಕಣಿಗೆ ಎಂದು ಹೇಳಿಕೆ ನೀಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 

ಇನ್ನು ಗಡಿ ಭಾಗವಾದ ಕಾರವಾರದ ಮೇಲೆ ನಿರಂತರವಾಗಿ ಪಕ್ಕದ ರಾಜ್ಯಗಳಾದ ಗೋವಾ ಹಾಗೂ ಮಹಾರಾಷ್ಟ್ರ ಪ್ರಭಾವ ಬೀರುತ್ತಲೆ ಇದೆ. ಈ ಕಾರಣದಿಂದ ಕನ್ನಡ ಪರ ಸಂಘಟನೆಗಳು ಆಸ್ನೋಟಿಕರ್ ಹೇಳಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗೌರವ ಸ್ಥಾನದಲ್ಲಿರುವ, ಮಾಜಿ ಸಚಿವ ಆನಂದ ಅಸ್ನೋಟೆಕರ್ ಭಾಷಾ ವಿವಾದಕ್ಕೆ ಕಿಡಿ ಹಚ್ಚಿದ್ದು ಸೂಕ್ತವಲ್ಲ. ಚುನಾವಣೆ ಹತ್ತಿರವಾಗುತ್ತಿದಂತೇ ಅಂಕೋಲಾ ಮತ್ತು ಕಾರವಾರ ಭಾಗದಲ್ಲಿ ಕೊಂಕಣಿ ಭಾಷಿಗರ ಸಂಖ್ಯೆ ಹೆಚ್ಚಿದೆ ಎಂದು ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಹೀಗೆ ಭಾಷೆ ಭಾಷೆಗಳ ಮಧ್ಯ ತಂದಿಕ್ಕುವ ಕೆಲಸ ಮಾಡಬಾರದು. ಇಲ್ಲಿ ಕನ್ನಡಿಗರು ಮತ್ತು ಕೊಂಕಣಿ ಭಾಷಿಗರು ಬಹಳ ಅನ್ಯೋನ್ಯತೆಯಿಂದ ಇದ್ದಾರೆ. ಇಬ್ಬರ ನಡುವೆ ಹುಳಿ ಹಿಂಡುವ ಕೆಲಸ ಮಾಡಬಾರದು. 

Uttara Kannada: ಶೇ.40 ಕಮಿಷನ್ ಆರೋಪ, ಆನಂದ ಆಸ್ನೋಟಿಕರ್ ಸವಾಲು

ಈ ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಕನ್ನಡ ಪರ ಸಂಘಟನೆಗಳು ಒತ್ತಾಯ ಮಾಡಿವೆ. ಅಲ್ಲದೇ, ಮುಂದಿನ ದಿನಗಳಲ್ಲಿ ಹೀಗೆ ಮುಂದುವರೆದಲ್ಲಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಒಟ್ಟಿನಲ್ಲಿ ರಾಜಕೀಯ ಲಾಭಕ್ಕಾಗಿ ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಮತ್ತೆ ಭಾಷಾ ವಿವಾದ ಎಬ್ಬಿಸಲು ಪ್ರಯತ್ನಿಸಿದ್ದು, ಇದು ಜಿಲ್ಲೆಯಲ್ಲಿ ಮತ್ತೆ ಅಶಾಂತಿ ಮೂಡಿಸಲು ಕಾರಣವಾಗಬಹುದು. ಈ ಕಾರಣದಿಂದ ಇದನ್ನು ರಾಜಕೀಯ ಪ್ರೇರಿತ ಎಂದು ಪರಿಗಣಿಸಿ ಕೊಂಕಣಿ ಹಾಗೂ ಕನ್ನಡ ಪರ ಸಂಘಟನೆಗಳು ಈ ವಿಚಾರವನ್ನು ಬಿಟ್ಟು ಬಿಡದಿದ್ದಲ್ಲಿ ಸ್ವಲ್ಪ ಸ್ವಲ್ಪವೇ ತುಪ್ಪ ಬಿದ್ದು ಕಾರವಾರದಲ್ಲಿ ಭಾಷಾ ವಿವಾದದ ಜ್ವಾಲೆ ಏಳುವುದರಲ್ಲಿ ಎರಡು ಮಾತಿಲ್ಲ. 

click me!