ಭಯವೇ ಬೇಡ ಎಂದ್ರು ಕೊರೋನಾ ಪೀಡಿತರ ಜೊತೆಗೆ ಇದ್ದ ಕಾರವಾರದ ಅಭಿಷೇಕ್

By Kannadaprabha News  |  First Published Mar 15, 2020, 11:40 AM IST

ಕೊರೋನಾ ಹಡಗು ಎಂದೇ ಕರೆಸಿಕೊಂಡಿದ್ದ ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿ ಇದ್ದ ದಿನಗಳ ಬಗ್ಗೆ ಕಾರವಾರದ ಅಭಿಷೇಕ್ ತಮ್ಮ ಅನುಭವ ಬಿಚ್ಚಿಟ್ಟಿದ್ದಾರೆ.


ಕಾರವಾರ [ಮಾ.15]:  ಕರೋನಾ ಹಡಗು ಎಂದೆ ಕರೆಯಲಾದ ಡೈಮಂಡ್‌ ಪ್ರಿನ್ಸೆಸ್‌ ಹಡಗಿನಲ್ಲಿ 18 ದಿನಗಳ ಕಾಲ ಆತಂಕದಲ್ಲಿ ಕಳೆದು, ಪಾಲಕರಲ್ಲೂ ತಳಮಳ ಹುಟ್ಟಿಸಿದ್ದ ಅಭಿಷೇಕ್‌ ಶುಕ್ರವಾರ ರಾತ್ರಿ ಕಾರವಾರದ ತಮ್ಮ ಮನೆಗೆ ಬಂದಾಗ ಪೋಷಕರು ಹರ್ಷ ವ್ಯಕ್ತಪಡಿಸಿದರು. ಅಭಿಷೇಕ್‌ ಮತ್ತೆ ಹಡಗಿನಲ್ಲಿ ಉದ್ಯೋಗ ಮುಂದುವರಿಸಲು ತೆರಳುವುದಾಗಿ ತಿಳಿಸಿದ್ದಾರೆ.

ಅಭಿಷೇಕ್‌ ಮನೆಯಂಗಳದಲ್ಲಿ ಕಾಲಿಡುತ್ತಿದ್ದಂತೆ ತಂದೆ ಬಾಲಕೃಷ್ಣ ಹಾಗೂ ತಾಯಿ ಮಗನನ್ನು ತಬ್ಬಿ ಖುಷಿಪಟ್ಟರು. ಹಡಗಿನಲ್ಲಿ ನಡೆದ ವಿದ್ಯಮಾನಗಳು, ನಂತರ ಗುರಗಾಂವ ಮಿಲಿಟರಿ ಕ್ಯಾಂಪಿನಲ್ಲಿ ಕಳೆದ 15 ದಿನಗಳ ಬಗ್ಗೆ ಅಭಿಷೇಕ್‌ ವಿವರಿಸಿದರು. ಕೊರೋನಾ ಪೀಡಿತ ಹಡಗಿನಲ್ಲಿ ತಾವು ಇರುವುದು ಕುಟುಂಬದವರು ಸೇರಿದಂತೆ ಆಪ್ತರು, ಮಿತ್ರರಿಗೂ ಆತಂಕ ಉಂಟಾಗಿತ್ತು. ತಮಗೆ ಯಾವಾಗ ಭಾರತಕ್ಕೆ, ಕಾರವಾರಕ್ಕೆ ಮರಳುತ್ತೇನೆ ಎನ್ನುವುದೂ ತಿಳಿದಿರಲಿಲ್ಲ. ಇದ್ದುದರಲ್ಲಿ ತಮ್ಮ ತಂದೆ-ತಾಯಿ ಅವರೊಂದಿಗೆ ಸಂಪರ್ಕ ವ್ಯವಸ್ಥೆ ಇದ್ದುದೆ ಸಮಾಧಾನಕರ ಸಂಗತಿಯಾಗಿತ್ತು ಎಂದು ಅಭಿಷೇಕ್‌ ಹೇಳಿದರು.

Tap to resize

Latest Videos

ತಾಪಮಾನಕ್ಕೂ, ಕೊರೋನಾ ವೈರಸ್ ಹೆಚ್ಚಳಕ್ಕೂ ಸಂಬಂಧವಿದೆಯಾ?...

ಅಭಿಷೇಕ್‌ ಫೆ. 7ರಂದು ಹಾಂಗ್‌ಕಾಂಗ್‌ನಿಂದ ಡೈಮಂಡ್‌ ಪ್ರಿನ್ಸ್‌ ಹಡಗಿನಲ್ಲಿ ಜಪಾನನತ್ತ ಹೊರಟಿದ್ದರು. 3 ಸಾವಿರದಷ್ಟುಜನರು ಪ್ರಯಾಣಿಸುತ್ತಿದ್ದ ಹಡಗಿನ ನೂರಾರು ಪ್ರಯಾಣಿಕರಿಗೆ ಕೊರೋನಾ ಸೋಂಕು ತಗುಲಿತ್ತು. ಹಡಗನ್ನು ಯಾಕೋಹಾಮಾ ಬಂದರು ಬಳಿ ತಡೆಹಿಡಿಯಲಾಗಿತ್ತು. ನಂತರ ಫೆ. 26ರಂದು ಅಭಿಷೇಕ್‌ ಗುರಗಾಂವಗೆ ಬಂದರೂ ಊರಿಗೆ ಬರಲಾಗದೆ ಅಲ್ಲೇ ಮಿಲಿಟರಿ ಕ್ಯಾಂಪಿನಲ್ಲಿ ಇರುವಂತಾಯಿತು. ಅವರ ಆರೋಗ್ಯದ ಬಗ್ಗೆ ನಿಗಾ ವಹಿಸಲಾಗಿತ್ತು. 

ಅನಾಥಪ್ರಜ್ಞೆ ಕಾಡಲಿಲ್ಲ

ಗುರಗಾಂವ್‌ನ ಮಿಲಿಟರಿ ಕ್ಯಾಂಪಿನಲ್ಲಿ 15 ದಿನ ಇದ್ದ ಸಂದರ್ಭದಲ್ಲಿ ಯಾವುದೇ ರೀತಿಯ ತೊಂದರೆ, ಸಮಸ್ಯೆ ಎದುರಾಗಲಿಲ್ಲ. ಅನಾಥ ಪ್ರಜ್ಞೆಯೂ ಕಾಡಲಿಲ್ಲ, ಎಲ್ಲವೂ ಸಹಜವಾಗಿಯೇ ಇತ್ತೆಂದು ಅಭಿಷೇಕ   ತಿಳಿಸಿದರು.

ಹಡಗಿನಲ್ಲಿದ್ದ ಒಟ್ಟು 137 ಉದ್ಯೋಗಿಗಳನ್ನು ಕರೆತಂದು ಮಿಲಿಟರಿ ಕ್ಯಾಂಪಿನಲ್ಲಿ ಇಡಲಾಯಿತು. 3-4 ಜನರಿಗೆ ಒಂದೊಂದು ರೂಮ್‌ ನೀಡಲಾಗಿತ್ತು. ಅವರು ಕುಟುಂಬದವರು, ಆಪ್ತರೊಂದಿಗೆ ದೂರವಾಣಿಯಲ್ಲಿ ಪ್ರತಿ ದಿನ ಸಂಪರ್ಕ ಮಾಡಬಹುದಾಗಿತ್ತು. ಪ್ರತಿ ದಿನ ವೈದ್ಯರು ಬಂದು ತಪಾಸಣೆ ನಡೆಸುತ್ತಿದ್ದರು. ಊಟಕ್ಕೆ ಮಿಲಿಟರಿ ಮೆಸ್‌ಗೆ ತೆರಳುತ್ತಿದ್ದರು. ಮಿಲಿಟರಿ ಕ್ಯಾಂಪಿನ ತುಂಬ ಓಡಾಡಬಹುದಿತ್ತು. ಯಾವುದೇ ರೀತಿಯ ಮಾನಸಿಕ ಯಾತನೆ, ತೊಂದರೆ ಎದುರಾಗಲಿಲ್ಲ ಎಂದರು.

ಎಲ್ಲ 137 ಜನರೂ ಒಟ್ಟಿಗೆ ಕುಳಿತು ಮಾತನಾಡಲು, ತಿರುಗಾಡಲು ಅವಕಾಶ ಕಲ್ಪಿಸಲಾಗಿತ್ತು. ಮಿಲಿಟರಿ ಕ್ಯಾಂಪಿನಲ್ಲಿ ಇರುವಷ್ಟುದಿನ ಯಾವುದೆ ಮಾನಸಿಕ ಯಾತನೆಯಾಗಲಿ, ಸಂಕಟವಾಗಲಿ ಉಂಟಾಗಲಿಲ್ಲ. ಅಲ್ಲಿ ಎಲ್ಲ ವ್ಯವಸ್ಥೆಯೂ ಇದ್ದುದರಿಂದ ಯಾವುದೆ ತೊಂದರೆ ಉಂಟಾಗಲಿಲ್ಲ. ಕೊರೋನಾ ಸೋಂಕು ತಗುಲಿಲ್ಲ ಎಂದು ಪರೀಕ್ಷೆ ನಡೆಸಿ, 15 ದಿನಗಳ ಕಾಲ ನಿಗಾ ವಹಿಸಿ ಅಂತಿಮವಾಗಿ ಕಾರವಾರಕ್ಕೆ ತೆರಳಲು ಹಸಿರು ನಿಶಾನೆ ದೊರೆಯಿತು.

ಜಪಾನ್‌ನಿಂದ ಅಭಿಷೇಕ್‌ ಅವರನ್ನು ನೇರವಾಗಿ ಕರೆತಂದಿದ್ದು ಗುರಗಾಂವನ ಮಿಲಿಟರಿ ಕ್ಯಾಂಪ್‌ಗೆ. 15 ದಿನಗಳ ಕಾಲ ಮಿಲಿಟರಿ ಕ್ಯಾಂಪಿನಲ್ಲಿ ಅಭಿಷೇಕ್‌ ಅವರನ್ನು ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿತ್ತು.

  ಕೊರೋನಾ ಬಗ್ಗೆ ಯಾವುದೆ ಭೀತಿ ಬೇಡ. ನಾನು ಕೊರೋನಾ ಪೀಡಿತರ ಹಡಗಿನಲ್ಲೇ ಸುಮಾರು ತಿಂಗಳ ಕಾಲ ಇದ್ದೆ. ನನಗೆ ಕೊರೋನಾ ಸೋಂಕು ತಗುಲಿಲ್ಲ. ಆದರೆ, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಮತ್ತೆ 2-3 ತಿಂಗಳಲ್ಲಿ ವಿದೇಶಕ್ಕೆ ಉದ್ಯೋಗಕ್ಕೆ ತೆರಳುತ್ತೇನೆ.

ಅಭಿಷೇಕ್‌ ಮಗರ್‌.. ಡೈಮಂಡ್‌ ಪ್ರಿನ್ಸೆಸ್‌ ಹಡಗಿನಿಂದ ಮನೆಗೆ ಮರಳಿದವರು.

click me!