* ತಂದೆಯ ಮೂರ್ತಿ ಪ್ರತಿಷ್ಠಾಪಿಸಿದ ಮಗ, ಪ್ರತಿನಿತ್ಯ ಪೂಜೆ
* ತಂದೆಯ ಮೂರ್ತಿ ಮಾಡಿ ಪ್ರತಿನಿತ್ಯ ಪೂಜೆ
* ಕೊಪ್ಪಳದಲ್ಲಿ ತಂದೆಗೆ ತಕ್ಕ ಮಗ
ಕೊಪ್ಪಳ, (ಜೂನ್. 12): ಇತ್ತೀಚಿನ ದಿನಗಳಲ್ಲಿ ತಂದೆ, ತಾಯಿಗಳನ್ನು ವೃದ್ಧಾಶ್ರಮಕ್ಕೆ ಸೇರಿಸುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಇಂತಹ ವೇಳೆಯಲ್ಲಿ ಇಲ್ಲೊಂದು ಗ್ರಾಮದಲ್ಲಿ ಮಕ್ಕಳು ತಂದೆ ಇರುವವರೆಗೂ ಜೋಪಾನ ಮಾಡಿ,ಅವರ ನಿಧನದ ಬಳಿಕ ಇದೀಗ ತಂದೆಯ ಮೂರ್ತಿ ಮಾಡಿ ಪ್ರತಿನಿತ್ಯ ಪೂಜೆ ಮಾಡುತ್ತಿದ್ದಾರೆ.ಅಷ್ಟಕ್ಕೂ ಎಲ್ಲಿ ಇಂತಹದ್ದೊಂದು ಅಪರೂಪದ ತಂದೆಯ ಮೂರ್ತಿ ಇರುವುದು ಅಂತೀರಾ? ಹಾಗಾದ್ರೆ ಈ ರಿಪೋರ್ಟ್ ನೋಡಿ.
ತಂದೆಯ ಮೂರ್ತಿ ಪ್ರತಿಷ್ಠಾಪಿಸಿದ್ದು ಎಲ್ಲಿ?
ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮ ಅಂದರೆ ಸಾಕು ಎಲ್ಲರಿಗೂ ತಟ್ಟನೇ ನೆನಪಿಗೆ ಬರುವುದು ಕುರಿ ಸಂತೆ. ಇಡೀ ಕರ್ನಾಟಕದಲ್ಲಿಯೇ ಕೂಕನಪಳ್ಳಿ ಗ್ರಾಮದಲ್ಲಿ ಜರುಗುವ ಕುರಿ ಸಂತೆ ಭಾರೀ ಫೇಮಸ್. ಇಂತಹ ಗ್ರಾಮ ಇದೀಗ ಮತ್ತೊಂದು ವಿಷಯಕ್ಕೆ ಭಾರೀ ಫೇಮಸ್ ಆಗುತ್ತಿದೆ. ಈ ಬಾರಿ ಕೂಕನಪಳ್ಳಿ ಗ್ರಾಮ ಫೇಮಸ್ ಆಗಿರುವುದು ಮಕ್ಕಳು ತಮ್ಮ ತಂದೆಯ ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದರಿಂದ.
ಹೌದು ತಮ್ಮ ತಂದೆಯ ಸವಿನೆನಪಿಗಾಗಿ ಅವರ ಮೂರ್ತಿಯನ್ನು ಜಮೀನಿನಲ್ಲಿ ಚಿಕ್ಕದೊಂದು ದೇವಾಲಯ ಮಾಡುವ ಮೂಲಕ ಅದರಲ್ಲಿ ಪ್ರತಿಷ್ಠಾಪಿಸಿದ್ದಾರೆ.
Yadgir: ತಾಯಿಗಾಗಿ ದೇವಸ್ಥಾನ ಕಟ್ಟಿದ ಶಾಸಕ ರಾಜೂಗೌಡ: ಅಮೃತ ಶಿಲೆಯಿಂದ ನಿರ್ಮಾಣ
ಇನ್ನು ಕೂಕನಪಳ್ಳಿ ಗ್ರಾಮದಲ್ಲಿ ಪೂಜಾರ್ ಮನೆತನ ಅಂದರೆ ಬಹಳಷ್ಟು ಪ್ರಖ್ಯಾತಿ ಪಡೆದ ಮನೆತನವಾಗಿದೆ.ಇಂತಹ ಮನೆತನದ ಹಿರಿಯರಾದ ತಿಮ್ಮಣ್ಣ ಪೂಜಾರ್ ಅವರು ಅನಾರೋಗ್ಯದ ಹಿನ್ನಲೆಯಲ್ಲಿ20-05-2005 ರಂದು ನಿಧನರಾದರು.ಈ ಹಿನ್ನಲೆಯಲ್ಲಿ ಅಬರ ತಂದೆಯ ಗೌರವಾರ್ಥವಾಗಿ ಅವರ ಮಕ್ಕಳಾದ ಕೃಷ್ಣಪ್ಪ ಪೂಜಾರ್, ಬೆಟ್ಟದಪ್ಪ ಪೂಜಾರ್,ಹನುಮಂತಪ್ಪ ಪೂಜಾರ್, ನಾಗರಾಜ ಪೂಜಾರ್ ಸೇರಿಕೊಂಡು ಅವರ ತಂದೆಯವರ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ.
ದ್ಯಾಮವ್ವ ದೇವಿಯ ಪೂಜಾರಿಯಾಗಿದ್ದ ತಿಮ್ಮಣ್ಣ
ತಿಮ್ಮಣ್ಣ ಪೂಜಾರ್ ಬದುಕಿದ್ದ ವೇಳೆಯಲ್ಲಿ ಗ್ರಾಮದ ದ್ಯಾಮವ್ವ ದೇವಿಯ ಪೂಜೆ ಮಾಡಿತ್ತಿದ್ದರಂತೆ.ಹೀಗಾಗಿ ಗ್ರಾಮಸ್ಥರೆಲ್ಲರೂ ಇವರನ್ನು ಪೂಜ್ಯನೀಯ ಭಾವನೆಯಿಂದ ನೋಡುತ್ತಿದ್ದರು. ತಿಮ್ಮಣ್ಣ ಪೂಜಾರ್ 20-05-2005 ರಂದು ನಿಧನರಾದಾಗ ಅವರ ಆಸೆಯಂತೆ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ತಮ್ಮದೇ ಜಮೀನಿನಲ್ಲಿ ಸಮಾಧಿ ಮಾಡಲಾಯಿತು. ಇದಾದ ಬಳಿಕ ಮಕ್ಕಳೆಲ್ಲರೂ ಸೇರಿ ಅವರ ತಂದೆಯವರ ಮೂರ್ತಿ ಮಾಡಲು ನಿಶ್ಚಯಿಸುತ್ತಾರೆ. ಅದರಂತೆ 2 ಲಕ್ಷ ರೂಪಾಯಿ ವೆಚ್ಚದಲ್ಲಿ ತಿಮ್ಮಣ್ಣ ಪೂಜಾರ್ ಅವರ ಮೂರ್ತಿಯನ್ನು ತಯಾರು ಮಾಡಿಸಿ, ಕಳೆದ ತಿಂಗಳು 16-05-2022 ರಂದು ಚಿಕ್ಕದೊಂದು ದೇವಾಲಯ ನಿರ್ಮಿಸಿ ಅದರೊಳಗೆ ತಿಮ್ಮಣ್ಣ ಪೂಜಾರ್ ಅವರ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ.
ಪ್ರತಿನಿತ್ಯ ಮೂರ್ತಿಗೆ ಪೂಜೆ
ಇನ್ನು ಪ್ರತಿನಿತ್ಯ ತಿಮ್ಮಣ್ಣ ಪೂಜಾರ್ ಅವರ ಮೂರ್ತಿಗೆ ಮಕ್ಕಳು,ಮೊಮ್ಮಕ್ಕಳು ಪೂಜೆ ಸಲ್ಲಿಸಿಯೇ ಹೊರಗಡೆ ಕೆಲಸಕ್ಕೆ ಹೋಗುತ್ತಾರೆ. ಇನ್ನು ತಮ್ಮ ತಂದೆ ಅವರ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ತಿಮ್ಮಣ್ಣ ಪೂಜಾರ್ ಅವರ ಮಕ್ಕಳು ಇತರರಿಗೆ ಮಾದರಿಯಾಗಿದ್ದಾರೆ ಅಂತಾರೆ ಗ್ರಾಮಸ್ಥರು.
ಇನ್ನು ತಿಮ್ಮಣ್ಣ ಪೂಜಾರ್ ಅವರ ಮೂರ್ತಿಗೆ ಕೇವಲ ಮನೆಯವರಷ್ಟೇ ಅಲ್ಲ ಗ್ರಾಮಸ್ಥರೂ ಸಹ ಬಂದು ಪೂಜೆ ಸಲ್ಲಿಸುತ್ತಾರೆ. ಒಟ್ಟಿನಲ್ಲಿ ಹೆತ್ತ ತಂದೆ ತಾಯಿಗಳನ್ನು ವೃದ್ದಾಶ್ರಮಕ್ಕೆ ಸೇರಿಸುವ ಮಕ್ಕಳು ಇರುವಂತಹ ಈ ಕಾಲದಲ್ಲಿ ಹೆತ್ತ ತಂದೆಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಮಾಡುವ ಮಕ್ಕಳಿರುವುದು ನಿಜಕ್ಕೂ ಹೆಮ್ಮೆಯ ವಿಷಯವೇ ಸರಿ.