Dharwad News: ಸಾಮಾಜಿಕ ಅರಣ್ಯೀಕರಣ ಮಾಡುವಲ್ಲಿ ಹಿನ್ನಡೆ

By Kannadaprabha NewsFirst Published Oct 8, 2022, 9:39 AM IST
Highlights

 ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಹೆಚ್ಚಿಸಿ ಹಸಿರು ವಲಯವನ್ನು ಬೆಳೆಸುವುದಕ್ಕಾಗಿ ಕೆಲವು ವರ್ಷಗಳ ಹಿಂದೆ ಅರಣ್ಯ ಇಲಾಖೆ ಸಾಮಾಜಿಕ ಅರಣ್ಯೀಕರಣ ಯೋಜನೆ ಆರಂಭಿಸಿದ್ದರೂ ಈ ಯೋಜನೆಯ ಅನುಷ್ಠಾನ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ

ಬಸವರಾಜ ಹಿರೇಮಠ

 ಧಾರವಾಡ (ಅ.8) : ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಹೆಚ್ಚಿಸಿ ಹಸಿರು ವಲಯವನ್ನು ಬೆಳೆಸುವುದಕ್ಕಾಗಿ ಕೆಲವು ವರ್ಷಗಳ ಹಿಂದೆ ಅರಣ್ಯ ಇಲಾಖೆ ಸಾಮಾಜಿಕ ಅರಣ್ಯೀಕರಣ ಯೋಜನೆ ಆರಂಭಿಸಿದ್ದರೂ ಈ ಯೋಜನೆಯ ಅನುಷ್ಠಾನ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಸಂಬಂಧಪಟ್ಟವ್ಯಕ್ತಿಗಳಿಗೆ ಮತ್ತು ಸಂಸ್ಥೆಗಳಿಗೆ ಸರಿಯಾದ ಮಾಹಿತಿ ನೀಡದಿರುವುದು ಮತ್ತು ಅರಣ್ಯ ಇಲಾಖೆಯಿಂದ ಸರಿಯಾದ ಮಾರ್ಗದರ್ಶನ ಇಲ್ಲದಿರುವುದು ಈ ಯೋಜನೆಯ ಅನುಷ್ಠಾನ ಕುಂಠಿತವಾಗಲು ಪ್ರಮುಖ ಕಾರಣ ಎನ್ನಲಾಗುತ್ತಿದೆ.

Latest Videos

ಬಲ್ಲಾಳರಾಯನ ದುರ್ಗ: ಪ್ರವಾಸಿಗರಿಂದ ಹಣ ವಸೂಲಿ, ಕನಿಷ್ಟ ಮೂಲಭೂತ ಸೌಲಭ್ಯವೂ ಇಲ್ಲ!

ಅರಣ್ಯ ಇಲಾಖೆ ಪರಿಸರ ಅಸಮತೋಲನ ನಿವಾರಿಸಲು ಪ್ರತಿ ವರ್ಷ ಲಕ್ಷಾಂತರ ಸಸಿಗಳನ್ನು ನೆಡುವುದಾಗಿ ಹೇಳಿಕೊಳ್ಳುತ್ತಲೇ ಇದೆ. ಈ ಯೋಜನೆಯನ್ನು ಸಶಕ್ತಗೊಳಿಸಲು ಸರ್ಕಾರ ನರೇಗಾ ಜತೆಗೆ ಸಾಮಾಜಿಕ ಅರಣ್ಯೀಕರಣವನ್ನು ಸಮನ್ವಯಗೊಳಿಸಿದೆ. ಯೋಜನೆ ಅನ್ವಯ ಸರ್ಕಾರದ ಒಡೆತನದ ಬಯಲು ಜಾಗ, ಗೋಮಾಳ ಭೂಮಿ, ಶಾಲೆಗಳ ಆವರಣ, ಕೈಗಾರಿಕಾ ಪ್ರದೇಶ ಮತ್ತು ಹೊಲಗಳ ಬದುವುಗಳಲ್ಲಿ ಉರುವಲು, ಇತರೆ ಕಟ್ಟಿಗೆಯ ಮರಗಳನ್ನು ಬೆಳೆಸಬಹುದಾಗಿದೆ.

ಈ ಯೋಜನೆಯನ್ನು ಯಶಸ್ವಿಗೊಳಿಸುವಲ್ಲಿ ಸಕ್ರಿಯ ಪಾತ್ರ ವಹಿಸುವಂತೆ ರೈತರನ್ನು ಪ್ರೋತ್ಸಾಹಿಸಲು ರೈತರಿಗೆ ಮೂರು ವರ್ಷಗಳ ವರೆಗೆ ಗೌರವ ಧನ ನೀಡುವ ಕಾರ್ಯಕ್ರಮ ಸಹ ರೂಪಿಸಲಾಗಿದೆ. ಮೊದಲ ವರ್ಷ ಪ್ರತಿ ಗಿಡದ ನಿರ್ವಹಣೆಗೆ . 35, ಎರಡನೇ ವರ್ಷ . 40 ಹಾಗೂ ಮೂರನೇ ವರ್ಷ . 50 ನೀಡಲು ಅವಕಾಶವಿದೆ. ರೈತರು ಒಂದು ಹೆಕ್ಟೇರ್‌ ಭೂಮಿಯಲ್ಲಿ 400 ಗಿಡಗಳನ್ನು ಬೆಳೆಸಲು ಅವಕಾಶವಿದೆ.

6.13 ಲಕ್ಷ ಸಸಿಗಳಿವೆ:

ಮಲಬಾರ, ಬೇವಿನ ಗಿಡ, ಬಿದಿರು, ಮಹಾಗನಿ, ಗಂಧದ ಮರಗಳಿಗೆ ಹೆಚ್ಚಿನ ಬೇಡಿಕೆ ಇದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಇಲಾಖೆ ಬಳಿ 6.13 ಲಕ್ಷ ಸಸಿಗಳಿದ್ದು, ರೈತರು ಅವುಗಳನ್ನು ಒಯ್ಯುವುದಕ್ಕಾಗಿ ಇಲಾಖೆ ಕಾಯುತ್ತಿದೆ. ರೇಷ್ಮೆ ಬೆಳೆಗಾರರನ್ನು ಉತ್ತೇಜಿಸಲು 1.5 ಲಕ್ಷ ಹಿಪುತ್ರ್ಪ ನೇರಳೆ ಸಸಿಗಳನ್ನು ಸಿದ್ಧಗೊಳಿಸಲಾಗಿದೆ. ರೈತರು ಈ ಯೋಜನೆಯಲ್ಲಿ ಪಾಲ್ಗೊಳ್ಳಲು ಆಸಕ್ತಿ ತೋರುತ್ತಿಲ್ಲ ಎಂಬ ದೂರು ಇಲಾಖೆಯ ಅಧಿಕಾರಿಗಳದ್ದಾದರೆ, ತಮಗೆ ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಎಂಬುದು ರೈತರ ಹೇಳಿಕೆ. ಜಿಲ್ಲೆಯಲ್ಲಿ 144 ಗ್ರಾಮ ಪಂಚಾಯ್ತಿಗಳಿದ್ದು, ಪ್ರತಿ ಪಂಚಾಯ್ತಿಗೆ ಭೇಟಿ ನೀಡಿ, ರೈತರಿಗೆ ಮಾಹಿತಿ ಮತ್ತು ಉತ್ತೇಜನ ನೀಡಲು ಅರಣ್ಯ ಇಲಾಖೆ ಬಳಿ ಸಿಬ್ಬಂದಿ ಕೊರತೆ ಇದೆ. ಜತೆಗೆ ರೈತರು ಗಿಡಗಳನ್ನು ಪೂರ್ಣ ಬೆಳೆಸಲು ಆಸಕ್ತಿ ತೋರದೇ ಅರ್ಧದಲ್ಲಿಯೇ ಅವುಗಳನ್ನು ಕಡಿಯುತ್ತಿದ್ದಾರೆ ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ಹೇಳಿಕೆ.

ಸಂಪರ್ಕ ಮಾಡಿ:

ತಮಗೆ ಪೂರ್ಣ ಬೆಳೆದ ಗಿಡಗಳನ್ನು ಕಾನೂನು ಬದ್ಧವಾಗಿ ಮಾರಾಟ ಮಾಡಲು ಸೂಕ್ತ ವ್ಯವಸ್ಥೆ ಇಲ್ಲ. ತಮ್ಮನ್ನು ಕಟ್ಟಿಗೆ ವ್ಯಾಪಾರಿಗಳ ಜತೆಗೆ ಸಂಪರ್ಕ ಮಾಡಿಸಿ ಇಬ್ಬರ ಮಧ್ಯೆ ಮಾರಾಟದ ಒಪ್ಪಂದ ಮಾಡಲು ವ್ಯವಸ್ಥೆ ಕಲ್ಪಿಸಬೇಕು ಎಂಬುದು ಅಂಬ್ಲಿಕೊಪ್ಪದ ರೈತ ಈರಣ್ಣ ಹಿರೇಮಠ ಅವರದ್ದು.

ಇಷ್ಟೆಲ್ಲ ತೊಂದರೆ ಮಧ್ಯೆಯೂ ಈ ಯೋಜನೆ ಜಿಲ್ಲೆಯ ನವಲಗುಂದ ಮತ್ತು ಕಲಘಟಗಿ ತಾಲೂಕುಗಳಲ್ಲಿ ಯಶಸ್ವಿ ಕಂಡಿದೆ. ಈ ವರ್ಷ ರೈತರು ತಮ್ಮ ಹೊಲಗಳಲ್ಲಿ ಸಸಿ ನೆಡವುದಕ್ಕಾಗಿ 25 ಸಾವಿರ ಮಲಬಾರ, ಬೇವು ಮತ್ತು ಮಹಾಗನಿ ಸಸಿಗಳನ್ನು ಒಯ್ದಿದ್ದಾರೆ. ತಿರ್ಲಾಪೂರ ಮತ್ತು ಬ್ಯಾಹಟ್ಟಿನಡುವೆ ಮೂರು ಕಿ.ಮೀ. ಅಂತರದಲ್ಲಿ ಈ ಸಸಿಗಳನ್ನು ನೆಡಲಾಗಿದೆ. ಇದೇ ರೀತಿ ಯಮನೂರು ಮತ್ತು ಬೆಣ್ಣಿಹಳ್ಳದ ನಡುವೆ ಸಸಿಗಳನ್ನು ನೆಡಲಾಗಿದೆ. ಕಲಘಟಗಿ ತಾಲೂಕಿನಲ್ಲಿ ಕಳೆದ ಐದು ವರ್ಷಗಳಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡುತ್ತಾರೆ.

ಅನಗವಾಡಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಪ್ರತ್ಯಕ್ಷದರ್ಶಿಗಳು

ಧಾರವಾಡ, ಕಲಘಟಗಿ ಹಾಗೂ ಇತರೆ ಕಡೆಗಳಲ್ಲಿ ರೈತರು ತಮ್ಮ ಹೊಲಗಳ ಬದುವುಗಳಲ್ಲಿ ಈ ಯೋಜನೆ ಅಡಿ ಸಸಿಗಳನ್ನು ನೆಟ್ಟು ಅವುಗಳಿಂದ ಪರಿಸರದ ಜತೆಗೆ ತಾವು ಸಹ ಲಾಭ ಪಡೆದಿದ್ದಾರೆ. ಇತ್ತೀಚಿನ ವರ್ಷಗಳಲ್ಲೂ ಸಾಕಷ್ಟುಮಳೆ ಸಹ ಆಗುತ್ತಿದೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಯೋಜನೆ ರೈತರನ್ನು ಹಾಗೂ ಫಲಾನುಭವಿ ಮುಟ್ಟುತ್ತಿಲ್ಲ ಎಂಬ ಕೊರಗಿದೆ. ಅರಣ್ಯ ಇಲಾಖೆ ಸಾಮಾಜಿಕವಾಗಿ ಕೆಲಸ ಮಾಡಿದಾಗ ಮಾತ್ರ ಇಂತಹ ಯೋಜನೆ ಯಶಸ್ವಿಯಾಗಲಿವೆ. ಬರೀ ಸಸಿ ನೆಡುವುದು ಮಾತ್ರವಲ್ಲದೇ ನಿರ್ವಹಣೆ ಸಹ ಆಗುವಂತೆ ಇಲಾಖೆ ಅಧಿಕಾರಿಗಳು ನೋಡಬೇಕಿದೆ.

ಡಾ. ಪ್ರಕಾಶ ಭಟ್‌, ಪರಿಸರವಾದಿಗಳು

click me!