Gadag: ಜಲಸಂಕಷ್ಟಕ್ಕೆ ಮುಕ್ತಿ; ಬರೋಬ್ಬರಿ ₹115 ಕೋಟಿ ವೆಚ್ಚದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಮಹಾ ಯೋಜನೆ

Published : Feb 18, 2026, 09:06 AM IST
Lake

ಸಾರಾಂಶ

ರೋಣ ಮತ್ತು ಗಜೇಂದ್ರಗಡ ತಾಲೂಕಿನ ಎಲ್ಲಾ ಕುಡಿಯುವ ನೀರಿನ ಕೆರೆಗಳಿಗೆ ನೀರು ತುಂಬಿಸಲು ₹115 ಕೋಟಿ ವೆಚ್ಚದ ಯೋಜನೆಗೆ ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಶಾಸಕ ಜಿ.ಎಸ್. ಪಾಟೀಲ ತಿಳಿಸಿದ್ದಾರೆ. ಯೋಜನೆಯಿಂದ ಬೇಸಿಗೆಯ ನೀರಿನ ಸಮಸ್ಯೆ ನಿವಾರಣೆಯಾಗಲಿದೆ ಎಂದರು.

ಗದಗ: ರೋಣ ಮತ್ತು ಗಜೇಂದ್ರಗಡ ತಾಲೂಕಿನಲ್ಲಿರುವ ಜನ ಮತ್ತು ಜಾನುವಾರುಗಳಿಗಾಗಿ ಇರುವ ಪ್ರತಿಯೊಂದು ಕುಡಿಯುವ ನೀರಿನ ಕೆರೆಗಳನ್ನು ₹115 ಕೋಟಿ ವೆಚ್ಚದಲ್ಲಿ ನೀರು ಪೂರೈಸುವ ಯೋಜನೆ ಕ್ರಿಯಾಯೋಜನೆ ಸಿದ್ಧಪಡಿಸಿ ಮಂಜೂರಾತಿಗೆ‌ ಸರ್ಕಾರಕ್ಕೆ ಕಳುಹಿಸಲಾಗಿದ್ದು, ಶೀಘ್ರ ಅನುಮೋದನೆ ದೊರೆಯಲಿದೆ ಎಂದು ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ‌ ತಿಳಿಸಿದರು.

ಸೋಮವಾರ ತಾಲೂಕಿನ ಹೊಸಳ್ಳಿ ಗ್ರಾಮದ ಗ್ರಾಪಂ ಆವರಣದಲ್ಲಿ ಜಿಪಂ, ತಾಪಂ,‌ ಗ್ರಾಪಂ ಹೊಸಳ್ಳಿ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಿಸಿ ರಸ್ತೆ ಮತ್ತು ಕೆರೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

25ಕ್ಕೂ ಹೆಚ್ಚು ದೊಡ್ಡ ದೊಡ್ಡ ಕೆರೆಗಳಿಗೆ ನೀರು

ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗದಂತೆ ಈಗಾಗಲೆ 25ಕ್ಕೂ ಹೆಚ್ಚು ದೊಡ್ಡ ದೊಡ್ಡ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಜತೆಗೆ ಇನ್ನೂ ಅನೇಕ ಕೆರೆಗಳು ನೀರಿನ ಮೂಲವಿಲ್ಲದೇ ದುಸ್ಥಿತಿಯಲ್ಲಿದ್ದು, ಅವುಗಳನ್ನು ಗುರುತಿಸಿ, ಆ ಎಲ್ಲ ಕೆರೆಗಳಿಗೂ ₹115 ಕೋಟಿ ವೆಚ್ಚದಲ್ಲಿ ನೀರು ತುಂಬಿಸುವ ಮಹತ್ವಪೂರ್ಣ ಯೋಜನೆ ಹಮ್ಮಿಕೊಳ್ಳಲಾಗಿದೆ. ಸರ್ಕಾರದಿಂದ ಶೀಘ್ರ ಅನುಮೋದನೆ ದೊರೆತು ಕಾಮಗಾರಿ ಕೈಗೊಳ್ಳಲಾಗುವುದು ಎಂದರು.

ಹೊಸಳ್ಳಿ ಗ್ರಾಮಕ್ಕೆ ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಯೋಜನೆಯಡಿ ಗ್ರಾಮದಲ್ಲಿ ₹70 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ, ಜಿಪಂ ಅನಿರ್ಬಂಧಿತ ಯೋಜನೆಯಡಿ ₹11.70 ಲಕ್ಷ ವೆಚ್ಚದಲ್ಲಿ ಹೊಸಳ್ಳಿ ಕ್ರಾಸ್‌ನಿಂದ ಜಕ್ಕಲಿ ರಸ್ತೆ ಅಭಿವೃದ್ಧಿ ಮಾಡಲಾಗುವುದು. ₹15 ಲಕ್ಷ ವೆಚ್ಚದಲ್ಲಿ ಗ್ರಂಥಾಲಯ ನೂತನ ಕಟ್ಟಡ ನಿರ್ಮಿಸಲಾಗುವುದು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ₹8 ಲಕ್ಷ ವೆಚ್ಚದಲ್ಲಿ ಸಾರ್ವಜನಿಕರ ಕುಡಿಯುವ ನೀರಿನ ಕೆರೆ ಅಭಿವೃದ್ಧಿ ಮಾಡುತ್ತಿರುವುದು ಉತ್ತಮ‌ ಕಾರ್ಯವಾಗಿದೆ ಎಂದರು.

ಬಿಜೆಪಿ ವಿರುದ್ಧ ಶಾಸಕರ ವಾಗ್ದಾಳಿ

ಬಿಜೆಪಿ ಆಡಳಿತ ಅವಧಿಯಲ್ಲಿ ಮಾಡಿಟ್ಟಿದ್ದ ₹75 ಸಾವಿರ ಕೋಟಿ ಸಾಲವನ್ನು ಕಾಂಗ್ರೆಸ್ ಸರ್ಕಾರ ಕಟ್ಟುತ್ತಾ ಬಂದಿದ್ದು, ಇದರ ಜತೆಗೆ ಗ್ಯಾರಂಟಿ ಯೋಜನೆಗೆ ಬೇಕಾದ ಅನುದಾನವನ್ನು ಹೊಂದಾಣಿಕೆ ಮಾಡುತ್ತಾ ಬರಲಾಗಿದೆ. ಕಾಂಗ್ರೆಸ್ ಸರ್ಕಾರದ ಕೊಡುಗೆ ಏನೆಂಬುದನ್ನು ಬಿಜೆಪಿಯವರಿಗೆ ಗ್ಯಾರಂಟಿ ಯಶಸ್ವಿಯಾಗಿದ್ದನ್ನು, ಗ್ಯಾರಂಟಿ ಯೋಜನೆಯಿಂದ ಜನರಿಗಾದ ಪ್ರಯೋಜನವೇ ಸಾಕ್ಷಿಯಾಗಿದೆ. ಗ್ಯಾರಂಟಿಯಿಂದ ಅಭಿವೃದ್ಧಿಯಾಗಿಲ್ಲ ಎಂದು ಅಪಪ್ರಚಾರ ಮಾಡುವ ಬಿಜೆಪಿಯವರಿಗೆ ನಾನು ಕೇಳುವುದಿಷ್ಟು, ಅಭಿವೃದ್ಧಿ ಎಲ್ಲಿ ಆಗಿಲ್ಲ, ಇನ್ನು ಏನಾಗಬೇಕಿದೆ ಹೇಳಿ? ಸುಮ್ಮನೆ ಆರೋಪ ಮಾಡಿದರೆ ಸಾಲದು ಎಂದು ಕಿಡಿಕಾರಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ಆರ್ಥಿಕ ಅಭಿವೃದ್ಧಿ ಸ್ವಾವಲಂಬಿ ಬದುಕು ಕಟ್ಟಿಕೊಡಲು ಧರ್ಮಸ್ಥಳ ಸಂಘ ಜಾರಿಗೆ ಬಂದಿದ್ದು, ಮೂಲ ಸೌಲಭ್ಯಗಳ ಅಭಿವೃದ್ಧಿ ಅಂತರ್ಜಲ ಹೆಚ್ಚಳಕ್ಕೆ ಕೆರೆ ಉಳಿಸುವ ಕ್ರಮಕ್ಕೆ ಸಂಘ ಮುಂದಾಗಿದ್ದು, ಪ್ರಕೃತಿ ನೀಡುವ ನೀರನ್ನು ಉಳಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.

ಇದನ್ನೂ ಓದಿ: ದೇವನಹಳ್ಳಿಯಲ್ಲಿ ಸಾವಿರಾರು ಎಕರೆ ಭೂಮಿ ಕಬಳಿಕೆ? ಒಂದೇ ಕುಟುಂಬದ ಹಲವರ ಹೆಸರಲ್ಲಿ ನೂರಾರು ಎಕ್ರೆ ಜಮೀನು

ಸಾನ್ನಿಧ್ಯವನ್ನು ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಬಸಮ್ಮ ಸ್ಥಾವರಮಠ, ಪಿಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ಯಚ್ಚರಗೌಡ ಗೋವಿಂದಗೌಡ, ತಾಪಂ ಮಾಜಿ ಉಪಾಧ್ಯಕ್ಷ ಪ್ರಭು ಮೇಟಿ, ವಿ.ಆರ್‌. ಗುಡಿಸಾಗರ, ವೀರಣ್ಣ ಶೆಟ್ಟರ, ಯೂಸೂಫ್ ಇಟಗಿ, ಸಂಗಪ್ಪ ಮೆಣಸಿನಕಾಯಿ, ಹೇಮಯ್ಯ ಹಿರೇಮಠ, ಕಾಸಿಂಸಾಬ ಪಿಂಜಾರ, ಗ್ರಾಪಂ ಉಪಾಧ್ಯಕ್ಷ ಶಿವಯೋಗಿ ತಡಿ, ಪ್ರವೀಣಕುಮಾರ ರಡ್ಡೇರ, ಅಂದಪ್ಪ ಹೊಸಳ್ಳಿ, ಮುತ್ತಪ್ಪ ಮಾರನಬಸರಿ, ಭೀಮರಡ್ಡೆಪ್ಪ ರಡ್ಡೇರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರೋಣ ತಾಲೂಕು ಯೋಜನಾಧಿಕಾರಿ‌ ಮಹಾಬಳೇಶ್ವರ ಪಟಗಾರ, ಅಭಿಷೇಕ ನವಲಗುಂದ, ಗ್ರಾಪಂ ಪಿಡಿಒ ಬಸವರಾಜ ತಳವಾರ ಮುಂತಾದವರು ಉಪಸ್ಥಿತರಿದ್ದರು. ಗ್ರಾಪಂ ಸದಸ್ಯ ಬಸವರಡ್ಡಿ ರಡ್ಡೇರ ನಿರೂಪಿಸಿ, ವಂದಿಸಿದರು.

ಇದನ್ನೂ ಓದಿ: ಐಲ್ಯಾಂಡ್ ಮಾದರಿಯಲ್ಲಿ ಶಿವಮೊಗ್ಗದ 15 ಕೆರೆಗಳ 'ಹಸಿರು' ರೂಪಾಂತರ: 43 ಕೋಟಿ ಮೀಸಲು

PREV
Read more Articles on
click me!

Recommended Stories

ಖನಿಜ ಸಂಪತ್ತೇ ಪಶ್ಚಿಮ ಘಟ್ಟಗಳಿಗೆ ಶಾಪವೇ? ಚಿನ್ನದ ನಿಕ್ಷೇಪ ದೃಢ, ಮಲೆನಾಡು ಭಾಗದಲ್ಲಿ ಆತಂಕ ಸೃಷ್ಟಿ
ಆಡಳಿತದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ರಾಂತಿ: ಇನ್ನು ಸರ್ಕಾರಕ್ಕೆ ದೂರು ನೀಡಿದರೆ ಕ್ಷಣಾರ್ಧದಲ್ಲಿ ಪ್ರತಿಕ್ರಿಯೆ!