ರಾಜ್ಯದಲ್ಲಿ ಕೆಲವು ದಿನಗಳಿಂದ ನಡೆಯುತ್ತಿರುವ ಗಡಿ ವಿವಾದವು ಪ್ರಸ್ತುತ ಮಹಾರಾಷ್ಟ್ರದ ಜತ್ತ ತಾಲೂಕಿನತ್ತ ತೆರಳಿದೆ. ರಾಜ್ಯದ ಅಥಣಿಗೆ ಹೊಂದಿಕೊಂಡಿರುವ ಜತ್ತ ತಾಲೂಕಿನ ಸುಮಾರು 40 ಗ್ರಾಮಗಳಲ್ಲಿ ಅಭಿವೃದ್ಧಿಯು ಮರೀಚಿಕೆಯಾಗಿದೆ.
ಸಿ.ಎ.ಇಟ್ನಾಳಮಠ
ಅಥಣಿ (ನ.30): ರಾಜ್ಯದಲ್ಲಿ ಕೆಲವು ದಿನಗಳಿಂದ ನಡೆಯುತ್ತಿರುವ ಗಡಿ ವಿವಾದವು ಪ್ರಸ್ತುತ ಮಹಾರಾಷ್ಟ್ರದ ಜತ್ತ ತಾಲೂಕಿನತ್ತ ತೆರಳಿದೆ. ರಾಜ್ಯದ ಅಥಣಿಗೆ ಹೊಂದಿಕೊಂಡಿರುವ ಜತ್ತ ತಾಲೂಕಿನ ಸುಮಾರು 40 ಗ್ರಾಮಗಳಲ್ಲಿ ಅಭಿವೃದ್ಧಿಯು ಮರೀಚಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ, ಈ ಗಡಿ ಗ್ರಾಮಗಳ ಅಭಿವೃದ್ಧಿ ಮಾತ್ರ ಮಾಡಿಲ್ಲ. ಈ ಗ್ರಾಮಗಳನ್ನು ಮಹಾರಾಷ್ಟ್ರ ನಿರ್ಲಕ್ಷ್ಯ ಮನೋಭಾವನೆಯಿಂದ ನೋಡುತ್ತದೆ ಎನ್ನುವುದು ಗ್ರಾಮಸ್ಥರ ಅಸಮಾಧಾನ.
ಜತ್ತ ತಾಲೂಕಿನ ಸುಮಾರು 40 ಗ್ರಾಮಗಳಲ್ಲಿ ಶೇ.65 ಕನ್ನಡಿಗರಿದ್ದಾರೆ. ಈ ಗ್ರಾಮಗಳು ಕರ್ನಾಟಕದ ಅವಿಭಾಜ್ಯ ಅಂಗದಂತೆ ಕಾಣಸಿಗುತ್ತವೆ. ಮಹಾಜನ ವರದಿ ಆಧರಿಸಿದರೆ ಜತ್ತ ತಾಲೂಕು ಮಹಾರಾಷ್ಟ್ರಕ್ಕೆ ಸೇರಿದ್ದು, ಆದರೆ ತಾಲೂಕಿನ ಜನರು ಮಾತ್ರ ಕರ್ನಾಟಕಕ್ಕೆ ಸೇರಬೇಕು ಎನ್ನುವ ಆಶಯ ಹೊಂದಿದ್ದಾರೆ. ವಿಶೇಷವೆಂದರೆ ಮಹಾರಾಷ್ಟ್ರದ ಜತ್ತ ತಾಲೂಕಿನ 40ಕ್ಕೂ ಹೆಚ್ಚಿನ ಗ್ರಾಮದ ಜನರು ಹೆಚ್ಚಾಗಿ ಕನ್ನಡ ಭಾಷೆಯನ್ನೇ ಬಳಸುತ್ತಾರೆ.
ಬೆಳಗಾವಿಗೆ ಮಹಾರಾಷ್ಟ್ರ ಸಚಿವರು ತರ್ಲೆ ಮಾಡೋಕೆ ಬಂದರೆ ಕಠಿಣ ಕ್ರಮ: ಎಡಿಜಿಪಿ ವಾರ್ನಿಂಗ್
ಕರ್ನಾಟಕಕ್ಕೆ ಸೇರಲು ಬಿಡಿ, ದಶಕದ ಹೋರಾಟ: ಪ್ರಸ್ತುತ ರಾಷ್ಟ್ರಮಟ್ಟದ ಚರ್ಚಾ ವಿಷಯ ಹಾಗೂ ಮಹಾರಾಷ್ಟ್ರ ಸರ್ಕಾರಕ್ಕೆ ಮುಜುಗರ ಉಂಟು ಮಾಡಿರುವ ಘಟನೆ ಎಂದರೆ ಅದುವೇ ಜತ್ತ ತಾಲೂಕಿನ ಗ್ರಾಮಸ್ಥರು, ಗ್ರಾಮಗಳನ್ನು ಅಭಿವೃದ್ಧಿಪಡಿಸಿ, ಇಲ್ಲವೇ ಕರ್ನಾಟಕ ರಾಜ್ಯಕ್ಕೆ ಸೇರಲು ಎನ್‌ಒಸಿ ನೀಡಿ ಎಂದು ಗ್ರಾಮಸ್ಥರು ಬಹಿರಂಗವಾಗಿ ಹೇಳುತ್ತಿದ್ದಾರೆ. 2011-12ರಲ್ಲಿ ಜತ್ತ ತಾಲೂಕಿನ ಗುಡ್ಡಾಪುರದಲ್ಲಿ 40 ಗ್ರಾಮದ ಜನರು ಸಭೆ ಸೇರಿ ಅಭಿವೃದ್ಧಿ ಮಾಡಿ ಇಲ್ಲವೇ ನಾವು ಕರ್ನಾಟಕಕ್ಕೆ ಸೇರುತ್ತೇವೆ ಎಂಬ ನಿರ್ಧಾರ ಕೈಗೊಂಡು ಹೋರಾಟಕ್ಕೆ ನಾಂದಿ ಹಾಡಿದರು. ಇದೆ ವಿಷಯವಾಗಿ ಕೆಲವು ದಿನಗಳ ಕಾಲ ಸಾಂಗಲಿ ಜಿಲ್ಲಾಧಿಕಾರಿ ಕಚೇರಿ ಎದುರು ಜನರು ಪ್ರತಿಭಟನೆ ನಡೆಸಿದ್ದು ಇತಿಹಾಸವಾಗಿದೆ. ಜನಪ್ರತಿನಿಧಿಗಳು ಜನರ ಸಂಘಟನಾ ಶಕ್ತಿ ನೋಡಿ, ಗ್ರಾಮಗಳು ಅಭಿವೃದ್ಧಿಯಾದರೆ ಕನ್ನಡಿಗರು ಗಟ್ಟಿಯಾಗುತ್ತಾರೆ ಎಂಬ ಭಾವನೆಯಿಂದ ಕೇವಲ ಆಶ್ವಾಸನೆ ನೀಡಿ, ಜನರನ್ನು ಸಮಾಧಾನ ಪಡಿಸಲಾಗಿತ್ತು ಎಂಬುವುದು ಪ್ರಸ್ತುತ ಗ್ರಾಮಸ್ಥರ ಅಭಿಪ್ರಾಯ.
ಕರ್ನಾಟಕ ಮುಖ್ಯಮಂತ್ರಿಗಳ ನೆರವು: ಗುಡ್ಡಾಪುರದಲ್ಲಿ 2011-12ರಲ್ಲಿ ನಡೆದ ಸಭೆಯಲ್ಲಿ ಕನ್ನಡ ಸಾಹಿತಿ ದಿ.ಚಂದ್ರಶೇಖರ ಪಾಟೀಲ ಅವರು ಭಾಗವಹಿಸಿ, ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ಕರ್ನಾಟಕದ ಅಂದಿನ ಮುಖ್ಯಮಂತ್ರಿ ಗಮನಕ್ಕೆ ತಂದಿದ್ದರು. ಆಗಿನಿಂದ ಈವರೆಗೂ ಮುಖ್ಯಮಂತ್ರಿಗಳು ಜತ್ತ ತಾಲೂಕು ಕುರಿತು ಗಟ್ಟಿನಿಲುವು, ರಾಜ್ಯಕ್ಕೆ ಸೇರಿಸಿಕೊಳ್ಳುವ ಒಲವು ತೋರಿಸುತ್ತಿರುವುದು ಗಡಿ ಗ್ರಾಮಗಳ ಜನರ ಹೋರಾಟಕ್ಕೆ ಮತ್ತಷ್ಟುಶಕ್ತಿ ನೀಡಿದಂತಾಗಿದೆ. ಪ್ರಸ್ತುತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿದ ಒಂದೇ ಒಂದು ಹೇಳಿಕೆಗೆ ಗಡಿ ಕನ್ನಡಿಗರ ಆಸೆಗೆ ನೀರೇದಂತಾಗಿದೆ.
ಕರ್ನಾಟಕ-ಮಹಾರಾಷ್ಟ್ರದ ಗಡಿಭಾಗದ ಗ್ರಾಮಗಳಲ್ಲಿ ರಸ್ತೆ, ಕುಡಿಯುವ ನೀರು, ಕನ್ನಡ ಶಿಕ್ಷಣ ಸೇರಿದಂತೆ ಇತರೆ ಮೂಲಸೌಲಭ್ಯಗಳನ್ನು ಒದಗಿಸುವಲ್ಲಿ ಮಹಾ ಸರ್ಕಾರ ವಿಫಲವಾಗಿದೆ. ಅಲ್ಲದೇ ಗುಡ್ಡಾಪೂರ ಪುಣ್ಯ ಕ್ಷೇತ್ರಕ್ಕೆ ಪ್ರತಿನಿತ್ಯ ಸುಮಾರು 10 ರಿಂದ 15 ಸಾವಿರ ಪ್ರವಾಸಿಗರು ಭೇಟಿ ನೀಡುತ್ತಾರೆ. ವಿಶೇಷ ಅವಧಿಯಲ್ಲಿ ಲಕ್ಷಕ್ಕೂ ಹೆಚ್ಚಿನ ಜನರು ಸೇರುತ್ತಾರೆ. ಈ ಪ್ರವಾಸಿಗರಲ್ಲಿ ಶೇ.95 ರಷ್ಟುಜನರು ಕರ್ನಾಟಕದವರು. ಈ ಉದ್ದೇಶದಿಂದಲೇ ಮಹಾ ಸರ್ಕಾರ ಗುಡ್ಡಾಪೂರ ಅಭಿವೃದ್ಧಿಗೆ ನಯಾಪೈಸೆ ಅನುದಾನ ನೀಡಿಲ್ಲ. ಕರ್ನಾಟಕ ಸರ್ಕಾರವೇ ಕಳೆದ 7 ರಿಂದ 8 ವರ್ಷದಲ್ಲಿ . 12 ಕೋಟಿ ಅನುದಾನ ನೀಡಿ, ದೇವಾಲಯ ಅಭಿವೃದ್ಧಿಪಡಿಸಿದೆ. ಈ ಭಾಗದಲ್ಲಿ ಕನ್ನಡ ಶಾಲೆಗಳ ಅಭಿವೃದ್ಧಿಗೆ ಹಾಗೂ ಕನ್ನಡಭವನ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಸುಮಾರು 15 ಕೋಟಿಗೂ ಅಧಿಕ ಅನುದಾನ ನೀಡಿದೆ.
ಕರ್ನಾಟಕ ಮಹಾರಾಷ್ಟ್ರ ಗಡಿಭಾಗದಲ್ಲಿರುವ ಜನರು ಕರ್ನಾಟಕಕ್ಕೆ ಸೇರಿದವರು. ಅವರ ಅಭಿವೃದ್ಧಿಗೆ ನಾವು ಕಾಳಜಿ ವಹಿಸುತ್ತೇವೆ. ಗಡಿಕನ್ನಡ ಶಾಲೆಗಳ ಅಭಿವೃದ್ಧಿಗೆ ಅನುದಾನ ನೀಡಿದ್ದೇವೆ. ಮುಂದೆ ನೀಡುತ್ತೇವೆ. ಅಲ್ಲದೇ ಅಕ್ಕಲಕೋಟೆಯಲ್ಲಿ ಕನ್ನಡ ಭವನ ನಿರ್ಮಿಸುತ್ತಿದ್ದೇವೆ. ಗಡಿ ಕನ್ನಡಿಗರ ಅಭಿವೃದ್ಧಿಗೆ ನಾವು ಸದಾ ಬದ್ಧರಾಗಿರುತ್ತೇವೆ.
- ಸಿ.ಸೋಮಶೇಖರ, ಅಧ್ಯಕ್ಷ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ
ಕಳೆದ 10 ವರ್ಷಗಳಿಂದ ಗುಡ್ಡಾಪೂರಕ್ಕೆ ಬರುವ ಜನರಿಗೆ ಅನಕೂಲವಾಗಲಿ ಎಂದು ರಸ್ತೆ ಅಭಿವೃದ್ಧಿಗಾಗಿ ಕಳೆದ 10 ವರ್ಷಗಳಿಂದ ಮನವಿ ಸಲ್ಲಿಸುತಿದ್ದೇವೆ. ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ.
- ಶಂಬು ಮಮದಾಪೂರ, ಮಾಜಿ ಅಧ್ಯಕ್ಷ ಗುಡ್ಡಾಪೂರ ದಾನಮ್ಮ ದೇವಸ್ಥಾನ ಟ್ರಸ್ಟ್
ಬೆಳಗಾವಿಗೆ ಆಗಮಿಸಿ ಮಹಾರಾಷ್ಟ್ರದ ನಿರ್ಲಕ್ಷ್ಯ ಧೋರಣೆ ಎಳೆ ಎಳೆಯಾಗಿ ಬಿಚ್ಚಿಟ್ಟ ಜತ್ತ ಕನ್ನಡಿಗರು
ಗಡಿಗ್ರಾಮಗಳ ಕುರಿತು ಒಂದು ದಶಕದಿಂದ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದೇವೆ. ಇದಕ್ಕೆ ಈವರೆಗೂ ಸ್ಪಂದನೆ ಸಿಕ್ಕಿಲ್ಲ. ಅಭಿವೃದ್ಧಿಯು ಕೇವಲ ಭರವಸೆಯಾಗಿ ಉಳಿದಿದೆ. ಕರ್ನಾಟಕಕ್ಕೆ ನಮ್ಮನ್ನು, ನಮ್ಮ ಗ್ರಾಮಗಳನ್ನು ಸೇರಿಸಿ. ಕರ್ನಾಟಕದ ಸಿಎಂ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಯನ್ನು ನಾವು ಸ್ವಾಗತಿಸುತ್ತೇವೆ.
- ಸುನೀಲ ಪೋತದಾರ, ಅಧ್ಯಕ್ಷ ಉಮದಿ ನೀರಾವರಿ ಹೋರಾಟ ಸಮಿತಿ