ತಾಲೂಕಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಂಡು ಮಾದರಿ ಶಾಲೆ ನಿರ್ಮಾಣ ಕಾರ್ಯ ಶೀಘ್ರವಾಗಿ ಮಾಡಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಹೊಸಕೋಟೆ (ಜ.09): ತಾಲೂಕಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಂಡು ಮಾದರಿ ಶಾಲೆ ನಿರ್ಮಾಣ ಕಾರ್ಯ ಶೀಘ್ರವಾಗಿ ಮಾಡಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು. ತಾಲೂಕಿನ ಅನಗೊಂಡನಹಳ್ಳಿ ಹೋಬಳಿಯ ಕಲ್ಕುಂಟೆ ಅಗ್ರಹಾರ ಶ್ರೀ ರಂಗನಾಥ ಶಾಲೆ ಹಾಗೂ ಕಾಲೇಜಿನಲ್ಲಿ ನಡೆದ ಶ್ರೀ ರಂಗನಾಥ ಕಲಾ ಉತ್ಸವ - 2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ರಂಗನಾಥ ಶಾಲೆ ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಮುಂಚೂಣಿಯಲ್ಲಿದೆ. ಪದವಿ ಪೂರ್ವ ಕಾಲೇಜು ಸಹ ಇದ್ದು ವಿಜ್ಞಾನ ವಿಭಾಗ ಪ್ರಾರಂಭಕ್ಕೆ ಐಟಿಸಿ ಕಂಪನಿ ಸಿಎಸ್‌ಆರ್ ಅನುದಾನದಲ್ಲಿ 60 ಲಕ್ಷ ವೆಚ್ಚದಲ್ಲಿ ಮೂರು ಕೊಠಡಿಯನ್ನು ತ್ವರಿತವಾಗಿ ನಿರ್ಮಾಣ ಮಾಡಲಾಗುವುದು.
ಜೊತೆಗೆ ಪ್ರತಿ ಗ್ರಾಮ ಪಂಚಾಯಿತಿಗೊಂದು ಮಾದರಿ ಶಾಲೆಯನ್ನು ಇನ್ಫೋಸಿಸ್ ಸಹಯೋಗದಲ್ಲಿ ತಲಾ 1 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದರು. ಸುಪ್ರೀಂ ಕೋರ್ಟ್ ವಕೀಲ ಸುರೇಶ್‌ಗೌಡ ಮಾತನಾಡಿ, ವಿದ್ಯಾರ್ಥಿಗಳು ಹೊರಗಿನ ಸೌಂದರ್ಯ ನೋಡುವ ಬದಲು ಅಂತಾರಾಳದ ಸೌಂದರ್ಯ ನೋಡಿ. ಅಸಂಖ್ಯಾತ ವಿದ್ಯಾರ್ಥಿಗಳು ಬಡತನದಲ್ಲಿ ಹುಟ್ಟಿ, ದೈಹಿಕ ನ್ಯೂನತೆ ಹೊಂದಿದ್ದರೂ ಸಹ ಆಸಾಧಾರಣ ಸಾಧನೆ ಮಾಡಿದ್ದಾರೆ. ಆದ್ದರಿಂದ ಅಸಾಧ್ಯವಾದುದನ್ನು ಸಾಧ್ಯವಾಗಿಸಿದ ಸಾಧಕರ ಪ್ರೇರಣೆಯೊಂದಿಗೆ ಸಾಧನೆಯ ಹಾದಿಯನ್ನು ತುಳಿಯಬೇಕು ಎಂದರು. ಡಿಡಿಪಿಐ ಬೈಲಾಂಜಿನಪ್ಪ ಮಾತನಾಡಿ, ಶಾಸಕ ಶರತ್ ಬಚ್ಚೇಗೌಡರು ಶಿಕ್ಷಣ ಪ್ರೇಮಿಯಾಗಿ ಸರ್ಕಾರಿ ಶಾಲೆಗಳ ಅಭಿವೃದ್ಧಿಯ ಸಂಕಲ್ಪ ತೊಟ್ಟಿದ್ದಾರೆ.
ಇದರ ಭಾಗವಾಗಿ ಇನ್ಫೋಸಿಸ್ ಕಂಪನಿ ಸಹಯೋಗದಲ್ಲಿ ತಾಲೂಕಿನ 29 ಶಾಲೆಗಳ ಅಭಿವೃದ್ಧಿಗೆ ರೂಪುರೇಷೆ ಸಿದ್ದಪಡಿಸಿದೆ. ಪ್ರತಿ ಶಾಲೆಗೂ 1 ಕೋಟಿಗೂ ಅಧಿಕ ಅನುದಾನ ಖಾಸಗಿ ಕಂಪನಿ ಸಿಎಸ್‌ಆರ್ ಅನುದಾನದಲ್ಲಿ ಲಭ್ಯವಾಗಲಿದೆ ಎಂದರು. ಟಿಎಪಿಸಿಎಂಎಸ್ ಅಧ್ಯಕ್ಷ ಬಾಬುರೆಡ್ಡಿ, ಹೋಬಳಿ ಮುಖಂಡ ಪ್ರಕಾಶ್, ರಂಗನಾಥ ಶಾಲೆಯ ಅಧ್ಯಕ್ಷ ಶಿವಕೇಶವ ರೆಡ್ಡಿ, ಖಜಾಂಚಿ ಯಡಗೊಂಡನಹಳ್ಳಿ ರಾಧಾಕೃಷ್ಣ, ಮಾನವ ಹಕ್ಕುಗಳ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಸಮೇತನಹಳ್ಳಿ ಲಕ್ಷ್ಮಣಸಿಂಗ್, ಬಿಎಂಆರ್‌ಡಿಎ ಸದಸ್ಯ ಕೊರಳೂರು ಸುರೇಶ್, ಮುಖಂಡರಾದ ಹಾರೋಹಳ್ಳಿ ದೇವರಾಜ್, ಮುತ್ಕೂರು ಮುನಿರಾಜು, ಬಿಇಓ ಪದ್ಮನಾಭ, ನಿವೃತ್ತ ಶಿಕ್ಷಕ ಸಂಪಂಗಿ ರಾಮಯ್ಯ ಹಾಜರಿದ್ದರು. .
ಕೇಂದ್ರದಿಂದ ಇಂಧನ ಬೆಲೆ ಕಡಿಮೆ ಮಾಡಿಸಿದ್ರೆ ಬಸ್ ಟಿಕೆಟ್ ದರ ಇಳಿಕೆ: ಶರತ್ ಬಚ್ಚೇಗೌಡ
ಅಭಿವೃದ್ಧಿ ಕಾಮಗಾರಿಗೆ ಚಾಲನೆ: ಹೊಸಕೋಟೆ ತಾಲೂಕಿನ ಅರೆಹಳ್ಳಿ, ಬ್ಯಾಲಹಳ್ಳಿ ಸೇರಿದಂತೆ ಕಲ್ಕುಂಟೆ ಅಗ್ರಹಾರ ಗ್ರಾಮಗಳಲ್ಲಿ ಶಾಸಕರ ಅನುದಾನದಲ್ಲಿ ಸುಮಾರು 30 ಲಕ್ಷ ರು.ಗಳ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಶರತ್ ಬಚ್ಚೇಗೌಡ ಭೂಮಿಪೂಜೆ ನೆರವೇರಿಸಿದರು. ಗ್ರಾಮಗಳಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಕಾಲಕಾಲಕ್ಕೆ ಆದ್ಯತೆಗೆ ಅನುಗುಣವಾಗಿ ಒದಗಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು. ಗುತ್ತಿಗೆದಾರ ಬ್ಯಾಟೇಗೌಡ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.