ಮೈಸೂರಲ್ಲೊಂದು Love story: ಎಸ್ಸೆಸ್ಸೆಲ್ಸಿವರೆಗೆ ಸಹಪಾಠಿಗಳು: ನಾಲ್ಕು ವರ್ಷದಿಂದ ಪ್ರೇಮಿಗಳು- ಈಗ ಮಂತ್ರ ಮಾಂಗಲ್ಯ ಮದುವೆ!

Kannadaprabha News   | Kannada Prabha
Published : Jun 21, 2026, 01:51 PM IST
A love story in Mysore Subramani weds Soumya mantra mangalya

ಸಾರಾಂಶ

ಮೈಸೂರಿನಲ್ಲಿ, ಬಾಲ್ಯದ ಸಹಪಾಠಿಗಳಾಗಿದ್ದ ಬೇರೆ ಬೇರೆ ಸಮಾಜದ ಜಿ.ಸುಬ್ರಮಣಿ ಮತ್ತು ಎಂ.ಸೌಮ್ಯಾ ಅವರು ನಾಲ್ಕು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದಾರೆ. ಕುವೆಂಪು ಅವರ ಮಂತ್ರಮಾಂಗಲ್ಯದಂತೆ, ಮಾನವ ಮಂಟಪದಲ್ಲಿ ನಡೆದ ಈ ಸರಳ ವಿವಾಹಕ್ಕೆ ಎರಡೂ ಕುಟುಂಬಗಳ ಒಪ್ಪಿಗೆಯೂ ಇತ್ತು.

ಮೈಸೂರು: ಪ್ರೇಮಿಗಳಾದ ಸವಿತಾ ಸಮಾಜದ ಜಿ.ಸುಬ್ರಮಣಿ ಹಾಗೂ ಉಪ್ಪಾರ ಸಮಾಜದ ಎಂ.ಸೌಮ್ಯಾ ಅವರು ನಗರದಲ್ಲಿ ಶುಕ್ರವಾರ ಕುವೆಂಪು ಅವರ ಮಂತ್ರಮಾಂಗಲ್ಯದಂತೆ ಮದುವೆಯಾದರು.

ಶ್ರೀರಂಗಪಟ್ಟಣ ತಾಲೂಕಿನ ದರಸಗುಪ್ಪೆಯ ಸುಬ್ರಮಣಿ ಹಾಗೂ ಸೌಮ್ಯಾ ಒಂದನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗೆ ಸಹಪಾಠಿಗಳಾಗಿದ್ದರು. ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ಅವರು ನಗರದ ಜಾತ್ಯತೀತ ಒಲವಿನ ವೇದಿಕೆಯಾದ ಮಾನವ ಮಂಟಪ ಆಯೋಜಿಸಿದ್ದ ಸಮಾರಂಭದಲ್ಲಿ ಸರಳ ವಿವಾಹವಾದರು.

ಎಸ್ಎಸ್‌ಎಲ್‌ಸಿ ನಂತರ ನಗರದ ಬೋಗಾದಿಯಲ್ಲಿ ಕ್ಷೌರಿಕ ವೃತ್ತಿ ಕೈಗೊಂಡಿರುವ ಸುಬ್ರಮಣಿ ಅವರು ಪ್ರೊಫೆಷನಲ್ ಕೋಸ್೯ ಇನ್ ಗ್ರೂಮಿಂಗ್ ಪಡೆದಿದ್ದಾರೆ. ಸೌಮ್ಯಾ ಅವರು ಎಂ.ಕಾಂ ನಂತರ ಎಂಬಿಎ ಪದವಿ ಪಡೆದಿದ್ದಾರೆ. ಅವರ ಮದುವೆಗೆ ದರಸಗುಪ್ಪೆ ಗ್ರಾಮದ ಆಪ್ತ ಬಂಧುಗಳು, ಸಹಪಾಠಿಗಳು ಇದ್ದರು.

ಅಲ್ಲದೇ, ಸುಬ್ರಮಣಿ ತಾಯಿ ಶೋಭಾ ಹಾಗೂ ಸೌಮ್ಯಾ ಅವರ ಹೆತ್ತವರಾದ ವಸಂತಿ ಮತ್ತು ಚಾಲಕರಾದ ಮಹದೇವು ಒಪ್ಪಿದ್ದಲ್ಲದೆ ಮದುವೆಗೂ ಸಾಕ್ಷಿಯಾದರು. ಸುಬ್ರಮಣಿ ತಂದೆ ಗಣೇಶ್ ನಿಧನರಾಗಿದ್ದಾರೆ.

ಮಾನವ ಮಂಟಪದ ಸಂಚಾಲಕ ಧನಂಜಯ್ ಎಲಿಯೂರು ಮಾತನಾಡಿ, ಕುವೆಂಪು ಅವರು ತಮ್ಮ ಪುತ್ರ ಪೂರ್ಣಚಂದ್ರ ತೇಜಸ್ವಿ ಹಾಗೂ ರಾಜೇಶ್ವರಿ ಅವರ ಮದುವೆಯನ್ನು ಮಂತ್ರ ಮಾಂಗಲ್ಯ ಮೂಲಕ ನೆರವೇರಿಸಿದರು. ಮದುವೆ ದಿನವೇ ತಮ್ಮ ಆಪ್ತರಿಗೆ ಬಿಡುವಾದಾಗ ಬಂದು ಆಶೀರ್ವದಿಸಿರೆಂದು ಪತ್ರ ಬರೆದರು. ಈ ಮೂಲಕ ಸರಳ ಮದುವೆಗೆ ನಾಂದಿಯಾದರು ಎಂದರು.

ಮಾನವ ಮಂಟಪದ ಮತ್ತೋರ್ವ ಸಂಚಾಲಕ ಪ್ರೊ.ಕಾಳಚನ್ನೇಗೌಡ ಅವರು ಮಂತ್ರ ಮಾಂಗಲ್ಯದ ಪ್ರಮಾಣ ವಚನ ಬೋಧಿಸಿದರು. ನಂತರ ಮಾತನಾಡಿ, ನಮ್ಮ ದೇಶದಲ್ಲಿ 2600ಕ್ಕೂ ಅಧಿಕ ಮುಖ್ಯ ಜಾತಿಗಳಿವೆ ಜೊತೆಗೆ ಅಸಂಖ್ಯ ಉಪ ಜಾತಿಗಳಿವೆ. ಆದರೆ ಸ್ವಜಾತಿಯಲ್ಲಿ ನಡೆದ ಅನೇಕ ಮದುವೆಗಳು ವಿಚ್ಛೇದನದಲ್ಲಿ ಕೊನೆಗೊಳ್ಳುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಟಿವಿ ಧಾರಾವಾಹಿಗಳನ್ನು ನೋಡಿ ಪ್ರಭಾವಿತರಾದ ಗ್ರಾಮೀಣರೂ ಅರಿಸಿನ ಶಾಸ್ತ್ರ, ಮೆಹಂದಿಶಾಸ್ತ್ರವೆಂದು ಸಾಲ ಮಾಡಿಯಾದರೂ ಅದ್ಧೂರಿಯಾಗಿ ಮದುವೆ ಮಾಡುತ್ತಿದ್ದಾರೆ. ಶಾಸ್ತ್ರಕ್ಕಿಂತ ಚೆನ್ನಾಗಿ ಬದುಕುವುದು ಮುಖ್ಯ. ಆದರೆ ಸರಳವಾದ ಮದುವೆಗಳು ಕಳಪೆಯಲ್ಲ. ಹೀಗಾಗಿ ಸರಳ ಮದುವೆಗಳಿಗೆ ಯುವಕರು ಮುಂದಾಗಬೇಕು ಎಂದು ಸಲಹೆ ನೀಡಿದರು.

ಉಗ್ರನರಸಿಂಹೇಗೌಡ ಅವರು ವಿವಾಹ ಸಂಹಿತೆ ಬೋಧಿಸಿ ಮಾತನಾಡಿ, ಅದ್ಧೂರಿ ಮದುವೆಗಳಲ್ಲಿ ವ್ಯಾಪಾರ, ವಹಿವಾಟು ಹೆಚ್ಚಿರುತ್ತದೆ. ಅಲ್ಲದೆ ಪ್ರತಿಷ್ಠೆಗಾಗಿ ಅದ್ಧೂರಿ ಮದುವೆಗಳಾಗುತ್ತಿವೆ. ಆದರೆ ಸರಳವಾದ ಮದುವೆಗಳು ಆದರ್ಶ ಹಾಗೂ ಮೌಲ್ಯಯುತವಾದವು ಎಂದರು.

ಮದುವೆಯಾದ ಸುಬ್ರಮಣಿ ಮಾತನಾಡಿ, ಆಸ್ತಿ ಅಂತಸ್ತು ನೋಡಿ ಮದುವೆಯಾಗುವ ಕಾಲವಿದು. ಮದುವೆ ಶ್ರೀಮಂತವಾಗಬಾರದು. ನಮ್ಮ ಬದುಕು ಶ್ರೀಮಂತವಾಗಬೇಕು ಎಂದರು. ಅವರ ಪತ್ನಿ ಸೌಮ್ಯಾ ಮಾತನಾಡಿ, ನಾವಿಬ್ಬರೂ ಪರಸ್ಪರ ಅರ್ಥ ಮಾಡಿಕೊಂಡಿದ್ದು ಅರ್ಥಪೂರ್ಣವಾಗಿ ಬದುಕುತ್ತೇವೆ ಎಂದರು.

ರಂಗಕರ್ಮಿ ದೀಪಕ್ ಮೈಸೂರು, ಸುಬ್ರಮಣಿ ಸಹಪಾಠಿ ಮಂಜುನಾಥ್ ಮಾತನಾಡಿದರು

PREV
Read more Articles on
click me!

Recommended Stories

3 ದಶಕಗಳ ಬಳಿಕ ಮೊದಲ ಬಾರಿಗೆ ಬರಿದಾದ ಭದ್ರೆಯ ಒಡಲು; ಬರದ ಛಾಯೆ, ಸ್ಥಳೀಯರಲ್ಲಿ ಆತಂಕ
2010ರ ಮೇ 23ಕ್ಕೂ ಮುಂಚೆ ನೇಮಕಗೊಂಡು ಸೇವೆಯಲ್ಲಿರುವ ಶಿಕ್ಷಕರಿಗೆ ಸಿಗುತ್ತಾ ವಿನಾಯ್ತಿ?