ಪ್ರಧಾನಿ ಹೆಸರು ಹೇಳಿ ವಂಚಿಸ್ತಾರೆ ಹುಷಾರ್ !

By Web DeskFirst Published Jan 18, 2019, 10:21 AM IST
Highlights

ಪ್ರತಿ ತಿಂಗಳೂ ಬಡವರ ಬ್ಯಾಂಕ್ ಖಾತೆಗೆ 2500 ರು. ಜಮೆ ಮಾಡಲು ಕೇಂದ್ರ ಸರ್ಕಾರ  ಚಿಂತನೆ ನಡೆಸಿದೆ ಎಂಬ ವರದಿಗಳು ಕಳೆದ ವಾರ ಬಂದಿದ್ದವು. ಅದನ್ನೇ ಬಂಡವಾಳ ಮಾಡಿಕೊಂಡ ಗುಂಪೊಂದು ಜನರಿಗೆ ವಂಚನೆ ಮಾಡುತ್ತಿರುವುದು ತಿಳಿದು ಬಂದಿದೆ. 

ಹಾಸನ :  ಬಡ ಕುಟುಂಬಗಳ ಅನುಕೂಲಕ್ಕಾಗಿ ಸಾರ್ವತ್ರಿಕ ಕನಿಷ್ಠ ಆದಾಯ ಯೋಜನೆ ಜಾರಿಗೆ ತರಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಉದ್ದೇಶಿಸಿದೆ. ಇದರಡಿ ಪ್ರತಿ ತಿಂಗಳೂ ಬಡವರ ಬ್ಯಾಂಕ್ ಖಾತೆಗೆ 2500 ರು. ಜಮೆ ಮಾಡಲು ಚಿಂತನೆ ನಡೆಸಿದೆ ಎಂಬ ವರದಿಗಳು ಕಳೆದ ವಾರ ಬಂದಿದ್ದವು. 

ಇದೀಗ ಇದನ್ನೇ ಬಂಡವಾಳವಾಗಿಟ್ಟುಕೊಂಡು ಅಮಾಯಕ ಜನರನ್ನು ವಂಚಿಸುವ ಜಾಲವೊಂದು ಪತ್ತೆಯಾಗಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ತವರು ಹಾಸನ ಜಿಲ್ಲೆ ಹೊಳೆನರಸೀಪುರದ ಗ್ರಾಮವೊಂದರಲ್ಲಿ ಈ ಜಾಲ ಹಲವಾರು ಮಂದಿಗೆ ಮೋಸ ಮಾಡಿದೆ. ಮಾಸಿಕ 2500 ರು. ಹಣವನ್ನು ಖಾತೆಗೆ ಜಮೆ ಮಾಡು ತ್ತಿದ್ದೇವೆ ಎಂದು ಹೇಳಿ, ಮುಗ್ಧ ಜನರಿಂದ ಅಪರಿಚಿತರು ಬ್ಯಾಂಕ್ ಖಾತೆ, ಎಟಿಎಂ ವಿವರ ಪಡೆದು ಲಕ್ಷಾಂತರ ರು. ವಂಚಿಸಿದ್ದಾರೆ. ಪೊಲೀಸರಿಗೆ ದೂರು ಸಲ್ಲಿಕೆಯಾಗಿದೆ.

ಆಗಿದ್ದೇನು?: ಹೊಳೆನರಸೀಪುರ ತಾಲೂಕಿನ ಗವಿ ಸೋಮನಹಳ್ಳಿಯ ಕೆಲವರಿಗೆ ಕರೆ ಮಾಡಿರುವ ಕೆಲ ಅಪರಿಚಿತರು, ‘ನಾವು ಕೇಂದ್ರ ಸರ್ಕಾರದ ವತಿಯಿಂದ ಕರೆ ಮಾಡುತ್ತಿದ್ದು, ನಿಮ್ಮ ಅಕೌಂಟ್‌ಗೆ ತಿಂಗಳಿಗೆ ಎರಡೂವರೆ ಸಾವಿರ ಹಣ ಬರುತ್ತೆ. ಹೀಗಾಗಿ ನಿಮ್ಮ ಬ್ಯಾಂಕ್ ವಿವರವನ್ನೆಲ್ಲಾ ನೀಡಿ’ ಎಂದು ಹೇಳಿದ್ದಾರೆ. ಇದನ್ನು ನಂಬಿದ ಜನರು ಫೋನ್ ಮಾಡಿದವರಿಗೆ ತಮ್ಮ ಎಟಿಎಂ ನಂಬರ್, ಸಿವಿವಿ, ಓಟಿಪಿ ನಂಬರ್ ಹೀಗೆ, ಎಲ್ಲಾ ವಿವರಗಳನ್ನು ನೀಡಿದ್ದಾರೆ. ಆರಂಭದಲ್ಲಿ ಒಂದಿಬ್ಬರ ಖಾತೆಗೆ ಹಣ ಬಂದಿದೆ. ಈ ವಿಷಯ ಎಲ್ಲರಿಗೂ ತಿಳಿಯುತ್ತಿದ್ದಂತೆ ಎಲ್ಲರೂ ತಮ್ಮ ಎಟಿಎಂ ಕಾರ್ಡ್ ನಂಬರ್ ಮತ್ತಿತರ ವಿವರಗಳನ್ನು ಮೇಲೆ ಕರೆ ಮಾಡಿದವರಿಗೆ ಕೊಟ್ಟಿದ್ದಾರೆ. ನಂತರ ಖಾತೆಯಲ್ಲಿದ್ದ ಅಷ್ಟೂ ಹಣ ಖೋತಾ ಆದಾಗಲೇ ಆ ಜನರಿಗೆ ಮೋಸದ ಅರಿವಾಗಿದೆ.

click me!