ಮಠಾಧೀಶರು ರಾಜಕೀಯಕ್ಕೆ ಬರಬಾರದು ಅಂತೇನಿಲ್ಲ. ಬಂದ್ರೆ ಸ್ವಾಗತ. ಒಳ್ಳೆಯ ಮಠಾಧೀಶರು ಜನಸೇವೆ ಮಾಡೋಕೆ ಬರ್ತೀನಿ ಅಂದ್ರೆ ಸ್ವಾಗತ ಮಾಡ್ತೀವಿ. ಹಾಗಂತ ಎಲ್ಲರಿಗೂ ಬರೋಕೆ ಆಹ್ವಾನ ಇಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು.
ಕಲಾದಗಿ : ಮಠಾಧೀಶರು ರಾಜಕೀಯಕ್ಕೆ ಬರಬಾರದು ಅಂತೇನಿಲ್ಲ. ಬಂದ್ರೆ ಸ್ವಾಗತ. ಒಳ್ಳೆಯ ಮಠಾಧೀಶರು ಜನಸೇವೆ ಮಾಡೋಕೆ ಬರ್ತೀನಿ ಅಂದ್ರೆ ಸ್ವಾಗತ ಮಾಡ್ತೀವಿ. ಹಾಗಂತ ಎಲ್ಲರಿಗೂ ಬರೋಕೆ ಆಹ್ವಾನ ಇಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು.
ಜೆಪಿ ನಡ್ಡಾ ಅವರೇ ರಾಜಕೀಯಕ್ಕೆ ಬರುವಂತೆ ಸ್ವಾಮೀಜಿಗಳನ್ನು ಆಹ್ವಾನಿಸಿದ್ದಾರೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಸಂಬಂಧ ನಮ್ಮ ಪಾರ್ಟಿಯ ರಾಜ್ಯಘಟಕದಲ್ಲಿ ಯಾವುದೂ ಚರ್ಚೆ ಆಗಿಲ್ಲ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಅವರು ರಾಜಕೀಯಕ್ಕೆ ಬಂದಿದ್ದಾರೆ. ಕಳೆದ 20 ವರ್ಷಗಳಿಂದಲೂ ಅವರು ಬಿಜೆಪಿಯಲ್ಲಿ ಕೆಲಸ ಮಾಡ್ತಿದಾರೆ. ಈಗ ಸಿಎಂ ಆಗಿದ್ದಾರೆ, ಹಿಂದೆ ಲೋಕಸಭಾ ಸದಸ್ಯರಾಗಿ ಕೆಲಸ ಮಾಡಿದ್ದಾರೆ ಎಂದರು.
ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ್ದೀವಿ. ಈ ತರಹ ಉಮಾ ಭಾರತಿ ಅವರಿದ್ರು. ಉಮಾಭಾರತಿ ಅವ್ರು ಓರ್ವ ಸಾಧ್ವಿ, ಪೇಜಾವರ ಮಠದಲ್ಲಿ ದೀಕ್ಷೆ ಪಡೆದವ್ರು. ಒಳ್ಳೆಯವರು ಸಮಾಜಕ್ಕೆ ಏನಾದರೂ ಮಾಡ್ತಿವಿ ಅಂದ್ರೆ, ಪರಿಶೀಲಿಸಿ ನಮ್ಮ ಪಕ್ಷ ಈ ಬಗ್ಗೆ ತೀರ್ಮಾನ ಮಾಡುತ್ತೆ. ಎಲ್ಲರಿಗೂ ಆ ತರಹ ಅವಕಾಶ ಇಲ್ಲ. ಸೇವೆ ಮಾಡುವವರನ್ನು ಈಗಾಗಲೇ ಗುರುತು ಮಾಡಿದ್ದೀವಿ. ಇನ್ನಷ್ಟುಜನರನ್ನು ಗುರುತು ಮಾಡುತ್ತೇವೆ ಎಂದು ಹೇಳಿದರು.
ನಮ್ಮ ಪಾರ್ಟಿ ಹಿಂದೂ ವಿಚಾರಗಳ ಬಗ್ಗೆ, ಹಿಂದು ಧರ್ಮದ ಬಗ್ಗೆ ಓಪನ್ ಆಗಿದೆ. ಇದರಲ್ಲಿ ಕದ್ದು, ಮುಚ್ಚಿ ಏನಿಲ್ಲ. ನಮ್ಮದು ಹಿಂದು ದೇಶ, 10 ಸಾವಿರ ವರ್ಷಗಳ ಹಿಂದಿನ ಹಿಂದುತ್ವದ ಬೇರುಗಳಿವೆ. ರಾಮಾಯಣ, ಮಹಾಭಾರತ ನಡೆದಿರುವಂತಹ ನಾಡಿದು. ನಮ್ಮದು ಹಿಂದು ಪರಂಪರೆ. ಆ ಪರಂಪರೆಗೆ ಸೂಕ್ತವಾಗಿ ಯಾರು ನಡೆದುಕೊಳ್ತಾರೆ. ಅವರೆಲ್ಲರಿಗೂ ನಮ್ಮ ಸ್ವಾಗತ ಇದೆ ಎಂದು ತಿಳಿಸಿದರು.
ಮುತಾಲಿಕ್‌ಗೆ ಟಿಕೆಟ್ ಕೊಡಲಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಮಗೆ ಅವರು ಯಾರು ಅಂತಾ ಗೊತ್ತಿಲ್ಲ ಎಂದರು.
ಬಾಗಲಕೋಟೆ ತಾಲೂಕಿನ ಕಲಾದಗಿಯಲ್ಲಿ ವಾಸ್ತವ್ಯ
ಕಲಾದಗಿ (ಫೆ.25): ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದಡಿ ಶನಿವಾರದಂದು ಕಂದಾಯ ಸಚಿವ ಆರ್.ಅಶೋಕ ಅವರು ಬಾಗಲಕೋಟೆ ತಾಲೂಕಿನ ಕಲಾದಗಿಯಲ್ಲಿ ವಾಸ್ತವ್ಯ ಮಾಡಲಿದ್ದು, ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ ತಿಳಿಸಿದರು. ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಸಿದ್ಧತೆ ಪರಿಶೀಲನೆಗಾಗಿ ಶುಕ್ರವಾರ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿ, ಶನಿವಾರ ಬೆಳಗ್ಗೆ 11.30ಕ್ಕೆ ಕಂದಾಯ ಸಚಿವ ಆರ್.ಅಶೋಕ್ ಅವರು ಕಲಾದಗಿಗೆ ಆಗಮಿಸಲಿದ್ದಾರೆ. ಕಂದಾಯ ಸಚಿವರ ಅದ್ದೂರಿ ಸ್ವಾಗತಕ್ಕೆ ಜಿಲ್ಲಾಡಳಿತದಿಂದ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದರು.
5,000 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ: ಈ ಮಧ್ಯೆ, ಕಲಾದಗಿಯಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಹನಮಂತ ಆರ್.ನಿರಾಣಿ, ಸಚಿವರು ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮದ ಮಹಿಳೆಯರು ಆರತಿ ಬೆಳಗುವ ಮೂಲಕ ಸಚಿವರನ್ನು ಸ್ವಾಗತಿಸಲಿದ್ದಾರೆ. ನಂತರ, ಅಲಂಕೃತಗೊಂಡ ಟ್ರ್ಯಾಕ್ಟರ್‌ನಲ್ಲಿ ವಿವಿಧ ಕಲಾತಂಡಗಳೊಂದಿಗೆ ಸಚಿವರನ್ನು ಮೆರವಣಿಗೆಯಲ್ಲಿ ಕರೆತರಲಾಗುವುದು. ಪೂರ್ಣಕುಂಭ ಹೊತ್ತ 2,000 ಮಹಿಳೆಯರು, 25 ಎತ್ತಿನ ಬಂಡಿಗಳು, ವಿವಿಧ ವಾದ್ಯಮೇಳಗಳು, ವಿವಿಧ ಕಲಾಪ್ರಕಾರದ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ ಎಂದರು.