Kodagu: ಸಿದ್ದಾಪುರದಲ್ಲಿ ಒಂದೇ ದಿನ ಏಳು ಜನರಿಗೆ ಕಚ್ಚಿ ಗಾಯಗೊಳಿಸಿದ ಒಂದೇ ನಾಯಿ!

By Govindaraj SFirst Published Oct 4, 2023, 7:10 PM IST
Highlights

ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರದಲ್ಲಿ ಒಂದೇ ನಾಯಿ ಒಂದೇ ದಿನ ಏಳು ಜನರಿಗೆ ಕಚ್ಚಿ ಗಾಯಗೊಳಿಸಿದೆ. ಸಿದ್ದಾಪುರದಲ್ಲಿ ಒಂದೇ ನಾಯಿ ಮಕ್ಕಳು ಸೇರಿದಂತೆ 7 ಜನರ ಮೇಲೆ ದಾಳಿ ಮಾಡಿದೆ. 

ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಅ.04): ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರದಲ್ಲಿ ಒಂದೇ ನಾಯಿ ಒಂದೇ ದಿನ ಏಳು ಜನರಿಗೆ ಕಚ್ಚಿ ಗಾಯಗೊಳಿಸಿದೆ. ಸಿದ್ದಾಪುರದಲ್ಲಿ ಒಂದೇ ನಾಯಿ ಮಕ್ಕಳು ಸೇರಿದಂತೆ 7 ಜನರ ಮೇಲೆ ದಾಳಿ ಮಾಡಿದೆ. ಇದರಿಂದಾಗಿ ಕೈಯಲ್ಲಿ ದೊಣ್ಣೆ ಹಿಡಿದು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬೀದಿ ನಾಯಿಯ ಕಡಿತಕ್ಕೆ 7 ಮಂದಿ ಗಾಯಗೊಂಡಿದ್ದು, ಸಿದ್ದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರವೂ ವ್ಯಾಪಾರಿ ಒಬ್ಬರು ಅಂಗಡಿ ಮುಂಭಾಗದಲ್ಲಿ ಸ್ವಚ್ಛಗೊಳಿಸುತ್ತಿದ್ದ ವೇಳೆ ಹಿಂದಿನಿಂದ ಬಂದ ನಾಯಿ ಏಕಾಏಕಿ ದಾಳಿ ಮಾಡಿದೆ. 

ತಕ್ಷಣವೇ ಎಚ್ಚೆತ್ತುಕೊಂಡು ವ್ಯಾಪಾರಿ ಮುಂದೆ ಜಿಗಿದು ಹೆಚ್ಚಿನ ದಾಳಿ ಆಗದಂತೆ ರಕ್ಷಿಸಿಕೊಂಡಿದ್ದಾರೆ. ಸಿದ್ದಾಪುರ ಪಟ್ಟಣ ಸೇರಿದಂತೆ  ಗ್ರಾಮ ವ್ಯಾಪ್ತಿಯಲ್ಲಿ ಕಾಣಿಸಿಕೊಂಡ ನಾಯಿ ರಸ್ತೆಯಲ್ಲಿ ಓಡಾಡುವ ವಿದ್ಯಾರ್ಥಿಗಳು ಸೇರಿದಂತೆ ಮಹಿಳೆಯರು ಹಾಗೂ ಪುರುಷರ  ಮೇಲೆ  ದಾಳಿ ಮಾಡಿ ಗಾಯಗೊಳಿಸಿದೆ. ನಾಯಿಗಳ ದಾಳಿಯಿಂದ ರಮ್ಲಾ, ಮೇಘನಾ, ಮರ್ಜಲ್, ಸುಹೇಬ್, ಗಣೇಶ್, ಸುಂದರ, ಸೈಪುದ್ದಿನ್ ಎಂಬವರು ಸಿದ್ದಾಪುರ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆದಿದ್ದಾರೆ. ಕಳೆದ ಕೆಲ ತಿಂಗಳುಗಳಿಂದ ಸಿದ್ದಾಪುರ ಪಟ್ಟಣ, ಕರಡಿಗೋಡು ರಸ್ತೆ, ಗುಯ್ಯಾ, ಕೂಡುಗದ್ದೆ, ಅಂಬೇಡ್ಕರ್ ನಗರ, ಹಳೆ ಸಿದ್ದಾಪುರ, ಸಂತೆ ಮಾರುಕಟ್ಟೆ ವ್ಯಾಪ್ತಿಯಲ್ಲಿ ನಿರಂತರವಾಗಿ ಗುಂಪು ಗುಂಪಾಗಿ ಕಾಣಿಸಿಕೊಳ್ಳುತ್ತಿರುವ ನಾಯಿಗಳಿಂದ ಗ್ರಾಮಸ್ಥರು ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. 

'ನೀನು ತಮಿಳಿನವನು, ಗೆಟ್‌ ಔಟ್ ಅಂದ್ರು...': ಕರ್ನಾಟಕದಲ್ಲಿ ಆದ ಅವಮಾನಕ್ಕೆ ವೇದಿಕೆಯಲ್ಲಿಯೇ ಕಣ್ಣೀರಿಟ್ಟ ನಟ ಸಿದ್ಧಾರ್ಥ್‌!

ಬೀದಿನಾಯಿಗಳ ಹಾವಳಿಯಿಂದ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಹಿಂದೇಟು ಹಾಕುತ್ತಿದ್ದು, ಕೆಲಸಕ್ಕೆ ತೆರಳುವ ಕಾರ್ಮಿಕರು ಮಕ್ಕಳನ್ನು ನೋಡಿಕೊಂಡು ಮನೆಯಲ್ಲಿ ಇರಬೇಕಾಗಿದೆ. ಶಾಲೆ ಬಿಡುವ ಸಂದರ್ಭದಲ್ಲಿ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನಾಯಿಗಳ ಹಾವಳಿಯಿಂದ ವಿದ್ಯಾರ್ಥಿಗಳು ನಾಯಿಗಳನ್ನು ಕಂಡು ಭಯದಿಂದ ರಸ್ತೆಯಲ್ಲಿ ಓಡುವ ಸಂದರ್ಭ ಅಪಘಾತ ಘಟನೆಗಳು ಸಂಭವಿಸಿವೆ ಎಂದು ಗ್ರಾಮಸ್ಥರಾದ ಮುಸ್ತಫಾ ಅವರು ದೂರಿದ್ದಾರೆ. ಸಿದ್ದಾಪುರ ಪಟ್ಟಣದಲ್ಲಿ ತ್ಯಾಜ್ಯ ವಿಲೇವಾರಿಗೆ ಸೂಕ್ತ ಜಾಗ ಕಂಡುಕೊಳ್ಳಲಾಗದೆ ಪಟ್ಟಣ ಸೇರಿದಂತೆ ಗ್ರಾಮೀಣ ರಸ್ತೆಗಳಲ್ಲೂ ತ್ಯಾಜ್ಯ ಸುರಿಯುತ್ತಿರುವುದರಿಂದ ಬೀದಿ  ನಾಯಿಗಳ ಹಾವಳಿಯು ಮಿತಿಮೀರಿದೆ. ಗುಯ್ಯ ಗ್ರಾಮದಿಂದ ಸಿದ್ದಾಪುರಕ್ಕೆ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಮೇಲೆ ದಾಳಿ ಮಾಡಿ ಕೈಗೆ ಗಾಯಗೊಳಿಸಿದೆ. 

ದೇಶದಲ್ಲಿ ಏನೇ ಕೆಟ್ಟದಾದರೂ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಾರೆ: ಸಚಿವ ಸಂತೋಷ್ ಲಾಡ್‌

ಸಿದ್ದಾಪುರ ಪಟ್ಟಣದ ಅಂಗಡಿಯೊಂದರ ಬಾಗಿಲು ತೆರೆದು ವಸ್ತುಗಳನ್ನು ಹೊರಗೆ ಇಡುತ್ತಿದ್ದ ಸಂದರ್ಭ ಹಿಂಬದಿಯಿಂದ ಬಂದ ನಾಯಿಯೊಂದು ಯುವಕನನ್ನ ಕಚ್ಚಿ ಗಾಯಗೊಳಿಸಿದೆ. ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಸಿದ್ದಾಪುರ ಪಟ್ಟಣಕ್ಕೆ ಬರುತ್ತಿದ್ದ ಸಂದರ್ಭ 5 ಮಂದಿ ಕಾರ್ಮಿಕರ ಮೇಲೆ ನಾಯಿ ದಾಳಿ ಮಾಡಿ  ಗಂಭೀರ ಗಾಯಗೊಳಿಸಿದೆ. ಅಲ್ಲದೆ ಗ್ರಾಮದ ವ್ಯಾಪ್ತಿಯಲ್ಲಿ ಗುಂಪು ಗುಂಪುಗಳಾಗಿ ಬೀದಿನಾಯಿಗಳು ಕಂಡುಬರುತ್ತಿದೆಯಾದರೂ, ಸಿದ್ದಾಪುರ ಗ್ರಾಮ ಪಂಚಾಯಿತಿ ಮಾತ್ರ ತಮಗೆ ಏನು ಸಂಬಂಧ ಇಲ್ಲದ ರೀತಿಯಲ್ಲಿ ವರ್ತಿಸುತ್ತಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೂ ಹಲವರ ಮೇಲೆ ಬೀದಿನಾಯಿಗಳು ದಾಳಿ ಮಾಡಿದ ಸಂದರ್ಭ ಸಾರ್ವಜನಿಕರು ಗ್ರಾಮ ಪಂಚಾಯಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಮತ್ತೆ ಬೀದಿನಾಯಿಗಳ ಹಾವಳಿ ಮಿತಿಮೀರಿದ್ದು, ನಾಯಿಗಳ ಸೆರೆ ಹಿಡಿದು ಅವುಗಳನ್ನು ಸ್ಥಳಾಂತರಿಸಿ ಆ ಮೂಲಕ ಅವುಗಳ ಹಾವಳಿಯನ್ನು ತಡೆಗಟ್ಟಬೇಕಾಗಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

click me!