
ಚಿಕ್ಕಮಗಳೂರು (ಮಾ.19): ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಲವಾರು ಸವಲತ್ತುಗಳನ್ನು ನೀಡಲಾಗಿದ್ದು, ಇವುಗಳು ಸಮಾಜದ ಕಟ್ಟಕಡೆಯ ಜನರಿಗೆ ನೇರವಾಗಿ ತಲುಪಿಸಬೇಕೆಂದು ಸಂಕಲ್ಪ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹೇಳಿದರು. ತಾಲೂಕಿನ ತೇಗೂರು ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ ಮತ್ತು ವಿವಿಧ ಇಲಾಖೆಗಳ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ಸರ್ಕಾರ ಏನು ಮಾಡಿಲ್ಲ ಜಿಲ್ಲೆಯಲ್ಲಿ ಏನೂ ಅಭಿವೃದ್ಧಿ ಕೆಲಸಗಳಾಗಿಲ್ಲ ಎಂದು ಯಾರೋ ಕೆಲವರು ಹೇಳುತ್ತಾರೆ, ಲಕ್ಷಾಂತರ ಜನ ಫಲಾನುಭವಿಗಳಿಗೆ ಅನೇಕ ಸವಲತ್ತುಗಳನ್ನು ನೀಡಲಾಗುತ್ತಿದೆ. ಕಣ್ಣೆದುರಲ್ಲೆ ಮೆಡಿಕಲ್ ಕಾಲೇಜು ನಿರ್ಮಾಣ ಹಂತದಲ್ಲಿದ್ದು ವರ್ಷದಲ್ಲಿ ವೈದ್ಯಕೀಯ ಕಾಲೇಜನ್ನು ಲೋಕಾರ್ಪಣೆ ಮಾಡಲಾಗುವುದು. ಇದೆ ವಿರೋಧ ಪಕ್ಷದವರ ಆರೋಪಕ್ಕೆ ಉತ್ತರ ಎಂದರು. ಗ್ರಾಮೀಣ ಜೀವನೋಪಾಯ ಇಲಾಖೆಯಿಂದ 5 ಸಾವಿರ ಫಲಾನುಭವಿಗಳಿಗೆ 25.70 ಕೋಟಿ ವಿತರಣೆ, ಗ್ರಾಮೀಣ ವಸತಿ ಯೋಜನೆಯಲ್ಲಿ 3596 ಫಲಾನುಭವಿಗಳಿಗೆ 53.94 ಕೋಟಿ, ನಗರ ಸ್ಥಳೀಯ ಸಂಸ್ಥೆಗಳ 4 ಸಾವಿರ ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಗುತ್ತಿದೆ.
ಡಬಲ್ ಎಂಜಿನ್ ಸರ್ಕಾರದಿಂದ ದಾಹ ಮುಕ್ತ ರಾಜ್ಯ: ಸಚಿವ ಭೈರತಿ ಬಸವರಾಜ್
ಜಲಜೀವನ್ ಮಿಷನ್ ಯೋಜನೆ ಮೂಲಕ ಜಿಲ್ಲೆಯಲ್ಲಿ 2500 ಕೋಟಿ ರು.ನಲ್ಲಿ ಎಲ್ಲ ಮನೆಗಳಿಗೆ ಶುದ್ಧ ಕುಡಿಯುವ ನೀರು ನೀಡುವ ಯೋಜನೆ ಕೈಗೆತ್ತಿಕೊಂಡಿದ್ದು ಈ ಸಮ್ಮೇಳನದಲ್ಲಿ 5 ಸಾವಿರ ಫಲಾನುಭವಿಗಳಿಗೆ ನೀಡಲಾಗುತ್ತಿದೆ ಎಂದು ಹೇಳಿದರು. ಕಾರ್ಮಿಕ ಇಲಾಖೆಯಿಂದ ಕಿಟ್, ಕೃಷಿ ಇಲಾಖೆಯಿಂದ 2.8 ಕೋಟಿ ರು. ವೆಚ್ಚದಲ್ಲಿ 600 ಫಲಾನುಭವಿಗಳು, ತೋಟಗಾರಿಕೆ ಇಲಾಖೆಯಿಂದ 1.30 ಕೋಟಿ ರು. ವೆಚ್ಚದಲ್ಲಿ 700 ಫಲಾನುಭವಿಗಳಿಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪಶುಪಾಲನಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಯಿಂದ 3750 ಕೋಟಿ ರು.ಗಳ ಸವಲತ್ತು ನೀಡಿರುವುದು ಸರ್ಕಾರದ ಸಾಧನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ.ಟಿ.ರವಿ ಮಾತನಾಡಿ, ನಿನ್ನ ಜಾತಿ ಯಾವುದು ಎಂದು ಕೇಳಿಲ್ಲ. ಅರ್ಹರಿರುವರಿಗೆ ಜಾತಿಬೇಧ ಮಾಡದೆ ಯೋಜನೆಗಳ ಲಾಭ ಸಿಗುವಂತೆ ಹಾಗೂ ಮಧ್ಯವರ್ತಿಗಳ ಹಾವಳಿ ಇರಬಾರದೆಂದು ನೇರವಾಗಿ ಜನರಿಗೆ ತಲುಪುವಂತೆ ಮಾಡಿದೆ. ಜಿಲ್ಲೆಯಲ್ಲಿ 5 ವರ್ಷದಲ್ಲಿ ವೈಯಕ್ತಿಕ ಫಲಾನುಭವಿಗಳಿಗೆ 3753 ಕೋಟಿ ರು.ಗೂ ಹೆಚ್ಚು ಅನುದಾನ ತಲುಪಿದೆ ಎಂದರು. ಚುನಾವಣೆ ಕೆಲವು ವಾರದಲ್ಲಿ ಬರಬಹುದು ನಿಮ್ಮ ಮುಂದೆ ರಿಪೋಟ್ ಕಾರ್ಡ್ ಇಡುತ್ತೇವೆ ಸರ್ಕಾರಿ ಕಾರ್ಯಕ್ರಮದಲ್ಲಿ ಮತ ಕೇಳುವುದು ಯೋಗ್ಯವಲ್ಲ, ಆದರೆ ಪ್ರಜಾಪ್ರಭುತ್ವ ಅದರಲ್ಲಿ ಉತ್ತಮ ಆಯ್ಕೆಯಾಗಬೇಕು.
ಮಾಡಿರುವ ಕೆಲಸಕ್ಕೆ ಮಾರ್ಕ್ಸ್ ಕೊಡಬೇಕು, ಒಳ್ಳೆ ಕೆಲಸ ಮಾಡಿದ್ದರೆ ಒಳ್ಳೆ ಮಾರ್ಕ್ಸ್ ಕೊಡಿ, ಕೂಲಿ ಕೆಲಸ ಮಾಡಿದವನು ಕೂಲಿ ಕೇಳುತ್ತಾನೆ ಹಾಗೇಯೇ ಓರ್ವ ಜನಪ್ರತಿನಿಧಿ ಓಟಿನ ರೂಪದಲ್ಲಿ ಕೂಲಿ ಕೇಳುತ್ತಾನೆ. ನಮ್ಮ ರಿಪೋರ್ಟ್ ಕಾರ್ಡ್ ನಿಮ್ಮ ಮುಂದಿಟ್ಟು ಒಳ್ಳೆ ಕೆಲಸಕ್ಕೆ ಆಶೀರ್ವಾದ ಮಾಡಿ ಎಂದು ಹೇಳಿದರು. ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಮಾತನಾಡಿ, ನಿಮ್ಮ ಭವಿಷ್ಯ ರೂಪಿಸಿಕೊಳ್ಳಲು ಸರ್ಕಾರ ಈ ಯೋಜನೆಗಳನ್ನು ನೀಡುತ್ತಿದೆ. ಎಲ್ಲವನ್ನು ಸದುಪಯೋಗಪಡಿಸಿಕೊಳ್ಳುತ್ತೀರೆಂಬ ವಿಶ್ವಾಸ ಇದೆ. ಪ್ರತಿಯೊಬ್ಬ ರೈತ, ಕೂಲಿ ಕಾರ್ಮಿಕ ಸೇರಿದಂತೆ ಪ್ರಜೆಯೂ ಕೂಡ ಉತ್ತಮವಾಗಿ ಬದುಕುವಂತ ವ್ಯವಸ್ಥೆಯನ್ನು ಬಿಜೆಪಿ ಸರ್ಕಾರ ಕಲ್ಪಿಸಿದೆ ಎಂದರು.
ಕಾಂಗ್ರೆಸ್ ಈಗ ಡೇಟ್ ಬಾರ್ ಆದ ಪಕ್ಷ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿ ಮಾಡಿ ಅನುಷ್ಟಾನಗೊಳಿಸುವಲ್ಲಿ ಸಫಲವಾಗಿವೆ ಎಂಬುದಕ್ಕೆ ಈ ಫಲಾನುಭವಿಗಳ ಸಮಾವೇಶ ಸಾಕ್ಷಿ. ಮಹಿಳಾ ಸಬಲೀಕರಣ ಮೂಲಕ ಸ್ವಾವಲಂಭಿ ಮಾಡುವ ನಿಟ್ಟಿನಲ್ಲಿ ಸಾಕಷ್ಟುಯೋಜನೆಗಳನ್ನು ತಲುಪಿಸಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ರಾಜ್ಯ ಪಶು ಸಂಗೋಪನಾ ಸಚಿವ ಪ್ರಭು ಬಿ. ಚವ್ಹಾಣ್, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಸಿಡಿಎ ಅಧ್ಯಕ್ಷ ಸಿ.ಆನಂದ್, ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಜಿಪಂ ಸಿಇಓ ಜಿ.ಪ್ರಭು, ಎಡಿಸಿ ಬಿ.ಆರ್.ರೂಪಾ, ಉಪ ವಿಭಾಗಾಧಿಕಾರಿ ರಾಜೇಶ್, ತಹಸೀಲ್ದಾರ್ ವಿನಾಯಕ್ ಸಾಗರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್ ಇದ್ದರು.