Omicron Threat: ಬೆಂಗ್ಳೂರಲ್ಲಿ 6 ತಿಂಗಳ ಬಳಿಕ ಕೊರೋನಾ ಸ್ಫೋಟ..!

Kannadaprabha News   | Asianet News
Published : Jan 03, 2022, 05:05 AM IST
Omicron Threat: ಬೆಂಗ್ಳೂರಲ್ಲಿ 6 ತಿಂಗಳ ಬಳಿಕ ಕೊರೋನಾ ಸ್ಫೋಟ..!

ಸಾರಾಂಶ

*  ರಾಜ್ಯದಲ್ಲಿ 3ನೇ ಅಲೆ ನಿಶ್ಚಿತ ಅನ್ನೋ ವಾತಾವರಣ ಇದೆ *  ಸೋಂಕು ನಿಯಂತ್ರಣಕ್ಕೆ ಕಠಿಣ ಕ್ರಮಕ್ಕೆ ತಜ್ಞರ ಶಿಫಾರಸ್ಸು *  ಸೋಂಕು ನಿಯಂತ್ರಣಕ್ಕೆ ಮತ್ತಷ್ಟು ಕಠಿಣ ಕ್ರಮ: ಅಶೋಕ್‌  

ಬೆಂಗಳೂರು(ಡಿ.03):  ನಗರದಲ್ಲಿ ಕೊರೋನಾ(Coronavirus) ಪ್ರಕರಣಗಳ ಸಂಖ್ಯೆ ಭಾನುವಾರ ಸಹ ಏರುಗತಿಯಲ್ಲಿ ಸಾಗಿದ್ದು, 190 ದಿನಗಳ ನಂತರ ಸೋಂಕಿನ ಪ್ರಕರಣಗಳ ಸಂಖ್ಯೆ 923 ತಲುಪಿದೆ. ಮೂವರು ಮೃತಪಟ್ಟಿದ್ದಾರೆ.
ಕಳೆದ ಜೂ.26ರಂದು ಒಂದೇ ದಿನ 955 ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದ್ದವು. ನಂತರ ಸೋಂಕಿನ ಪ್ರಕರಣ ಕಡಿಮೆಯಾಗುತ್ತಾ ಬಂದಿತ್ತು. ಈಗ ಕಳೆದ ಕೆಲವು ದಿನಗಳಿಂದ ಪುನಃ ಸೋಂಕು ಪ್ರಕರಣ ಹೆಚ್ಚಾಗತೊಡಗಿದೆ.

ಹೊಸದಾಗಿ 488 ಪುರುಷರು ಮತ್ತು 435 ಮಹಿಳೆಯರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಈವರೆಗಿನ ಒಟ್ಟು ಸೋಂಕಿತರ ಸಂಖ್ಯೆ 12,65,351ಕ್ಕೆ ಏರಿಕೆ ಆಗಿದೆ. 125 ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಗುಣಮುಖರ ಸಂಖ್ಯೆ 12,40,274 ತಲುಪಿದೆ. ಮೂವರ ಸಾವಿನಿಂದ ಈವರೆಗೆ 16,406 ಮಂದಿ ಮೃತಪಟ್ಟಿದ್ದಾರೆ. ಸದ್ಯ ಸೋಂಕಿಗೆ ಒಳಗಾಗಿರುವ ಒಟ್ಟು 8,671 ಜನರಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ(Department of Health) ಮಾಹಿತಿ ನೀಡಿದೆ.

Omicron Threat: 'ಕೋವಿಡ್‌ 3ನೇ ಅಲೆ ನಿಶ್ಚಿತ: ಮೈ ಮರೆತರೆ ಅಪಾಯ ತಪ್ಪಿದ್ದಲ್ಲ'

ಬಿಬಿಎಂಪಿ(BBMP) ವ್ಯಾಪ್ತಿಯ ಬೆಳ್ಳಂದೂರು (26), ದೊಡ್ಡಾನೆಕ್ಕುಂದಿ (11), ಹಗದೂರು, ಎಚ್‌ಎಸ್‌ಆರ್‌ ಬಡಾವಣೆ, ಅರಕೆರೆ (ತಲಾ 10) ಸೇರಿದಂತೆ ವರ್ತೂರು, ಹೊರಮಾವು, ಶಾಂತಲಾನಗರ, ಕೋರಮಂಗಲ ಮತ್ತು ಬೇಗೂರು ವ್ಯಾಪ್ತಿಯಲ್ಲಿ ಹೆಚ್ಚು ಜನರು ಸೋಂಕಿಗೆ ಒಳಗಾಗುತ್ತಿದ್ದಾರೆ.

ಭಾನುವಾರ ಕಂಟೈನ್ಮೆಂಟ್‌ ವಲಯಗಳ(Containment Zones) ಸಂಖ್ಯೆ 125ಕ್ಕೆ ಏರಿಕೆ ಆಗಿದೆ. ಈ ಪೈಕಿ ಬೊಮ್ಮನಹಳ್ಳಿಯಲ್ಲಿ 38, ಮಹದೇವಪುರ 35, ದಕ್ಷಿಣ 15, ಪೂರ್ವ 12, ಯಲಹಂಕ 11, ಪಶ್ಚಿಮ 10, ದಾಸರಹಳ್ಳಿ 3 ಹಾಗೂ ಆರ್‌ಆರ್‌ನಗರದಲ್ಲಿ 1 ಕಂಟೈನ್ಮೆಂಟ್‌ ವಲಯಗಳು ಸಕ್ರಿಯವಾಗಿವೆ ಎಂದು ಬಿಬಿಎಂಪಿ ವರದಿ ತಿಳಿಸಿದೆ.

ಜನ ಸಹಕರಿಸದಿದ್ದರೆ ಬೆಂಗ್ಳೂರು ಲಾಕ್‌ಡೌನ್‌: 

ಕೋವಿಡ್‌ 19(Covid19) ಹಾಗೂ ಹೊಸ ತಳಿ ಒಮಿಕ್ರೋನ್‌(Omicron) ಸೋಂಕು ನಿತ್ಯ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮತ್ತಷ್ಟುಕಠಿಣ ನಿರ್ಬಂಧಗಳನ್ನು ಜಾರಿಗೊಳಿಸುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಈ ತಿಂಗಳ 4 ಅಥವಾ 5 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj  Bommai) ಅವರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ.
ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅವರ ನೇತೃತ್ವದಲ್ಲಿ ಭಾನುವಾರ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್‌.ಅಶೋಕ್‌ ಈ ಸಂಬಂಧ ಮುನ್ಸೂಚನೆ ನೀಡಿದ್ದಾರೆ.

3ನೇ ಅಲೆ ನಿಶ್ಚಿತ?:

ರಾಜ್ಯದಲ್ಲಿ(Karnataka) ಮೂರನೇ ಅಲೆ ಬರೋದು ನಿಶ್ಚಿತ ಅನ್ನುವ ವಾತಾವರಣ ಇದೆ. ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಜತೆಗೆ ಹೊಸ ತಳಿ ಒಮಿಕ್ರಾನ್‌ ಪ್ರಕರಣಗಳೂ ವರದಿಯಾಗುತ್ತಿವೆ. ಬೆಂಗಳೂರು ರೆಡ್‌ ಝೋನ್‌ ಎಂದು ಕೇಂದ್ರ ಸರ್ಕಾರ ಗುರುತಿಸಿದೆ. ಈ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ರಾತ್ರಿ ಕರ್ಫ್ಯೂ(Night Curfew) ಮುಗಿಯುವ ಜ.7ಕ್ಕೂ ಮುನ್ನ ಮುಖ್ಯಮಂತ್ರಿ ಅವರು ಸಭೆ ನಡೆಸಲಿದ್ದಾರೆ. ಜ.4 ಇಲ್ಲವೇ 5ರಂದು ಸಭೆ ನಡೆಯುವ ಸಾಧ್ಯತೆ ಇದೆ. ಸಭೆಯಲ್ಲಿ ಇನ್ನಷ್ಟುಕಠಿಣ ನಿರ್ಬಂಧಗಳನ್ನು ಜಾರಿಗೊಳಿಸುವ ಸಂಬಂಧ ಚರ್ಚೆ ನಡೆಯಲಿದೆ. ಈಗಾಗಲೇ ತಜ್ಞರು ಜಾತ್ರೆ, ಪಾದಯಾತ್ರೆ, ಬಹಿರಂಗ ಸಭೆ ಯಾವುದನ್ನೂ ಪರಿಗಣಿಸಬಾರದು ಎಂದು ಹಲವು ಕಠಿಣ ನಿಬಂರ್‍ಧಗಳನ್ನು ಶಿಫಾರಸು ಮಾಡಿದ್ದಾರೆ. ಅವುಗಳನ್ನು ಯಥಾವತ್ತಾಗಿ ಜಾರಿ ಮಾಡುವ ಸಂಬಂಧ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಜನರ ಜೀವ ರಕ್ಷಣೆಯೇ ಸರ್ಕಾರದ ಮುಂದಿರುವ ಆದ್ಯತೆಯ ವಿಷಯ ಎಂದು ತಿಳಿಸಿದರು.

Karnataka Lockdown: 'ಐಸಿಯು ಶೇ.40 ಭರ್ತಿಯಾದರೆ ಲಾಕ್‌ಡೌನ್‌ ಮಾಡಿ'

ಲಾಕ್‌ಡೌನ್‌ ಎಚ್ಚರಿಕೆ:

ಎರಡನೇ ಅಲೆಯ ಸಂದರ್ಭದಲ್ಲಿ ಎದುರಾದ ಸಂಕಷ್ಟ ಮರುಕಳಿಸದಂತೆ ತಡೆಯುವುದು ಸರ್ಕಾರದ ಜವಾಬ್ದಾರಿ. ಆ ದಿಸೆಯಲ್ಲಿ ಮತ್ತೆ ಅಚಾತುರ್ಯ ಆಗದಂತೆ ಎಲ್ಲ ರೀತಿಯ ತಯಾರಿ ನಡೆಸಲಾಗುವುದು. ಸಾರ್ವಜನಿಕರು ಸರ್ಕಾರ ತರುವ ಕಠಿಣ ನಿರ್ಬಂಧಕ್ಕೆ ಸಹಕಾರ ಕೊಡಬೇಕು. ಇಲ್ಲದೇ ಇದ್ದಲ್ಲಿ, ನಾವು ಕೂಡಾ ಪಶ್ಚಿಮ ಬಂಗಾಳ, ಮುಂಬೈ ಮಾದರಿಯಲ್ಲಿ ಬೆಂಗಳೂರಿನಲ್ಲೂ ಲಾಕ್‌ಡೌನ್‌(Lockdown) ಮಾಡಬೇಕಾಗುತ್ತೆ ಎಂದು ಕೂಡ ಎಚ್ಚರಿಕೆ ನೀಡಿದರು.

ಪಾದಯಾತ್ರೆ:

ಕಾಂಗ್ರೆಸ್‌(Congress) ಮೇಕೆದಾಟು ಪಾದಯಾತ್ರೆಗೆ(Mekedatu Padayatra) ಸೇರುವ ಜನರಿಗೆ ಸರ್ಕಾರದಿಂದ ಕಡಿವಾಣ ಹಾಕಲಾಗುತ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಶೋಕ್‌(R Ashok), ಕಾಂಗ್ರೆಸ್‌ ಅಥವಾ ಜೆಡಿಎಸ್‌(JDS) ನವರು ಏನು ಮಾಡುತ್ತಾರೆ ಅನ್ನೋದು ನಮಗೆ ಮುಖ್ಯವಲ್ಲ. ಅವರು ಏನಾದರೂ ಮಾಡಿಕೊಳ್ಳಲಿ. ನಮಗೆ ರಾಜ್ಯದ ಜನರ ಜೀವ ರಕ್ಷಣೆ ಮುಖ್ಯ. ಮುಖ್ಯಮಂತ್ರಿಗಳು ಸಭೆ ಮಾಡಿ ಕಠಿಣ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.
 

PREV
Read more Articles on
click me!

Recommended Stories

ರಾಮನಗರದ ರೇವಣಸಿದ್ದೇಶ್ವರ ಬೆಟ್ಟದಲ್ಲಿ ದುರಂತ: ದೇವರ ದರ್ಶನಕ್ಕೂ ಮುನ್ನವೇ ಕಂದಕ ಸೇರಿದ ಭಕ್ತ!
Bengaluru: ಬೆಂಗಳೂರಿನಲ್ಲಿ 7ನೇ ಕ್ಲಾಸ್ ವಿದ್ಯಾರ್ಥಿ ಕಪಾಳಕ್ಕೆ ಹೊಡೆದ ಶಿಕ್ಷಕನ ಬಂಧನ