
ವಿಧಾನಸಭೆ (ಫೆ.15): ಬೆಂಗಳೂರು ನಗರದ ಅಭಿವೃದ್ಧಿ (Bengaluru Development) ಕಾರ್ಯ ಮತ್ತು ಮೂಲಸೌಕರ್ಯ ಕಲ್ಪಿಸಲು ರಾಜ್ಯ ಸರ್ಕಾರ 8,015 ಕೋಟಿ ರು. ಅನುಮೋದನೆ ನೀಡಿದ್ದು, 2022-23ರಲ್ಲಿ ಬೆಂಗಳೂರು ಮೆಟ್ರೋ ರೈಲು (Namma Metro) ಯೋಜನೆ ಎರಡನೇ ಹಂತವನ್ನು ಪೂರ್ಣಗೊಳಿಸಲಾಗುವುದು ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ (Thawar Chand Gehlot) ಹೇಳಿದ್ದಾರೆ.
ಸೋಮವಾರ ವಿಧಾನಮಂಡಲದ ಉಭಯ ಸದನಗಳ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ಅವರು, ಬೆಂಗಳೂರು ನಗರದ ವ್ಯವಸ್ಥಿತ ಅಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಂಡಿದೆ. 8,015 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಮತ್ತು ಮೂಲಸೌಕರ್ಯ ಕಲ್ಪಿಸುವ ಕಾರ್ಯಕ್ಕೆ ಅನುಮೋದನೆ ನೀಡಲಾಗಿದೆ. ಮೆಟ್ರೋ ರೈಲು ಸೇವೆಯನ್ನು ಮೈಸೂರು ರಸ್ತೆಯಿಂದ ಕೆಂಗೇರಿವರೆಗೆ ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲಾಗಿದೆ. ಎರಡನೇ ಹಂತದಲ್ಲಿ 32.54 ಕಿ.ಮೀ.ಗಳ ಉದ್ದದ ಮಾರ್ಗವನ್ನು 2022-23ರಲ್ಲಿ ಮುಕ್ತಾಯಗೊಳಿಸಿ, ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಸಿಲಿಕಾನ್ ಸಿಟಿ ಅಭಿವೃದ್ಧಿಗೆ ₹6000 ಕೋಟಿ: ಮಾಧುಸ್ವಾಮಿ
ಎಸ್‌ಟಿಪಿ ಉನ್ನತೀಕರಣ: ಬೆಳ್ಳಂದೂರು ಮತ್ತು ವರ್ತೂರು ಕೆರೆಯ ಮಾಲಿನ್ಯವನ್ನು ತಡೆಗಟ್ಟಲು ಕೋರಮಂಗಲ ಮತ್ತು ಚಲ್ಲಘಟ್ಟಕಣಿವೆಯಲ್ಲಿರುವ ಹಳೆಯ ತ್ಯಾಜ್ಯ ನೀರಿನ ಶುದ್ಧೀಕರಣ ಘಟಕಗಳ ಉನ್ನತೀಕರಣ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. 5,550 ಕೋಟಿ ರು. ಅಂದಾಜು ವೆಚ್ಚದ ಕಾವೇರಿ ನೀರು ಸರಬರಾಜಿನ 5ನೇ ಹಂತದ ಯೋಜನೆಯಿಂದ ಬೆಂಗಳೂರು ನಗರಕ್ಕೆ ದಿನಂಪ್ರತಿ 775 ದಶಲಕ್ಷ ಲೀಟರ್ ಹೆಚ್ಚುವರಿ ನೀರು ದೊರೆಯಲಿದೆ. ಬೆಂಗಳೂರಿಗೆ ಶುದ್ಧ ನೀರನ್ನು ಪೂರೈಸಲು ತಿಪ್ಪಗೊಂಡನಹಳ್ಳಿ ಜಲಾಶಯವನ್ನು ಪುನಃಶ್ಚೇತನಗೊಳಿಸುವ ಶುದ್ಧೀಕರಣ ಕಾಮಗಾರಿಗೆ ಸರ್ಕಾರ ಅನುಮೋದನೆ ನೀಡಿದೆ.
ಎತ್ತಿನಹೊಳೆ ಯೋಜನೆಯಡಿಯಲ್ಲಿ 2.5 ಟಿಎಂಸಿ ನೀರನ್ನು ನಗರಕ್ಕೆ ಹಂಚಿಕೆ ಮಾಡಲಾಗಿದೆ. ಕೊಳಚೆ ಪ್ರದೇಶದಲ್ಲಿ ಮತ್ತು ಎಸ್‌ಸಿ/ಎಸ್‌ಟಿ ಕಾಲೋನಿಗಳಲ್ಲಿ ವಾಸಿಸುವ ಸುಮಾರು 1.03 ಲಕ್ಷ ಕುಟುಂಬಗಳಿಗೆ ಉಚಿತವಾಗಿ 10 ಸಾವಿರ ಲೀಟರ್ ಕಾವೇರಿ ನೀರನ್ನು ಸರಬರಾಜು ಮಾಡಲಾಗುತ್ತಿದೆ ಎಂದರು. ಬಿಬಿಎಂಪಿಯು ಸುಲಭ ಸೇವಾ ವಿತರಣೆಯ ಅಂಗವಾಗಿ ಗಣಕೀಕೃತ ಕಟ್ಟಡ ನಕ್ಷೆ ಅನುಮೋದನೆ ಮತ್ತು ಭೂ ಬದಲಾವಣೆಯನ್ನು ಭೂಮಿ ಮತ್ತು ಕಟ್ಟಡ ಯೋಜನೆ ಅನುಮೋದನೆ ವ್ಯವಸ್ಥೆಯಲ್ಲಿ(ಎಲ್‌ಬಿಪಿಎಎಸ್) ಆಟೋ ಪ್ಲಾನ್ ತಂತ್ರಾಂಶವನ್ನು ಉಪಯೋಗಿಸಿಕೊಂಡು ಆನ್‌ಲೈನ್ ಮೂಲಕ ಅನುಮೋದನೆ ನೀಡಲು ಕ್ರಮವಹಿಸಲಾಗಿದೆ ಎಂದು ಹೇಳಿದರು.
Bengaluru Development: ಸರ್ಕಾರ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಬದ್ಧ: ಬೊಮ್ಮಾಯಿ!
84 ಕಿ.ಮೀ. ರಸ್ತೆ ವೈಟ್ ಟಾಪಿಂಗ್: ಪ್ರತಿ ತಿಂಗಳು ಮೂರನೇ ಶನಿವಾರದಂದು ಜಲಮಂಡಳಿಯು ಬೆಂಗಳೂರು ನಗರದ 16 ವಿವಿಧ ಸ್ಥಳಗಳಲ್ಲಿ ಜಲಸ್ಪಂದನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ. ಬಿಬಿಎಂಪಿ ವ್ಯಾಪ್ತಿಯ 158.27 ಕಿ.ಮೀ. ಉದ್ದದ 77 ರಸ್ತೆಗಳನ್ನು ಗುಂಡಿ ಮುಕ್ತಗೊಳಿಸಲು ಆಯ್ಕೆ ಮಾಡಲಾಗಿದೆ. 83.91 ಕಿ.ಮೀ. ಉದ್ದದ ರಸ್ತೆಯನ್ನು ವೈಟ್ ಟಾಪಿಂಗ್ ರಸ್ತೆಯನ್ನಾಗಿ ಪರಿವರ್ತಿಸಲಾಗಿದೆ.
ಸಾರ್ವಜನಿಕರಿಗೆ ಪಾದಚಾರಿ ಮಾರ್ಗಗಳನ್ನು ಟೆಂಡರ್ ಶ್ಯೂರ್ ಮಾದರಿಯಲ್ಲಿ ಒದಗಿಸಲು 33 ಕಿ.ಮೀ. ಉದ್ದದ 47 ರಸ್ತೆಗಳನ್ನು ಆಯ್ಕೆ ಮಾಡಲಾಗಿದೆ. ಕಳೆದ ಎರಡು ಎರಡು ವರ್ಷಗಳ ಅವಧಿಯಲ್ಲಿ ರಾಜ್ಯ ಸರ್ಕಾರ ಮುಖ್ಯಮಂತ್ರಿಗಳ ನವನಗರೋತ್ಥಾನ ಕ್ರಿಯಾ ಯೋಜನೆ ಅಡಿಯಲ್ಲಿ 33 ಕೆರೆಗಳ ಪುನಶ್ಚೇತನ ಮತ್ತು ಸಮಗ್ರ ಅಭಿವೃದ್ಧಿಗಾಗಿ 317.25 ಕೋಟಿ ರು. ಅನುದಾನ ಒದಗಿಸಲಾಗಿದೆ ಎಂದು ರಾಜ್ಯಪಾಲ ಗೆಹಲೋತ್ ತಿಳಿಸಿದರು.