
ಧಾರವಾಡ (ಜೂ.18): ಧಾರವಾಡ ನಗರದ ಡಿಸಿ ಬಂಗ್ಲೆಯ ಹತ್ತಿರದಲ್ಲಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಚೇರಿಯಲ್ಲಿ ನಿನ್ನೆ ಅಸಾಧಾರಣ ಘಟನೆ ನಡೆದಿದ್ದು, 8 ಅಡಿ ಉದ್ದದ ಹಾವು ಬಾತ್‌ರೂಮಿನಲ್ಲಿ ಪತ್ತೆಯಾಗಿರುವ ಘಟನೆ ನೌಕರರಲ್ಲಿ ಆತಂಕದ ವಾತಾವರಣ ಮೂಡಿಸಿದೆ.
ಬಾತ್‌ರೂಮ್ ಬಾಗಿಲು ತೆರೆದ ಕ್ಷಣ ಬೆಚ್ಚಿಬಿದ್ದ ಸಿಬ್ಬಂದಿ
ಸಾಮಾನ್ಯ ರೊಜಿನ ಕೆಲಸಗಳಲ್ಲಿ ತೊಡಗಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಏನೋ ಶಬ್ದ ಕೇಳಿಸಿಕೊಂಡ ಹಿನ್ನೆಲೆಯಲ್ಲಿ ಬಾತ್‌ರೂಂ ಬಾಗಿಲು ತೆರೆದು ನೋಡಿದಾಗ ಆಶ್ಚರ್ಯ ಹಾಗೂ ಆತಂಕಕ್ಕೆ ಕಾರಣವಾದ ದೃಶ್ಯ ಕಾಣಿಸಿಕೊಂಡಿತು. ಬಾತ್‌ರೂಮ್‌ನ ಅಂಗಳದಲ್ಲೇ 8 ಅಡಿ ಉದ್ದದ ಹಾವು ಅಡಗಿ ಕುಳಿತಿರುವುದು ಕಂಡುಬಂದಿದ್ದು, ಎಲ್ಲರೂ ಬೆಚ್ಚಿಬಿದ್ದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಕ್ಸಿಕ್ಯುಟಿವ್ ಇಂಜಿನಿಯರ್ ಸೊಪ್ಪಿನಮಠ ಅವರ ಕಚೇರಿಯ ಬಾತ್‌ರೂಮಿನಲ್ಲಿ ಈ ಹಾವು ಅಡಗಿ ಕುಳಿತಿತ್ತು. ತಕ್ಷಣ ಸ್ಥಳೀಯ ಉರಗ ತಜ್ಞ ಎಲ್ಲಪ್ಪ ಜೋಡಳ್ಳಿಯನ್ನು ಸಂಪರ್ಕಿಸಿದ ಸಿಬ್ಬಂದಿ, ತಕ್ಷಣವೇ ಹಾವನ್ನು ಹಿಡಿದು ಸುರಕ್ಷಿತವಾಗಿ ಹಿಡಿಯುವ ಕಾರ್ಯದಲ್ಲಿ ನಿರತರಾಗಿದರು.
ರ‍್ಯಾಟ್ ಸ್ನೇಕ್:
ಉರಗ ತಜ್ಞ ಎಲ್ಲಪ್ಪ ಅವರು ಪರಿಶೀಲನೆ ಮಾಡಿದಾಗ ಇದು ವಿಷರಹಿತ ‘ರ‍್ಯಾಟ್ ಸ್ನೇಕ್’ (ಇಳೀ ಹಾವು) ಎಂಬುದಾಗಿ ದೃಢಪಡಿಸಿದ್ದು, ಇದರಿಂದ ಕಚೇರಿ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ. ಹಾವು ಹಿಡಿದು ಅದನ್ನು ಅರಣ್ಯ ಪ್ರದೇಶಕ್ಕೆ ಬಿಟ್ಟಿರುವುದಾಗಿ ತಿಳಿದು ಬಂದಿದೆ. ಈ ಘಟನೆಯಿಂದಾಗಿ ಸರ್ಕಾರಿ ಕಚೇರಿಗಳ ಹೈಜಿನ್ ಮತ್ತು ಸೌಕರ್ಯಗಳ ನಿರ್ವಹಣೆ ಕುರಿತಂತೆ ಪ್ರಶ್ನೆಗಳು ಮೂಡಿವೆ. ಬಾತ್‌ರೂಮಿನಲ್ಲಿ ಇಂತಹ ಉದ್ದದ ಹಾವು ಎಷ್ಟು ದಿನಗಳಿಂದ ಅಡಗಿ ಕುಳಿತಿತ್ತು ಎಂಬುದರ ಕುರಿತು ಅನುಮಾನ ವ್ಯಕ್ತವಾಗುತ್ತಿದ್ದು, ಅಧಿಕಾರಿಗಳು ಇನ್ನು ಮುಂದೆ ಹೆಚ್ಚಿನ ಎಚ್ಚರಿಕೆ ವಹಿಸುವ ಅಗತ್ಯವಿದೆ.
ಸರ್ಕಾರಿ ಕಚೇರಿಗಳಲ್ಲಿ ಇಂತಹ ಅಪರೂಪದ ಘಟನೆಗಳು ಸಿಬ್ಬಂದಿಯಲ್ಲಿ ಆತಂಕಕ್ಕೆ ಕಾರಣವಾಗುತ್ತಿವೆ. ಆದ್ದರಿಂದ ಸುರಕ್ಷತೆ ಹಾಗೂ ನಿತ್ಯ ಪರಿಶುದ್ಧತೆ ಕಾಯ್ದುಕೊಳ್ಳುವುದು ಅವಶ್ಯಕ ಎಂದು ನೌಕರರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.