ಒಂದೇ ದಿನ ಎಂಟು ಜನರು ಗುಣಮುಖರಾಗುತ್ತಿರುವುದು ಅತ್ಯಂತ ಸಂತಸದ ಸಂಗತಿ| ಉಳಿದವರ ಆರೋಗ್ಯ ಸ್ಥಿರವಾಗಿದ್ದು ಆದಷ್ಟು ಬೇಗ ಗುಣಮುಖರಾಗಿ ಬಿಡುಗಡೆ: ಡಾ. ಎನ್. ಬಸರೆಡ್ಡಿ| ಹೂಗುಚ್ಛ, ಹಣ್ಣು-ಹಂಪಲು ನೀಡಿ ಬೀಳ್ಕೊಡುಗೆ|
ಬಳ್ಳಾರಿ(ಜೂ.06): ಇಲ್ಲಿನ ಕೊರೋನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಂಟು ಜನರು ಗುಣಮುಖರಾಗಿ ಶುಕ್ರವಾರ ಬಿಡುಗಡೆಯಾದರು.
ನಗರದ ಮಿಲ್ಲಾರ್ ಪೇಟೆ ಪ್ರದೇಶದ 46 ವರ್ಷದ ವ್ಯಕ್ತಿ, ಬಳ್ಳಾರಿ ತಾಲೂಕಿನ ಸೋಮಸಮುದ್ರ ಗ್ರಾಮದ 22 ವರ್ಷದ ಯುವಕ, ಕೂಡ್ಲಿಗಿ ತಾಲೂಕಿನ 35 ವರ್ಷದ ವ್ಯಕ್ತಿ, ಬಳ್ಳಾರಿ ತಾಲೂಕು ಮೋಕಾ ಬಳಿಯ ತಂಬ್ರಹಳ್ಳಿ ಗ್ರಾಮದ 24 ವರ್ಷದ ಯುವಕ, 20 ವರ್ಷದ ಯುವತಿ, 5 ವರ್ಷದ ಬಾಲಕಿ, 24 ವರ್ಷದ ಯುವತಿ ಮತ್ತು 38 ವರ್ಷದ ಮಹಿಳೆ ಇಂದು ಬಿಡುಗಡೆಗೊಂಡರು. ಇವರದ್ದು ಮಹಾರಾಷ್ಟ್ರ ಹಾಗೂ ರಾಜಸ್ತಾನದಿಂದ ಬಂದ ಟ್ರಾವೆಲ್ ಹಿಸ್ಟ್ರಿ ಇದೆ.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎನ್. ಬಸರೆಡ್ಡಿ ಅವರು ಗುಣಮುಖರಿಗೆ ಹೂಗುಚ್ಛ, ಹಣ್ಣು-ಹಂಪಲು, ಪಡಿತರ ಕಿಟ್ ನೀಡಿ ಚಪ್ಪಾಳೆ ತಟ್ಟಿಅಭಿನಂದಿಸಿ ಬೀಳ್ಕೊಟ್ಟರು.
ಇದೇ ವೇಳೆ ಮಾತನಾಡಿದ ಡಾ. ಬಸರೆಡ್ಡಿ, ಒಂದೇ ದಿನ ಎಂಟು ಜನರು ಗುಣಮುಖರಾಗುತ್ತಿರುವುದು ಅತ್ಯಂತ ಸಂತಸದ ಸಂಗತಿಯಾಗಿದೆ. ಉಳಿದವರ ಆರೋಗ್ಯ ಸ್ಥಿರವಾಗಿದ್ದು ಆದಷ್ಟುಬೇಗ ಗುಣಮುಖರಾಗಿ ಬಿಡುಗಡೆಯಾಗಲಿದ್ದಾರೆ ಎಂದರಲ್ಲದೆ, ಆರಂಭದಲ್ಲಿ ಕೊರೋನಾ ಆಸ್ಪತ್ರೆಗೆ ಬಂದವರು ಭಯಭೀತರಾಗಿದ್ದರು. ಹೀಗಾಗಿ ಆಪ್ತ ಸಮಾಲೋಚನೆ ಮಾಡಿ ಭಯ ಹೋಗಲಾಡಿಸಲಾಯಿತು ಎಂದು ತಿಳಿಸಿದರು.
'ಕೊರೋನಾಗೆ ಮುಂದುವರೆದ ದೇಶಗಳೇ ತತ್ತರ, ಭಾರತದಲ್ಲಿ ಮೋದಿಯಿಂದ ಕೋವಿಡ್ ನಿಯಂತ್ರಣ'
ಗುಣಮುಖರು ಮಾತನಾಡಿ, ಆಸ್ಪತ್ರೆಯಲ್ಲಿ ಎಲ್ಲ ಸೌಕರ್ಯ ಕಲ್ಪಿಸಲಾಗಿತ್ತು. ಯಾವುದೇ ಸಮಸ್ಯೆಯಾಗದಂತೆ ನೋಡಿಕೊಂಡರು. ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ನಿತ್ಯವೂ ಆಗಮಿಸಿ ಆರೋಗ್ಯ ತಪಾಸಣೆ ನಡೆಸುತ್ತಿದ್ದರು. ಮಾನಸಿಕವಾಗಿ ಸಹ ನಮ್ಮನ್ನು ಸದೃಢಗೊಳಿಸಿದರು. ಹೀಗಾಗಿ ನಾವು ಯಾವುದೇ ಆತಂಕವಿಲ್ಲದೆ ಚಿಕಿತ್ಸೆ ಪಡೆದು ಗುಣಮುಖರಾಗಿ ಹೊರಬರಲು ಸಾಧ್ಯವಾಯಿತು ಎಂದರು.
ಕೋವಿಡ್ ಜಿಲ್ಲಾ ನೋಡಲ್ ಅಧಿಕಾರಿ ಡಾ. ಯೋಗಾನಂದ ರೆಡ್ಡಿ, ಡಾ. ನಿಖಲ್, ಡಾ. ಶಂಕರ್‌ನಾಯಕ್, ಡಾ. ಪ್ರಕಾಶ್, ಡಾ. ಉದಯಶಂಕರ್, ಡಾ. ದೈವಿಕ್, ಶುಶ್ರೂಷಾ ಅಧೀಕ್ಷ ಶಾಂತಾಬಾಯಿ, ಡಾ.ಚಿತ್ರಶೇಖರ್ ಮತ್ತಿತರರಿದ್ದರು.
43 ಜನರು ಬಿಡುಗಡೆ, 10 ಜನರಿಗೆ ಚಿಕಿತ್ಸೆ
ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 54 ಕೊರೋನಾ ಪ್ರಕರಣಗಳು ಕಂಡು ಬಂದಿವೆ. ಈ ಪೈಕಿ 43 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದರೆ, ಓರ್ವ ಮೃತಪಟ್ಟಿದ್ದಾನೆ. ಇನ್ನು 10 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಇಬ್ಬರಿಗೆ ಮಾತ್ರ ರೋಗ ಲಕ್ಷಣಗಳಿದ್ದು, ಉಳಿದ ಎಂಟು ಜನರಿಗೆ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ. ಶುಕ್ರವಾರ 172 ಜನರಿಗೆ ಗಂಟಲುದ್ರವ ಪಡೆದು ಪರೀಕ್ಷೆಗೆ ಕಳಿಸಲಾಗಿದೆ. ಇನ್ನು 139 ಜನರ ಗಂಟಲುದ್ರವದ ವೈದ್ಯಕೀಯ ವರದಿ ಬರಬೇಕಾಗಿದೆ. ಈ ವರೆಗೆ 10875 ಜನರ ಗಂಟಲುದ್ರವ ಪಡೆದು ಪರೀಕ್ಷೆ ಮಾಡಲಾಯಿತು. ಈ ಪೈಕಿ 54 ಜನರಿಗೆ ಪಾಸಿಟೀವ್ ಕಂಡು ಬಂದಿದ್ದು, ಉಳಿದ 10682 ಜನರಿಗೆ ನೆಗೆಟೀವ್ ಬಂದಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಜಿಂದಾಲ್ ನೌಕರರಿಗೆ ವೈರಸ್; ಜನರಲ್ಲಿ ಆತಂಕ:
ಜಿಂದಾಲ್ (ಜೆಎಸ್‌ಡಬ್ಲ್ಯು) ಕಾರ್ಖಾನೆಯಲ್ಲಿ ಕೆಲಸ ಮಾಡುವ ಇಬ್ಬರು ನೌಕರರಿಗೆ ಕೊರೋನಾ ವೈರಸ್ ಸೋಂಕು ಹರಡಿರುವುದು ಕಾರ್ಖಾನೆ ಸುತ್ತಮುತ್ತಲ ಗ್ರಾಮಗಳು ಹಾಗೂ ವಿವಿಧ ತಾಲೂಕಗಳ ಜನರಲ್ಲಿ ಆತಂಕ ಮೂಡಿಸಿದೆ.ಜಿಂದಾಲ್‌ನಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ನೌಕರರು ಕೆಲಸ ಮಾಡುತ್ತಿದ್ದು, ಸಂಡೂರು, ಹೊಸಪೇಟೆ, ಬಳ್ಳಾರಿ, ಕಂಪ್ಲಿ ಮತ್ತಿತರ ಭಾಗಗಳಿಂದ ನಿತ್ಯ ಸಾವಿರಾರು ಕಾರ್ಮಿಕರು ಕೆಲಸಕ್ಕೆ ಹೋಗುತ್ತಿದ್ದು, ಸೋಂಕಿನಿಂದ ಪಾರಾಗುವುದು ಹೇಗೆ ಎಂಬ ಚಿಂತೆ ಕಾಡಲಾರಂಭಿಸಿದೆ.
ಲಾಕ್‌ಡೌನ್ ವೇಳೆ ಕಾರ್ಖಾನೆಯನ್ನು ಕೆಲ ದಿನಗಳ ಮಟ್ಟಿಗೆ ಬಂದ್ ಮಾಡಿದ್ದರೆ ವೈರಸ್ ಹರಡುವ ಸಾಧ್ಯತೆ ಇರುತ್ತಿರಲಿಲ್ಲ ಎಂದು ಸಾರ್ವಜನಿಕರು ಹೇಳುತ್ತಿದ್ದು, ಇದೀಗ ಕೆಲಸಕ್ಕೆ ಹೋಗುತ್ತಿರುವ ನೌಕರರು, ಕೊರೋನಾ ವೈರಸ್‌ನಿಂದ ಎಷ್ಟುಸುರಕ್ಷಿತ ಎಂಬ ಪ್ರಶ್ನೆ ಎದ್ದಿದೆ. ಏತನ್ಮಧ್ಯೆ ಜಿಂದಾಲ್ ಆಡಳಿತ ಮಂಡಳಿ ಪ್ರಕಟಣೆ ನೀಡಿದ್ದು, ಜಿಂದಾಲ್ ನೌಕರರು ಹಾಗೂ ಕುಟುಂಬ ಸದಸ್ಯರ ಸುರಕ್ಷತೆಗೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಂಡಿರುವುದಾಗಿ ಹೇಳಿದೆ.