ಕಲ್ಯಾಣ ಕರ್ನಾಟಕ ಭಾಗದ 4 ಕಾಲೇಜುಗಳಿಗೆ ಚಾಟಿ| ಕಾಲೇಜುಗಳು ದಂಡ ಮೊತ್ತ ಪಾವತಿಸಿದ ಕೂಡಲೇ ಅದನ್ನು ಸಿಎಂ ವಿಪತ್ತು ಪರಿಹಾರ ನಿಧಿ, ಕೋವಿಡ್ ಪರಿಹಾರ ನಿಧಿಗೆ ರಿಜಿಸ್ಟ್ರಿ ವರ್ಗಾವಣೆ ಮಾಡಬೇಕು| ದಂಡ ಪಾವತಿಸಲು ವಿಫಲವಾದರೆ ಅಂತಹ ಕಾಲೇಜುಗಳ ವಿರುದ್ಧ ಕಲಬುರಗಿ ಪೀಠದ ಹೆಚ್ಚುವರಿ ರಿಜಿಸ್ಟ್ರಾರ್ ಜನರಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಬೇಕು ಎಂದು ಆದೇಶದಲ್ಲಿ ತಿಳಿಸಿದ ಹೈಕೋರ್ಟ್|
ಬೆಂಗಳೂರು(ಸೆ.16): ಮಾಪ್ ಅಪ್ ರೌಂಡ್ ಮುಗಿದ ನಂತರ ಖಾಲಿ ಉಳಿದ ಸರ್ಕಾರಿ ಕೋಟಾದಡಿಯ ದಂತ ವೈದ್ಯಕೀಯ ಸೀಟುಗಳಿಗೆ 82 ವಿದ್ಯಾರ್ಥಿಗಳನ್ನು ಅನಧಿಕೃತವಾಗಿ ದಾಖಲಿಸಿಕೊಂಡ ಉತ್ತರ ಕರ್ನಾಟಕ ಭಾಗದ ಪ್ರತ್ಯೇಕ ನಾಲ್ಕು ದಂತ ವೈದ್ಯಕೀಯ ಕಾಲೇಜುಗಳಿಗೆ ಒಟ್ಟು 8.20 ಕೋಟಿ ರು. ದಂಡ ವಿಧಿಸಿ ಹೈಕೋರ್ಟ್ ಮಹತ್ವ ಆದೇಶ ನೀಡಿದೆ.
ವಿವಾದಿತ 82 ಸೀಟುಗಳಿಗೆ ವಿದ್ಯಾರ್ಥಿಗಳ ಪ್ರವೇಶಾತಿಗೆ ಅನುಮೋದನೆ ನೀಡಲು ನಿರಾಕರಿಸಿ ರಾಜ್ಯ ಸರ್ಕಾರ ಮತ್ತು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಹೊರಡಿಸಿದ ಆದೇಶ ರದ್ದು ಕೋರಿ ಬೀದರ್ ಜಿಲ್ಲೆಯ ನೌಬಾದ್‌ನ ಎಸ್.ಬಿ.ಪಾಟೀಲ್ ದಂತ ಕಾಲೇಜು ಮತ್ತು ಆಸ್ಪತ್ರೆ, ಎಸ್.ಬಿ.ಪಾಟೀಲ್ ದಂತ ವಿಜ್ಞಾನಗಳ ಹಾಗೂ ಸಂಶೋಧನಾ ಸಂಸ್ಥೆ, ಕಲಬುರಗಿ ಜಿಲ್ಲೆಯ ಹುಮನಬಾದ್ ತಾಲೂಕಿನ ಹೈಕ ಅಭಿವೃದ್ಧಿ ಶಿಕ್ಷಣ ಟ್ರಸ್ಟ್‌ನ ದಂತ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ, ಎಸ್.ನಿಜಲಿಂಗಪ್ಪ ದಂತ ವಿಜ್ಞಾನಗಳ ಮತ್ತು ಸಂಶೋಧನಾ ಸಂಸ್ಥೆಗಳು ಹಾಗೂ ಸೀಟು ಅನುಮೋದನೆ ಸಿಗದ 82 ವಿದ್ಯಾರ್ಥಿಗಳು ಹೈಕೋರ್ಟ್‌ಗೆ ಪ್ರತ್ಯೇಕ ತಕರಾರು ಅರ್ಜಿ ಸಲ್ಲಿಸಿದ್ದರು.
ಅರ್ಜಿಗಳ ವಿಚಾರಣೆ ನಡೆಸಿದ ಕಲಬುರಗಿ ಪೀಠದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಮತ್ತು ನ್ಯಾಯಮೂರ್ತಿ ಪಿ.ಕೃಷ್ಣ ಭಟ್ ಅವರಿದ್ದ ವಿಭಾಗೀಯ ನ್ಯಾಯಪೀಠ, ‘ಮಾಪ್ ಅಪ್ ರೌಂಡ್ ಮುಗಿದ ನಂತರ ದಂತ ವೈದ್ಯಕೀಯ ಕೋರ್ಸ್ ನಿಯಮ ಉಲ್ಲಂಘಿಸಿ ಅರ್ಜಿದಾರ ಕಾಲೇಜುಗಳಿಗೆ, ತಮ್ಮಲ್ಲಿ ಖಾಲಿ ಉಳಿದ ಸರ್ಕಾರಿ ಕೋಟಾದಡಿಯ 82 ದಂತ ವೈದ್ಯಕೀಯ ಸೀಟುಗಳಿಗೆ ಕೆಇಎ ನಡೆಸುವ ಸಿಇಟಿಗೆ ಹಾಜರಾದ ವಿದ್ಯಾರ್ಥಿಗಳನ್ನು ಮಾತ್ರ ದಾಖಲಿಸಿಕೊಳ್ಳಲು ಅವಕಾಶವಿತ್ತು. ಆದರೆ, ಈ ನಾಲ್ಕು ಸಂಸ್ಥೆಗಳು ಕೆಇಎ ನಡೆಸಿದ ಸಿಇಟಿಗೆ ಹಾಜರಾಗದ ಅಥವಾ ಕಾಮೆಡ್-ಕೆ ಪರೀಕ್ಷೆ ಹಾಜರಾದ ವಿದ್ಯಾರ್ಥಿಗಳನ್ನು ದಾಖಲಿಸಿಕೊಂಡಿವೆ. ಇದು ಕಾನೂನು ಬಾಹಿರ ಕ್ರಮ’ ಎಂದು ಅಭಿಪ್ರಾಯಪಟ್ಟಿತು.
ಈ 82 ವಿದ್ಯಾರ್ಥಿಗಳನ್ನು ಅಕ್ರಮವಾಗಿ ಖಾಲಿ ಉಳಿದ ಸರ್ಕಾರಿ ಕೋಟಾದಡಿಯ ಸೀಟುಗಳಿಗೆ ಪ್ರವೇಶ ಕಲ್ಪಿಸಿದ ಹಿನ್ನೆಲೆಯಲ್ಲಿ ಪ್ರತಿ ವಿದ್ಯಾರ್ಥಿಯ ಸಂಬಂಧ ತಲಾ 10 ಲಕ್ಷ ರು.ನಂತೆ ಎರಡು ತಿಂಗಳಲ್ಲಿ ದಂಡ ಪಾವತಿಸಬೇಕು. ದಂಡ ಪಾವತಿ ವಿಳಂಬವಾದರೆ ಒಂದು ತಿಂಗಳಿಗೆ ದಂಡ ಮೊತ್ತಕ್ಕೆ ಶೇ.2ರಷ್ಟುಬಡ್ಡಿ ಪಾವತಿಸಬೇಕು ಎಂದು ಆಯಾ ಕಾಲೇಜುಗಳಿಗೆ ನ್ಯಾಯಪೀಠ ಆದೇಶಿಸಿತು.
ಕೋರ್ಟ್ ಕಾರ್ಯ ವೈಖರಿ ಬಗ್ಗೆ ಕಟು ಶಬ್ದ ಬಳಸಿ ಟೀಕೆ: ಲಾಯರ್‌ಗೆ ಜಡ್ಜ್ ತರಾಟೆ
ಕಾಲೇಜುಗಳು ದಂಡ ಮೊತ್ತ ಪಾವತಿಸಿದ ಕೂಡಲೇ ಅದನ್ನು ಸಿಎಂ ವಿಪತ್ತು ಪರಿಹಾರ ನಿಧಿ, ಕೋವಿಡ್ ಪರಿಹಾರ ನಿಧಿಗೆ ರಿಜಿಸ್ಟ್ರಿ ವರ್ಗಾವಣೆ ಮಾಡಬೇಕು. ದಂಡ ಪಾವತಿಸಲು ವಿಫಲವಾದರೆ ಅಂತಹ ಕಾಲೇಜುಗಳ ವಿರುದ್ಧ ಕಲಬುರಗಿ ಪೀಠದ ಹೆಚ್ಚುವರಿ ರಿಜಿಸ್ಟ್ರಾರ್ ಜನರಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಬೇಕು ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.
ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಅರ್ಜಿದಾರರ ಕಾಲೇಜುಗಳು ಮನವಿಯನ್ನು ಭಾಗÜಶಃ ಪುರಸ್ಕರಿಸಿರುವ ಹೈಕೋರ್ಟ್, ವಿದ್ಯಾರ್ಥಿಗಳ ಪ್ರವೇಶಾತಿಗೆ ಅನುಮೋದನೆ ನಿರಾಕರಿಸಿದ ರಾಜೀವ್ ಗಾಂಧಿ ವಿವಿ ಕ್ರಮವನ್ನು ರದ್ದುಪಡಿಸಿತು. ಜೊತೆಗೆ, ತಾವು ಪದವಿ ಮುಗಿಸಿದ ನಂತರ ಕಡ್ಡಾಯವಾಗಿ ಒಂದು ವರ್ಷ ಗ್ರಾಮೀಣ ಸೇವೆ ನಿರ್ವಹಿಸುವುದಾಗಿ ವಿದ್ಯಾರ್ಥಿಗಳು ವೈಯಕ್ತಿಕವಾಗಿ ದೃಢೀಕರಿಸಿ ಸರ್ಕಾರ ಮತ್ತು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಗೆ ಎರಡು ತಿಂಗಳಲ್ಲಿ ಪ್ರಮಾಣಪತ್ರ ಸಲ್ಲಿಸಬೇಕು. ನಂತರ ಅವರ ಪ್ರವೇಶಾತಿ ಅನುಮೋದಿಸಬೇಕು. ವಿದ್ಯಾರ್ಥಿಗಳು ತಮ್ಮ ಪದವಿ ವ್ಯಾಸಂಗ ಪೂರೈಸಿ ದಂತ ವೈದ್ಯರಾಗಿ ನೋಂದಾಯಿಸಿಕೊಂಡ ನಂತರ ಒಂದು ವರ್ಷ ಕಡ್ಡಾಯವಾಗಿ ಗ್ರಾಮೀಣ ಸೇವೆ ಕೈಗೊಳ್ಳುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರ ಮತ್ತು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಗೆ ಹೈಕೋರ್ಟ್ ಆದೇಶಿಸಿದೆ.