ಕಲಬುರಗಿ, ಬೀದರ್ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಭಾರೀ ಮಳೆ| ಕಲಬುರಗಿ ನಗರ ಸೇರಿದಂತೆ ಜಿಲ್ಲೆಯ ಹೆಚ್ಚಿನ ಕಡೆ ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ| ಕಲಬುರಗಿ ನಗರದಲ್ಲಿ ಅನೇಕ ಕಾಲೋನಿಗಳ ಮನೆಗಳಿಗೆ ನುಗ್ಗಿದ ನೀರು|
ಕಲಬುರಗಿ(ಸೆ.16): ರಾಜ್ಯದ ಕರಾವಳಿಯಲ್ಲಿ ಸಂಪೂರ್ಣವಾಗಿ ಇಳಿಮುಖವಾಗಿರುವ ಮಳೆ ಮಂಗಳವಾರದಂದು ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಧಾರಾಕಾರವಾಗಿ ಸುರಿದಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.
ಕಲಬುರಗಿ ನಗರ ಸೇರಿದಂತೆ ಜಿಲ್ಲೆಯ ಹೆಚ್ಚಿನ ಕಡೆ ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆಗುತ್ತಿದೆ. ಪರಿಣಾಮ ಕಲಬುರಗಿ ನಗರದಲ್ಲಿ ಅನೇಕ ಕಾಲನಿಗಳ ಮನೆಗಳಿಗೆ ನೀರು ನುಗ್ಗಿದೆ. ನಗರದ ಸಿದ್ಧೇಶ್ವರ ಕಾಲೋನಿಯಲ್ಲಿ ಮನೆಯೊಂದರ ಛಾವಣಿ ಕುಸಿದು ಐವರಿಗೆ ಸಣ್ಣಪುಟ್ಟಗಾಯಗಳಾಗಿವೆ. ಇದೇವೇಳೆ ಕಮಲಾಪುರ ತಾಲೂಕಿನ ನಾಲ್ಕು ಗ್ರಾಮಗಳು ಜಲಾವೃತವಾಗಿದೆ. ಇಲ್ಲಿನ ಮನೆ, ಜಮೀನುಗಳಿಗೆ ನೀರು ನುಗ್ಗಿದ್ದು, ರೈತರು ಬೆಳೆದ ಸೋಯಾ, ತೊಗರಿ ಸೇರಿದಂತೆ ದವಸ ಧಾನ್ಯಗಳು ನಷ್ಟವಾಗಿವೆ. ಇದೇವೇಳೆ ಗುಂಡಗುರ್ತಿಯಲ್ಲಿ ಬಹುತೇಕ ಮನೆಗಳಿಗೆ ನೀರು ನುಗ್ಗಿ ಜನ ಜಾಗರಣೆ ಮಾಡುವಂತಾಗಿದೆ.
ಕಲಬುರಗಿ ಗಾಂಜಾಕೋರ ಬಿಜೆಪಿ ಕಾರ್ಯಕರ್ತ: ಕಾಂಗ್ರೆಸ್
ಕೊಪ್ಪಳ ಜಿಲ್ಲೆಯ ಹಲವು ಭಾಗಗಳಲ್ಲೂ ಮಂಗಳವಾರ ಸಂಜೆ ಭಾರಿ ಮಳೆಯಾಗಿದ್ದು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಬೀದರ್‌ನಲ್ಲೂ ಕಳೆದ ಕೆಲ ದಿನಗಳಿಂದ ಉತ್ತಮ ಮಳೆ ಸುರಿಯುತ್ತಿದ್ದು ಮಂಗಳವಾರವೂ ಮುಂದುವರಿದಿದೆ. ಹೀಗಾಗಿ ಜಮೀನುಗಳು ನೀರಿನಿಂದ ಆವೃತವಾಗಿ ಬೆಳೆಗಳು ಕೊಳೆಯಲಾರಂಭವಾಗಿರುವುದರಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅನ್ನುವಂತಾಗಿದೆ. ಇನ್ನುಳಿದಂತೆ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ.