ಭಾರತಕ್ಕೆ ಸ್ವಾತಂತ್ರ್ಯ. ಇದು, ನಮ್ಮ ಹೆಮ್ಮೆಯ ದಿನ. ಅಭಿಮಾನದ ಬಾವುಟವನ್ನು ಮುಗಿಲೆತ್ತರಕ್ಕೆ ಹಾರಿಸಿ ಇಂದಿಗೆ ಸರಿಯಾಗಿ 75 ವರ್ಷಗಳು ಕಳೆದಿವೆ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಹೇಳಿದರು.
ಚಿಕ್ಕಮಗಳೂರು (ಆ.15): ಚಿಕ್ಕಮಗಳೂರು ಜಿಲ್ಲೆಯಲ್ಲಿ 75ನೇ ಸ್ವಾತಂತ್ರ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ನಗರದ ನೇತಾಜಿ ಸುಭಾಷುಚಂದ್ರಬೋಸ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅನುಪಸ್ಥಿಯತಿಯಲ್ಲಿ ಜಿಲ್ಲಾಧಿಕಾರಿ ಕೆ ಎಸ್ ರಮೇಶ್ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿದರು. ಪೋಲಿಸ್ ಸಿಬ್ಬಂದಿಗಳು ಹಾಗೂ ಗೃಹರಕ್ಷಕರದಳದಿಂದ ಪಥಸಂಚಲನ ನಡೆಯಿತು.ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು. ಪೂರ್ವಜರು ತಮ್ಮ ವೈಯಕ್ತಿಕ ಸುಖ ಸಂತೋಷವನ್ನು ತ್ಯಾಗ ಮಾಡಿ ಸ್ವಾತಂತ್ರ್ಯಕ್ಕೆ ಬಲಿಯಾಗಿ, ಹೋರಾಟದಲ್ಲಿ ಪೆಟ್ಟು ತಿಂದು ಸೆರೆಮನೆ ವಾಸ ಅನುಭವಿಸಿದ ಸಹಸ್ರಾರು ದೇಶಭಕ್ತರನ್ನು ಸ್ಮರಿಸಿಕೊಳ್ಳುವ ಮತ್ತು ಆ ರಾಷ್ಟ್ರಭಕ್ತರಿಗೆ ಕೃತಜ್ಞತೆ ಸಮರ್ಪಿಸುವ ಸಮಯ ಇದಾಗಿದೆ ಎಂದು ಜಿಲ್ಲಾಧಿಕಾರಿ ಕೆ ಎಸ್ ರಮೇಶ್ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು. ಸ್ವಾತಂತ್ರ್ಯದ ಉಸಿರಿಗಾಗಿ ಹೋರಾಟ, ಯಜ್ಞದಲ್ಲಿ ಸಮರ್ಪಿಸಿಕೊಂಡ ತ್ಯಾಗಜೀವಿಗಳ ಹರಕೆಗಳಿವೆ. ಸಹಸ್ರಾರು ಹೋರಾಟಗಾರರ ಶುಭಾಕಾಂಕ್ಷೆಗಳಿವೆ. ಇಂದಿಗೂ ನಮ್ಮ ಯೋಧರು ರಾಷ್ಟ್ರದ ರಕ್ಷಣೆಗಾಗಿ ಅವಿರತ ಶ್ರಮ ವಹಿಸುತ್ತಿದ್ದಾರೆ ಈ ಎಲ್ಲರ ಕೊಡುಗೆಗಳನ್ನು ಸ್ಮರಿಸೋಣ ಎಂದರು.
ಸುಮಾರು 200 ವರ್ಷಗಳ ಕಾಲ ದಾಸ್ಯದ ಸಂಕೋಲೆಯೊಳಗೆ ಸಿಲುಕಿ ದೌರ್ಜನ್ಯದ ದಾಳಿಯಲ್ಲಿ ನಲುಗಿಹೋಗಿದ್ದ ನಮ್ಮ ಪೂರ್ವಜರು ಈ ಒಂದು ಸಂಭ್ರಮದ ಕ್ಷಣವನ್ನು ಅನುಭವಿಸಲು ಕ್ಷಣ ಕ್ಷಣದ ತಪಸ್ಸನ್ನು ಮಾಡಿದ್ದಾರೆ, ತಮ್ಮ ಜೀವನದ ಸಕಲವನ್ನೂ ಧಾರೆ ಎರೆದು ದೇಶದ ಸ್ವಾತಂತ್ರ್ಯದ ಹಂಬಲವೊಂದನ್ನೇ ಧ್ಯೇಯವಾಗಿಟ್ಟುಕೊಂಡು ಹಗಲಿರುಳು ಹೋರಾಡಿದ್ದಾರೆ ಎಂದರು.
ಸಂದಿಗ್ಧ ಸಮಯದಲ್ಲಿ ಜಿಲ್ಲಾಡಳಿತ ಸ್ಪಂದನೆ: ಜಿಲ್ಲೆ ಕಳೆದ ಎರಡು ವರ್ಷಗಳಿಂದ ತೀವ್ರ ಮಳೆಗೆ ತತ್ತರಿಸಿ ಹೋಗಿದ್ದು ಸಂದಿಗ್ಧ ಸಮಯದಲ್ಲಿ ಜನ ಜೀವನವನ್ನು ಸಹಜವಾಗಿರಿಸಲು ಜಿಲ್ಲಾಡಳಿತ ಬಹಳ ಸ್ಪಂದಿಸಿದೆ. ಈ ವರ್ಷದ ಅತಿವೃಷ್ಟಿಯಲ್ಲಾದ ಮಾನವ ಪ್ರಾಣಹಾನಿ, ಮನೆಗಳು, ಜಾನುವಾರು ಪ್ರಾಣಹಾನಿಗೆ ಪರಿಹಾರ ನೀಡಲಾಗುತ್ತಿದೆ.
ದೇವನಹಳ್ಳಿಯನ್ನು ತಿಂಗಳೊಳಗೆ ಜಿಲ್ಲಾ ಕೇಂದ್ರವಾಗಿಸಿ ಆದೇಶ: ಸಚಿವ ಡಾ.ಕೆ.ಸುಧಾಕರ್
ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ ಸ್ಪಂದಿಸುತ್ತಿದ್ದು ಹಲವು ಅಭಿವೃದ್ಧಿ ಕಾರ್ಯ ಕೈಗೊಂಡಿದೆ ಎಂದರು. ಜಗತ್ತು ಕರೊನಾ ಸಂಕಟದಿಂದ ಶೀಘ್ರವಾಗಿ ಮುಕ್ತವಾಗಿ ಮತ್ತು ವರುಣ ದೇವನ ಆರ್ಭಟ ಕಡಿಮೆಯಾಗಿ ಸದೊಲುಮೆಯ ಕೃಪಾ ಕಟಾಕ್ಷ ಒದಗಲಿ ಎಂದರು.
ದಾವಣಗೆರೆಯ ಬಾಪೂಜಿ ಕ್ರೀಡಾಂಗಣದಲ್ಲಿ ಧ್ವಜಾರೋಹಣ ಗೈದ ಉಸ್ತುವಾರಿ ಸಚಿವ ಬೈರತಿ
ಕಾರ್ಯಕ್ರಮದಲ್ಲಿ ಶಾಸಕ ಸಿ.ಟಿ.ರವಿ, ವಿಧಾನ ಪರಿಷತ್ತು ಸದಸ್ಯ ಎಂ.ಕೆ.ಪ್ರಾಣೇಶ್, ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಅಧ್ಯಕ್ಷ ವೆಂಕಟೇಶ್, ಚಿಕ್ಕಮಗಳೂರು ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಅಪರ ಜಿಲ್ಲಾಧಿಕಾರಿ ಬಿ.ಆರ್. ರೂಪಾ ಇದ್ದರು.