ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಅಟ್ಟಹಾಸ ಮುಂದುವರಿದಿದ್ದು, ಮಹಾರಾಷ್ಟ್ರದಿಂದ ಆಗಮಿಸಿದ ಬೆಳ್ತಂಗಡಿಯ ಮೂವರು ಹಾಗೂ ಸ್ಥಳೀಯ ನಿವಾಸಿ (ವೇಣೂರು) ಸೇರಿ ಒಟ್ಟು ನಾಲ್ಕು ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವರಲ್ಲಿ ವೇಣೂರಿನ ವ್ಯಕ್ತಿ ಲಿವರ್ ಸಮಸ್ಯೆಯಿಂದ ಮೇ 23ರಂದೇ ಸಾವಿಗೀಡಾಗಿದ್ದು, ಸಾವಿನ ಬಳಿಕ ಕೊರೋನಾ ಸೋಂಕು ಇರುವುದು ಪತ್ತೆಯಾಗಿದೆ.
ಮಂಗಳೂರು(ಮೇ 26): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಅಟ್ಟಹಾಸ ಮುಂದುವರಿದಿದ್ದು, ಮಹಾರಾಷ್ಟ್ರದಿಂದ ಆಗಮಿಸಿದ ಬೆಳ್ತಂಗಡಿಯ ಮೂವರು ಹಾಗೂ ಸ್ಥಳೀಯ ನಿವಾಸಿ (ವೇಣೂರು) ಸೇರಿ ಒಟ್ಟು ನಾಲ್ಕು ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವರಲ್ಲಿ ವೇಣೂರಿನ ವ್ಯಕ್ತಿ ಲಿವರ್ ಸಮಸ್ಯೆಯಿಂದ ಮೇ 23ರಂದೇ ಸಾವಿಗೀಡಾಗಿದ್ದು, ಸಾವಿನ ಬಳಿಕ ಕೊರೋನಾ ಸೋಂಕು ಇರುವುದು ಪತ್ತೆಯಾಗಿದೆ. ಈ ಪ್ರಕರಣಗಳೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 70ಕ್ಕೆ ಏರಿಕೆಯಾಗಿದೆ.
ಮಹಾರಾಷ್ಟ್ರದಿಂದ ಆಗಮಿಸಿದ ಮೂವರೂ ಸೋಂಕಿತರು ಪುರುಷರೇ ಆಗಿದ್ದು, 30, 25 ಮತ್ತು 55 ವರ್ಷ ವಯಸ್ಸಿನವರು. ಸೋಮವಾರ ಪಾಸಿಟಿವ್ ಬಂದ ಕೂಡಲೆ ಇವರನ್ನು ಕೋವಿಡ್ ಆಸ್ಪತ್ರೆಯಾದ ವೆನ್ಲಾಕ್‌ಗೆ ದಾಖಲಿಸಲಾಗಿದೆ.
ಚುನಾವಣೆ ಮುಂದಕ್ಕೆ, ಮುಂಬೈ ಸಹೋದರರನ್ನು ಕರೆಸಿಕೊಳ್ತೀವಿ: ನಳಿನ್
ಕ್ವಾರಂಟೈನ್‌ನಲ್ಲಿದ್ದರು: ಈ ಮೂವರು ಕೂಡ ಮಹಾರಾಷ್ಟ್ರದಿಂದ ಬಂದು ಬೆಳ್ತಂಗಡಿಯಲ್ಲಿ ಕ್ವಾರಂಟೈನ್‌ನಲ್ಲಿದ್ದರು. ಹಾಗಾಗಿ ಹೊರಗಿನವರಿಗೆ ಸೋಂಕು ತಗುಲಿರುವ ಸಾಧ್ಯತೆ ವಿರಳ. 55 ವರ್ಷದ ವ್ಯಕ್ತಿ ಮುಂಬೈನ ದೊಂಬಿವಿಲಿಯಿಂದ ಹಾಗೂ 30 ವರ್ಷದ ಯುವಕ ಪುಣೆಯಿಂದ ಮೇ 18ರಂದು ಜಿಲ್ಲೆಗೆ ಆಗಮಿಸಿದ್ದರೆ, 25 ವರ್ಷದ ಯುವಕ ಮೇ 20ರಂದು ಬಂದಿದ್ದರು. ಅವರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಸೋಮವಾರ ವರದಿ ಪಾಸಿಟಿವ್ ಬಂದಿದೆ.
ಸಾವಿನ ಬಳಿಕ ಸೋಂಕು ಪತ್ತೆ:
ವೇಣೂರಿನ 43 ವರ್ಷದ ವ್ಯಕ್ತಿ ಬೆಳ್ತಂಗಡಿಯಲ್ಲಿ ಸಿಮೆಂಟ್ ಅಂಗಡಿಯ ಗೂಡ್ಸ್ ರಿಕ್ಷಾ ಚಾಲಕರಾಗಿದ್ದರು. ಲಿವರ್ ಸೀರೋಸಿಸ್ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಮೇ 23ರಂದು ದಿಢೀರನೆ ತೀವ್ರ ಅಸ್ವಸ್ಥರಾಗಿದ್ದು, ಕೂಡಲೆ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅದೇ ದಿನ ಅವರು ಮೃತಪಟ್ಟಿದ್ದರು. ಸರ್ಕಾರದ ಮಾರ್ಗಸೂಚಿ ಅನ್ವಯ ಅವರ ಗಂಟಲ ದ್ರವದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಸೋಮವಾರ ವರದಿ ಬಂದಾಗ ಪಾಸಿಟಿವ್ ಇರುವುದು ಗೊತ್ತಾಗಿದೆ. ಬಳಿಕ ಬೋಳೂರಿನ ವಿದ್ಯುತ್ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.
ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ: ಅಧ್ಯಕ್ಷ ಕಟೀಲ್ ನಡೆಗೆ ಅಪಸ್ವರ
ಈ ವ್ಯಕ್ತಿ ಅಸ್ವಸ್ಥರಾಗುವ ಮೊದಲು ಬೆಳ್ತಂಗಡಿಯ ಪೇಟೆ ತುಂಬ ಓಡಾಡಿಕೊಂಡಿದ್ದು, ನೂರಾರು ಮಂದಿಯ ಸಂಪರ್ಕಕ್ಕೆ ಬಂದಿರುವ ಸಾಧ್ಯತೆಯಿದೆ ಎಂದು ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಈ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದವರೆಲ್ಲರೂ ಪರೀಕ್ಷೆಗೆ ಒಳಪಡುವಂತೆ ವೇಣೂರು ಗ್ರಾಮ ಪಂಚಾಯಿತಿ ಮನವಿ ಮಾಡಿದೆ. ಮೃತ ವ್ಯಕ್ತಿಯ ಮನೆಗೆ ಮೊಹರು ಹಾಕಲಾಗಿದ್ದು, ಮನೆಯ ಸಮೀಪ ಜನರ ಸಂಚಾರವನ್ನು ನಿಷೇಧಿಸಲಾಗಿದೆ.
ಬ್ಯೂಟಿ ಪಾರ್ಲರ್ ಸ್ಥಗಿತ: ಸಾವಿನ ಪ್ರಕರಣ ಗೊತ್ತಾದ ಕೂಡಲೆ ಬೆಳ್ತಂಗಡಿ ತಾಲೂಕು ಬ್ಯೂಟಿ ಪಾರ್ಲರ್ ಎಸೋಸಿಯೇಷನ್, ತಾಲೂಕಿನಲ್ಲಿ ಬ್ಯೂಟಿ ಪಾರ್ಲರ್‌ಗಳ ಕಾರ್ಯ ನಿರ್ವಹಣೆಯನ್ನು ಒಂದು ವಾರ ಸ್ಥಗಿತಗೊಳಿಸಲು ನಿರ್ಧರಿಸಿದೆ.
ಒಟ್ಟು ಸೋಂಕಿತರು- 70
ಗುಣಮುಖರಾದವರು- 26
ಚಿಕಿತ್ಸೆಯಲ್ಲಿರುವವರು- 37
ಸಾವು- 5 ಹಾಗೂ ಇಬ್ಬರು ಕೋವಿಡ್ ಪತ್ತೆಯಾಗುವ ಮೊದಲೇ ಸಾವಿಗೀಡಾದವರು.