ಬೆಂಗ್ಳೂರಲ್ಲಿ ಹೆಚ್ಚುತ್ತಿದೆ ಕೊರೋನಾ: ಒಂದೇ ದಿನ 7 ಮಂದಿ ಬಲಿ,ಆತಂಕದಲ್ಲಿ ಜನತೆ..!

By Kannadaprabha News  |  First Published Mar 19, 2021, 8:01 AM IST

ರಾಜಧಾನಿ ಬೆಂಗಳೂರಲ್ಲಿ ಮೂರು ತಿಂಗಳ ಬಳಿಕ 925 ಪ್ರಕರಣ ಪತ್ತೆ| ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆ 8,122ಕ್ಕೆ ಏರಿಕೆ, 51 ಮಂದಿ ಗಂಭೀರ| ಸೋಂಕು ಹೆಚ್ಚಿದ್ದರೂ, ಸಾವಿನ ಪ್ರಮಾಣ ನಿಯಂತ್ರಣದಲ್ಲಿದೆ: ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌| 


ಬೆಂಗಳೂರು(ಮಾ.19):  ರಾಜಧಾನಿಯಲ್ಲಿ ಕೊರೋನಾ ಸೋಂಕು ಮತ್ತೆ ವ್ಯಾಪಕವಾಗಿ ಹರಡುತ್ತಿದ್ದು, ಗುರುವಾರ 925 ಪ್ರಕರಣಗಳು ವರದಿಯಾಗಿವೆ. ಮೂರು ತಿಂಗಳ ಬಳಿಕ ನಗರದಲ್ಲಿ ಒಂದೇ ದಿನ 900ಕ್ಕಿಂತ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ಈ ಹೊಸ ಪ್ರಕರಣಗಳೊಂದಿಗೆ ಈವರೆಗೆ ಕೊರೋನಾ ಸೋಂಕಿಗೆ ತುತ್ತಾದವರ ಒಟ್ಟು ಸಂಖ್ಯೆ 4,14,410ಕ್ಕೆ ಏರಿಕೆಯಾಗಿದೆ. ಅಂತೆಯೆ ತೃತೀಯಲಿಂಗಿ ಸೇರಿ ಏಳು ಮಂದಿ ಸೋಂಕಿಗೆ ಬಲಿಯಾಗಿದ್ದು, ಸೋಂಕಿತರ ಒಟ್ಟು ಸಾವಿನ ಸಂಖ್ಯೆ 4,537ಕ್ಕೆ ಏರಿಕೆಯಾಗಿದೆ.

ಗುರುವಾರ 140 ಮಂದಿ ಗುಣಮುಖರಾಗಿದ್ದು, ಒಟ್ಟು ಗುಣಮುಖರ ಸಂಖ್ಯೆ 4,01,750ಕ್ಕೆ ಏರಿಕೆಯಾಗಿದೆ. ಸದ್ಯ ನಗರದಲ್ಲಿ ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆ 8,122 ತಲುಪಿದೆ. ಈ ಪೈಕಿ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ 51 ಮಂದಿ ಸೋಂಕಿತರಿಗೆ ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Latest Videos

undefined

‘ಸೋಂಕು ಹೆಚ್ಚಿದ್ದರೂ, ಸಾವಿನ ಪ್ರಮಾಣ ನಿಯಂತ್ರಣದಲ್ಲಿದೆ’

ಪಾಲಿಕೆ ವ್ಯಾಪ್ತಿಯಲ್ಲಿ ಸೋಂಕು ಹೆಚ್ಚುತ್ತಿರುವ ದಕ್ಷಿಣ ಮತ್ತು ಪೂರ್ವ ವಲಯದಲ್ಲಿ ಪರೀಕ್ಷೆ ಹೆಚ್ಚಿಸಿದ್ದು, ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿರನ್ನು ಪರೀಕ್ಷೆಗೆ ಒಳಪಡಿಸುವ ಮೂಲಕ ಕೊರೋನಾ ಹರಡುವಿಕೆಗೆ ತಡೆಯೊಡ್ಡಲು ಯೋಜನೆ ರೂಪಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ತಿಳಿಸಿದ್ದಾರೆ.

ಕೇರಳ, ಮದುವೆ, ದೇವಸ್ಥಾನಕ್ಕೆ ಹೋಗಿ ಬಂದವರಿಗೆ ಕೊರೋನಾ..!

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಸೋಂಕಿನ ಪ್ರಕರಣ ಜಾಸ್ತಿಯಾಗುತ್ತಿದ್ದರೂ ಸಾವಿನ ಪ್ರಮಾಣ ನಿಯಂತ್ರಣದಲ್ಲಿ ಇದೆ. ಪ್ರಸ್ತುತ ಕೋವಿಡ್‌ ಪಾಸಿಟಿವ್‌ ಶೇ.1.3 ಮತ್ತು ಮರಣ ಪ್ರಮಾಣ ಶೇ.0.62 ಇದೆ. ಆದರೆ ಕ್ಲಸ್ಟರ್‌ ಮಾದರಿಯಲ್ಲಿ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ವಲಯಗಳಲ್ಲೂ ಅಧಿಕಾರಿಗಳ ಸಭೆ ನಡೆಸಲಾಗುತ್ತಿದ್ದು, ಕೋವಿಡ್‌ ಪರೀಕ್ಷೆಗಳನ್ನು ಹೆಚ್ಚಿಸಿ ಸೋಂಕಿತ ಪತ್ತೆಗೆ ಸೂಚನೆ ನೀಡಲಾಗಿದೆ. ಪಾಸಿಟಿವ್‌ ಪ್ರಕರಣಗಳು ಕಂಡು ಬಂದರೆ ಕೂಡಲೇ ಅವರನ್ನು ಐಸೋಲೇಟ್‌ ಮಾಡಬೇಕು ಎಂದು ಸೂಚಿಸಲಾಗಿದೆ ಎಂದರು.

ಪರೀಕ್ಷಾ ವರದಿ 24 ತಾಸಿನಲ್ಲಿ ಬಿಬಿಎಂಪಿ ವೆಬ್‌ಸೈಟಲ್ಲಿ ಲಭ್ಯ

ಕೊರೋನಾ ಪರೀಕ್ಷೆಗೊಳಗಾದ 24 ಗಂಟೆಯೊಳಗೆ ಬಿಬಿಎಂಪಿ ವೆಬ್‌ಪೋರ್ಟಲ್‌ನಲ್ಲಿ ಅದರ ವರದಿ ಸಿಗುವಂತೆ ಹೊಸ ಯೋಜನೆ ರೂಪಿಸಲಾಗಿದೆ. ಮೊಬೈಲ್‌ನಲ್ಲಿ ಎಫ್‌ಎಸ್‌ಆರ್‌ ಐಡಿ ಮೂಲಕ ಪ್ರವೇಶ ಮಾಡಿದರೆ ಪರೀಕ್ಷೆ ವರದಿ ಲಭ್ಯವಾಗಲಿದೆ. ಅಲ್ಲದೇ ಇನ್ನು ಮುಂದೆ ನೇರವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಪರೀಕ್ಷಾ ವರದಿ ರವಾನೆಯಾಗಲಿದೆ. ಇದರಿಂದ ಸೋಂಕಿತರಿಗೆ ಕೊರೋನಾ ಪರೀಕ್ಷೆ ವರದಿ ಬೇಗ ಸಿಗಲಿದೆ ಎಂದು ಮಂಜುನಾಥ್‌ ಪ್ರಸಾದ್‌ ಹೇಳಿದರು.

5ಕ್ಕಿಂತ ಹೆಚ್ಚು ಕೇಸ್‌ಗಳಿದ್ದರೆ ಮೈಕ್ರೋ ಕಂಟೈನ್‌ಮೆಂಟ್‌

ಐದಕ್ಕಿಂತ ಹೆಚ್ಚು ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ಇರುವ ಜಾಗವನ್ನು ಮೈಕ್ರೋ ಕಂಟೈನ್‌ಮೆಂಟ್‌ ವಲಯ ಎಂದು ಗುರುತಿಸಲಾಗುವುದು. ಅಲ್ಲಿರುವ ನಿವಾಸಿಗಳಿಗೆ ಹೊರಗಿನ ಸಂಪರ್ಕ ಕಡಿತಗೊಳಿಸಿ, ಎಲ್ಲರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗುವುದು. ಅವರನ್ನು ಏಳು ದಿನಗಳ ನಂತರ ಪುನಃ ಕೋವಿಡ್‌ ಪರೀಕ್ಷೆ ನಡೆಸಲಾಗುವುದು. ಮೈಕ್ರೋ ಕಂಟೈನ್ಮೆಂಟ್‌ ವಲಯಕ್ಕೆ ಅಗತ್ಯ ವಸ್ತುಗಳ ಪೂರೈಕೆಯನ್ನು ಪಾಲಿಕೆ ವತಿಯಿಂದ ಪೂರೈಕೆ ಮಾಡಲಾಗುವುದು ಎಂದು ಆಯುಕ್ತ ಮಂಜುನಾಥ್‌ ಪ್ರಸಾದ್‌ ತಿಳಿಸಿದರು.

ಕೊರೋನಾ ಸೋಂಕು ನಿಗ್ರಹಕ್ಕೆ ಸರ್ಕಾರ ಮತ್ತಷ್ಟುಕ್ರಮ : ರಜೆ ಇಲ್ಲ

ಪೂರ್ವ ವಲಯದಲ್ಲಿ ಹೆಚ್ಚು ಸೋಂಕು ಪತ್ತೆ

ಪಾಲಿಕೆಯ ಪೂರ್ವ ವಲಯದಲ್ಲಿ 40 ವಾರ್ಡ್‌ಗಳಿದ್ದು, ಕೆಲವು ವಾರ್ಡ್‌ಗಳಲ್ಲಿ ಮಾತ್ರ ಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿವೆ. ಇಲ್ಲಿ ಹೊರ ರಾಜ್ಯದವರ ಓಡಾಟ ಹೆಚ್ಚಾಗಿರುವುದು ಸೋಂಕು ಹೆಚ್ಚಲು ಕಾರಣವೆಂದು ಅಂದಾಜಿಸಲಾಗಿದೆ. ಶಾಂತಲ ನಗರ, ಮಾರುತಿಸೇವಾ ನಗರ, ಬಾಣಸವಾಗಿ, ನ್ಯೂತಿಪ್ಪಸಂದ್ರ ವಾರ್ಡ್‌ಗಳಲ್ಲಿ ಅತೀ ಹೆಚ್ಚು ಪ್ರಕರಣ ದಾಖಲಾಗುತ್ತಿದ್ದು, ಪರೀಕ್ಷೆ ಹೆಚ್ಚು ನಡೆಸಲು ಸೂಚನೆ ನೀಡಲಾಗಿದೆ. ದಕ್ಷಿಣ ವಲಯದಲ್ಲೂ ಸೋಂಕು ಹೆಚ್ಚುತ್ತಿದ್ದು ಕ್ರಮಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ಆಯುಕ್ತರು ಹೇಳಿದರು.

ಮೂರು ಆರೈಕೆ ಕೇಂದ್ರ

ನಗರದ ಮೂರು ಕಡೆಗಳಲ್ಲಿ ಕೊರೋನಾ ಕೋವಿಡ್‌ ಕೇರ್‌ ಸೆಂಟರ್‌ ತೆರೆಯಲು ಸಿದ್ಧತೆ ನಡೆಸಲಾಗಿದೆ. ಹಜ್‌ಭವನ್‌, ಎಚ್‌ಎಎಲ್‌ ಹಾಗೂ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಕೋವಿಡ್‌ ಆರೈಕೆ ಕೇಂದ್ರ ತೆರೆಯಲು ಸೂಚಿಸಲಾಗಿದೆ. ಈಗಾಗಲೇ ಕಳೆದ ವರ್ಷದ ಹಾಸಿಗೆ, ಮಂಚಗಳು ಇದ್ದು, ವೈದ್ಯರು, ನರ್ಸ್‌ಗಳು ಮತ್ತು ಆಹಾರ ಪೂರೈಕೆ ವ್ಯವಸ್ಥೆಗೆ ಸಿದ್ಧತೆ ಮಾಡಬೇಕಿದೆ. ಪ್ರತಿ ಕೇಂದ್ರದಲ್ಲಿಯೂ 200 ಹಾಸಿಗೆಗಳ ವ್ಯವಸ್ಥೆ ಇರಲಿದೆ ಎಂದು ಆಯುಕ್ತ ಮಂಜುನಾಥ್‌ ಪ್ರಸಾದ್‌ ತಿಳಿಸಿದರು.
 

click me!