'ನಮ್ಮ ದೇಶದ ಅನ್ನ ಉಂಡು ಪಾಕ್ ಪರ ಘೋಷಣೆ ಕೂಗಿದ್ರೆ ಸಹಿಸಲ್ಲ'

By Kannadaprabha NewsFirst Published Feb 22, 2020, 12:20 PM IST
Highlights

ದೇಶದ್ರೋಹ ಚಟುವಟಿಕೆಗಳನ್ನು ಸರ್ಕಾರ ಸಹಿಸಲ್ಲ: ಡಿಸಿಎಂ ಗೋವಿಂದ ಕಾರಜೋಳ|ಭಾರತದಲ್ಲಿ 130 ಕೋಟಿ ದೇಶ ಭಕ್ತರಿದ್ದು, ನಮ್ಮ ದೇಶ ಹಾಗೂ ಸಂಸ್ಕೃತಿಯ ಬಗ್ಗೆ ಗೌರವ ಇಟ್ಟಿಕೊಳ್ಳಬೇಕು|ನಮ್ಮ ವೈರಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದು ತಪ್ಪು|

ಗದಗ(ಫೆ.22): ದೇಶದ್ರೋಹ ಚಟುವಟಿಕೆಗಳನ್ನು ಸರ್ಕಾರ ಎಂದಿಗೂ ಸಹಿಸುವುದಿಲ್ಲ. ಅಂತವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ. 

ಶುಕ್ರವಾರ ಗದಗ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಸಿಎಎ ವಿರೋಧಿಸಿ ಗುರುವಾರ ಆಯೋಜಿಸಲಾಗಿದ್ದ ಪ್ರತಿಭಟನೆ ವೇಳೆ ಯುವತಿ ಅಮೂಲ್ಯ ಲಿಯೋನ್ ಪಾಕಿಸ್ತಾನ ಪರ ಘೋಷಣೆ ಕೂಗಿದ ಘಟನೆಗೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದ್ದಾರೆ. 

ಭಾರತದಲ್ಲಿ 130 ಕೋಟಿ ದೇಶ ಭಕ್ತರಿದ್ದು, ನಮ್ಮ ದೇಶ ಹಾಗೂ ಸಂಸ್ಕೃತಿಯ ಬಗ್ಗೆ ಗೌರವ ಇಟ್ಟಿಕೊಳ್ಳಬೇಕು. ನಮ್ಮ ಸಂವಿಧಾನದ ಚೌಕಟ್ಟಿನಲ್ಲಿ ದೇಶ ಪ್ರೇಮ ಬೆಳೆಸಿಕೊಳ್ಳಬೇಕು. ಆದರೆ, ನಮ್ಮ ದೇಶದ ಅನ್ನ ಉಂಡು ಬೇರೆ ದೇಶದ ಪರ ಘೋಷಣೆ ಕೂಗುವುದು ತಪ್ಪು. ನಮ್ಮ ವೈರಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದು ತಪ್ಪು, ಇಂತಹ ತಪ್ಪು ಯಾರೂ ಮಾಡಬಾರದು. ಇಂತಹ ತಪ್ಪು ಯಾರೇ ಮಾಡಿದರೂ ಕಾನೂನು ಕ್ರಮ ಜರುಗಿಸಬೇಕು. ನಾವು ಭಾರತೀಯರೆಂಬ ಹೆಮ್ಮೆ ಎಲ್ಲರಲ್ಲಿಯೂ ಇರಬೇಕು ಹಾಗೆಯೇ ಬದುಕಬೇಕು ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಹದಾಯಿ ವಿಚಾರದಲ್ಲಿ ಗುರುವಾರ ಸುಪ್ರೀಂ ಕೋರ್ಟ್ ನೀಡಿದ ಆದೇಶಕ್ಕೆ ಸಂತಸ ವ್ಯಕ್ತಪಡಿಸಿದ ಕಾರಜೋಳ, ಇದು ರಾಜ್ಯಕ್ಕೆ ಸಿಕ್ಕ ಜಯ ಅಂತ ವ್ಯಾಖ್ಯಾನಿಸಿ, ಮಹದಾಯಿ, ಕಳಸಾ ಬಂಡೂರಿ ನಮ್ಮ ಭಾಗದ ಬಹುದಿನದ ಜನರ ಹೋರಾಟವಾಗಿತ್ತು. ಟ್ರಿಬ್ಯುನಲ್‌ನಲ್ಲಿ ನಮ್ಮ ಗೆಲವು ಆಗಿದ್ದರೂ ಕೂಡಾ, ಗೋವಾ, ಮಹಾರಾಷ್ಟ್ರ ರಾಜ್ಯದವರು ನಮಗೆ ಅನ್ಯಾಯವಾಗಿದೆ ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ಟ್ರಿಬ್ಯುನಲ್ ನೀಡಿದ್ದ ಆದೇಶದ ಕುರಿತ ಗೆಜೆಟ್ ನೋಟಿಫಿಕೇಶನ್ ತಡವಾಗಿತ್ತು. ಆದರೆ ನಿನ್ನೆ ಸುಪ್ರೀಂ ಕೋರ್ಟ್‌ ಟ್ರಿಬ್ಯುನಲ್ ಆದೇಶದಂತೆ ಗೆಜೆಟ್ ನೋಟಿಫಿಕೇಶನ್ ಹೊರಡಿಸುವಂತೆ ಆದೇಶಿಸಿದೆ. ಈ ಆದೇಶವನ್ನು ನಾನು ಸ್ವಾಗತಿಸುತ್ತೇನೆ, ಕೋರ್ಟ್‌ನ ಕೊನೆಯ ತೀರ್ಪಿನಲ್ಲಿ ವ್ಯತ್ಯಾಸವಾದರೆ, ಮತ್ತೆ ನೋಟಿಫಿಕೇಶನ್ ಹಾಕಬೇಕಾಗುತ್ತದೆ. ಈಗ ಪ್ರಥಮ ಹಂತದಲ್ಲಿ ಜಯ ಸಿಕ್ಕಿದೆ, ಬಂದಂತಹ ನೀರನ್ನು ಕುಡಿಯುವುದಕ್ಕೆ, ರೈತರಿಗೆ ನೀರಾವರಿ ಬಳಸಿಕೊಳ್ಳೋಕೆ ಯೋಜನೆ ರೂಪಿಸಿಕೊಳ್ಳಕ್ಕೆ ನಮ್ಮ ಸರ್ಕಾರ ಬದ್ಧವಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪಾಲಿಸುತ್ತವೆ ಎಂದರು.

 ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

click me!