ಸಿದ್ದು ಪುತ್ರ ರಾಕೇಶ್ ಹೆಸರಲ್ಲಿ 60 ಲಕ್ಷ ರೂ. ವಂಚನೆ!

By Kannadaprabha NewsFirst Published Jun 14, 2019, 9:16 AM IST
Highlights

ಸಿದ್ದು ಪುತ್ರ ರಾಕೇಶ್ ಹೆಸರಲ್ಲಿ 60 ಲಕ್ಷ ರೂ. ವಂಚನೆ!| ಹೊನ್ನಾಳಿ ತಾಲೂಕಿನ 10 ಕಡು ಬಡ ಯುವಕರಿಗೆ ಸೆಂಟ್ರಲ್‌ ಸಿಲ್ಕ್ ಬೋರ್ಡ್‌ನಲ್ಲಿ ಕೆಲಸದ ಆಮಿಷ

ದಾವಣಗೆರೆ[ಜೂ.15]: ಮಾಜಿ ಸಿಎಂ ಸಿದ್ದರಾಮಯ್ಯ ಸಂಬಂಧಿ ಎಂದು ಹೇಳಿಕೊಂಡು ಹೊನ್ನಾಳಿ ತಾಲೂಕಿನ 10 ಬಡ ಯುವಕರಿಗೆ 50 ರಿಂದ 60 ಲಕ್ಷ ರು. ವಂಚಿಸಿರುವ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಬಡ ಯುವಕರ ಹಣ ಕೊಡಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ ವಾದದ ವಿಭಾಗೀಯ ಸಂಚಾಲಕ ಎ.ಡಿ.ಯಶವಂತಪ್ಪ ಒತ್ತಾಯಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಲತಃ ಮೈಸೂರು ಜಿಲ್ಲೆಯ ಬಿ.ಎಂ.ಮಹೇಶ, ಬಿ.ಎಂ.ವಿಜಿಕುಮಾರ ಅಲಿಯಾಸ್‌ ರವಿಕುಮಾರ ಹಾಗೂ ಬಿ.ಎಂ.ನಟರಾಜ ಎಂದು ತಮ್ಮ ಹೆಸರು ಹೇಳಿಕೊಂಡಿದ್ದ ಮೂವರೂ ವ್ಯಕ್ತಿಗಳು ಹೊನ್ನಾಳಿ ತಾಲೂಕಿನ 10 ಕಡು ಬಡ ಯುವಕರಿಗೆ ಉದ್ಯೋಗ ಕೊಡಿಸುವುದಾಗಿ ಹೇಳಿ, ವಂಚಿಸಿದ್ದಾರೆ ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಸಂಬಂಧಿಕರು. ಸಿದ್ದರಾಮಯ್ಯ ಪುತ್ರ ರಾಕೇಶ್‌ಗೆ ನಾವುಗಳು ಆಪ್ತ ಸ್ನೇಹಿತರೆಂದು ಮೂವರೂ ಹೊನ್ನಾಳಿಯ ಯುವಕರನ್ನು ನಂಬಿಸಿದ್ದರು. ಅಲ್ಲದೇ ಹೊನ್ನಾಳಿ ತಾಲೂಕಿನ ಕೆ.ವೈ.ಮಾರುತಿ, ಎನ್‌.ಕುಮಾರ, ನವೀನ, ಗದ್ದಿಗೇಶ, ದ್ಯಾಮಪ್ಪ, ಎಲ್‌.ಪ್ರವೀಣ, ಜಿ.ಎಸ್‌.ಪ್ರವೀಣ, ಮಂಜು ಗೋಣಿಗೆರೆ, ಶಿವಕುಮಾರ ಹಾಗೂ ಸಂದೀಪಕುಮಾರ್‌ ಎಂಬುವರಿಗೆ ಕೆಲಸ ಕೊಡಿಸುವುದಾಗಿ ಹೇಳಿ ಮೂವರೂ ವಂಚಿಸಿದ್ದಾರೆ ಎಂದು ಆರೋಪಿಸಿದರು.

ಹಣ ಹೊಂದಿಸಲು 10 ಜನ ಯುವಕರೂ ತಮ್ಮ ಕುಟುಂಬದ ಅಲ್ಪಸ್ವಲ್ಪ ಜಮೀನನ್ನು ಮಾರಾಟ ಮಾಡಿ, ಹಣ ಕಟ್ಟಿದ್ದಾರೆ. ಸೆಂಟ್ರಲ್‌ ಸಿಲ್‌್ಕ ಬೋರ್ಡ್‌ನಲ್ಲಿ 240 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸುತ್ತಾರೆ. ನಿಮ್ಮ ಹುಡುಗರ ದಾಖಲಾತಿ ಮತ್ತು ಹಣ ಕೊಡಿ ಎಂಬುದಾಗಿ ಹೇಳಿ ಸುಮಾರು 50ರಿಂದ 60 ಲಕ್ಷ ರು.ಗಳನ್ನು ಪಡೆದಿದ್ದಾರೆ. ಪಾಂಡವಪುರ ತಾ. ಹಾರೋವಳ್ಳಿ ಗ್ರಾಮದ ಹುಚ್ಚೇಗೌಡ್ರು ಎಂಬುವರಿಂದಲೂ ಹೀಗೇ ಹೇಳಿ 45 ಲಕ್ಷ ರು. ಪಡೆದಿದ್ದಾರೆ ಎಂದು ದೂರಿದರು.

ತಾವು ಕೊಟ್ಟಹಣ ಕೇಳಿದ ಯುವಕರಿಗೆ 2-3 ವರ್ಷದಿಂದ ಇಂದು, ನಾಳೆ ಎಂಬುದಾಗಿ ಅಲೆದಾಡಿಸುತ್ತಲೇ ಬಂದಿದ್ದಾರೆ. ಈ ವಿಚಾರ ಗೊತ್ತಾದ ನಂತರ ನಾವು ಮೂವರ ಊರಿಗೆ ಹೋಗಿ ಕೇಳಿದಾಗ ನಿಮಗೆ ಯಾವ ದುಡ್ಡು ಕೊಡಬೇಕು ಎಂಬುದಾಗಿ ದಬಾಯಿಸಿ, ಜಾತಿ ನಿಂದನೆ ಮಾಡಿದ್ದಾರೆ. ತಾವು ಸಿದ್ದರಾಮಯ್ಯ ಸಂಬಂಧಿಗಳೆಂದು ಹೇಳಿದ್ದು, ಇದಕ್ಕೆ ನಂದ್ಯಪ್ಪ, ಯೋಗೇಶಪ್ಪ ಎಂಬುವರೇ ಸಾಕ್ಷಿಯಾಗಿದ್ದಾರೆ. ಪರಿಶಿಷ್ಟಜಾತಿ 10 ಜನರ ಯುವಕರಿಗೆ ವಂಚಿಸಿರುವ ಆರೋಪಿಗಳ ವಿರುದ್ಧ ಪೊಲೀಸ್‌ ಇಲಾಖೆಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ಮೇ 5ರಂದು ಜಿಲ್ಲಾ ಪೊಲೀಸ್‌ ವರಿಷ್ಟರಿಗೆ ಈ ಬಗ್ಗೆ ದೂರು ನೀಡಿದ್ದೇವೆ. ಆದರೆ, ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಸಂಬಂಧಿಕರೆಂದು ಹೇಳಿಕೊಂಡು ಕಡು ಬಡವರಾದ 10 ಜನ ಪರಿಶಿಷ್ಟಯುವಕರಿಗೆ ವಂಚಿಸಿರುವ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಜೊತೆಗೆ ಬಡ ಯುವಕರ ಹಣ ವಾಪಾಸು ಕೊಡಿಸುವಂತೆ ಯಶವಂತಪ್ಪ ಒತ್ತಾಯಿಸಿದರು. ಸಂಘಟನೆಯ ಜಯಶ್ರೀ, ಪ್ರಕಾಶ, ಭೀಮಪ್ಪ, ಹುಚ್ಚೇಗೌಡ್ರು ಇದ್ದರು.

click me!