ದಾವಣಗೆರೆಯಲ್ಲಿ 6 ಹೊಸ ಕೊರೋನಾ ಕೇಸ್, 17 ಜನ ಗುಣಮುಖ

By Kannadaprabha News  |  First Published Jun 1, 2020, 10:18 AM IST

ಬೆಣ್ಣೆ ನಗರಿ ದಾವಣಗೆರೆ ಗ್ರೀನ್‌ ಝೋನ್‌ನತ್ತ ದಿಟ್ಟ ಹೆಜ್ಜೆಯಿಡುತ್ತಿದ್ದು, ಭಾನುವಾರ 17 ರೋಗಿಗಳು ಕೊರೋನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ಹೊಸದಾಗಿ 6 ಪ್ರಕರಣಗಳು ಪತ್ತೆಯಾಗಿವೆ. ಈ ಕುರಿಯಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ದಾವಣಗೆರೆ(ಜೂ.01): ಕೊರೋನಾ‌ ವಾರಿಯ​ರ್ಸ್ ಮೂವರು ವೈದ್ಯರೂ ಸೇರಿ 6 ಜನರಲ್ಲಿ ಪಾಸಿಟಿವ್‌ ದೃಢಪಟ್ಟಿದ್ದು, ಸೋಂಕಿನಿಂದ ಗುಣಮುಖರಾದ 17 ಜನ ಭಾನುವಾರ ಬಿಡುಗಡೆಯಾಗಿದ್ದಾರೆ. ಸದ್ಯ ಸಕ್ರಿಯ ಕೇಸ್‌ ಸಂಖ್ಯೆ 31ಕ್ಕೆ ಇಳಿದಿದ್ದು, ಇದರೊಂದಿಗೆ ಗ್ರೀನ್‌ ಝೋನ್‌ಗೆ ಮತ್ತೆ ಸೇರುವ ದಾವಣಗೆರೆ ಗುರಿಗೆ ಮತ್ತಷ್ಟು ಗರಿ ಮೂಡಿದಂತಾಗಿದೆ.

ಹೊಸದಾಗಿ ಪಾಸಿಟಿವ್‌ ದೃಢಪಟ್ಟ6 ಜನರ ಪೈಕಿ ಮೂವರು ಜಿಲ್ಲಾ ಕೋವಿಡ್‌ ಆಸ್ಪತ್ರೆಯ ಐಸೋಲೇಷನ್‌ ವಾರ್ಡ್‌ನ ವೈದ್ಯರಾಗಿದ್ದಾರೆ. 27 ವರ್ಷದ ವೈದ್ಯೆ(ಪಿ-3070), 32 ವರ್ಷದ ವೈದ್ಯ(ಪಿ-3071), 22 ವರ್ಷದ ವೈದ್ಯ(ಪಿ-3072) ಸೋಂಕಿತರಾಗಿದ್ದು, ಈ ಮೂವರಿಗೂ ಸೋಂಕು ಹೇಗೆ ತಗುಲಿತೆಂಬ ಪತ್ತೆ ಕಾರ್ಯ ಪ್ರಗತಿಯಲ್ಲಿದೆ.

Latest Videos

undefined

ಆನೆಕೊಂಡ ಕಂಟೈನ್‌ಮೆಂಟ್‌ನ 14 ವರ್ಷದ ಬಾಲಕಿ(ಪಿ-3073)ಗೆ ಪಿ-1251ರಿಂದ ಸೋಂಕು ತಗುಲಿದೆ. ಇದೇ ಕಂಟೈನ್‌ಮೆಂಟ್‌ನ ವಾಸಿ 12 ವರ್ಷದ ಬಾಲಕ(ಪಿ-3216)ನಿಗೆ ಪಿ-1852ರಿಂದ ಸೋಂಕು ಹರಡಿದೆ. ವಿನಾಯಕ ನಗರದ 31 ವರ್ಷದ ಮಹಿಳೆ(ಪಿ-3217)ಗೆ 69 ವರ್ಷದ ಸೋಂಕಿತ ಪಿ-1378 ಸಂಪರ್ಕದಿಂದ ಸೋಂಕು ತಗುಲಿದೆ.

ಕರ್ಫ್ಯೂ ಸಡಿಲಿಸಿದ್ರೂ ಹೊರಬರಲು ಜನರ ನಿರಾಸಕ್ತಿ!

ಜಿಲ್ಲಾಸ್ಪತ್ರೆಯಲ್ಲಿ ಸೋಂಕಿನಿಂದಾಗಿ ಚಿಕಿತ್ಸೆಗೆ ದಾಖಲಾಗಿದ್ದ ಪಿ-1483, 1488, 1656, 1657, 1658, 1808, 1809, 1852, 1963, 1964, 2274, 2275, 2277, 2278, 2281, 1992 ಹಾಗೂ 625 ಉತ್ತಮ ಚಿಕಿತ್ಸೆಯಿಂದಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರು. ಆಸ್ಪತ್ರೆ ವೈದ್ಯರು, ಶುಶ್ರೂಷಕರು, ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಟ್ಟರು.

ಜಿಲ್ಲೆಯಲ್ಲಿ ಈವರೆಗೆ 156 ಕೊರೋನಾ ಪಾಸಿಟಿವ್‌ ಕೇಸ್‌ ವರದಿಯಾಗಿವೆ. ಈ ಪೈಕಿ ನಾಲ್ವರು ಸಾವನ್ನಪ್ಪಿದ್ದಾರೆ. ಭಾನುವಾರದ 17 ಜನ ಸೇರಿದಂತೆ ಒಟ್ಟು 121 ಜನರು ಈವರೆಗೆ ಸೋಂಕಿನಿಂದ ಗುಣ ಹೊಂದಿ, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕಳೆದ 24 ಗಂಟೆಯಲ್ಲೇ 37 ಜನ ಬಿಡುಗಡೆಯಾಗಿದ್ದು ವಿಶೇಷ. ಸದ್ಯಕ್ಕೆ ಜಿಲ್ಲೆಯಲ್ಲಿ ಸಕ್ರಿಯ ಕೇಸ್‌ಗಳ ಸಂಖ್ಯೆ 31ಕ್ಕೆ ಇಳಿದಿದೆ. ಇದರೊಂದಿಗೆ ಗ್ರೀನ್‌ ಝೋನ್‌ಗೆ ಮರಳಲು ಕೆಲವೇ ಹೆಜ್ಜೆಗಳಷ್ಟೇ ಬಾಕಿ ಉಳಿದಂತಾಗಿದೆ.

17 ಕಂಟೈನ್‌ಮೆಂಟ್‌, ಜ್ವರ- ಸಾರಿ ಸಮೀಕ್ಷೆ

ದಾವಣಗೆರೆ: ಕೊರೋನಾ ಪಾಸಿಟಿವ್‌ ಪ್ರಕರಣಗಳು ಕಂಡು ಬಂದ ಇಲ್ಲಿನ ಬಾಷಾ ನಗರ, ಜಾಲಿ ನಗರ, ಇಮಾಂ ನಗರ, ಬೇತೂರು ರಸ್ತೆ, ಕೆಟಿಜೆ ನಗರ, ಎಸ್ಪಿಎಸ್‌ ನಗರ, ಶಿವ ನಗರ, ರೈತರ ಬೀದಿ, ಪೊಲೀಸ್‌ ಕ್ವಾಟ್ರರ್ಸ್‌, ಆನೆಕೊಂಡ, ಎಸ್‌ಜೆಎಂ ನಗರ, ವಿನಾಯಕ ನಗರ, ಚನ್ನಗಿರಿ ತಾಲೂಕಿನ ಕೆರೆಬಿಳಚಿ, ಶಿವಕುಮಾರ ಸ್ವಾಮಿ ಬಡಾವಣೆ, ಶೇಖರಪ್ಪ ನಗರ, ತರಳಬಾಳು ಬಡಾವಣೆ, ಬಸವರಾಜ ಪೇಟೆ ಈ 17 ಪ್ರದೇಶಗಳನ್ನು ಕಂಟೈನ್‌ಮೆಂಟ್‌ ಝೋನ್‌ ಘೋಷಿಸಲಾಗಿದೆ. 2 ಪ್ರದೇಶಗಳಲ್ಲಿ ಪ್ರತಿದಿನ ಜ್ವರ, ಐಎಲ್‌ಐ, ಸಾರಿ ಸಮೀಕ್ಷೆ ನಡೆಸಲಾಗುತ್ತಿದೆ. 3 ದಿನಗಳಿಗೊಮ್ಮೆ ಬಫರ್‌ ಝೋನ್‌ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
 

click me!