ಉದ್ಯೋಗ ಅರಸಿ ಈ ಆರು ಮಂದಿ ಮುಂಬೈ ಸೇರಿದ್ದರು. ಅಲ್ಲಿ ಚಿನ್ನ-ಬೆಳ್ಳಿ ಕೆಲಸ ಆಯ್ದುಕೊಂಡಿದ್ದ ಈ ಯುವಕರು ಒಂದು ಹಂತದಲ್ಲಿ ಬದುಕು ಕಟ್ಟಿಕೊಂಡು ನೆಮ್ಮದಿಯಾಗಿದ್ದರು. ಲಾಕ್‌ಡೌನ್‌ನಿಂದಾಗಿ ತವರಿಗೆ ಮರಳಲು ಸೈಕಲ್ ಏರಿದ್ದಾರೆ. ಈ ಕುರಿತಾದ ಮನ ಮಿಡಿಯುವ ಸ್ಟೋರಿ ಇಲ್ಲಿದೆ ನೋಡಿ.
ಶಿವಮೊಗ್ಗ(ಮೇ.14): ಮುಂಬೈನಲ್ಲಿ ಉದ್ಯೋಗ ಕಡಿತದ ಬಳಿಕ ಊರು ಸೇರಬೇಕೆಂಬ ಆಸೆ ಹೊತ್ತ ಯುವಕರ ತಂಡ ಸೈಕಲ್‌ನಲ್ಲಿ 10 ದಿನಗಳ ಕಾಲ ಪ್ರಯಾಣ ಮಾಡಿ ಸ್ವಂತ ಊರಾದ ಸೊರಬ ಸೇರುವ ಸಂದರ್ಭದಲ್ಲಿ ಪೊಲೀಸರ ಕೈಗೆ ಸಿಕ್ಕು ಬಿದ್ದು ಕ್ವಾರಂಟೈನ್‌ಗೆ ಒಳಗಾದ ಯುವಕರ ತಂಡವೊಂದರ ಮನ ಮಿಡಿಯುವ ಕತೆಯಿದು.
ಸೊರಬ, ಸಾಗರ ಹಾಗೂ ಹೊಸನಗರ ತಾಲೂಕಿನ ಆರು ಮಂದಿ ಯುವಕರ ತಂಡ ಇದೀಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ಗೆ ಒಳಗಾಗಿದೆ. ಉದ್ಯೋಗ ಅರಸಿ ಈ ಆರು ಮಂದಿ ಮುಂಬೈ ಸೇರಿದ್ದರು. ಅಲ್ಲಿ ಚಿನ್ನ-ಬೆಳ್ಳಿ ಕೆಲಸ ಆಯ್ದುಕೊಂಡಿದ್ದ ಈ ಯುವಕರು ಒಂದು ಹಂತದಲ್ಲಿ ಬದುಕು ಕಟ್ಟಿಕೊಂಡು ನೆಮ್ಮದಿಯಾಗಿದ್ದರು. ಆದರೆ ಕೊರೋನಾ ಸಮಸ್ಯೆ ಶುರುವಾದಂತೆ ಇವರು ಆತಂಕಕ್ಕೆ ಒಳಗಾಗಿದ್ದರು. ಜತೆಗೆ ಲಾಕ್‌ಡೌನ್ ಘೋಷಣೆ ನಂತರ ಉದ್ಯೋಗವನ್ನೂ ಕಳೆದುಕೊಂಡು ಊಟಕ್ಕೂ ಕಷ್ಟಪಡುವ ಸ್ಥಿತಿ ತಲುಪಿದ್ದರು.
ವಾಪಸ್ಸು ಊರಿಗೆ ಸೇರಬೇಕು ಎಂಬ ನಿರ್ಧಾರಕ್ಕೆ ಈ ಯುವಕರು ಬಂದಿದ್ದರು. ಮಹಾರಾಷ್ಟ್ರದ ಥಾಣೆಯಲ್ಲಿ ನೆಲೆಸಿದ್ದ ಈ ಯುವಕರು ಊರಿಗೆ ತೆರಳಲು ಪಾಸ್‌ಗಾಗಿ ಇನ್ನಿಲ್ಲದ ಯತ್ನ ನಡೆಸಿದರೂ ಪಾಸ್ ಸಿಕ್ಕಿರಲಿಲ್ಲ. ಇದರಿಂದ ಬೆಸತ್ತ ಯುವಕರು ಸೈಕಲ್‌ನಲ್ಲಿ ಸ್ವಗ್ರಾಮಕ್ಕೆ ತೆರಳಲು ನಿರ್ಧರಿಸಿದರು. ತಮ್ಮ ಉಳಿತಾಯದ ಹಣದಲ್ಲಿ ಎಲ್ಲರೂ ಸೈಕಲ್ ಖರೀದಿಸಿ ಊರಿಗೆ ಹೊರಟರು.
ಮುಂಬೈನಿಂದ ಸೈಕಲ್‌ನಿಂದ ಬಂದವರು ಶಿವಮೊಗ್ಗದಲ್ಲಿ ಕ್ವಾರಂಟೈನ್..!
ಮುಂಬೈನ ಥಾಣೆಯಲ್ಲಿ ಐದು ಹೊಸ ಸೈಕಲ್‌ಗಳನ್ನು ಖರೀದಿಸಿ, ಮೇ 2 ಶನಿವಾರ ಮುಂಜಾನೆ ಹೊರಟು ಸುಮಾರು ಒಂದು ವಾರ ಕಾಲ ಸೈಕಲ್‌ನಲ್ಲಿಯೇ ಪ್ರಯಾಣ ನಡೆಸಿದ್ದಾರೆ. ಅವಕಾಶ ಸಿಕ್ಕ ಕಡೆ ಉಳಿದುಕೊಂಡಿದ್ದಾರೆ. ಸಿಕ್ಕ ಕಡೆ ಉಂಡಿದ್ದಾರೆ. ಮೇ 12 ರಂದು ಹಾವೇರಿ ಜಿಲ್ಲೆಯ ಕಾಗಿನೆಲೆ ಬಳಿ ಬಂದಾಗ ಪೊಲೀಸರಿಗೆ ಇವರನ್ನು ಕಂಡು ಅನುಮಾನ ಬಂದು ವಿಚಾರಿಸಿದಾಗ ವಿಷಯ ಹೊರ ಬಂದಿತು. ಬಳಿಕ ಹಾವೇರಿಯಿಂದ ಶಿವಮೊಗ್ಗದ ಚೆಕ್‌ಪೋಸ್ಟ್‌ವರೆಗೆ ಕಳುಹಿಸಿಕೊಟ್ಟರು. ಜೊತೆಗೆ ಸೊರಬ ಪೊಲೀಸರಿಗೆ ಮಾಹಿತಿ ನೀಡಿದರು.
ಸೊರಬ ತಾ. ಆನವಟ್ಟಿಬಳಿಯ ಹುಲುಗಡ್ಡೆ ಕ್ರಾಸ್ ಬಳಿಯ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರ ಕೈಗೆ ಸಿಲುಕಿಕೊಂಡರು. ಆನವಟ್ಟಿಠಾಣೆ ಪಿಎಸ್‌ಐ ಅರವಿಂದ್, ಸಿಬ್ಬಂದಿ ಹಾಗೂ ಚೆಕ್‌ಪೋಸ್ಟ್‌ನ ಅಧಿಕಾರಿ ಮತ್ತು ಸಿಬ್ಬಂದಿ ಮಾಹಿತಿ ಮೇರೆಗೆ ಯುವಕರನ್ನು ತಡೆದು ಸೈಕಲ್‌ಗಳನ್ನು ವಶಕ್ಕೆ ಪಡೆದು, ಯುವಕರನ್ನು ಪರೀಕ್ಷೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿದರು.
ಕೂಲಿ ನಾಲಿ ಮಾಡಿಯಾದರೂ ಬದುಕು ಕಟ್ಟಿಕೊಂಡೇವು:
ಮಹಾರಾಷ್ಟ್ರದಲ್ಲಿ ಉದ್ಯೋಗ ಮಾಡುತ್ತಿದ್ದೆವು. ನಾವು ತಂಗಿದ್ದ ಪ್ರದೇಶದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಇಲ್ಲದಿದ್ದರೂ ಯಾವುದೇ ಕ್ಷಣದಲ್ಲಿ ಹರಡಬಹುದೆಂಬ ಭೀತಿಯಿಂದ ತಮ್ಮ ಊರು ಸೇರಿದರೆ ಸಾಕು. ಕೂಲಿ-ನಾಲಿ ಮಾಡಿಯಾದರೂ ಬದುಕು ಕಟ್ಟಿಕೊಳ್ಳಬಹುದು ಎಂಬ ದೃಷ್ಟಿಯಿಂದ ಪಾಸ್‌ಗೆ ಪ್ರಯತ್ನಿಸಿದೆವು. ಅದು ಸಾಧ್ಯವೇ ಆಗದಿದ್ದಾಗ ಹೊಸ ಸೈಕಲ್‌ಗಳನ್ನೇರಿ ಹೊರಟೆವು. ದಾರಿ ಮಧ್ಯದಲ್ಲಿ ಊರ ಹೊರ ಹೊರವಲಯಗಳಲ್ಲಿ ತಂಗುತ್ತಾ, ಒಬ್ಬರು ಮಾತ್ರ ಆಹಾರವನ್ನು ಪಾರ್ಸಲ್ ಮೂಲಕ ತಂದು ಹಸಿವು ನೀಗಿಸಿಕೊಳ್ಳುತ್ತಿದ್ದೆವು. ಲೋನಾವಾಲಾ, ಖಂಡಾಲಾ, ನಿಪ್ಪಾಣಿ, ಮುಂತಾದ ಪ್ರದೇಶಗಳಲ್ಲಿನ ಚೆಕ್‌ಪೊಸ್ಟ್‌ಗಳ ಕಣ್ತಪ್ಪಿಸಿ ಬಂದಿದ್ದು, ಕಾಗಿನೆಲೆ ಸಮೀಪ ಗಸ್ತು ಪೊಲೀಸರಿಗೆ ಮಾಹಿತಿ ದೊರೆತು, ನಮ್ಮನ್ನು ವಶಕ್ಕೆ ಪಡೆದು, ಜಿಲ್ಲೆಯ ಗಡಿ ಭಾಗಕ್ಕೆ ತಲುಪಿಸಿದರು. ನಾವು ಆರೋಗ್ಯ ಇಲಾಖೆ ಒಳಪಡಿಸುವ ಕೋವಿಡ್ ಪರೀಕ್ಷೆಗೆ ಸಿದ್ಧರಿದ್ದು, ನಮ್ಮ ಸ್ವಗ್ರಾಮಕ್ಕೆ ಸೇರಿದರೆ ಸಾಕು ಎನ್ನುತ್ತಾರೆ ಥಾಣೆಯಿಂದ ಆಗಮಿಸಿದ ಯುವಕರು.