ಮುಂಬೈಯಿಂದ ಬಂದ ವೃದ್ಧ, ಮಗು ಸೇರಿ 6 ಮಂದಿಗೆ ಪಾಸಿಟಿವ್‌

By Kannadaprabha News  |  First Published May 21, 2020, 7:20 AM IST

ಉಡುಪಿ ಜಿಲ್ಲೆಯಲ್ಲಿ ಕೊರೋನಾ ಪೀಡಿತರ ಸಂಖ್ಯೆ 22ಕ್ಕೇರಿದೆ. ಬುಧವಾರ ಮತ್ತೆ 6 ಮಂದಿಗೆ ಕೊರೋನಾ ಸೋಂಕು ಇರುವುದು ಪತ್ತೆಯಾಗಿದೆ. ಅವರೆಲ್ಲರೂ ಮುಂಬೈಯಿಂದ ಊರಿಗೆ ಬಂದವರಾಗಿದ್ದಾರೆ.


ಉಡುಪಿ(ಮೇ 21): ಉಡುಪಿ ಜಿಲ್ಲೆಯಲ್ಲಿ ಕೊರೋನಾ ಪೀಡಿತರ ಸಂಖ್ಯೆ 22ಕ್ಕೇರಿದೆ. ಬುಧವಾರ ಮತ್ತೆ 6 ಮಂದಿಗೆ ಕೊರೋನಾ ಸೋಂಕು ಇರುವುದು ಪತ್ತೆಯಾಗಿದೆ. ಅವರೆಲ್ಲರೂ ಮುಂಬೈಯಿಂದ ಊರಿಗೆ ಬಂದವರಾಗಿದ್ದಾರೆ.

ಅವರಲ್ಲಿ 3 ಮಂದಿ ಮಹಿಳೆಯರು, ಒಬ್ಬ ಬಾಲಕಿ ಮತ್ತು ಒಬ್ಬರು ಪುರುಷರು ಮತ್ತು ಒಬ್ಬರು ವಯೋವೃದ್ಧರಾಗಿದ್ದಾರೆ. 4 ವರ್ಷದ ಮಗು ಮತ್ತು 15 ವರ್ಷದ ಬಾಲಕಿ ಕುಂದಾಪುರ ತಾಲೂಕಿನವರು, 31 ವರ್ಷ ಮತ್ತು 47 ಮಹಿಳೆಯರಿಬ್ಬರು ಹೆಬ್ರಿ ತಾಲೂಕಿನವರು ಹಾಗೂ 55 ವರ್ಷ ಹಾಗೂ 74 ವರ್ಷದ ಪುರುಷರಿಬ್ಬರು ಬೈಂದೂರು ತಾಲೂಕಿನವರಾಗಿದ್ದಾರೆ.

Tap to resize

Latest Videos

ಬಸ್ಸು, ಟ್ರೇನು ಆಯ್ತು..ವಿಮಾನ ಹಾರಾಟಕ್ಕೂ ದಿನಾಂಕ ಫಿಕ್ಸ್!

ಬುಧವಾರ ಪತ್ತೆಯಾದ 5 ಮಂದಿ ಕೊರೋನಾ ಸೋಂಕಿತರೆಲ್ಲರನ್ನೂ ಮುಂಬೈಯಿಂದ ಬಂದ ತಕ್ಷಣ ಜಿಲ್ಲಾಡಳಿತ ಸರ್ಕಾರಿ ಕ್ವಾರಂಟೈನ್‌ಗೆ ಕಳುಹಿಸಿತ್ತು. ಅವರಿಗೆ ಸೋಂಕು ದೃಢವಾಗುತ್ತಿದ್ದಂತೆ ಅವರನ್ನು ಉಡುಪಿಯ ಡಾ.ಟಿ.ಎಂ.ಎ.ಪೈ ಕೋವಿಡ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಮೃತರ ನೇರ ಸಂಪರ್ಕಿತರು:

ಈ 4 ವರ್ಷದ ಮಗು ಮತ್ತು 15 ವರ್ಷದ ಬಾಲಕಿ ಮೇ 14ರಂದು ಹೃದಯಾಘಾತದಿಂದ ಮೃತಪಟ್ಟಮುಂಬೈಯಿಂದ ಬಂದ 54 ವರ್ಷದ ಕೊರೋನಾ ಸೋಂಕಿತ ವ್ಯಕ್ತಿಯ ಸಂಬಂಧಿಗಳಾಗಿದ್ದು, ನೇರ ಪ್ರಾಥಮಿಕ ಸಂಪರ್ಕದಲ್ಲಿದ್ದವರು. ಅವರೆಲ್ಲರೂ ಜೊತೆಯಾಗಿ ಮೇ 13ರಂದು ಊರಿಗೆ ಬಂದಿದ್ದರು. ಆದ್ದರಿಂದ ಸೋಂಕು ಪರಸ್ಪರ ಒಬ್ಬರಿಂದೊಬ್ಬರಿಗೆ ಹಬ್ಬಿದೆ.

ಸಂಪರ್ಕದಲ್ಲಿದ್ದವರಿಗೆ ಆತಂಕ: ಇದೀಗ ಈ 6 ಮಂದಿ ಕೊರೋನಾ ಸೋಂಕಿತರೊಂದಿಗೆ ಬಸ್ಸಿನಲ್ಲಿ ಬಂದವರು, ಅವರೊಂದಿಗೆ ಕ್ವಾರಂಟೈನ್‌ಗಳಲ್ಲಿದ್ದವರು ಪ್ರಾಥಮಿಕ ಸಂಪರ್ಕಿತರಾಗಿದ್ದು, ಅವರನ್ನು ಮತ್ತು ಅವರೊಂದಿಗೆ ದ್ವಿತೀಯ ಸಂಪರ್ಕದಲ್ಲಿದ್ದವರನ್ನೂ ಪತ್ತೆ ಮಾಡಲಾಗುತ್ತಿದೆ. ಅವರನ್ನು ನಿಗಾದಲ್ಲಿರಿಸಿ ಅವರ ಗಂಟಲದ್ರವದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ.

ಜೂನ್ 1 ರಿಂದ ರೈಲು ಸೇವೆ ಆರಂಭ, ಟಿಕೆಟ್ ಬುಕಿಂಗ್ ಹೇಗೆ? 

11 ಮಂದಿ ಮುಂಬೈಯವರು: ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 22 ಮಂದಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಅವರಲ್ಲಿ 8 ಮಂದಿ ದುಬೈಯಿಂದ ಮತ್ತು ಒಬ್ಬರು ಕೇರಳದಿಂದ ಬಂದವರಾಗಿದ್ದಾರೆ. ಉಳಿದ 11 ಮಂದಿ ಮುಂಬೈಯಿಂದ ಊರಿಗೆ ಬಂದವರಾಗಿದ್ದಾರೆ. ಮುಂಬೈಯಿಂದ ಇನ್ನೂ ಸಾಕಷ್ಟುಮಂದಿ ಬಂದಿದ್ದು, ಈ ಸಂಖ್ಯೆ ಹೆಚ್ಚುವ ಆತಂಕವಿದೆ. ಮಂಗಳವಾರ ಚಿತ್ರದುರ್ಗದಿಂದ ಬಂದ, ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿರುವ 17 ವರ್ಷದ ಬಾಲಕಿಗೆ ಕೊರೋನಾ ಇರುವುದು ದೃಢಪಟ್ಟಿದೆ. ಆಕೆಗೆ ಕೆಎಂಸಿಯ ಐಸೋಲೇಷನ್‌ ವಾರ್ಡ್‌ನಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.

ಬುಧವಾರ ಉಡುಪಿ ಜಿಲ್ಲೆಯಿಂದ ಕೊರೋನಾ ರೋಗಿಗಳೊಂದಿಗೆ ಸಂಪರ್ಕ ಇದ್ದ 50 ಮಂದಿ ಮತ್ತು ಮುಂಬೈನಂತಹ ಹಾಟ್‌ ಸ್ಪಾಟ್‌ಗಳಿಂದ ಬಂದ 354 ಮಂದಿಯನ್ನು ಗುರುತಿಸಲಾಗಿದೆ. ಈ ಸಂಖ್ಯೆ ಇನ್ನಷ್ಟುಆತಂಕಕ್ಕೆ ಕಾರಣವಾಗುತ್ತಿದೆ.

ಮದ್ಯದ ಅಮಲಿನಲ್ಲಿ ಪತ್ನಿ, ಮಗಳಿಗೆ ಬೆಂಕಿ ಹಚ್ಚಿ, ತಾನೂ ಹಚ್ಚಿಕೊಂಡ ಭೂಪ!

ಬುಧವಾರ ಒಟ್ಟು 420 ಮಂದಿಯ ಗಂಟಲದ್ರವದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. 81 ಮಂದಿಯ ವರದಿಗಳು ಬಂದಿದ್ದು, ಅದರಲ್ಲಿ 6 ಪಾಸಿಟಿವ್‌, ಉಳಿದವು ನೆಗೆಟಿವ್‌ ಬಂದಿವೆ. ಪ್ರಯೋಗಾಲಯದಿಂದ 987 ವರದಿಗಳು ಬರುವುದಕ್ಕೆ ಬಾಕಿಯಾಗಿವೆ.

click me!