ಕೊರೋನಾ ಕಾಟ: ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಮುಂದಕ್ಕೆ?

By Kannadaprabha News  |  First Published May 21, 2020, 7:08 AM IST

ಜಿಮ್‌ಗೂ ತಟ್ಟಿದ ಕೊರೋನಾ ಬಿಸಿ, ನವೆಂಬರ್‌ನಲ್ಲಿ ನಡೆಯೋದು ಡೌಟು| ಶೀಘ್ರವೇ ಮುಂದೂಡಿದ ಕುರಿತು ಪ್ರಕಟಣೆ| ಜಿಮ್‌ ನಡೆಸಲು ಕನಿಷ್ಠ 6 ತಿಂಗಳ ಕಾಲ ತಯಾರಿ ಮಾಡಿಕೊಳ್ಳಬೇಕಾಗುತ್ತೆ| ಈಗ ಅದು ಸಾಧ್ಯವಿಲ್ಲ; ಹೀಗಾಗಿ ಮುಂದೂಡುವ ಚಿಂತನೆ|


ಶಿವಾನಂದ ಗೊಂಬಿ

ಹುಬ್ಬಳ್ಳಿ(ಮೇ.21): ಬೆಂಗಳೂರಲ್ಲಿ ನವೆಂಬರ್‌ 3 ರಿಂದ 5ರ ವರೆಗೆ ನಡೆಯಲಿದ್ದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೂ (ಜಿಮ್‌) ಕೊರೋನಾ ಬಿಸಿ ತಟ್ಟಿದೆ. ಕೋವಿಡ್‌-19 ಇರುವ ಇಂತಹ ಪರಿಸ್ಥಿತಿಯಲ್ಲಿ ಜಿಮ್‌ ನಡೆಸುವುದು ಅಸಾಧ್ಯದ ಮಾತು. ಇದನ್ನು ಮುಂದೂಡುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಸರ್ಕಾರ ಬಂದಿದ್ದು, ಶೀಘ್ರದಲ್ಲೇ ಮುಂದೂಡಿದ ಬಗ್ಗೆ ಪ್ರಕಟಣೆ ಹೊರಡಿಸುವ ಸಾಧ್ಯತೆ ಇದೆ.

Tap to resize

Latest Videos

ಹುಬ್ಬಳ್ಳಿಯಲ್ಲಿ ಫೆ. 14ರಂದು ಇನ್ವೆಸ್ಟ್‌ ಕರ್ನಾಟಕ-ಹುಬ್ಬಳ್ಳಿ ಸಮಾವೇಶ ನಡೆಸಿದ್ದ ಸರ್ಕಾರ ಅಂದೇ ನವೆಂಬರ್‌ 3 ರಿಂದ ಮೂರು ದಿನಗಳ ಕಾಲ ಬೆಂಗಳೂರಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲು ನಿರ್ಧರಿಸಿ ಪ್ರಕಟಿಸಿತ್ತು. ಈ ನಿಟ್ಟಿನಲ್ಲಿ ನಂತರ ಒಂದು ತಿಂಗಳ ಕಾಲ ಅಗತ್ಯ ಸಿದ್ಧತೆಗಳನ್ನೂ ಮಾಡಿಕೊಂಡಿತ್ತು. ಆದರೆ ಮಾರ್ಚ್‌ ತಿಂಗಳಿಂದ ರಾಜ್ಯಕ್ಕೆ ವಕ್ಕರಿಸಿದ ಕೊರೋನಾದಿಂದಾಗಿ ಇದೀಗ ನಡೆಸುವುದು ಕಷ್ಟ ಎಂಬಂತಾಗಿದೆ.

ಹುಬ್ಬಳ್ಳಿ: ತವರಿನತ್ತ ಉತ್ತರ ಪ್ರದೇಶದ ಕಾರ್ಮಿಕರು

ಏನು ಸಮಸ್ಯೆ?:

ಜಿಮ್‌ ಮಾಡಬೇಕೆಂದರೆ ಕನಿಷ್ಠವೆಂದರೂ ಆರೇಳು ತಿಂಗಳ ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಬೇರೆ ಬೇರೆ ಜಿಲ್ಲೆ, ಹೊರ ರಾಜ್ಯ ಹಾಗೂ ವಿದೇಶಗಳಲ್ಲಿ ಸಚಿವರು, ಸರ್ಕಾರದ ಪ್ರತಿನಿಧಿಗಳು ತೆರಳಿ ಅಲ್ಲಿನ ಉದ್ಯಮಿಗಳೊಂದಿಗೆ ಸಭೆ ನಡೆಸಬೇಕು. ರೋಡ್‌ ಶೋಗಳನ್ನು ಮಾಡಬೇಕು. ಈ ಮೂಲಕ ರಾಜ್ಯದಲ್ಲಿ ಬಂಡವಾಳ ಹೂಡುವುದರಿಂದ ಅವರಿಗೆ ಅನುಕೂಲಗಳೇನು? ರಾಜ್ಯದಲ್ಲಿ ಬಂಡವಾಳ ಹೂಡಲು ಯಾವ ರೀತಿ ವಾತಾವರಣ ಉತ್ತಮವಾಗಿದೆ ಎಂಬುದನ್ನೆಲ್ಲ ಮನವರಿಕೆ ಮಾಡಿಕೊಡಬೇಕು. ಅಂದಾಗ ಮಾತ್ರ ಕೈಗಾರಿಕೋದ್ಯಮಿಗಳು ಬಂಡವಾಳ ಹೂಡಲು ಆಗಮಿಸಲು ಆಸಕ್ತಿ ತೋರಿಸುತ್ತಾರೆ. ಆಗ ಮಾತ್ರ ಸಮಾವೇಶ ಯಶಸ್ವಿಯಾಗುತ್ತದೆ. ಇದರೊಂದಿಗೆ ಇಲ್ಲಿ ಮೂರು ದಿನ ಯಾವ ರೀತಿ ಕಾರ್ಯಕ್ರಮ ನಡೆಸಬೇಕು. ಎಲ್ಲಿ ನಡೆಸಬೇಕು. ಬಂದ ಉದ್ಯಮಿಗಳಿಗೆ ಏನೇನು ಸೌಲಭ್ಯ ಕಲ್ಪಿಸಬೇಕು ಎಂಬ ಬಗ್ಗೆ ನಿರ್ಧರಿಸಿ ಆ ಬಗ್ಗೆಯೂ ತಯಾರಿ ಮಾಡಿಕೊಳ್ಳಬೇಕು.

ಸದ್ಯ ಸಾಧ್ಯವಿಲ್ಲ:

ಈಗಿನ ಪರಿಸ್ಥಿತಿಯಲ್ಲಿ ಹೊರರಾಜ್ಯಗಳಿಗೂ ಹೋಗುವ ಪರಿಸ್ಥಿತಿಯಿಲ್ಲ. ಇನ್ನು ವಿದೇಶಿಗಳಿಗೆ ತೆರಳಿ ಅಲ್ಲಿ ರೋಡ್‌ ಶೋ, ಕೈಗಾರಿಕೋದ್ಯಮಿಗಳೊಂದಿಗೆ ಸಭೆ ನಡೆಸುವುದು ಅಸಾಧ್ಯದ ಮಾತು. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಮುಂದೂಡಲು ನಿರ್ಧರಿಸಲಾಗಿದೆ. ಹಾಗಂತ ಜಿಮ್‌ನ್ನು ರದ್ದುಪಡಿಸುವುದಿಲ್ಲ. ಬದಲಿಗೆ ಕೆಲ ತಿಂಗಳ ಮಟ್ಟಿಗೆ ಮುಂದೂಡುವುದು ಉತ್ತಮ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಇಲಾಖೆಯ ಮೂಲಗಳು ತಿಳಿಸುತ್ತವೆ. ಒಟ್ಟಿನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲು ಕೊರೋನಾ ಅಡ್ಡಿಯಾಗಿರುವುದಂತೂ ಸತ್ಯ. 2021ರಲ್ಲಾದರೂ ಮಾಡಲು ಕ್ರಮ ಕೈಗೊಳ್ಳಬೇಕು ಎಂಬುದು ಕೈಗಾರಿಕೋದ್ಯಮಿಗಳ ಆಗ್ರಹ.

ಈ ಬಗ್ಗೆ ಮಾತನಾಡಿದ ಬೃಹತ್‌ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಅವರು, ಜಿಮ್‌ ಮಾಡಬೇಕೆಂದರೆ ಕನಿಷ್ಠ ಆರೇಳು ತಿಂಗಳ ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ವಿದೇಶಗಳಿಗೆ ತೆರಳಿ ಅಲ್ಲಿನ ಉದ್ಯಮಿಗಳನ್ನು ಆಹ್ವಾನಿಸಬೇಕು. ರೋಡ್‌ ಶೋ ನಡೆಸುವುದು ಹೀಗೆ ಹತ್ತಾರು ಕೆಲಸಗಳಿರುತ್ತವೆ. ಅದು ಈಗಿನ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ. ಹೀಗಾಗಿ ಜಿಮ್‌ ಮುಂದೂಡಲು ನಿರ್ಧರಿಸಲಾಗಿದೆ. ಆದರೆ ಸಮಾವೇಶ ನಿಲ್ಲಿಸಲ್ಲ. ಕೊರೋನಾ ಹಾವಳಿ ಕಡಿಮೆಯಾದ ಬಳಿಕ ನಡೆಸುತ್ತೇವೆ. ನಂತರವೇ ದಿನಾಂಕ ನಿಗದಿಪಡಿಸಲಾಗುವುದು ಎಮದು ತಿಳಿಸಿದ್ದಾರೆ. 
 

click me!