ಹಸಿರು ಮಾರ್ಗದಲ್ಲಿ ಪ್ರತಿ ತಿಂಗಳು 4 ರೈಲುಗಳಿಗೆ 6 ಬೋಗಿ

By Web DeskFirst Published Sep 4, 2019, 8:15 AM IST
Highlights

ಯಲಚೇನಹಳ್ಳಿ- ನಾಗಸಂದ್ರ ಮಾರ್ಗದಲ್ಲಿ ಪ್ರಸ್ತುತ ಎರಡು ರೈಲುಗಳು ಆರು ಬೋಗಿಗಳನ್ನಾಗಿ ಮಾರ್ಪಡಿಸಲಾಗಿದೆ. ಶೀಘ್ರ ಉಳಿದ ರೈಲುಗಳಿಗೆ ಹೆಚ್ಚಿನ ಬೋಗಿಗಳ ಅಳವಡಿಕೆಯಾಗಲಿದೆ. 

ಬೆಂಗಳೂರು (ಸೆ.04) :  ನಾಗಸಂದ್ರ- ಯಲಚೇನಹಳ್ಳಿ (ಹಸಿರು ಮಾರ್ಗ) ಮಾರ್ಗದಲ್ಲಿ ಅಕ್ಟೋಬರ್‌ನಿಂದ ಪ್ರತಿ ತಿಂಗಳಿಗೆ 3ರಿಂದ 4 ರೈಲುಗಳನ್ನು 6 ಬೋಗಿಯಾಗಿ ಪರಿವರ್ತಿಸಿ ವಾಣಿಜ್ಯ ಸೇವೆ ಆರಂಭಿಸುವುದಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್‌) ತಿಳಿಸಿದೆ.

ಬೈಯಪ್ಪನಹಳ್ಳಿ- ಮೈಸೂರು ರಸ್ತೆ ಮೆಟ್ರೋ ಮಾರ್ಗದಲ್ಲಿ ಎಲ್ಲ ರೈಲುಗಳು ಆರು ಬೋಗಿಯಾಗಿ ವಾಣಿಜ್ಯ ಸೇವೆ ನಡೆಸುತ್ತಿವೆ. ಹಾಗೆಯೇ ಯಲಚೇನಹಳ್ಳಿ- ನಾಗಸಂದ್ರ ಮಾರ್ಗದಲ್ಲಿ ಪ್ರಸ್ತುತ ಎರಡು ರೈಲುಗಳು ಆರು ಬೋಗಿಗಳನ್ನಾಗಿ ಮಾರ್ಪಡಿಸಿ ವಾಣಿಜ್ಯ ಸೇವೆ ನೀಡಲಾಗುತ್ತಿದೆ. ಈ ಮಾರ್ಗದಲ್ಲಿ ಆರು ಬೋಗಿಗಳ ರೈಲುಗಳ ಸಂಚಾರ ಹೆಚ್ಚಿಸಲು ಹೆಚ್ಚು ವಿದ್ಯುತ್‌ ಅಗತ್ಯವಿದೆ. ಈ ಸಮಸ್ಯೆ ನಿವಾರಿಸಲು ನಿಗಮ ಕ್ರಮ ಕೈಗೊಂಡಿದೆ ಎಂದು ಬಿಎಂಆರ್‌ಸಿಎಲ್‌ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ಮೆಟ್ರೋ ಸಂಚಾರ: ಹೊಸ ದಾಖಲೆ

ಅಕ್ಟೋಬರ್‌ 1ರಿಂದ ನಿಗಮವು ಯಲಚೇನಹಳ್ಳಿ- ನಾಗಸಂದ್ರ ಮಾರ್ಗದಲ್ಲಿ ಪ್ರತಿ ತಿಂಗಳಿಗೆ 3ರಿಂದ 4 ರೈಲುಗಳನ್ನು ಆರು ಬೋಗಿಯಾಗಿ ಪರಿವರ್ತಿಸಿ ವಾಣಿಜ್ಯ ಸೇವೆ ನೀಡುವ ಗುರಿ ಹೊಂದಿದೆ. ಬಿಇಎಂಎಲ್‌ ಕಂಪನಿಯೊಂದಿಗೆ ಬಿಎಂಆರ್‌ಸಿಎಲ್‌ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಎಲ್ಲಾ 50 ರೈಲುಗಳನ್ನು (ಸೆಟ್‌) ಮಾರ್ಚ್ 2020ರ ವೇಳೆಗೆ ಆರು ಬೋಗಿಗಳನ್ನಾಗಿ ಪರಿವರ್ತಿಸುವ ಗುರಿ ಇದೆ ಎಂದು ಬಿಎಂಆರ್‌ಸಿಎಲ್‌ ಮಾಹಿತಿ ನೀಡಿದೆ.

click me!