ಶಿವಮೊಗ್ಗದಲ್ಲಿ 59 ಡೆಂಘೀ, 14 ಚಿಕೂನ್‌ ಗುನ್ಯಾ ಪ್ರಕರಣ ಪತ್ತೆ

By Kannadaprabha NewsFirst Published Jul 21, 2019, 1:15 PM IST
Highlights

ಶಿವಮೊಗ್ಗದಲ್ಲಿ 54 ಡೆಂಘೀ ಹಾಗೂ 14 ಚಿಕೂನ್ ಗುನ್ಯಾ ಪ್ರಕರಣಗಳು ಪತ್ತೆಯಾಗಿದೆ. ನಗರಸಭೆ ವತಿಯಿಂದ ಕರಪತ್ರ ಮುದ್ರಿಸಿ ಮನೆಮನೆಗೆ ವಿತರಣೆ ಮಾಡಲಾಗುತ್ತಿದ್ದು, ಜೊತೆಗೆ ಫಾಗಿಂಗ್‌, ಮೆಲಾಥಿನ್‌ ದ್ರಾವಣ ಸಿಂಪಡಣೆ ಮಾಡಲಾಗುತ್ತಿದೆ. ಜನರು ಸ್ವಚ್ಛತೆಯನ್ನು ಕಾಪಾಡಿಕೊಂಡು ಹೆಚ್ಚು ಜಾಗೃತೆ ವಹಿಸಬೇಕಾಗಿದೆ.

ಶಿವಮೊಗ್ಗ(ಜು.21): ತಾಲೂಕಿನಲ್ಲಿ ಒಟ್ಟು 59 ಡೆಂಘೀ ಹಾಗೂ 14 ಚಿಕೂನ್‌ ಗುನ್ಯಾ ಪ್ರಕರಣ ಪತ್ತೆಯಾಗಿವೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ. ರಾಜು ಹೇಳಿದರು.

ಪಟ್ಟಣದ ಎಸ್‌.ಎನ್‌. ನಗರ ವ್ಯಾಪ್ತಿಯಲ್ಲಿ ನಗರಸಭೆ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಡೆಂಘೀ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, 59 ಡೆಂಘೀ ಪ್ರಕರಣದಲ್ಲಿ 48 ಗ್ರಾಮಾಂತರ ಹಾಗೂ 18 ಪಟ್ಟಣ ವ್ಯಾಪ್ತಿಯಲ್ಲಿ ಪತ್ತೆಯಾಗಿವೆ. 14 ಚಿಕೂನ್‌ಗುನ್ಯಾ ಪ್ರಕರಣದಲ್ಲಿ 4 ಪಟ್ಟಣ ವ್ಯಾಪ್ತಿ ಹಾಗೂ 10 ಗ್ರಾಮೀಣ ಪ್ರದೇಶದಲ್ಲಿ ಕಂಡು ಬಂದಿರುವುದರಿಂದ ಜನರು ಹೆಚ್ಚಿನ ಜಾಗೃತಿಯಿಂದ ಇರಬೇಕು ಎಂದರು.

ಕರಪತ್ರ ಹಂಚುವ ಮೂಲಕ ಜಾಗೃತಿ:

ಎಸ್‌.ಎನ್‌. ನಗರ ಭಾಗದಲ್ಲಿ ಡೆಂಘೀ ಮತ್ತು ಚಿಕೂನ್‌ಗುನ್ಯಾ ಹೆಚ್ಚು ಕಾಣಿಸಿಕೊಂಡಿರುವುದರಿಂದ ಆರೋಗ್ಯ, ಆಶಾ ಕಾರ್ಯಕರ್ತೆಯರು ಈ ಭಾಗದಲ್ಲಿ ಮನೆಮನೆಗೆ ಕರಪತ್ರ ವಿತರಿಸುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ತಾಲೂಕಿನ ಬೇರೆಬೇರೆ ಭಾಗದಲ್ಲಿ ಡೆಂಘೀ ಪ್ರಕರಣ ಪತ್ತೆಯಾಗಿರುವ ಕಡೆಗಳಲ್ಲಿ ಮತ್ತು ಇತರೆ ಗ್ರಾಮಗಳಲ್ಲಿ ಪ್ರತಿ ಶುಕ್ರವಾರ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ.

ರಕ್ತ ಪರೀಕ್ಷೆ ಮಾಡಿಸುವುದು ಅಗತ್ಯ:

ಸಾರ್ವಜನಿಕರು ಜ್ವರ ಬಂದರೆ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಹೆಚ್ಚು ದಿನಗಳ ಕಾಲ ನೀರು ಸಂಗ್ರಹಿಸಿ ಇಡಬಾರದು. ಡೆಂಘೀ ಕುರಿತು ಆರೋಗ್ಯ ಇಲಾಖೆ ತಿಳಿಸುವ ಮುಂಜಾಗೃತೆ ವಹಿಸಬೇಕು ಎಂದು ಕರೆ ನೀಡಿದರು.

ನಗರಸಭೆ ಪೌರಾಯುಕ್ತ ರಾಜು ಎಸ್‌. ಮಾತನಾಡಿ, ಡೆಂಘೀ ಕುರಿತು ಈಗಾಗಲೆ ನಗರಸಭೆ ವತಿಯಿಂದ ಜಾಗೃತಿ ಮೂಡಿಸಲಾಗಿದೆ. ನಗರಸಭೆ ವತಿಯಿಂದ ಕರಪತ್ರ ಮುದ್ರಿಸಿ ಮನೆಮನೆಗೆ ವಿತರಣೆ ಮಾಡಲಾಗುತ್ತಿದೆ. ಜೊತೆಗೆ ಫಾಗಿಂಗ್‌, ಮೆಲಾಥಿನ್‌ ದ್ರಾವಣ ಸಿಂಪಡಣೆ ಮಾಡಲಾಗುತ್ತಿದೆ ಎಂದರು. ಪರಿಸರ ಅಭಿಯಂತರ ಪ್ರಭಾಕರ್‌, ಹಿರಿಯ ಆರೋಗ್ಯ ನಿರೀಕ್ಷಕರಾದ ಶೈಲೇಶ್‌, ರಚನಾ, ಆರೋಗ್ಯ ಇಲಾಖೆ ಪ್ರಭಾಕರ್‌, ಸುರೇಶ್‌ ಇದ್ದರು.

click me!