ತಾಲೂಕಿನಲ್ಲಿ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ 57 ಮನೆಗಳು ಕುಸಿದಿರುವ ವರದಿಯಾಗಿದೆ. ಹಾನಿಗೀಡಾಗಿರುವ ಸ್ಥಳಕ್ಕೆ ತಹಸೀಲ್ದಾರ್ ಬಿ ಆರತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸೂಕ್ತ ಕ್ರಮಕ್ಕೆ ಮುಂದಾಗಿದ್ದಾರೆ.
ಗುಬ್ಬಿ (ಅ.16): ತಾಲೂಕಿನಲ್ಲಿ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ 57 ಮನೆಗಳು ಕುಸಿದಿರುವ ವರದಿಯಾಗಿದೆ. ಹಾನಿಗೀಡಾಗಿರುವ ಸ್ಥಳಕ್ಕೆ ತಹಸೀಲ್ದಾರ್ ಬಿ ಆರತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸೂಕ್ತ ಕ್ರಮಕ್ಕೆ ಮುಂದಾಗಿದ್ದಾರೆ.
ನಿಟ್ಟೂರಿನಿಂದ ಶಿರಾ (shira ) ಹೋಗುವ ಮಾರ್ಗ ಮಧ್ಯದಲ್ಲಿ ರಸ್ತೆ (Road) ಕುಸಿತಕಂಡಿದ್ದು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನಿಟ್ಟೂರು ಕೆರೆ ತುಂಬಿರುವ ಹಿನ್ನೆಲೆಯಲ್ಲಿ ಕೋಡಿಯಿಂದ ಹರಿಯುತ್ತಿರುವ ನೀರು ರಸ್ತೆಯ ಮೇಲೆ ಸಂಪೂರ್ಣವಾಗಿ ಹರಿದು ರಸ್ತೆ ಕುಸಿತ ಕಂಡಿದೆ. ಸ್ಥಳಕ್ಕೆ ಲೋಕೋಪಯೋಗಿ ಇಲಾಖೆ, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಬೇರೊಂದು ಮಾರ್ಗದ ಮೂಲಕ ವಾಹನಗಳನ್ನು ಬಿಡುವಂತಹ ವ್ಯವಸ್ಥೆ ಮಾಡಲಾಗಿದೆ. ನೀರು ಹೆಚ್ಚಿನದಾಗಿ ಹರಿಯುತ್ತಿರುವುದರಿಂದ ಆ ಭಾಗದಲ್ಲಿ ವಾಹನಗಳು ಓಡಾಡುವುದು ದುಸ್ತರವಾಗಿ ಕಂಡು ಬರುತ್ತಿದ್ದು, ದ್ವಿಚಕ್ರ ವಾಹನ ಸವಾರರು ತಾತ್ಕಾಲಿಕವಾಗಿ ಕಲ್ಲು ಹಾಕಿ ಅದರ ಮೇಲೆ ಓಡಾಡುತ್ತಿದ್ದಾರೆ. ಇನ್ನೂ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಎಲ್ಲೋ ಅಲರ್ಚ್ ಇರುವುದರಿಂದ ಇನ್ನು ಹೆಚ್ಚಿನ ಮಳೆ ಬೀಳುವ ಸಾಧ್ಯತೆ ಇದ್ದು ಮನೆಗಳ ಕುಸಿತಹೆಚ್ಚುವ ಸಾಧ್ಯತೆ ಇದೆ. ಇನ್ನು ಬಹುತೇಕ ಗ್ರಾಮಾಂತರ ಭಾಗದ ರಸ್ತೆಗಳು ನೀರಿನಿಂದಲೇ ಆವೃತವಾಗಿದ್ದು ಸಂಪರ್ಕವನ್ನು ಕಳೆದುಕೊಳ್ಳುತ್ತಿವೆ.
ತಾಲೂಕಿನಲ್ಲಿ ಕಳೆದು ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಶುಕ್ರವಾರ ರಾತ್ರಿ ಎಂ.ಎನ್.ಕೋಟೆಯ ಗೌರಮ್ಮ ಎಂಬುವರ ಮನೆ ಸಂಪೂರ್ಣವಾಗಿ ಧರೆಗುರುಳಿದೆ.
ರೈತ ಮಹಿಳೆ ಗೌರಮ್ಮ ಮಾತನಾಡಿ, ಭಾರಿ ಮಳೆಗೆ ಮನೆ ಬಿದ್ದಿದ್ದು, ಮನೆಯಲ್ಲಿದ್ದ ಸಾಮಾಗ್ರಿಗಳು ಸಂಪೂರ್ಣ ನೀರು ಪಾಲಾಗಿವೆ. ಸಂಬಂಧಪಟ್ಟಅಧಿಕಾರಿಗಳು ಭೇಟಿ ನೀಡಿ ಸೂಕ್ತ ಪರಿಹಾರ ಕೊಡಬೇಕೆಂದು ಅ
ಳಲು ತೊಂಡಿಕೊಂಡಿದ್ದಾರೆ.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಯೋಗೀಶ್ ಭೇಟಿ ನೀಡಿ, ಗ್ರಾಪಂ ವತಿಯಿಂದ ಮನೆಯನ್ನು ಮಂಜೂರು ಮಾಡಿಕೊಡಲಾಗುತ್ತದೆ. ತಾತ್ಕಾಲಿಕವಾಗಿ ತಹಸೀಲ್ದಾರ್ ಜೂತೆ ಮಾತನಾಡಿ ಮನೆ ಕಳೆದುಕೊಂಡವರಿಗೆ ತಾತ್ಕಾಲಿಕ ಪರಿಹಾರವನ್ನು ಕೊಡುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಎಂ ಎನ್ ಭೀಮಶೆಟ್ಟಿ,ರವೀಶ್,ಪಿಡಿಓ ಕೃಷ್ಣಮೂರ್ತಿ, ಗ್ರಾಮಲೆಕ್ಕಾಧಿಕಾರಿ ಅಪ್ಸರ ಭೇಟಿ ನೀಡಿದರು.
ಗುಬ್ಬಿ ತಾಲೂಕಿನ ಸೋಮಲಾಪುರ ಗ್ರಾಮದ ನರಸಿಂಹಮೂರ್ತಿ ಎಂಬುವರ ಮನೆ ಕೂಡ ತಡರಾತ್ರಿ ಮಳೆಗೆ ಬಿದ್ದು ಹೋಗಿದೆ. ಸಂಬಂಧಪಟ್ಟಅಧಿಕಾರಿಗಳು ಭೇಟಿ ನೀಡಿ ಸೂಕ್ತ ಪರಿಹಾರ ಕೊಡುವುದಾಗಿ ಭರವಸೆ ನೀಡಿದ್ದಾರೆ.
ದೇವರಾಯ ಪಟ್ಟಣ ಕೆರೆ ಕೋಡಿ
ಸತತ ಮಳೆಯಿಂದಾಗಿ ದೇವರಾಯಪಟ್ಟಣ ಕೆರೆ ಕೋಡಿಬಿದ್ದಿದ್ದು, ನೀರಿನ ಒಳ ಮತ್ತು ಹೊರ ಹರಿವು ಹೆಚ್ಚಳವಾಗಿರುವುದರಿಂದ ತೋಟಗಳು ಜಲಾವೃತಗೊಂಡಿದ್ದು, ರಾಯಗಾಲುವೆ ಸ್ವಚ್ಛತೆಯನ್ನು ತುರ್ತಾಗಿ ಪಾಲಿಕೆಯಿಂದ ಮಾಡಲಾಗುವುದು ಎಂದು ಶಾಸಕ ಜ್ಯೋತಿಗಣೇಶ್ ತಿಳಿಸಿದರು.
ನಗರದ 32ನೇ ವಾರ್ಡ್‌ನ ದೇವರಾಯಪಟ್ಟಣ ಕೆರೆ ಕೋಡಿ ಬಿದ್ದಿರುವುದರಿಂದ ಆಗಿರುವ ಹಾನಿಯ ಪರಿಶೀಲನೆ ನಡೆಸಿ ಮಾತನಾಡಿದ ಅವರು, 35 ವರ್ಷಗಳ ನಂತರ ದೇವರಾಯಪಟ್ಟಣ ಕೆರೆ ತುಂಬಿರುವುದರಿಂದ ಹೊಸಳಯ್ಯನ ತೋಟ, ಪ್ರಶಾಂತ್‌ನಗರ, ದೇವರಾಯಪಟ್ಟಣಕ್ಕೆ ನೀರು ತುಂಬಿದೆ, ತುಮಕೂರು ಅಮಾನಿಕೆರೆ ಕೋಡಿಯಾಗುತ್ತಿದ್ದು ಮೂರು ತಿಂಗಳಿಂದಲೂ ಗೇಟ್ ತೆರೆಯಲಾಗಿದ್ದು ಇದರಿಂದ 6ನೇ ವಾರ್ಡ್‌ನ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಅಕ್ಕತಂಗಿ ಕೆರೆ ಮತ್ತು ಬೆಟ್ಟದ ಸಾಲಿನ ನೀರಿನಿಂದ ನಾಗರಾಜು ಅವರ ತೋಟದಲ್ಲಿ ಹೂಕೋಸು ಬೆಳೆ ಸಂಪೂರ್ಣ ನಾಶವಾಗಿದೆ. ಮಹಾಮಳೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ, ಮಳೆಹಾನಿಯನ್ನು ತಡೆಯುವ ನಿಟ್ಟಿನಲ್ಲಿ ರಾಜಗಾಲುವೆಯನ್ನು ತುರ್ತಾಗಿ ಅಗಲೀಕರಣ ಮಾಡಲು ಕ್ರಮವಹಿಸಲಾಗುವುದು, ಮಳೆಹಾನಿಗೆ ಪರಿಹಾರವನ್ನು ಕಂಡುಕೊಳ್ಳಬೇಕಿದ್ದು, ಅನುದಾನವನ್ನು ಬಳಸಿ ವ್ಯವಸ್ಥಿತವಾಗಿ ಕಾಮಗಾರಿಯನ್ನು ನಿರ್ವಹಿಸಬೇಕಿದೆ. ಮಹಾಮಳೆಯಿಂದ ತುಮಕೂರು ನಗರದ ವಿವಿಧೆಡೆ ಜಲಾವೃತ್ತವಾಗಿದ್ದು, ಎಲ್ಲೆಲ್ಲಿ ಜಲಾವೃತ್ತವಾಗಿದೆಯೋ ಅಲ್ಲಿ ಹಿಟಾಚಿ ಮತ್ತು ಜೆಸಿಬಿ ಬಳಸಿ ನೀರು ಹರಿದು ಹೋಗಲು ಅವಕಾಶ ಕಲ್ಪಿಸಲು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಮಹಾಮಳೆಯ ಮುಂದೆ ಏನೇ ಮಾಡಿದರೂ ಅದು ಕಷ್ಟವಾಗಲಿದೆ ಎಂದು ಹೇಳಿದರು.
ಉಪಮೇಯರ್ ನರಸಿಂಹಮೂರ್ತಿ ಮಾತನಾಡಿ, ದೇವರಾಯನಪಟ್ಟಣ ಮತ್ತು ಅಕ್ಕತಂಗಿ ಕೆರೆಯಿಂದ ಹರಿದು ಬರುತ್ತಿರುವ ನೀರಿನಿಂದ 24ನೇ ವಾರ್ಡ್‌ನಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, 22,23,35ನೇ ವಾರ್ಡ್‌ನಲ್ಲಿ ನೀರು ನಿಂತಿದ್ದು, ಶಾಸಕರಾದ ಜ್ಯೋತಿಗಣೇಶ್ ಹಾಗೂ ಪಾಲಿಕೆ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ, ತುರ್ತು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಈ ವೇಳೆ ಆಯುಕ್ತೆ ರೇಣುಕಾ, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಯಾಜ್, ಮುಖ್ಯ ಎಂಜನಿಯರ್ ಆಶಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ತುಮಕೂರಿನಲ್ಲಿ ಭಾರಿ ಮಳೆ:
ತುಮಕೂರಿನಲ್ಲಿ ಶನಿವಾರ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆ ಸುರಿಯಿತು. 6.30ಕ್ಕೆ ಆರಂಭವಾದ ಮಳೆ 7.30 ರವರೆಗೂ ಧಾರಾಕಾರವಾಗಿ ಸುರಿಯಿತು. ದಿಢೀರ್ ಮಳೆಯಿಂದಾಗಿ ವಾಹನ ಸವಾರರು, ಪಾದಚಾರಿಗಳಿಗೂ ತೊಂದರೆಯಾಯಿತು. ಮಳೆಯಿಂದಾಗಿ ಜನ ಹೈರಾಣಾದರು.
ಜಿಲ್ಲಾದ್ಯಂತ ಮಳೆಯ ಆರ್ಭಟ: ತುಮಕೂರು ನಗರವಲ್ಲದೇ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿದಿದೆ. ತುಮಕೂರು ಜಿಲ್ಲೆಯ ಗುಬ್ಬಿ, ಕೊರಟಗೆರೆ, ಮಧುಗಿರಿ ಸೇರಿದಂತೆ ಹಲವೆಡೆ ಧಾರಾಕಾರ ಮಳೆ ಸುರಿದಿದ್ದು ತಗ್ಗು ಪ್ರದೇಶ ಹಾಗೂ ಮನೆಗಳಿಗೆ ನೀರು ನುಗ್ಗಿದೆ. ಗುಬ್ಬಿ ತಾಲೂಕಿನ ಎಮ…ಎಚ್ ಪಟ್ಟಣ ಬಳಿ ಹಲವು ತೋಟಗಳಿಗೆ ಮಳೆ ನೀರು ನುಗ್ಗಿದೆ.